ಈ ಹೃತಿಕ್ ರೋಷನ್‌ಗೆ 50 ವರ್ಷವಂತೆ! ಇಷ್ಟು ಫಿಟ್ ಆಗಿರಲು ಫೈಟರ್ ಏನು ತಿಂತಾರೆ?
ಹೃತಿಕ್ ನಟನೆಯ 'ಫೈಟರ್' ಸಿನಿಮಾ ಇದೇ ಜನವರಿಯಲ್ಲಿ ಬಿಡುಗಡೆಯಾಗಲಿದೆ. ಇದರಲ್ಲಿ ಭಾರತೀಯ ವಾಯುಪಡೆಯ ಸ್ಕ್ವಾಡ್ರನ್ ಲೀಡರ್ ಆಗಿ ನಟಿಸಿರುವ ನಟನ ಫಿಟ್ನೆಸ್ ನೋಡಿದರೆ ಅದರ ಸೀಕ್ರೆಟ್ ತಿಳಿವ ಹಂಬಲ ಹೆಚ್ಚುತ್ತದೆ.
ಹೃತಿಕ್ ರೋಷನ್ 50ರ ಸನಿಹ ತಲುಪಿದ್ದಾರೆ ಎಂದರೆ ನೀವು ಅನುಮಾನದಿಂದೊಮ್ಮೆ ಗೂಗಲ್‌ನಲ್ಲಿ ಚೆಕ್ ಮಾಡುತ್ತೀರಿ. ಏಕೆಂದರೆ, ಆ ನಟನ ರೂಪ, ಕಾಯ, ಫಿಟ್ನೆಸ್ ಎಲ್ಲವೂ ಈ ವಯಸ್ಸು ಸುಳ್ಳೆಂದೇ ಹೇಳುತ್ತವೆ.
ಸದ್ಯ ಹೃತಿಕ್ ನಟನೆಯ 'ಫೈಟರ್' ಸಿನಿಮಾ ಇದೇ ಜನವರಿಯಲ್ಲಿ ಬಿಡುಗಡೆಯಾಗಲಿದೆ. ಇದರಲ್ಲಿ ಭಾರತೀಯ ವಾಯುಪಡೆಯ ಸ್ಕ್ವಾಡ್ರನ್ ಲೀಡರ್ ಆಗಿ ನಟ ನಟಿಸಿದ್ದಾರೆ. ಅವರ ಫಿಟ್ನೆಸ್ ನೋಡುತ್ತಿದ್ದರೆ ಅವರ ಡಯಟ್ ಪ್ಲ್ಯಾನ್ ಹಾಗೂ ವರ್ಕೌಟ್ ರೂಟೀನ್ ತಿಳಿವ ಹಂಬಲವಾಗುತ್ತದೆಯಲ್ಲವೇ?
ಪಾತ್ರಕ್ಕೆ ಸೂಕ್ತವಾಗಿ ದೇಹ ಹುರಿಗೊಳಿಸಿಕೊಳ್ಳುವುದರಲ್ಲಿ ಹೃತಿಕ್ ಹೆಸರುವಾಸಿ. ದೇಶದ ಅತಿದೊಡ್ಡ ಫಿಟ್‌ನೆಸ್ ಐಕಾನ್‌ಗಳಲ್ಲಿ ಒಂದಾಗಿರುವ ಹೃತಿಕ್, 'ಫೈಟರ್'ಗಾಗಿ ತಾವು ಅನುಸರಿಸಿದ ಜೀವನಕ್ರಮ ಮತ್ತು ಆಹಾರಕ್ರಮವನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.
ಸರಣಿ ವ್ಯಾಯಾಮ
'ಫೈಟರ್'ನಲ್ಲಿನ ತನ್ನ ಪಾತ್ರಕ್ಕೆ ಸಿದ್ಧವಾಗಲು, ನಟ ಕಾರ್ಡಿಯೋ ಮತ್ತು ಶಕ್ತಿ ತರಬೇತಿ ವ್ಯಾಯಾಮಗಳ ಸಂಯೋಜನೆಯನ್ನು ಅವಲಂಬಿಸಿದ್ದರು. ಅವರು ವಾರದಲ್ಲಿ ವಿವಿಧ ದಿನಗಳಲ್ಲಿ ನಿರ್ದಿಷ್ಟ ಸ್ನಾಯು ಗುಂಪುಗಳ ಮೇಲೆ ಕೇಂದ್ರೀಕರಿಸುವ ವ್ಯಾಯಾಮದಲ್ಲಿ ತೊಡಗಿಕೊಂಡರು.
ಯೋಜಿತ ಆಹಾರ
ಶೂಟ್ ಶೆಡ್ಯೂಲ್‌ಗಾಗಿ ಪ್ರಯಾಣಿಸುವಾಗ ಮೊದಲೇ ಮನೆಯಿಂದಲೇ ಪ್ಯಾಕ್ ಮಾಡಲಾದ ಬೇಯಿಸಿದ ಆರೋಗ್ಯಕರ ಆಹಾರವನ್ನು ಹೃತಿಕ್ ಕೊಂಡೊಯ್ಯುತ್ತಿದ್ದರು. ಅವರ ಕ್ಯಾರಿ-ಆನ್ ಲಗೇಜ್‌ನಲ್ಲಿ 6 ಊಟದ ಬಾಕ್ಸ್‌ಗಳಿರುತ್ತಿದ್ದವು. ಪ್ರತಿ ಊಟವು ಸುಮಾರು 130 ಗ್ರಾಂ ಪ್ರೋಟೀನ್ (ಬೇಯಿಸಿದ ತೂಕ) + ತರಕಾರಿಗಳನ್ನು ಒಳಗೊಂಡಿತ್ತು. ಪ್ರತಿ 3 ಗಂಟೆಗಳಿಗೊಮ್ಮೆ ಒಂದು ಬಾಕ್ಸ್ ಖಾಲಿ ಮಾಡುತ್ತಿದ್ದರು. ಇದು ಉತ್ತಮ ದೇಹಕ್ಕಾಗಿ ತಾವು ಮಾಡುತ್ತಿರುವ ತ್ಯಾಗ ಎಂದವರು ಹೇಳಿಕೊಂಡಿದ್ದರು. ಆ ತ್ಯಾಗದ ಫಲವನ್ನು ನಾವಿಂದು ಕಾಣಬಹುದು.
ತೆಳ್ಳಗಿನ ದೇಹ
ಹೃತಿಕ್ ಅವರು ಪಾತ್ರಕ್ಕಾಗಿ ಮೈಕಟ್ಟನ್ನು ತೆಳ್ಳಗೆ ಹುರಿಗಟ್ಟಿಸಿಕೊಂಡಿದ್ದಾರೆ. ಅವರ ಪಾತ್ರದಲ್ಲಿ ಸಾಕಷ್ಟು ಆಕ್ಷನ್ ಮತ್ತು ಥ್ರಿಲ್ ಇದ್ದು, ಅದಕ್ಕೆ ಸೂಕ್ತ ದೇಹ ತಯಾರಿ ಮಾಡಿಕೊಂಡಿದ್ದಾರೆ.
ಅಧಿಕ ಪ್ರೋಟೀನ್
ಹೆಚ್ಚಿನ ಪ್ರೋಟೀನನ್ನು ದೇಹಕ್ಕೆ ನೀಡಲು ಹೃತಿಕ್ ಪೀನಟ್ ಬಟರ್ ಸೇವನೆ ಮಾಡುತ್ತಿದ್ದರು. ಇದೇ ತಮ್ಮ ಪೌಷ್ಟಿಕ ಆಹಾರಕ್ಕೆ ರುಚಿ ನೀಡುವ ಅಂಶ ಎಂದವರು ಹೇಳಿದ್ದರು.
ಸ್ಥಿರತೆ
ಹೃತಿಕ್ ಕಳೆದ ಕೆಲ ತಿಂಗಳ ಡಯಟ್ ಬಗ್ಗೆ ತಿಳಿಸಿರಬಹುದು. ಆದರೆ, ಅವರ ಪ್ರಭಾವಶಾಲಿ ಮೈಕಟ್ಟು ದಶಕಗಳ ವ್ಯಾಯಾಮ ಮತ್ತು ಆಹಾರ ಶಿಸ್ತಿನ ಪರಿಣಾಮವಾಗಿದೆ. ಹೃತಿಕ್‌ಗೆ ತಮ್ಮ ದೇಹದ ಮಾತನ್ನು ಅರ್ಥ ಮಾಡಿಕೊಳ್ಳುವ ತಾಕತ್ತಿದ್ದು, ಅದರ ಮಿತಿಯ ಬಗ್ಗೆ ಅರಿವಿದೆ.
ಧ್ಯಾನ
ನಮ್ಮಲ್ಲಿ ಹೆಚ್ಚಿನವರು ಸರಿಯಾದ ವಿಶ್ರಾಂತಿ, ಚೇತರಿಕೆ ಮತ್ತು ಪೋಷಣೆಯ ಕ್ರಮಗಳನ್ನು ಬಿಟ್ಟುಬಿಡುತ್ತಾರೆ. 'ನನ್ನ ಹಾದಿಯನ್ನು ಬದಲಾಯಿಸಲು ಮತ್ತು ನನ್ನ ಸಂತೋಷವನ್ನು ಹೆಚ್ಚಿಸಲು ನನಗೆ ಸಹಾಯ ಮಾಡಿದ್ದು ಧ್ಯಾನ. ಧ್ಯಾನಕ್ಕೆ ನೀವು ಸಾಕಷ್ಟು ಸಮಯ ನೀಡಿದರೆ ಮಾಂತ್ರಿಕ ಸಂಗತಿಗಳು ಸಂಭವಿಸುತ್ತವೆ, ನಾನು ವರ್ಷದ ಹಿಂದೆ 10 ನಿಮಿಷಗಳ ಧ್ಯಾನ ಪ್ರಾರಂಭಿಸಿದೆ. ಮತ್ತು ಇಂದು ಒಂದು ಗಂಟೆ ಧ್ಯಾನಿಸಿದರೂ ಕಡಿಮೆ ಎಂದು ತೋರುತ್ತದೆ ' ಎನ್ನುತ್ತಾರೆ ಹೃತಿಕ್.
ಶೀಘ್ರದಲ್ಲೇ ಬರಲಿದೆ..
ಹೃತಿಕ್ ರೋಷನ್ ಅಭಿಮಾನಿಗಳು 'ಫೈಟರ್' ಬಿಡುಗಡೆಗಾಗಿ ಉತ್ಸುಕತೆಯಿಂದ ಕಾಯುತ್ತಿದ್ದಾರೆ. ಅವರು ಕೊನೆಯದಾಗಿ ವೈಆರ್‌ಎಫ್‌ನ 'ಟೈಗರ್-3' ನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಫೈಟರ್‌ನಲ್ಲಿ ಹೃತಿಕ್ ಜೊತೆಗೆ ಜೂನಿಯರ್ ಎನ್‌ಟಿಆರ್ ಹಾಗೂ ದೀಪಿಕಾ ಪಡುಕೋಣೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.