ನಿಲ್ಲದ ಸೋನು ಸೂದ್ ಮಾದರಿ ಕೆಲಸ, ವಲಸೆ ಕಾರ್ಮಿಕರಿಗೆ ಆಪತ್ಭಾಂಧವ
ಮುಂಬೈ(ಮೇ 18) ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ತೆರಳಲಿದ್ದ ವಲಸೆ ಕಾರ್ಮಿಕರಿಗೆ ಬಸ್ ವ್ಯವಸ್ಥೆ ಮಾಡಿಕೊಟ್ಟು ಮೆಚ್ಚುಗೆಗೆ ಪಾತ್ರರಾಗಿದ್ದ ನಟ ಸೋನು ಸೂದ್ ಈಗ ಮತ್ತಷ್ಟು ಕಾರ್ಮಿಕರ ನೆರವಿಗೆ ನಿಂತಿದ್ದಾರೆ. ಉತ್ತರ ಪ್ರದೇಶದ ಕಾರ್ಮಿಕರ ನೆರವಿಗೆ ನಿಂತಿದ್ದಾರೆ.
ಈ ಬಾರಿ ಉತ್ತರ ಪ್ರದೇಶದ ಕಾರ್ಮಿಕರ ನೆರವಿಗೆ ಸೋನು ಮತ್ತಷ್ಟು ಬಸ್ ವ್ಯವಸ್ಥೆ ಮಾಡಿಸಿಕೊಟ್ಟಿದ್ದಾರೆ. ಇದಕ್ಕಾಗಿ ಖುದ್ದಾಗಿ ಉತ್ತರ ಪ್ರದೇಶ ಸರ್ಕಾರದಿಂದ ವಿಶೇಷ ಅನುಮತಿ ಸಹ ತೆಗೆದುಕೊಂಡಿದ್ದಾರೆ.
ಇದು ನಿಜಕ್ಕೂ ನನಗೆ ಅತಿದೊಡ್ಡ ಭಾವನಾತ್ಮಕ ವಿಷಯ. ಕಾರ್ಮಿಕರ ಕಷ್ಟ ನೋಡಲು ಸಾಧ್ಯವಾಗದೆ ಈ ಕ್ರಮ ತೆಗೆದುಕೊಂಡಿದ್ದೇನೆ ಎಂದು ಸೂದ್ ಹೇಳಿದ್ದಾರೆ.
ಕಾರ್ಮಿಕರು ತಮ್ಮ ಕುಟುಂಬದಿಂದ ಬೇರೆಯಾಗಿ ತಮ್ಮ ಮನೆ ತಲುಪಲು ನೂರಾರು ಮೈಲಿ ನಡೆದಾಡುವುದನ್ನು ನೋಡಲು ನನ್ನಿಂದ ಸಾಧ‍್ಯವಾಗುತ್ತಿಲ್ಲ. ಹೀಗಾಗಿ ಪ್ರತಿಯೊಬ್ಬ ಕಾರ್ಮಿಕನೂ ತಮ್ಮ ಕುಟುಂಬ ಸೇರುವವರೆಗೆ ನನ್ನ ಕೈಲಾದಷ್ಟು ಬಸ್ ಸೇವೆ ಮಾಡುವೆ ಎಂದು ತಿಳಿಸಿದ್ದಾರೆ.
ಗುಲ್ಬರ್ಗದಿಂದ ಮಹಾರಾಷ್ಟ್ರದ ಥಾಣೆಗೆ ನೂರಾರು ಕಾರ್ಮಿಕರು ಕೆಲಸಕ್ಕೆ ತೆರಳಿದ್ದರು. ಲಾಕ್ಡೌನ್ನಿಂದಾಗಿ ಅವರು ಅಲ್ಲಿಯೇ ಉಳಿಯಬೇಕಾಗಿ ಬಂದಿತ್ತು. ಕೊರೋನಾ ಹೊಡೆತಕ್ಕೆ ನಲುಗಿರುವ ಮಹಾರಾಷ್ಟ್ರದ ಥಾಣೆಯಲ್ಲಿ ಸಿಲುಕಿದ್ದವನ್ನು ಸೂದ್ 10 ಬಸ್ಗಳ ಮೂಲಕ ತವರಿಗೆ ಕಳುಹಿಸುವ ಕೆಲಸ ಮಾಡಿದ್ದರು.
ಪಂಜಾಬ್ನಲ್ಲಿ 1500 ಪಿಪಿಇ ಕಿಟ್ಗಳನ್ನು ನೀಡುವ ಮೂಲಕ ಸೋನು ಸೂದ್ ಬಡವರ ಹೊಟ್ಟೆ ತುಂಬಿಸುವ ಕೆಲಸವನ್ನು ಮಾಡಿದ್ದರು. ಸೋನು ಸೂದ್ ಅವರ ಕಾರ್ಯಕ್ಕೆ ಪ್ರಶಂಸೆಗಳು ಹರಿದು ಬಂದಿವೆ.
ಸೋನು ಸೂದ್ ಹಿಂದಿ ಮಾತ್ರವಲ್ಲದೇ ಕನ್ನಡ, ತಮಿಳು, ತೆಲುಗು ಚಿತ್ರಗಳಲ್ಲಿಯೂ ಅಭಿನಯಿಸುತ್ತ ಬಂದಿದ್ದಾರೆ. ಅರುಂಧತಿ ಚಿತ್ರದಲ್ಲಿ ಸೋನು ಸೂದ್ ಕಾಣಿಸಿಕೊಂಡ ರೀತಿಯನ್ನು ಸಿನಿ ಪ್ರೇಮಿಗಳು ಮರೆಯಲು ಸಾಧ್ಯವೇ ಇಲ್ಲ.