2026ಕ್ಕೆ ಅಂಬಾಸಿಡರ್ ಕಾರು ಇವಿ ರೂಪದಲ್ಲಿ ಬಿಡುಗಡೆ, ಬೆಲೆ 10 ರಿಂದ 15 ಲಕ್ಷ ರೂ
ಹಿಂದುಸ್ತಾನ್ ಮೋಟಾರ್ಸ್ ಅಂಬಾಸಿಡರ್ ಕಾರು ಇತ್ತೀಚಿನ ಪೀಳಿಗೆಗೆ ಗೊತ್ತೇ ಇಲ್ಲ. ಆದರೆ ಭಾರತದಲ್ಲಿ ರಾಜನಂತೆ ಮೆರೆದಾಡಿದ ಅಂಬಾಸಿಡರ್ ಮರೆಯಾಗಿ ಕೆಲ ದಶಕಗಳೇ ಉರುಳಿದೆ. ಇದೀಗ ಮಿಂಚಿ ಮರೆಯಾದ ಅಂಬಾಸಿಡರ್ ಎಲೆಕ್ಟ್ರಿಕ್ ಕಾರಿನ ರೂಪದಲ್ಲಿ ಬಿಡುಗಡೆಯಾಗುತ್ತಿದೆ. ಇದರ ಬೆಲೆ ಕೇವಲ 10 ರಿಂದ 15 ಲಕ್ಷ ರೂ ಒಳಗಿರಲಿದೆ.

ಭಾರತದಲ್ಲಿ ಸದ್ಯ ಮಾರುಕಟ್ಟೆಯಲ್ಲಿ, ರಸ್ತೆಯಲ್ಲಿ ಹಲವು ಬ್ರ್ಯಾಂಡ್ ಕಂಪನಿಗಳ ಕಾರುಗಳಿವೆ. ಅತೀ ಕಡಿಮೆ ಬೆಲೆಯಿಂದ ಕೋಟಿ ಕೋಟಿ ರೂಪಾಯಿ ದುಬಾರಿಯ ಬೆಲೆಯ ಕಾರುಗಳು ಲಭ್ಯವಿದೆ. ಆದರೆ ಕೆಲ ದಶಕಗಳ ಹಿಂದೆ ಭಾರತದಲ್ಲಿ ರಾಜಕಾರಣಿಗಳು, ಪ್ರಧಾನ ಮಂತ್ರಿ, ಉದ್ಯಮಿಗಳು, ಸಾಮಾನ್ಯರು ಸೇರಿದಂತೆ ಎಲ್ಲಾ ವರ್ಗದವರು ಬಳಸುತ್ತಿದ್ದ ಕಾರು ಹಿಂದುಸ್ತಾನ್ ಮೋಟಾರ್ಸ್ ಹೊರ ತಂದ ಅಂಬಾಸಿಡರ್.
1958ರಿಂದ ಸರಿಸುಮಾರು 80-90ರ ದಶಕಗಳ ವರೆಗೆ ಭಾರತದಲ್ಲಿ ಅಂಬಾಸಿಡರ್ ಕಾರು ಭಾರಿ ಮೋಡಿ ಮಾಡಿತ್ತು. ಭಾರತದ ರಸ್ತೆಗಳಲ್ಲಿ ಅಂಬಾಸಿಡರ್ ಕಾರುಗಳೇ ತುಂಬಿತ್ತು. 90ರ ದಶಕಗಳ ಬಳಿಕ ಕಾರು ಸೀಮಿತಗೊಂಡಿತು. ಬಳಿಕ ಮರೆಯಾಯಿತು. ಇದೀಗ ಬರೋಬ್ಬರಿ 15 ವರ್ಷಗಳ ಬಳಿಕ ಅಂಬಾಸಿಡರು ಕಾರು ಹೊಸ ರೂಪದಲ್ಲಿ ಬಿಡುಗಡೆಯಾಗುತ್ತಿದೆ. ವಿಶೇಷ ಅಂದರೆ ಅಂಬಾಸಿಡರ್ ಎಲೆಕ್ಟ್ರಿಕ್ ಕಾರಿನ ರೂಪದಲ್ಲಿ ಬಿಡುಗಡೆಯಾಗುತ್ತಿದೆ ಎಂದು ವರದಿಯಾಗಿದೆ.
ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರು, ಸಿಟ್ರೋಯೆನ್ ಇಸಿ3 ಎಲೆಕ್ಟ್ರಿಕ್ ಸೇರಿದಂತೆ ಇತರ ಕೆಲ ಎಲೆಕ್ಟ್ರಿಕ್ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಅಂಬಾಸಿಡರ್ ಕಾರು ಬಿಡುಗಡೆಯಾಗುತ್ತಿದೆ. ಅತ್ಯಾಕರ್ಷಕ ರೂಪದಲ್ಲಿ ಅಂಬಾಸಿಡರ್ ಕಾರು ಬಿಡುಗಡೆ ಮಾಡಲು ಹಿಂದೂಸ್ತಾನ್ ಮೋಟಾರ್ಸ್ ಮುಂದಾಗಿದೆ. ಮಹೀಂದ್ರ ಕಳೆ ವರ್ಷಗಳ ಹಿಂದೆ ಜಾವಾ ಮೋಟಾರ್‌ಸೈಕಲ್ ಮತ್ತೆ ಬಿಡುಗಡೆ ಮಾಡಿ ಯಶಸ್ಸು ಗಳಿಸಿದಂತೆ ಅಂಬಾಸಿಡರ್ ಬಿಡುಗಡೆಗೆ ಸಜ್ಜಾಗಿದೆ.
2026ರಲ್ಲಿ ಅಂಬಾಸಿಡರ್ ಭಾರತದಲ್ಲಿ ಬಿಡುಗಡೆಯಾಗುತ್ತಿದೆ ಎಂದು ವರದಿಗಳು ಹೇಳುತ್ತಿದೆ. ಹೊಸ ಅಂಬಾಸಿಡರ್ ಕಾರಿನ ಬೆಲೆ 10 ರಿಂದ 15 ಲಕ್ಷ ರೂಪಾಯಿ ಒಳಗಿರಲಿದೆ ಎಂದು ಅಂದಾಜಿಸಲಾಗಿದೆ. ಅಂದರೆ ಗೈಕೆಟುವ ದರದಲ್ಲಿ ಕಾರನ್ನು ಗ್ರಾಹಕರಿಗೆ ನೀಡುವ ಮೂಲಕ ಮತ್ತೆ ಭಾರತದ ಮಾರುಕಟ್ಟೆಯಲ್ಲಿ ನಂ.1 ಸ್ಥಾನ ಅಲಂಕರಿಸಲು ಮುಂದಾಗಿದೆ.
ಹೊಸ ಎಲೆಕ್ಟ್ರಿಕ್ ಅಂಬಾಸಿಡರ್ ಕಾರಿನ ಮೈಲೇಜ್ 350 ರಿಂದ 425 ಕಿ.ಮೀ ಎಂದು ಅಂದಾಜಿಸಲಾಗಿದೆ. ಭಾರತದಲ್ಲಿ ಇವಿ ಮಾರುಕಟ್ಟೆಯಲ್ಲಿ ಟಾಟಾ ಎಲೆಕ್ಟ್ರಿಕ್ ಕಾರು ಹಾಗೂ ಮಹೀಂದ್ರ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿದೆ. ಇದೀಗ ಅಂಬಾಸಿಡರ್ ಕಾರು ಕೂಡ ಸೇರಿಕೊಳ್ಳಲಿದೆ. ಇದರಿಂದ ಪೈಪೋಟಿ ಹೆಚ್ಚಾಗಲಿದೆ.
ಹಿಂದುಸ್ತಾನ್ ಮೋಟಾರ್ಸ್ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಸದ್ಯ ಅಂಬಾಸಿಡರ್ ಕಾರು 2026ರಲ್ಲಿ ಬಿಡುಗಡೆಯಾಗುತ್ತಿದೆ ಅನ್ನೋ ಮಾಹಿತಿಗಳು ಹರಿದಾಡುತ್ತಿದೆ. ಕೆಲ ವರ್ಷಗಳ ಹಿಂದೆ ಅಂಬಾಸಿಡರ್ ರಿ ಎಂಟ್ರಿ ಚರ್ಚೆಯಾಗುತ್ತಿದೆ. ಆದರೆ ಯಾವುದು ಸ್ಪಷ್ಟವಾಗಿಲ್ಲ. ಹೀಗಾಗಿ ಅಧಿಕೃತ ಮಾಹಿತಿ ಹೊರಬೀಳುವರೆಗೆ ಯಾವುದು ಖಚಿತಪಡಿಸು ಸಾಧ್ಯವಿಲ್ಲ.