ಹೊಸ ಅವತಾರ, ಕೈಗೆಟುಕುವ ದರದಲ್ಲಿ ಮತ್ತೆ ಬರುತ್ತಿದೆ ರೆನಾಲ್ಟ್ ಡಸ್ಟರ್!
ಭಾರತದಲ್ಲಿ ಇತರ SUV ಕಾರುಗಳ ಭರಾಟೆ ನಡುವೆ ರೆನಾಲ್ಟ್ ಡಸ್ಟರ್ ಬೇಡಿಕೆ ಕಳೆದುಕೊಂಡು ಸ್ಥಗಿತಗೊಂಡಿದೆ. ಇದೀಗ ಹೊಸ ಅವತಾರ, ಹೊಸ ವಿನ್ಯಾಸ ಹಾಗೂ ಕೈಗೆಟುಕುವ ದರದಲ್ಲಿ ರೆನಾಲ್ಟ್ ಡಸ್ಟರ್ SUV ಕಾರು ಬಿಡುಗಡೆಯಾಗಲು ಸಜ್ಜಾಗಿದೆ.
ಭಾರತದಲ್ಲಿ ರೆನಾಲ್ಟ್ ಡಸ್ಟರ್(Renault Duster) ಮಾಡಿದ ಮೋಡಿ ಅಷ್ಟಿಷ್ಟಲ್ಲ. 2012ರಲ್ಲಿ ಭಾರತದಲ್ಲಿ ಬಿಡುಗಡೆಯಾದ ಡಸ್ಟರ್, ಪ್ರತಿಯೊಬ್ಬರ ನೆಚ್ಚಿನ ಕಾರಾಗಿ ಹೊರಹೊಮ್ಮಿತು.
ಭಾರತದಲ್ಲಿ SUV ಕಾರುಗಳ ಟ್ರೆಂಡ್ ಸೃಷ್ಟಿಸಿದ ಡಸ್ಟರ್, ಹಲವು ಅಪ್‌ಗ್ರೇಡ್, ಸಣ್ಣ ಸಣ್ಣ ಬದಲಾವಣೆಯೊಂದಿಗೆ ಬಿಡುಗಡೆಯಾಗುತ್ತಲೇ ಬಂದಿದೆ. ಆದರೆ 2022ರಲ್ಲಿ ಬೇಡಿಕೆ ಕಳೆದುಕೊಂಡ ಡಸ್ಟರ್ ಉತ್ಪಾದನೆ ಸ್ಥಗಿತಗೊಂಡಿತು.
ಇದೀಗ ರೆನಾಲ್ಟ್ ತನ್ನ ಐಕಾನಿಕ್ ಡಸ್ಟರ್ ಕಾರನ್ನು ಹೊಸ ಅವತಾರದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಸದ್ಯದ ಟ್ರೆಂಡ್‌ಗೆ ತಕ್ಕಂತೆ ಅತ್ಯಂತ ಆಕರ್ಷಕ ವಿನ್ಯಾಸದಲ್ಲಿ ಡಸ್ಟರ್ ಕಾರು ಬಿಡುಗಡೆಯಾಗಲಿದೆ.
ನವೆಂಬರ್ 29 ರಂದು ಹೊಚ್ಚ ಹೊಸ ಡಸ್ಟರ್ ಕಾರು ಅನಾವರಣಗೊಳ್ಳಲಿದೆ. ಪೋರ್ಚುಗಲ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ನೂತನ ಡಸ್ಟರ್ ಅನಾವರಣಗೊಳ್ಳಲಿದೆ.
ನೂತನ ಡಸ್ಟರ್ ಕಾರು ಗಾತ್ರದಲ್ಲಿ ದೊಡ್ಡದು. ಇಷ್ಟೇ ಅಲ್ಲ ಮೂರು ಸಾಲಿನ ಸೀಟುಗಳನ್ನು ಹೊಂದಿದೆ. ಈ ಮೂಲಕ 7 ಸೀಟರ್ ಕಾರಾಗಿ ಡಸ್ಟರ್ ಬಿಡುಗಡೆಯಾಗುತ್ತಿದೆ.
ವೈ ಶೇಪ್ ಹೆಡ್‌ಲ್ಯಾಂಪ್ಸ್, ಆಧುನಿಕತೆಗೆ ಹೊಂದಿಕೊಂಡ ಗ್ರಿಲ್, ಸ್ಪಾಯ್ಲರ್, ರೇರ್ ಕ್ವಾರ್ಟರ್ ಗ್ಲಾಸ್ ಸೇರಿದಂತೆ ಮಹತ್ತರ ಬದಲಾವಣೆಯನ್ನು ನೂತನ ಡಸ್ಟರ್‌ನಲ್ಲಿ ಕಾಣಬಹುದು.
2025ರ ವೇಳೆಗೆ ಭಾರತದಲ್ಲಿ ಹೊಸ ಡಸ್ಟರ್ ಕಾರು ಬಿಡುಗಡೆಯಾಗಲಿದೆ. ಈ ಮೂಲಕ ಮತ್ತೆ ಭಾರತದಲ್ಲಿ SUV ಸೆಗ್ಮೆಂಟ್‌ನಲ್ಲಿ ಹೊಸ ಸಂಚಲನ ಸೃಷ್ಟಿಸಲು ಸಜ್ಜಾಗಿದೆ. ನೂತನ ಕಾರು ಪ್ರತಿಸ್ಪರ್ಧಿ ಕಾರಿಗಿಂತ ಕಡಿಮೆ ಬೆಲೆ ಇರಲಿದೆ ಅನ್ನೋ ಮಾತುಗಳು ಕೇಳಿಬಂದಿದೆ.
2012ರಲ್ಲಿ ಡಸ್ಟರ್ ಕಾರು ಭಾರತದಲ್ಲಿ ಮೋಡಿ ಮಾಡಿತ್ತು. ಮೊದಲ ವರ್ಷ 40 ಸಾವಿರ, 2 ವರ್ಷದಲ್ಲಿ 1 ಲಕ್ಷ ಕಾರುಗಳು ಮಾರಾಟವಾಗುವ ಮೂಲಕ ದಾಖಲೆ ಬರೆದಿತ್ತು. 2020ರಲ್ಲಿ ಡಸ್ಟರ್ ಡೀಸೆಲ್ ಕಾರು ಸ್ಥಗಿತಗೊಂಡಿತು. 2022ರಲ್ಲಿ ಒಂದು ಕಾರು ಮಾರಾಟವಾಗದೇ ಡಸ್ಟರ್ ಸ್ಥಗಿತಗೊಂಡಿತು.