ಭಾರತದಲ್ಲಿ ಎಂಜಿ ಸೈಬರ್‌ಸ್ಟರ್ ಕಾರು ಬಿಡುಗಡೆ, 2.5 ಲಕ್ಷ ರೂ ಡಿಸ್ಕೌಂಟ್ ಆಫರ್ ಘೋಷಣೆ
ಬಹು ನಿರೀಕ್ಷಿತ ಎಂಜಿ ಸೈಬರ್‌ಸ್ಟರ್ ಎಲೆಕ್ಟ್ರಿಕ್ ಸೂಪರ್ ಕಾರು ಭಾರತದಲ್ಲಿ ಬಿಡುಗಡೆಯಾಗಿದೆ. ಇದರ ಬೆನ್ನಲ್ಲೇ ಆರಂಭಿಕ ಆಫರ್ ಕೂಡ ಘೋಷಣೆ ಮಾಡಲಾಗಿದೆ. ಬರೋಬ್ಬರಿ 2.5 ಲಕ್ಷ ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ.

ಎಂಜಿ ಮೋಟಾರ್ಸ್ ಭಾರತದಲ್ಲಿ ಬಹುನಿರೀಕ್ಷಿತ ಎಂಜಿ ಸೈಬರ್‌ಸ್ಟರ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಿದೆ. ಹೊಸ ಕಾರಿನೊಂದಿಗೆ ಎಂಜಿ ಭಾರತದ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಅತ್ಯಾಕರ್ಷಕ ಹಾಗೂ 580 ಕಿಲೋಮೀಟರ್ ಮೈಲೇಜ್ ರೇಂಜ್ ಸೇರಿದಂತೆ ಹಲವು ವಿಶೇಷೆತಗಳು ಈ ಕಾರಿನಲ್ಲಿದೆ. ಭಾರತದಲ್ಲಿ ಆರಂಭಿಕ ಆಫರ್ ಆಗಿ ಎಂಜಿ ಮೋಟಾರ್ಸ್ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದೆ. ಈ ಕಾರನ್ನು ಪ್ರೀ ಬುಕಿಂಗ್ ಮಾಡಿದ ಗ್ರಾಹಕರಿಗೆ ಬರೋಬ್ಬರಿ 2.5 ಲಕ್ಷ ರೂಪಾಯಿ ಡಿಸ್ಕೌಂಟ್ ನೀಡಲಾಗುತ್ತಿದೆ.
ಎಂಜಿ ಸೈಬರ್‌ಸ್ಟರ್ ಕಾರಿನ ಬೆಲೆ ಬಹಿರಂಗ
ಎಂಜಿ ಸೈಬರ್‌ಸ್ಟರ್ ಕಾರಿನ ಆರಂಭಿಕ ಬೆಲೆ 74.99 ಲಕ್ಷ ರೂಪಾಯಿ. ಇದು ಈಗ ಬುಕಿಂಗ್ ಮಾಡುವ ಗ್ರಾಹಕರಿಗೆ ಕಾರು ಲಭ್ಯವಾಗುತ್ತಿರುವ ಆರಂಭಿಕ ಬೆಲೆ. ಆದರೆ ಈಗಾಗಲೇ ಎಂಜಿ ಸೈಬರ್‌ಸ್ಟರ್ ಕಾರು ಬುಕಿಂಗ್ ಮಾಡಿದ್ದ ಗ್ರಾಹಕರಿಗೆ 2.5 ಲಕ್ಷ ರೂಪಾಯಿ ಡಿಸ್ಕೌಂಟ್ ನೀಡಲಾಗುತ್ತಿದೆ. ಹೀಗಾಗಿ ಪ್ರಿ ಬುಕಿಂಗ್ ಗ್ರಾಹಕರಿಗೆ ಎಂಜಿ ಸೈಬರ್‌ಸ್ಟರ್ ಕಾರು 72.49 ಲಕ್ಷ ರೂಪಾಯಿಗೆ ಲಭ್ಯವಾಗಲಿದೆ.
ಡ್ಯುಯೆಲ್ ಮೋಟಾರ್
ಎಂಜಿ ಸೈಬರ್‌ಸ್ಟರ್ ಕಾರಿನಲ್ಲಿ ಡ್ಯುಯೆಲ್ ಮೋಟಾರ್ ಬಳಸಲಾಗಿದೆ. ಇದು ಸೂಪರ್ ಎಲೆಕ್ಟ್ರಿಕ್ ಕಾರು. 510 PS ಪವರ್ ಹಾಗೂ 725 Nm ಟಾರ್ಕ್ ಸಾಮರ್ಥ್ಯ ಹೊಂದಿದೆ. 77 kWh ಬ್ಯಾಟರಿ ಪ್ಯಾಕ್ ಬಳಸಲಾಗಿದೆ. ವಿಶೇಷ ಅಂದರೆ ಇದರ ಬ್ಯಾಟರಿ ಅತ್ಯಂತ ತೆಳುವಾದ ವಿನ್ಯಾಸದಲ್ಲಿ ಬಳಸಲಾಗಿದೆ.
ಸಿಂಗಲ್ ಚಾರ್ಜ್‌ಗೆ 580 ಕಿ.ಮೀ ರೇಂಜ್
ಎಂಜಿ ಸೈಬರ್‌ಸ್ಟರ್ ಒಂದು ಬಾರಿ ಚಾರ್ಜ್ ಮಾಡಿದರೆ 580 ಕಿಲೋಮೀಟರ್ ಮೈಲೇಜ್ ರೇಂಜ್ ನೀಡಲಿದೆ. ಲಾಂಗ್ ಡ್ರೈವ್ ಅಥವಾ ನಗರ ಬಳಕೆಗೂ ಈ ಕಾರು ಸೂಕ್ತವಾಗಿದೆ. 0-100 ಕಿಲೋಮೀಟರ್ ವೇಗವನ್ನು ಕೇವಲ 3.2 ಸೆಕೆಂಡ್‌ನಲ್ಲಿ ಪಡೆದುಕೊಳ್ಳಲಿದೆ. ಈ ಕಾರಿನ ಗರಿಷ್ಠ ವೇಗ 200 kmph.
ಚಾರ್ಚಿಂಗ್ ಸಮಯ ಎಷ್ಟು
ವಿಶೇಷ ಅಂದರೆ ಎಂಜಿ ಸೈಬರ್‌ಸ್ಟರ್ ಕಾರಿನಲ್ಲಿ 144 kW ಡಿಸಿ ಚಾರ್ಜರ್ ಬಳಸಲಾಗುತ್ತದೆ. ಈ ಮೂಲಕ ಎಂಜಿ ಸೈಬರ್‌ಸ್ಟರ್ ಕಾರನ್ನು ಶೇಕಡಾ 10 ರಿಂದ ಶೇಕಡಾ 80 ರಷ್ಟು ಚಾರ್ಜಿಂಗ್ನ್ನು ಕೇವಲ 40 ನಿಮಿಷದಲ್ಲಿ ಮಾಡಬಹುದು. ಕಾರು ಖರೀದಿಸುವಾಗ 3.3 kW ಪೋರ್ಟೇಬಲ್ ಚಾರ್ಜರ್, 7.4 kW ವಾಲ್ ಬಾಕ್ಸ್ ಚಾರ್ಜರ್ ಲಭ್ಯವಾಗಲಿದೆ.
ಎಂಜಿ ಸೈಬರ್‌ಸ್ಟರ್ ಪರ್ಫಾಮೆನ್ಸ್ ಎಲೆಕ್ಟ್ರಿಕ್ ಕಾರು. ಭಾರತದ ಮೊದಲ ಎಲೆಕ್ಟ್ರಿಕ್ ಸೂಪರ್ ಕಾರು ಎಂದೇ ಗುರುತಿಸಿಕೊಂಡಿದೆ. ಈ ಕಾರು ಸಾಮಾನ್ಯ ಎಂಜಿ ಮೋಟಾರ್ ಡೀಲರ್‌ಶಿಪ್‌ನಲ್ಲಿ ಲಭ್ಯವಿಲ್ಲ. ಎಂಜಿ ಪ್ರೀಮಿಯಂ ಡೀಲರ್‌ಶಿಪ್‌ನಲ್ಲಿ ಲಭ್ಯವಿದೆ.