RCB ನೀಲಿಗಣ್ಣಿನ ಹುಡುಗಿ ಪೆರ್ರಿ ಬಗ್ಗೆ ನಿಮಗೆ ಗೊತ್ತಿರದ ಟಾಪ್ 8 ಇಂಟ್ರೆಸ್ಟಿಂಗ್ ಸಂಗತಿಗಳಿವು
ಬೆಂಗಳೂರು: ಎರಡನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ್ತಿ ಎಲೈಸಿ ಪೆರ್ರಿ ತಮ್ಮ ಅದ್ಭುತ ಆಲ್ರೌಂಡ್ ಆಟದ ಮೂಲಕ ಗಮನ ಸೆಳೆಯುತ್ತಿದ್ದಾರೆ. ನಾವಿಂದು ಪೆರ್ರಿ ಕುರಿತಾದ ಇಂಟ್ರೆಸ್ಟಿಂಗ್ ಸಂಗತಿಗಳನ್ನು ತಿಳಿಯೋಣ ಬನ್ನಿ.
WPL ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಮಿಂಚುತ್ತಿರುವ ಎಲೈಸಿ ಪೆರ್ರಿ, ಆರ್‌ಸಿಬಿ ಅಭಿಮಾನಿಗಳ ಪಾಲಿಗೆ ಹಾಟ್ ಫೇವರೇಟ್ ಆಟಗಾರ್ತಿ. ಪೆರ್ರಿ ಆಟಕ್ಕೆ ಮನಸೋಲದವರೇ ಇಲ್ಲ.
ಆಸ್ಟ್ರೇಲಿಯಾ ಮೂಲದ ಈ ಆಟಗಾರ್ತಿಯ ಬಗ್ಗೆ ತುಂಬಾ ಮಂದಿಗೆ ಹೆಚ್ಚಿನ ಮಾಹಿತಿ ಗೊತ್ತಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡಕ್ಕೆ ಪಾದಾರ್ಪಣೆ ಮಾಡಿದ ಅತಿ ಕಿರಿಯ ಆಟಗಾರ್ತಿ ಈ ಪೆರ್ರಿ. 2007ರಲ್ಲಿ ಆಸೀಸ್ ಪರ ಪಾದಾರ್ಪಣೆ ಮಾಡುವಾಗ ಪೆರ್ರಿ ವಯಸ್ಸು ಕೇವಲ 16.
ಇನ್ನೂ ಇಂಟ್ರೆಸ್ಟಿಂಗ್ ಸಂಗತಿಯೆಂದರೆ ಆಸ್ಟ್ರೇಲಿಯಾ ಮಹಿಳಾ ತಂಡಕ್ಕೆ ಪಾದಾರ್ಪಣೆ ಮಾಡಿದ ಮರು ವರ್ಷವೇ ಅಂದರೆ 2008ರಲ್ಲಿ ಒಲಿಂಪಿಕ್ಸ್ ಅರ್ಹತಾ ಸುತ್ತಿನ ಫುಟ್ಬಾಲ್ ತಂಡಕ್ಕೆ ಪೆರ್ರಿ ಆಯ್ಕೆಯಾಗಿದ್ದರು.
ಆ ಫುಟ್ಬಾಲ್ ಪಂದ್ಯದಲ್ಲಿ ಹಾಂಕಾಂಗ್ ಎದುರು ಕಣಕ್ಕಿಳಿದ ಮೊದಲ ಫುಟ್ಬಾಲ್ ಪಂದ್ಯದ ಮೊದಲ ಎರಡು ನಿಮಿಷದಲ್ಲೇ ಪೆರ್ರೆ ಗೋಲು ಬಾರಿಸಿ ತಮ್ಮ ಕಾಲ್ಚಳಕ ತೋರಿಸಿದ್ದರು.
ಎಲೈಸಿ ಪೆರ್ರಿ ಕ್ರಿಕೆಟ್ ಹಾಗೂ ಫುಟ್ಬಾಲ್ ಕ್ರೀಡೆಯಲ್ಲಿ ವಿಶ್ವಕಪ್ ಆಡಿದ ಮೊದಲ ಆಟಗಾರ್ತಿ. ಎಲ್ಲೈಸಿ ಪೆರ್ರಿ ಕೊನೆಗೆ ಫುಟ್ಬಾಲ್ ಬಿಟ್ಟು ಕ್ರಿಕೆಟ್ ಕಡೆ ಹೆಚ್ಚು ಗಮನ ಹರಿಸಿದರು.
ಎಲೈಸಿ ಪೆರ್ರಿ 2010ರಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್ ವಿಜೇತ ತಂಡದ ಸದಸ್ಯೆ ಕೂಡಾ ಹೌದು. ವೆಸ್ಟ್ ಇಂಡೀಸ್‌ನಲ್ಲಿ ಆಯೋಜನೆಗೊಂಡಿದ್ದ ಚುಟುಕು ವಿಶ್ವಕಪ್‌ನಲ್ಲಿ ಪೆರ್ರಿ ಆಸೀಸ್ ಆಡಿದ ಎಲ್ಲಾ ಪಂದ್ಯದಲ್ಲೂ ಕಣಕ್ಕಿಳಿದಿದ್ದರು. ಇದರ ಜತೆಗೆ ಫೈನಲ್‌ನಲ್ಲಿ ಅದ್ಭುತ ಪ್ರದರ್ಶನ ತೋರಿ ಪಂದ್ಯಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದರು.
ತಮ್ಮ ಆಲ್ರೌಂಡ್ ಆಟದ ಮೂಲಕವೇ ಆಸೀಸ್ ಪರ ಹಲವಾರು ಪಂದ್ಯಗಳನ್ನು ಗೆಲ್ಲಿಸಿಕೊಟ್ಟ ಆಟಗಾರ್ತಿ ಪೆರ್ರಿ 2015ರಲ್ಲಿ ರಗ್ಬಿ ಆಟಗಾರನಾಗಿರುವ ಮ್ಯಾಟ್ ಟೌಮ್ ಅವರನ್ನು ಮದುವೆಯಾದರು.
33 ವರ್ಷದ ಎಲೈಸಿ ಪೆರ್ರಿ ಆಸ್ಟ್ರೇಲಿಯಾ ಪರ ಅತಿಹೆಚ್ಚು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನಾಡಿದ ಮಹಿಳಾ ಕ್ರಿಕೆಟರ್ ಎನಿಸಿಕೊಂಡಿದ್ದಾರೆ. ಪೆರ್ರಿ ಇದುವರೆಗೂ ಆಸೀಸ್ ಪರ 308 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ.
ಇನ್ನು ಆಸ್ಟ್ರೇಲಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 5000+ ರನ್ ಹಾಗೂ 300+ ವಿಕೆಟ್ ಕಬಳಿಸಿದ ಮೊದಲ ಆಲ್ರೌಂಡರ್ ಎನ್ನುವ ಹೆಗ್ಗಳಿಕೆ ಕೂಡಾ ಎಲೈಸಿ ಪೆರ್ರಿ ಅವರಿಗಿದೆ.
ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ವೈಯುಕ್ತಿಕ ಸ್ಕೋರ್ ದಾಖಲಿಸಿದ ರೆಕಾರ್ಡ್ ಪೆರ್ರಿ ಬೆನ್ನಿಗಿದೆ. 2017ರ ನವೆಂಬರ್ 11ರಂದು ನಡೆದ ಮಹಿಳಾ ಆಷಸ್ ಟೆಸ್ಟ್ ಸರಣಿಯ ಡೇ ಅಂಡ್ ನೈಟ್ ಟೆಸ್ಟ್ ಪಂದ್ಯದಲ್ಲಿ ಪೆರ್ರಿ ಅಜೇಯ ದ್ವಿಶತಕ ಸಿಡಿಸಿದ್ದರು.