Drugs Case: ಆರ್ಯನ್ ಜೊತೆ ಸೆಲ್ಫೀ ತೆಗೆದಿದ್ದ ಕೆಪಿ ಗೋಸಾವಿ ಅರೆಸ್ಟ್
- ಆರ್ಯನ್ ಖಾನ್(Aryan Khan) ಜೊತೆ ಸೆಲ್ಫೀ ಕ್ಲಿಕ್ಕಿಸಿದ್ದಾತ ಅರೆಸ್ಟ್
- ಕೆಪಿ ಗೋಸಾವಿ(KP Gosavi) ಬಂಧನ, ಡ್ರಗ್ಸ್ ಕೇಸ್‌ನಲ್ಲಿ ಸಾಕ್ಷಿಯಾಗಿದ್ದ ಖಾಸಗಿ ಪತ್ತೆದಾರಿ
ಮುಂಬೈ(Mumbai) ಡ್ರಗ್ಸ್ ದಂಧೆ ಪ್ರಕರಣದಲ್ಲಿ ಎನ್‌ಸಿಬಿಯ ಸ್ವತಂತ್ರ ಸಾಕ್ಷಿ ಕೆಪಿ ಗೋಸಾವಿ ಅವರನ್ನು 2018 ರ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆ ಪೊಲೀಸರು ಬಂಧಿಸಿದ್ದಾರೆ.
ಖಾಸಗಿ ಪತ್ತೇದಾರಿಯಾಗಿಯೂ ಕೆಲಸ ಮಾಡಿದ್ದ ಕಿರಣ್ ಗೋಸಾವಿಯನ್ನು ಬಂಧಿಸಲಾಗಿದೆ ಎಂದು ಪುಣೆ ಪೊಲೀಸ್ ಕಮಿಷನರ್ ಅಮಿತಾಬ್ ಗುಪ್ತಾ ಹೇಳಿದ್ದಾರೆ.
2019 ರಲ್ಲಿ ಪುಣೆ ಸಿಟಿ ಪೊಲೀಸರು ಗೋಸಾವಿಯನ್ನು ವಾಂಟೆಡ್ ವ್ಯಕ್ತಿ ಎಂದು ಘೋಷಿಸಿದ್ದರು. ಅಂದಿನಿಂದ ಅವನು ಕಾಣೆಯಾಗಿದ್ದನು. NCB ಸಾಕ್ಷಿಯಾಗಿ ಕ್ರೂಸ್ ದಾಳಿಯ ಸಮಯದಲ್ಲಿ ಈತ ಕಾಣಿಸಿಕೊಂಡಿದ್ದಾನೆ. ಅಕ್ಟೋಬರ್ 14 ರಂದು ಪೊಲೀಸರು ಆತನ ವಿರುದ್ಧ ಲುಕೌಟ್ ಸುತ್ತೋಲೆ ಹೊರಡಿಸಿದ್ದರು.
ಈತ ಡ್ರಗ್ಸ್ ದಾಳಿ ನಡೆದ ಅ.2ರಂದು ರಾತ್ರಿ ಭಾರೀ ಸುದ್ದಿಯಾಗಿದ್ದ. ಶಾರೂಖ್ ಪುತ್ರ ಆರ್ಯನ್ ಖಾನ್ ಜೊತೆ ಸೆಲ್ಫೀ ಕ್ಲಿಕ್ಕಿಸಿಕೊಂಡಿದ್ದು ಭಾರೀ ಸುದ್ದಿಯಾಗಿತ್ತು.
ಆರ್ಯನ್ ಖಾನ್ (Aryan Khan)ಪ್ರಕರಣದಲ್ಲಿ ಸ್ವತಂತ್ರ ಸಾಕ್ಷಿಯಾಗಿರುವ ಕೆಪಿ ಗೋಸಾವಿ ಅವರು ಶಾರುಖ್ ಖಾನ್ ಅವರ ಪುತ್ರನೊಂದಿಗೆ ಸೆಲ್ಫಿ ವೈರಲ್ ಆದ ನಂತರ ತಲೆಮರೆಸಿಕೊಂಡಿದ್ದರು. ಇತ್ತೀಚೆಗಷ್ಟೇ ಉತ್ತರ ಪ್ರದೇಶದ ರಾಜಧಾನಿ ಲಕ್ನೋದ ಪೊಲೀಸ್ ಠಾಣೆಯಲ್ಲೂ ಶರಣಾಗಲು ಯತ್ನಿಸಿದ್ದ.
ಕೆಪಿ ಗೋಸಾವಿಯಿಂದ ವಂಚನೆಗೊಳಗಾದ ಹಲವಾರು ಸಂತ್ರಸ್ತರು ಆತನ 'ಕೃತ್ಯಗಳ' ಬಗ್ಗೆ ಬಹಿರಂಗಪಡಿಸಲು ಮುಂದೆ ಬಂದರು. ಈ ಹಿಂದೆ ವಂಚನೆ ಪ್ರಕರಣದಲ್ಲಿ ಪುಣೆ ಪೊಲೀಸರು ಈತನ ವಿರುದ್ಧ ಲುಕೌಟ್ ನೋಟಿಸ್ ಜಾರಿ ಮಾಡಿದ್ದರು.
ಎನ್‌ಸಿಬಿ(NCB) ದಾಳಿಯ ಸಮಯದಲ್ಲಿ, ಗೋಸಾವಿ ಆರ್ಯನ್ ಖಾನ್ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸುವುದನ್ನು ಮತ್ತು ಫೋನ್ ಮೂಲಕ ಯಾರೊಂದಿಗಾದರೂ ಸಂಪರ್ಕಿಸಲು ಸಹಾಯ ಮಾಡುವುದು ಕಂಡುಬಂದಿತ್ತು.
ಎನ್‌ಸಿಬಿಯ ಮತ್ತೊಬ್ಬ ಸಾಕ್ಷಿ ಪ್ರಭಾಕರ್ ಸೈಲ್ ಅವರು ಈ ಹಿಂದೆ ಮುಂಬೈ ಐಷಾರಾಮಿ ಕ್ರೂಸ್ ಡ್ರಗ್ ಬೇಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಲಿಗೆ ಮತ್ತು ವಸೂಲಿ ಲಿಂಕ್ ಅನ್ನು ಸ್ಥಾಪಿಸಿದ ಗಂಭೀರ ಆರೋಪ ಮಾಡಿದ್ದರು.
ಡ್ರಗ್ಸ್ ಕೇಸ್‌ನಲ್ಲಿ ಸಮೀರ್ ವಾಂಖೆಡೆಗೆ(Sameer Wankhede) 8 ಕೋಟಿ ನೀಡಬೇಕಾಗುತ್ತದೆ ಎಂದು ಕೆಪಿ ಗೋಸಾವಿ(KP Gosavi) ಹೇಳುವುದನ್ನು ಕೇಳಿಸಿಕೊಂಡಿರುವುದಾಗಿ ಆತ ಆರೋಪಿಸಿದರು. ಎನ್‌ಸಿಬಿ ಅವರ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದೆ.
ಗೋಸಾವಿ ಶಾರುಖ್ ಖಾನ್ ಅವರ ಮ್ಯಾನೇಜರ್ ಪೂಜಾ ದದ್ಲಾನಿ ಅವರಿಂದ 25 ಕೋಟಿ ರೂ.ಗೆ ಬೇಡಿಕೆಯಿಡಲು ಯೋಜಿಸಿದ್ದರು. 8 ಕೋಟಿಯಷ್ಟು ಭಾಗವನ್ನು ಸಮೀರ್ ವಾಂಖೆಡೆಗೆ ನೀಡಬೇಕಾಗಿತ್ತು ಎಂದು ಸೈಲ್ ತಮ್ಮ ಅಫಿಡವಿಟ್‌ನಲ್ಲಿ ಹೇಳಿಕೊಂಡಿದ್ದಾರೆ.
ಬಂಧಿಸುವ ಮುನ್ನ ಗೋಸಾವಿ ಪ್ರಭಾಕರ್ ಸೈಲ್ ಸುಳ್ಳು ಹೇಳುತ್ತಿದ್ದಾರೆ. ಅವರ ಸಿಡಿಆರ್ ವರದಿಯನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.