ಜೈಲಲ್ಲಿದ್ದಾಗ ಇನ್ನೊಬ್ಬರ ಮೊಗದಲ್ಲಿ ನಗುವ ತರಲು ಯತ್ನಿಸಿದ ರಿಯಾ ಚಕ್ರವರ್ತಿ!
ಗೆಳೆಯ, ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ರಿಯಾ ಚಕ್ರವರ್ತಿ 28 ದಿನಗಳ ಕಾಲ ತಾವು ಜೈಲಿನಲ್ಲಿ ಅನುಭವಿಸಿದ ಮಾನಸಿಕ ಮತ್ತು ದೈಹಿಕ ಆಘಾತದ ಬಗ್ಗೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ತಾವು ಕೈದಿಗಳಿಗಾಗಿ ನಾಗಿನ್ ಡ್ಯಾನ್ಸ್ ಮಾಡಿದ್ದಾಗಿ ರಿಯಾ ಹೇಳಿದ್ದಾರೆ.
ನಟ-ಬಾಯ್ ಫ್ರೆಂಡ್ ಸುಶಾಂತ್ ಸಿಂಗ್ ರಜಪೂತ್ ನಿಧನದ ನಂತರ ನಟಿ ರಿಯಾ ಚಕ್ರವರ್ತಿ ಬೈಕುಲ್ಲಾ ಜೈಲಿನಲ್ಲಿ 28 ದಿನಗಳನ್ನು ಕಳೆದರು. ಸಾವಿಗೀಡಾದ ನಟನಿಗಾಗಿ ಡ್ರಗ್ಸ್ ಖರೀದಿಸಿದ ಆರೋಪ ಹೊತ್ತಿದ್ದ ಆಕೆ ನಂತರ ಜಾಮೀನಿನ ಮೇಲೆ ಬಿಡುಗಡೆಯಾದಳು.
ಇತ್ತೀಚೆಗೆ, ಚೇತನ್ ಭಗತ್ ಅವರ ಚಾಟ್ ಶೋ, ಡೀಪ್ ಟಾಕ್ ವಿತ್ ಚೇತನ್ ಭಗತ್‌ನಲ್ಲಿ ರಿಯಾ ತಾನು ಜೈಲಿನಲ್ಲಿ ಅನುಭವಿಸಿದ 'ಮಾನಸಿಕ ಮತ್ತು ದೈಹಿಕ ಆಘಾತ'ದ ಬಗ್ಗೆ ಮಾತನಾಡಿದ್ದಾಳೆ.
ಜೈಲಿನಲ್ಲಿ ದಿನ ಬೆಳಗ್ಗೆ 4 ಗಂಟೆಗೆ ಶುರುವಾಗುತ್ತಿತ್ತು. 6ಕ್ಕೆ ತಿಂಡಿ ತಿನ್ನುತ್ತಿದ್ದೆ, 11ಕ್ಕೆ ಊಟ ಮತ್ತು ಅರ್ಧ ರಾತ್ರಿ 2 ಗಂಟೆಗೆ ರಾತ್ರಿಯ ಊಟ ಮಾಡುತ್ತಿದ್ದೆ ಎಂದಿದ್ದಾಳೆ.
ಪ್ರತಿ ಖೈದಿಗೆ ಕುಟುಂಬವು ತಿಂಗಳಿಗೆ 5000 ರೂ.ವನ್ನು ಖರ್ಚಿಗಾಗಿ ಕೊಡಬಹುದಾಗಿತ್ತು. ಅದರಲ್ಲಿ ಅರ್ಧದಷ್ಟನ್ನು ರಿಯಾ ಕುಡಿಯುವ ನೀರಿಗಾಗಿಯೇ ವ್ಯಯಿಸುತ್ತಿದ್ದಳಂತೆ.
ಊಟವೆಂದು ರೋಟಿ ಮತ್ತು ದೊಣ್ಣೆ ಮೆಣಸಿನಕಾಯಿ ಸಬ್ಜಿ ಕೊಡಲಾಗುತ್ತಿತ್ತು. ಅದು ಕ್ಯಾಪ್ಸಿಕಂನ್ನು ನೀರಿನಲ್ಲಿ ಹಾಕಿಟ್ಟಂತೆ ಇರುತ್ತಿತ್ತು ಎಂದು ರಿಯಾ ನೆನೆಸಿಕೊಂಡಿದ್ದಾಳೆ.
ತನಗೆ ಬೇಲ್ ಸಿಕ್ಕ ದಿನ ಅವರಿಗೆಲ್ಲ ಡ್ಯಾನ್ಸ್ ಮಾಡಿ ತೋರಿಸುವುದಾಗಿ ರಿಯಾ ಇತರ ಕೈದಿಗಳಿಗೆ ಮಾತು ಕೊಟ್ಟಿದ್ದಳಂತೆ. ಅಂತೆಯೇ ಬೇಲ್ ಸಿಕ್ಕ ದಿನದಂದು ಆಕೆ ನಾಗಿನ್ ಡ್ಯಾನ್ಸ್ ಮಾಡಿ ತೋರಿಸಿದಳಂತೆ.
ಅಲ್ಲದೆ, ಹಲವು ಕೈದಿಗಳಿಗೆ ಕುಟುಂಬವೇ ಇರಲಿಲ್ಲ. ಆದ್ದರಿಂದ ಅವರ ಮುಖದಲ್ಲಿ ನಗು ತರಿಸಲು ತಾನು ಮಾಡಬಲ್ಲ ಕನಿಷ್ಠ ಕೆಲಸ ಇದಾಗಿತ್ತು. ಹಾಗಾಗಿ, ಡ್ಯಾನ್ಸ್ ಮಾಡಿದೆ ಎನ್ನುತ್ತಾಳೆ ರಿಯಾ.
ಜೈಲಿನಲ್ಲಿನ ಶೌಚಾಲಯಗಳು ತುಂಬಾ ಕೊಳಕಾಗಿದ್ದವು ಎಂದು ನೆನೆಸಿಕೊಂಡ ಆಕೆ, ಜೈಲಿನಲ್ಲಿ ಆದ ಮಾನಸಿಕ ಆಘಾತದ ಮುಂದೆ ದೈಹಿಕ ಆಘಾತ ಲೆಕ್ಕದ್ದಲ್ಲ ಎಂದಿದ್ದಾಳೆ.
ಅದೊಂದು ಬೇರೆ ಪ್ರಪಂಚ. ಅನೇಕ ಕೈದಿಗಳಿಗೆ ಕುಟುಂಬದ ಬೆಂಬಲವಿಲ್ಲ ಎಂದು ನೋಡಿದಾಗ ನಾನೆಷ್ಟು ಅದೃಷ್ಟವಂತೆ ಎಂಬುದು ಅರಿವಾಯಿತು. 10,000 ರೂ. ಜಾಮೀನು ಕೊಟ್ಟು ಬಿಡಿಸಿಕೊಂಡು ಹೋಗಲು ಕೂಡಾ ಹಲವು ಕೈದಿಗಳ ಕುಟುಂಬಕ್ಕೆ ಸಾಧ್ಯವಿರಲಿಲ್ಲ ಎಂದಿದ್ದಾರೆ.