RCB ಫ್ರಾಂಚೈಸಿ ಮಾಡಿದ 5 ಮಹಾ ಎಡವಟ್ಟಿಗೆ ಈಗಲೂ ಬೆಂಗಳೂರು ತಂಡ ಬೆಲೆ ತೆರುತ್ತಿದೆ..!
ಬೆಂಗಳೂರು: ಐಪಿಎಲ್‌ನಲ್ಲಿ ಕಪ್ ಗೆಲ್ಲದ 4 ತಂಡಗಳ ಪೈಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡಾ ಒಂದು ಎನಿಸಿಕೊಂಡಿದೆ. ಆರ್‌ಸಿಬಿ ಫ್ರಾಂಚೈಸಿಗಳು ಕೆಲ ಆಟಗಾರರನ್ನು ಕೈಬಿಟ್ಟಿದ್ದಕ್ಕೆ ಈಗಲೂ ಬೆಲೆ ತೆರುತ್ತಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಚೊಚ್ಚಲ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಿಂದಲೂ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಾ ಬಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಕಳೆದ 15 ಆವೃತ್ತಿಗಳಿಂದಲೂ ಕಪ್ ಬರ ಅನುಭವಿಸುತ್ತಲೇ ಇದೆ.
ಆರ್‌ಸಿಬಿ ಫ್ರಾಂಚೈಸಿಯು ಕೆಲವು ಆಟಗಾರರನ್ನು ತಮ್ಮ ತೆಕ್ಕೆಗೆ ಸೆಳೆದುಕೊಂಡು, ಕೆಲವೇ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದಕ್ಕಾಗಿ ಅವರನ್ನು ತಂಡದಿಂದ ಕೈಬಿಟ್ಟು ತಪ್ಪು ಮಾಡಿತು. ಅದೇ ಆಟಗಾರರು ಬೇರೆ ತಂಡ ಕೂಡಿಕೊಂಡ ಬಳಿಕ ಅಬ್ಬರಿಸುತ್ತಿದ್ದಾರೆ.
ಕೆ ಎಲ್ ರಾಹುಲ್ ಅವರಿಂದ ಹಿಡಿದು, ಐಪಿಎಲ್‌ನ 1000ನೇ ಪಂದ್ಯದಲ್ಲಿ ಅಬ್ಬರಿಸಿ ಮುಂಬೈಗೆ ಗೆಲುವು ತಂದುಕೊಟ್ಟ ಟಿಮ್ ಡೇವಿಡ್ ವರೆಗೆ ಆರ್‌ಸಿಬಿ ಮಾಡಿದ ಮಹಾ 5 ತಪ್ಪು ನಿರ್ಧಾರದ ಕುರಿತಾದ ರಿಪೋರ್ಟ್ ಹೀಗಿದೆ ನೋಡಿ.
1. ಕೆ ಎಲ್ ರಾಹುಲ್:
ಕೆ ಎಲ್ ರಾಹುಲ್, ಅರ್‌ಸಿಬಿ ತಂಡದಲ್ಲಿದ್ದಾಗಲೂ ಸ್ಥಿರ ಪ್ರದರ್ಶನ ತೋರಿದ್ದರು. ಹೀಗಿದ್ದೂ 2018ರ ಐಪಿಎಲ್‌ಗೂ ಮುನ್ನ ರಾಹುಲ್ ಅವರನ್ನು ಆರ್‌ಸಿಬಿ ತಂಡದಿಂದ ಕೈಬಿಟ್ಟಿತು. ಇದಾದ ಬಳಿಕ ಕೆ ಎಲ್ ರಾಹುಲ್ ಪ್ರತಿ ಆವೃತ್ತಿಯಲ್ಲೂ 500+ ರನ್ ಬಾರಿಸುತ್ತಲೇ ಬರುತ್ತಿದ್ದಾರೆ.
2. ಯುಜುವೇಂದ್ರ ಚಹಲ್
ಐಪಿಎಲ್‌ನ ಯಶಸ್ವಿ ಸ್ಪಿನ್ನರ್ ಎನಿಸಿಕೊಂಡ ಯುಜುವೇಂದ್ರ ಚಹಲ್, ಆರ್‌ಸಿಬಿ ಪರ ಯಶಸ್ವಿ ಸ್ಪಿನ್ನರ್ ಎನಿಸಿಕೊಂಡಿದ್ದ ಚಹಲ್, ಆರ್‌ಸಿಬಿ ತೊರೆದ ಬಳಿಕವಷ್ಟೇ ಅಂದರೆ, ರಾಜಸ್ಥಾನ ರಾಯಲ್ಸ್ ತಂಡ ಸೇರಿಕೊಂಡ ಬಳಿಕ ಪರ್ಪಲ್ ಕ್ಯಾಪ್(ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಸರದಾರ) ಪಡೆದುಕೊಂಡರು.
3. ಕ್ವಿಂಟನ್ ಡಿ ಕಾಕ್:
ಆರ್‌ಸಿಬಿ ತಂಡವು ದಕ್ಷಿಣ ಆಫ್ರಿಕಾದ ಸ್ಪೋಟಕ ಆರಂಭಿಕ ಬ್ಯಾಟರ್ ಡಿ ಕಾಕ್ ಅವರನ್ನು ಸರಿಯಾಗಿ ಬಳಸಿಕೊಳ್ಳಲು ವಿಫಲವಾಯಿತು. ಇದಾದ ಬಳಿಕ ಮುಂಬೈ ಇಂಡಿಯನ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ ಪರ ತಲಾ 500+ ರನ್ ಸಿಡಿಸಿದ್ದಾರೆ.
4. ಶೇನ್ ವಾಟ್ಸನ್:
ಆಸ್ಟ್ರೇಲಿಯಾದ ಮಾಜಿ ಆಲ್ರೌಂಡರ್ ಶೇನ್ ವಾಟ್ಸನ್ ಕೂಡಾ ಆರ್‌ಸಿಬಿ ಪರ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾದರು. ಆದರೆ ಆರ್‌ಸಿಬಿ ತೊರೆದು ಸಿಎಸ್‌ಕೆ ಸೇರಿದ ವಾಟ್ಸನ್, ಚೆನ್ನೈ 4ನೇ ಬಾರಿಗೆ ಚಾಂಪಿಯನ್ ಆಗುವಲ್ಲಿ ಮಹತ್ತರ ಪಾತ್ರ ವಹಿಸಿದರು.
5. ಟಿಮ್ ಡೇವಿಡ್:
ಸಿಂಗಾಪುರ ಮೂಲದ ಆಸ್ಟ್ರೇಲಿಯಾದ ದೈತ್ಯ ಕ್ರಿಕೆಟಿಗ ಟಿಮ್ ಡೇವಿಡ್ ಕೂಡಾ 2021ರ ಐಪಿಎಲ್‌ನ ದ್ವಿತಿಯಾರ್ಧದಲ್ಲಿ ಆರ್‌ಸಿಬಿ ಪರ ಕಣಕ್ಕಿಳಿದಿದ್ದರು. ಆದರೆ ಅವರನ್ನು ಆರ್‌ಸಿಬಿ ಸರಿಯಾಗಿ ಬಳಸಿಕೊಳ್ಳಲಿಲ್ಲ. ಆದರೆ ಈಗ ಟಿಮ್ ಡೇವಿಡ್ ಮುಂಬೈ ತಂಡದ ಫಿನಿಶರ್ ಆಗಿ ಗುರುತಿಸಿಕೊಂಡಿದ್ದು, ಐಪಿಎಲ್‌ನ 1000ನೇ ಪಂದ್ಯವಾದ ರಾಜಸ್ಥಾನ ರಾಯಲ್ಸ್ ಎದುರು 14 ಎಸೆತಗಳಲ್ಲಿ 45 ರನ್ ಚಚ್ಚಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ.