ಐಪಿಎಲ್ ಹರಾಜು: ಈ ಐವರು ವಿದೇಶಿ ಆಟಗಾರರ ಮೇಲೆ ಕಣ್ಣಿಟ್ಟಿದೆ ಮುಂಬೈ ಇಂಡಿಯನ್ಸ್..!
ಬೆಂಗಳೂರು: ಐಪಿಎಲ್ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್ ಅತ್ಯಂತ ಯಶಸ್ವಿ ಹಾಗೂ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ 5 ಬಾರಿ ಐಪಿಎಲ್ ಟ್ರೋಫಿ ಜಯಿಸಿದ್ದು, ಇದೀಗ 6ನೇ ಐಪಿಎಲ್ ಟ್ರೋಫಿ ಮೇಲೆ ಕಣ್ಣಿಟ್ಟಿದೆ.
ಮುಂಬೈ ಇಂಡಿಯನ್ಸ್ ತಂಡ ಎಲ್ಲಾ ವಿಭಾಗದಲ್ಲಿ ಸಾಕಷ್ಟು ಬಲಿಷ್ಠವಾಗಿ ಗುರುತಿಸಿಕೊಂಡಿದ್ದರೂ ಸಹಾ ತನ್ನ ಬೆಂಚ್ ಸ್ಟ್ರೆಂಥ್ ಮತ್ತಷ್ಟು ಬಲಿಷ್ಠಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಈ ಐವರು ವಿದೇಶಿ ಆಟಗಾರರನ್ನು ಮುಂಬರುವ ಐಪಿಎಲ್ ಆಟಗಾರರ ಹರಾಜಿನಲ್ಲಿ ಖರೀದಿಸುವ ಸಾಧ್ಯತೆಯಿದೆ.
1. ಟಾಮ್ ಕರ್ರನ್
ನ್ಯೂಜಿಲೆಂಡ್ ವೇಗಿ ಮಿಚೆಲ್ ಮೆಕ್ಲೆನಾಘನ್ ಬದಲಿಗೆ ಇಂಗ್ಲೆಂಡ್ ಆಲ್ರೌಂಡರ್ ಟಾಮ್ ಕರ್ರನ್ ಅವರನ್ನು ಮುಂಬೈ ಫ್ರಾಂಚೈಸಿ ತಮ್ಮ ತೆಕ್ಕೆಗೆ ಸೆಳೆದುಕೊಳ್ಳುವ ಸಾಧ್ಯತೆಯಿದೆ. ಕಳೆದ ಆವೃತ್ತಿಯಲ್ಲಿ ಟಾಮ್ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸಿ ಆಕರ್ಷಕ ಅರ್ಧಶತಕವನ್ನು ಬಾರಿಸಿದ್ದರು.
2. ಡೇವಿಡ್ ಮಲಾನ್
ಇಂಗ್ಲೆಂಡ್ ಅಗ್ರಶ್ರೇಯಾಂಕಿತ ಬ್ಯಾಟ್ಸ್‌ಮನ್ ಡೇವಿಡ್ ಮಲಾನ್ ಈ ಬಾರಿಯ ಹರಾಜಿನಲ್ಲಿ ಮುಂಬೈ ಫ್ರಾಂಚೈಸಿ ಖರೀದಿಸುವ ಸಾಧ್ಯತೆಯಿದೆ. ಟಿ20 ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿರುವ ಮಲಾನ್ ಮೇಲೆ ಮುಂಬೈ ಫ್ರಾಂಚೈಸಿ ಕಣ್ಣಿಟ್ಟಿದೆ.
3.ಮಾರ್ನಸ್ ಲಬುಶೇನ್
ಆಸ್ಟ್ರೇಲಿಯಾದ ಅತ್ಯಂತ ನಂಬಿಕಸ್ಥ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿರುವ ಲಬುಶೇನ್, ಹಲವು ಪಂದ್ಯಗಳಲ್ಲಿ ಏಕಾಂಗಿಯಾಗಿ ಪಂದ್ಯದ ಗತಿಯನ್ನೇ ಬದಲಿಸಿದ್ದಾರೆ. ಬಿಗ್‌ಬ್ಯಾಶ್ ಲೀಗ್‌ನಲ್ಲಿ ಬ್ರಿಸ್ಬೇನ್ ಹೀಟ್ ಪರ ಬೌಲಿಂಗ್‌ನಲ್ಲೂ ಕೆಲವೊಂದು ಉಪಯುಕ್ತ ವಿಕೆಟ್ ಕಬಳಿಸಿ ತಂಡಕ್ಕೆ ಆಸರೆಯಾಗಿದ್ದಾರೆ. ಹೀಗಾಗಿ ಮುಂಬೈ ಲಬುಶೇನ್ ಖರೀದಿಸಿದರು ಅಚ್ಚರಿಯಿಲ್ಲ.
4. ಶೆಲ್ಡನ್ ಕಾಟ್ರೆಲ್
ಗಾಯದ ಸಮಸ್ಯೆಯಿಂದಾಗಿ ಜೇಮ್ಸ್ ಪ್ಯಾಟಿನ್‌ಸನ್ ಅವರನ್ನು ಮುಂಬೈ ಫ್ರಾಂಚೈಸಿ ತಂಡದಿಂದ ಕೈಬಿಟ್ಟಿದ್ದು, ಅವರ ಬದಲಿಗೆ ಕೆರಿಬಿಯನ್ ವೇಗಿ ಶೆಲ್ಡರ್ ಕಾಟ್ರೆಲ್ ಖರೀದಿಸುವ ಸಾಧ್ಯತೆಯಿದೆ. ಕಳೆದ ಐಪಿಎಲ್ ಆವೃತ್ತಿಯಲ್ಲಿ ದುಬಾರಿಯಾಗಿದ್ದರು ಯಾರ್ಕರ್ ಮೂಲಕ ಎದುರಾಳಿ ತಂಡಕ್ಕೆ ಶಾಕ್ ನೀಡುವ ಸಾಮರ್ಥ್ಯ ಕಾಟ್ರೆಲ್‌ಗಿದೆ. ಹೀಗಾಗಿ ಮುಂಬೈ ಕಾಟ್ರೆಲ್ ಸೆಳೆಯಲು ಮನಸು ಮಾಡುವ ಸಾಧ್ಯತೆಯಿದೆ.
5.ಲಿಯಾಮ್ ಫ್ಲಂಕೆಟ್
ಇಂಗ್ಲೆಂಡ್ ಅನುಭವಿ ವೇಗಿ ಲಸಿತ್ ಮಾಲಿಂಗ ಬದಲಿಗೆ ಮುಂಬೈ ತಂಡ ಕೂಡಿಕೊಳ್ಳುವ ಸಾಧ್ಯತೆಯಿದೆ. ಫ್ಲೆಂಕೆಟ್ ಬೌಲಿಂಗ್ ಮಾತ್ರವಲ್ಲದೇ ಕೆಳಕ್ರಮಾಂಕದ ಬ್ಯಾಟಿಂಗ್‌ನಲ್ಲೂ ತಂಡಕ್ಕೆ ಉಪಯುಕ್ತ ರನ್ ಕಾಣಿಕೆ ನೀಡುವ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ಮುಂಬೈ ಫ್ರಾಂಚೈಸಿ ಹರಾಜಿನಲ್ಲಿ ಫ್ಲೆಂಕೆಟ್‌ಗೆ ಮಣೆ ಹಾಕುವ ಸಾಧ್ಯತೆಯಿದೆ.