ಯಾಮಿಯಿಂದ ಅನುಷ್ಕಾವರೆಗೆ; ಮಕ್ಕಳಿಗೆ ಸಂಸ್ಕೃತದಲ್ಲಿ ಹೆಸರು ಹುಡುಕಿದ ಬಾಲಿವುಡ್ ಸೆಲೆಬ್ರಿಟಿಗಳು
ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು ತಮ್ಮ ಮಕ್ಕಳಿಗೆ ಸಂಸ್ಕೃತದಲ್ಲಿ ಉತ್ತಮ ಅರ್ಥ ಹೊಂದಿರುವ ಹೆಸರನ್ನು ಹುಡುಕಿ ಇಡಲು ಪ್ರಾರಂಭಿಸಿದ್ದಾರೆ. ವಿಶೇಷವಾಗಿ ಹಿಂದೂ ಧರ್ಮದೊಂದಿಗೆ ಈ ಹೆಸರುಗಳ ಬಂಧ ಬೆಸೆದುಕೊಂಡಿದೆ.
ಇತ್ತೀಚಿನ ದಿನಗಳಲ್ಲಿ ಸ್ಟಾರ್ ಮಕ್ಕಳ ಹೆಸರುಗಳು ತುಂಬಾ ವಿಶೇಷವಾಗಿದೆ. ವಾಸ್ತವವಾಗಿ ಬಾಲಿವುಡ್ ಸೆಲೆಬ್ರಿಟಿಗಳು ತಮ್ಮ ಮಕ್ಕಳಿಗೆ ಉತ್ತಮ ಅರ್ಥವನ್ನು ಹೊಂದಿರುವ ಹೆಸರಿಡಲು ಪ್ರಾರಂಭಿಸಿದ್ದಾರೆ. ಅನೇಕರು ತಮ್ಮ ಗಂಡು ಅಥವಾ ಹೆಣ್ಣು ಮಗುವಿಗೆ ಸಂಸ್ಕೃತದಿಂದ ಹೆಕ್ಕಿ ತೆಗೆದ ಪದದೊಂದಿಗೆ ಹೆಸರಿಟ್ಟಿದ್ದಾರೆ.
ಬಾಲಿವುಡ್ ಸೆಲೆಬ್ರಿಟಿಗಳು ತಮ್ಮ ಮಕ್ಕಳಿಗೆ ಇಡುವ ಹೆಸರು ಸಾಕಷ್ಟು ಚರ್ಚೆಗೊಳಗಾಗುತ್ತದೆ. ಅನೇಕ ತಾರೆಯರು ತಮ್ಮ ಮಕ್ಕಳಿಗೆ ಸಂಸ್ಕೃತದಲ್ಲಿ ಹೆಸರಿಟ್ಟಿದ್ದಾರೆ. ಯಾವ ಸೆಲೆಬ್ರಿಟಿಗಳು ತಮ್ಮ ಮಕ್ಕಳಿಗೆ ಸಂಸ್ಕೃತದಲ್ಲಿ ಹೆಸರಿಟ್ಟಿದ್ದಾರೆ ತಿಳಿಯೋಣ.
ಯಾಮಿ ಮತ್ತು ಆದಿತ್ಯ
ಯಾಮಿ ಗೌತಮ್ ಮತ್ತು ಅವರ ಪತಿ ಆದಿತ್ಯ ಧರ್ ಇತ್ತೀಚೆಗೆ ಮೇ 10ರಂದು ಮಗನನ್ನು ಸ್ವಾಗತಿಸಿದ್ದಾರೆ. ದಂಪತಿ ತಮ್ಮ ನವಜಾತ ಮಗನಿಗೆ ವೇದವಿದ್ ಎಂದು ನಾಮಕರಣ ಮಾಡಿದ್ದಾರೆ. ಇದು ಸಂಸ್ಕೃತ ಭಾಷೆಯ ಪದ ಮತ್ತು ಇದರ ಅರ್ಥ ವೇದಗಳ ಜ್ಞಾನವನ್ನು ತಿಳಿದಿರುವವನು.
ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ
ಈ ಪಟ್ಟಿಯಲ್ಲಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮಕ್ಕಳ ಹೆಸರೂ ಸೇರಿವೆ. ದಂಪತಿ ತಮ್ಮ ಹಿರಿಯ ಮಗಳಿಗೆ ವಾಮಿಕಾ ಎಂದು ಹೆಸರಿಸಿದ್ದಾರೆ. ವಾಮಿಕ ಎಂಬುದು ಸಂಸ್ಕೃತ ಪದ ಮತ್ತು ಇದರ ಅರ್ಥ ದುರ್ಗಾ ದೇವಿಯ ಅವತಾರ. ಇನ್ನು ಎರಡನೇ ಪುತ್ರ ಅಕಾಯ್ ಹೆಸರು ಕೂಡಾ ಸಂಸ್ಕೃತ ಮೂಲದ್ದಾಗಿದ್ದು ಅದರರ್ಥ ನಿರ್ದಿಷ್ಟ ರೂಪವಿಲ್ಲದವನು- ಅಂದರೆ ಶಿವ.
ಆಲಿಯಾ ಭಟ್ ಮತ್ತು ರಣಬೀರ್ ಕಪೂರ್
ಬಾಲಿವುಡ್‌ನ ಜನಪ್ರಿಯ ಜೋಡಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ತಮ್ಮ ಮಗಳಿಗೆ ರಾಹಾ ಎಂದು ಹೆಸರಿಟ್ಟಿದ್ದಾರೆ. ಈ ಹೆಸರನ್ನು ರಣಬೀರ್ ತಾಯಿ ನೀತು ಕಪೂರ್ ಆಯ್ಕೆ ಮಾಡಿದ್ದಾರೆ.
ರಾಹಾ ಎಂದರೆ ದೈವಿಕ ಮಾರ್ಗ ಮತ್ತು ಸಂಸ್ಕೃತದಲ್ಲಿ ಕುಲ ಎಂದರ್ಥ ಎಂದು ಆಲಿಯಾ ಹೇಳಿದ್ದರು.
ಪ್ರಿಯಾಂಕಾ ಚೋಪ್ರಾ
ಜಾಗತಿಕ ಐಕಾನ್ ಪ್ರಿಯಾಂಕಾ ಚೋಪ್ರಾ ಅವರ ಪುತ್ರಿ ಮಾಲ್ತಿ ಮೇರಿ ಅವರ ಹೆಸರಿಗೂ ಸಂಸ್ಕೃತಕ್ಕೂ ಸಂಬಂಧವಿದೆ ಎಂದು ತಿಳಿದರೆ ನೀವು ಆಶ್ಚರ್ಯ ಪಡುತ್ತೀರಿ. ವಾಸ್ತವವಾಗಿ ಮಾಲ್ತಿ ಎಂಬುದು ಸಂಸ್ಕೃತ ಪದವಾಗಿದ್ದು, ಇದರರ್ಥ ಪರಿಮಳಯುಕ್ತ ಹೂವು.
ಸೋನಂ ಕಪೂರ್ ಆನಂದ್ ಅಹುಜಾ
ಸೋನಂ ಕಪೂರ್ ಹಾಗೂ ಆನಂದ್ ಅಹುಜಾ ದಂಪತಿ ತಮ್ಮ ಮಗನಿಗೆ ವಾಯು ಎಂದು ಹೆಸರಿಸಿದ್ದಾರೆ. ಇದು ಸಂಸ್ಕೃತದಲ್ಲಿ ಗಾಳಿ ಎಂದಾಗಿದೆ ಮತ್ತು ಹಿಂದೂ ಪುರಾಣಗಳಲ್ಲಿ ಗಾಳಿಯ ದೇವತೆ ಎಂದಾಗಿದೆ.
ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ
ದಂಪತಿ ತಮ್ಮ ಮಗನಿಗೆ ವಿಯಾನ್ ಎಂದು ಹೆಸರಿಸಿದ್ದಾರೆ. ಈ ಹೆಸರಿನ ಅರ್ಥ ಸಂಸ್ಕೃತದಲ್ಲಿ ತುಂಬು ಜೀವ ಮತ್ತು ಅಪಾರ ಶಕ್ತಿಯುಳ್ಳವನು ಎಂದು.
ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್
ಬಾಲಿವುಡ್‌ನ ಈ ಫೇಮಸ್ ಜೋಡಿ ತಮ್ಮ ಏಕೈಕ ಪುತ್ರಿಗೆ ಆರಾಧ್ಯ ಎಂದು ಹೆಸರಿಸಿದ್ದಾರೆ. ಆರಾಧ್ಯ ಎಂದರೆ ಸಂಸ್ಕೃತದಲ್ಲಿ 'ಪೂಜೆ ಮಾಡುವಷ್ಟು ದೈವಿಕ' ಎಂಬರ್ಥ ಬರುತ್ತದೆ.
ಬಿಪಾಶಾ ಬಸು ಮತ್ತು ಕರಣ್ ಗ್ರೋವರ್
ಬಿಪಾಶಾ ಬಸು ತನ್ನ ಮಗಳಿಗೆ ದೇವಿ ಎಂದು ಹೆಸರಿಟ್ಟಿದ್ದಾಳೆ. ಮೂಲತಃ ಬೆಂಗಾಳಿಯಾದ ಬಿಪಾಶಾ, ದೇವಿ ಎಂದರೆ ದುರ್ಗೆ ಎಂಬರ್ಥದಲ್ಲಿ ಈ ಹೆಸರಿರಿಸಿದ್ದಾಳೆ.