Ilayaraja - Gangai Amaran: 13 ವರ್ಷಗಳ ನಂತರ ಮತ್ತೆ ಒಂದಾದ ಇಳಯರಾಜ-ಗಂಗೈ ಅಮರನ್!
13 ವರ್ಷಗಳಿಂದ ಮಾತನಾಡದ ಸಂಗೀತ ನಿರ್ದೇಶಕ ಇಳಯರಾಜ ಮತ್ತು ಗಂಗೈ ಅಮರನ್ ಇತ್ತೀಚೆಗೆ ಮತ್ತೆ ಒಂದಾಗಿದ್ದಾರೆ. ಹೌದು! ಇವರಿಬ್ಬರು ಪರಸ್ಪರ ಭೇಟಿಯಾದಾಗ ತೆಗೆದ ಫೋಟೋ ಬಿಡುಗಡೆಯಾಗಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಕಾಲಿವುಡ್‌ನ (Kollywood) ಹೆಸರಾಂತ ಸಂಗೀತ ನಿರ್ದೇಶಕ ಇಳಯರಾಜ (Ilayaraja). ಇವರ ಸಂಗೀತಕ್ಕೆ ಜಗತ್ತಿನಾದ್ಯಂತ ಅಭಿಮಾನಿಗಳಿದ್ದಾರೆ. ಮಾತ್ರವಲ್ಲದೇ ಇಳಯರಾಜ ಅವರ ಸಹೋದರ ಗಂಗೈ ಅಮರನ್ (Gangai Amaran) ತಮಿಳು ಚಿತ್ರರಂಗದಲ್ಲಿ ಬಹುಮುಖ ಪ್ರತಿಭೆಯ ಕಲಾವಿದರಾಗಿ ನಟ, ಗೀತರಚನೆಕಾರ, ಗಾಯಕ ಮತ್ತು ನಿರ್ದೇಶಕರಾಗಿ ಮಿಂಚಿದವರು.
ಗಂಗೈ ಅಮರನ್ ಆಕ್ಷನ್ ಕಟ್ ಹೇಳಿರುವ ಬಹುತೇಕ ಚಿತ್ರಗಳಿಗೆ ಇಳಯರಾಜ ಸಂಗೀತ ಸಂಯೋಜನೆ ಮಾಡಿದ್ದಾರೆ. 'Pavalar brothers' ಎಂದೇ ಹೆಸರುವಾಸಿಯಾಗಿದ್ದ ಇವರ ನಡುವೆ ಆಗಾಗ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳೂ ಇದ್ದವು. ಈ ವಿಚಾರವನ್ನು ಗಂಗೈ ಅಮರನ್ ಸಂದರ್ಶನವೊಂದರಲ್ಲಿಯೂ ಬಹಿರಂಗವಾಗಿ ತಿಳಿಸಿದ್ದರು.
'ಚಿನ್ನರಾಮಸಾಮಿ ಪೆರಿಯಾರಾಮಸಾಮಿ' ಚಿತ್ರವೇ ಇವರಿಬ್ಬರ ನಡುವೆ ದೊಡ್ಡ ಮನಸ್ತಾಪಕ್ಕೆ ಕಾರಣವಾಗಿದ್ದು, ಚಿತ್ರ ನಿರ್ಮಾಣದ ವೇಳೆ ಇಬ್ಬರ ನಡುವೆ ಸಮಸ್ಯೆ ಉಂಟಾಗಿತ್ತು ಎನ್ನಲಾಗಿದೆ. ಅನಂತರ ಇಬ್ಬರೂ ಮತ್ತೆ ಮಾತನಾಡಲೂ ಇಲ್ಲ ಹಾಗೂ ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಭೇಟಿಯಾಗಿರಲಿಲ್ಲ.
ಹೀಗೆ 13 ವರ್ಷಗಳಿಂದ ಮಾತನಾಡದೇ ಇದ್ದ ಇಳಯರಾಜ ಮತ್ತು ಗಂಗೈ ಅಮರನ್ ಇತ್ತೀಚೆಗೆ ಮತ್ತೆ ಒಂದಾಗಿದ್ದಾರೆ. ಇವರಿಬ್ಬರು ಪರಸ್ಪರ ಭೇಟಿಯಾದಾಗ ತೆಗೆದ ಫೋಟೋ ಬಿಡುಗಡೆಯಾಗಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ (Social Media) ಸಖತ್ ವೈರಲ್ (Viral) ಆಗಿದೆ.
ಗಂಗೈ ಅಮರನ್ ಅವರು ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, ಸಹೋದರ ಇಳಯರಾಜ ನನಗೆ ಮೊಬೈಲ್ ಮೂಲಕ ಕರೆ ಮಾಡಿ ಬಾ ಎಂದರು. ನಾನು ತಕ್ಷಣ ಹೋಗಿ ಅವರನ್ನು ಭೇಟಿಯಾದೆ. ಇದಕ್ಕಾಗಿಯೇ ಇಷ್ಟು ದಿನ ನಾನು ಕಾಯುತ್ತಿದ್ದೆ. ನಾನು ಸುಮಾರು ಒಂದೂವರೆ ಗಂಟೆಗಳ ಕಾಲ ಅವನೊಂದಿಗೆ ಮಾತನಾಡಿದೆ.
ನಾವಿಬ್ಬರು ಯಾವುದೇ ಜಗಳವಿಲ್ಲದೆ ಚೆನ್ನಾಗಿ ಮಾತನಾಡಿದೆವು. ಇನ್ನು ಮುಂದೆ ನಾವಿಬ್ಬರೂ ಸುಖವಾಗಿ ಇರುತ್ತೇವೆ. 13 ವರ್ಷಗಳಿಂದ ಮಾತನಾಡದೇ ಇರುವುದು ದೊಡ್ಡ ದುರಂತವಾಗಿದ್ದು, ಅದು ಮತ್ತೆ ಆಗುವುದಿಲ್ಲ. ನಾನು ಈಗ ತುಂಬಾ ಸಂತೋಷವಾಗಿದ್ದೇನೆ ಎಂದು ಗಂಗೈ ಅಮರನ್ ತಿಳಿಸಿದ್ದಾರೆ.