47ನೇ ಬರ್ತ್ ಡೇಗೆ ಐಷಾರಾಮಿ ವ್ಯಾನಿಟಿ ವ್ಯಾನ್ ಖರೀದಿಸಿದ ಶಿಲ್ಟಾ ಶೆಟ್ಟಿ, ಏನೆಲ್ಲಾ ಇದೆ ಇದರಲ್ಲಿ?
ಮುಂಬೈ(ಜೂನ್ 9): ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಗುರುವಾರ ತಮ್ಮ 47ನೇ ಜನ್ಮದಿನವನ್ನು ಭರ್ಜರಿಯಾಗಿ ಆಚರಿಸಿಕೊಂಡಿದ್ದಾರೆ. ತಮ್ಮ ಜನ್ಮದಿನದ ಸಂಭ್ರಮಕ್ಕೆ ತಮಗಾಗಿಯೇ ಒಂದು ಭರ್ಜರಿ ಗಿಫ್ಟ್ ಅನ್ನು ಶಿಲ್ಪಾ ಶೆಟ್ಟಿ ಖರೀದಿ ಮಾಡಿದ್ದಾರೆ. ಈವರೆಗೂ ಆಲಿಯಾ ಭಟ್, ಕತ್ರಿನಾ ಕೈಫ್, ಜಾಹ್ನವಿ ಕಪೂರ್ ಸೇರಿದಂತೆ 7 ಮಂದಿಯ ಬಳಿ ಮಾತ್ರವೇ ಇದ್ದ ಐಷಾರಾಮಿ ವ್ಯಾನಿಟಿ ವ್ಯಾನ್ ಅನ್ನು ಶಿಲ್ಪಾ ಶೆಟ್ಟಿ ಖರೀದಿ ಮಾಡಿದ್ದು, ತಮಗೆ ಬೇಕಾದಂತೆ ಒಳಾಂಗಣ ವಿನ್ಯಾಸವನ್ನು ಮಾಡಿಸಿಕೊಂಡಿದ್ದಾರೆ.
ತಮ್ಮ 47ನೇ ವರ್ಷದ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಿಕೊಂಡ ಕುಡ್ಲದ ಪೊಣ್ಣು, ಆಲಿಯಾ ಭಟ್, ಕತ್ರಿನಾ ಕೈಫ್, ಜಾಹ್ನವಿ ಕಪೂರ್ ಬಳಿಕ ಐಷಾರಾಮಿ ವ್ಯಾನಿಟಿ ವ್ಯಾನ್ ಖರೀದಿ ಮಾಡಿದ ಬಾಲಿವುಡ್ ನ 8ನೇ ನಟಿ ಇವರಾಗಿದ್ದಾರೆ.
ಕಪ್ಪು ಬಣ್ಣದ ವ್ಯಾನಿಟಿ ವ್ಯಾನ್ ನ ಮುಂಭಾಗದಲ್ಲಿ ಎಎಸ್‌ಕೆ ಎಂದು ತಮ್ಮ ಹೆಸರನ್ನು ದೊಡ್ಡದಾಗಿ ಬರೆಸಿದ್ದಾರೆ. ಎಸ್ಎಸ್ ಕೆ ಎನ್ನುವುದರ ಅರ್ಥ ಶಿಲ್ಪಾ ಶೆಟ್ಟಿ ಕುಂದ್ರಾ ಎನ್ನುವುದಾಗಿದೆ.
‘ಅಡುಗೆಮನೆ, ಹೇರ್ ವಾಶ್ ಸ್ಟೇಷನ್ ಮತ್ತು ಮುಖ್ಯವಾಗಿ ಯೋಗ ಡೆಕ್’ ಇರುವ ಹೊಚ್ಚಹೊಸ ವ್ಯಾನಿಟಿ ವ್ಯಾನ್ ಶಿಲ್ಪಾ ಶೆಟ್ಟಿ ಅವರ ಮನೆಯ ಮುಂದೆ ಬಂದಿದೆ. ಪ್ರಯಾಣದ ವೇಳೆಯಲ್ಲೂ ಶಿಲ್ಪಾ ಶೆಟ್ಟಿ ಈಗ ಯೋಗ ಮಾಡಬಹುದು. ಇದರಿಂದ ಅವರ ಅಭ್ಯಾಸಕ್ಕೆ ಯಾವುದೇ ಸಮಸ್ಯೆ ಆಗಲಾರದು ಎಂದು ಅವರ ತಂಡ ತಿಳಿಸಿದೆ.
ಸುಸಜ್ಜಿತ ವಾದ ಯೋಗ ಡೆಕ್, ವ್ಯಾನಿಟಿ ವ್ಯಾನ್ ನ ಮೇಲ್ಭಾಗದಲ್ಲಿದ್ದು, ಯಾವ ಸಮಸ್ಯೆಗಳಿಲ್ಲದೆ, ಅಲ್ಲಿ ಯೋಗವನ್ನು ಮಾಡುವ ವ್ಯವಸ್ಥೆಗಳನ್ನು ಶಿಲ್ಪಾ ಶೆಟ್ಟಿ ಮಾಡಿದ್ದಾರೆ.
ಮೈನ್ ಖಿಲಾಡಿ ತು ಅನಾರಿ, ಧಡ್ಕನ್, ಲೈಫ್ ಎ.. ಮೆಟ್ರೋ ಸೇರಿದಂತೆ ಪ್ರಸಿದ್ಧ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಕನ್ನಡದಲ್ಲಿ ಪ್ರೀತ್ಸೋದ್ ತಪ್ಪಾ, ಒಂದಾಗೋಣ ಬಾ, ಆಟೋಶಂಕರ್ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.
1993 ರ ಥ್ರಿಲ್ಲರ್ ಬಾಜಿಗರ್ ಮೂಲಕ ಬಾಲಿವುಡ್‌ಗೆ ಶಿಲ್ಪಾ ಶೆಟ್ಟಿ ಪಾದಾರ್ಪಣೆ ಮಾಡಿದ್ದರು. ಇದರಲ್ಲಿ ಕಾಜೋಲ್ ಮತ್ತು ಶಾರುಖ್ ಖಾನ್ ಜೊತೆ ಅವರು ನಟಿಸಿದ್ದರು.
ಪ್ರಸ್ತುತ ಬಾಲಿವುಡ್ ನಲ್ಲಿ ಶಿಲ್ಪಾ ಶೆಟ್ಟಿ ಅಲ್ಲದೆ, ಜಾಹ್ನವಿ ಕಪೂರ್, ಆಲಿಯಾ ಭಟ್, ಕತ್ರಿನಾ ಕೈಫ್, ಪರಿಣಿತಿ ಚೋಪ್ರಾ, ದೀಪಿಕಾ ಪಡುಕೋಣೆ-ರಣವೀರ್ ಸಿಂಗ್, ಕರೀನಾ ಕಪೂರ್ ಹಾಗೂ ಅನುಷ್ಕಾ ಶರ್ಮ ತಮ್ಮದೇ ಆದ ವ್ಯಾನಿಟಿ ವ್ಯಾನ್ ಗಳನ್ನು ಹೊಂದಿದ್ದಾರೆ.