ಅಂಬಾನಿಯ ಐಷಾರಾಮಿ ಜಿಯೋ ಮಾಲ್‌ನಲ್ಲಿ ಮಳಿಗೆ ತೆರೆಯಲಿರೋ ವಿಶ್ವದ ನಂ. 1 ಶ್ರೀಮಂತ ವ್ಯಕ್ತಿ: ತಿಂಗಳ ಬಾಡಿಗೆ ಎಷ್ಟು ನೋಡಿ..
ಮುಂಬೈನ ಬಿಕೆಸಿಯಲ್ಲಿರುವ ಜಿಯೋ ವರ್ಲ್ಡ್ ಪ್ಲಾಜಾ ಮಾಲ್‌ನಲ್ಲಿ ಅನೇಕ ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳು ಈಗಾಗಲೇ ಮಳಿಗೆಗಳನ್ನು ಗುತ್ತಿಗೆ ಪಡೆದಿವೆ. ಈ ಪೈಕಿ ಬರ್ನಾರ್ಡ್ ಅರ್ನಾಲ್ಟ್ ಒಡೆತನದ ಲೂಯಿಸ್ ವಿಟ್ಟಾನ್ ಕಂಪನಿ ಸಹ ಒಂದು.
ಭಾರತದ ನಂ. 1 ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಒಡೆತನದ ಹಾಗೂ ಪುತ್ರಿ ಇಶಾ ಅಂಬಾನಿ ನಿರ್ವಹಿಸುತ್ತಿರುವ ರಿಲಯನ್ಸ್ ರಿಟೇಲ್ ಈಗ ಭಾರತದ ಪ್ರಮುಖ ಚಿಲ್ಲರೆ ಕಂಪನಿಯಾಗಿದೆ. ಈ ಹಿನ್ನೆಲೆ ಜಾಗತಿಕ ಮಟ್ಟದಲ್ಲಿ ಕಂಪನಿಯ ಪ್ರಾಬಲ್ಯವನ್ನು ಬಲಪಡಿಸಲು ಮುಕೇಶ್ ಅಂಬಾನಿ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ.
ಈ ಪೈಕಿ ಮುಂಬೈನ ಬಿಕೆಸಿಯಲ್ಲಿರುವ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿರುವ ಜಿಯೋ ವರ್ಲ್ಡ್ ಪ್ಲಾಜಾ ಅತ್ಯಾಧುನಿಕ ಮಾಲ್ ಆಗಿದ್ದು, ಜಗತ್ತಿನಾದ್ಯಂತ ತನ್ನ ಹೆಜ್ಜೆಗುರುತುಗಳನ್ನು ವಿಸ್ತರಿಸುವ ಅಂಬಾನಿಯ ಯೋಜನೆಯ ಭಾಗವಾಗಿದೆ. ಈ ಮಾಲ್‌ನಲ್ಲಿ ವಿಶ್ವದ ನಂ. 1 ಶ್ರೀಮಂತ ವ್ಯಕ್ತಿ ಬರ್ನಾರ್ಡ್ ಅರ್ನಾಲ್ಟ್ ಒಡೆತನದ ಪ್ರಮುಖ ಐಷಾರಾಮಿ ಫ್ಯಾಶನ್ ಬ್ರ್ಯಾಂಡ್ ಸೇರಿದಂತೆ ಜಿಯೋ ವರ್ಲ್ಡ್ ಪ್ಲಾಜಾದಲ್ಲಿ ಅನೇಕ ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳು ಈಗಾಗಲೇ ಮಳಿಗೆಗಳನ್ನು ಗುತ್ತಿಗೆ ಪಡೆದಿವೆ ಎಂಬುದನ್ನು ಗಮನಿಸಬೇಕು.
ಬರ್ನಾರ್ಡ್ ಅರ್ನಾಲ್ಟ್ 211 ಬಿಲಿಯನ್ ಡಾಲರ್ (ಅಂದಾಜು 17.55 ಲಕ್ಷ ಕೋಟಿ ರೂ. ) ನಿವ್ವಳ ಮೌಲ್ಯದೊಂದಿಗೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ ಎಂದು ಫೋರ್ಬ್ಸ್ ವರದಿ ಮಾಡಿದೆ. ಮತ್ತೊಂದೆಡೆ, ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಮುಖೇಶ್ ಅಂಬಾನಿ, 83.4 ಬಿಲಿಯನ್ ಡಾಲರ್ (ಅಂದಾಜು 6.9 ಲಕ್ಷ ಕೋಟಿ) ನಿವ್ವಳ ಮೌಲ್ಯದೊಂದಿಗೆ ವಿಶ್ವದ 9ನೇ ಹಾಗೂ ದೇಶದ ನಂ. 1 ಶ್ರೀಮಂತ ವ್ಯಕ್ತಿಯಾಗಿದ್ದಾರೆ.
ಬರ್ನಾರ್ಡ್ ಅರ್ನಾಲ್ಟ್ LVMH Moët ಹೆನ್ನೆಸ್ಸಿ ಲೂಯಿಸ್ ವಿಟಾನ್ (LVMH) ನ CEO ಮತ್ತು ಅಧ್ಯಕ್ಷರಾಗಿದ್ದಾರೆ. ಫ್ರಾನ್ಸ್ ಮೂಲದ ಸಂಸ್ಥೆಯು ಐಷಾರಾಮಿ ಸರಕುಗಳಲ್ಲಿ ಪರಿಣತಿ ಹೊಂದಿದೆ. ಇನ್ನು, ಪ್ರೀಮಿಯಂ ಬ್ರ್ಯಾಂಡ್‌ಗಳಾದ LVMH ನ ಪೋರ್ಟ್‌ಫೋಲಿಯೋ ಲೂಯಿಸ್ ವಿಟಾನ್, ಟಿಫಾನಿ & ಕಂಪನಿ, ಡಿಯೊರ್, ಗಿವೆಂಚಿ, ಟ್ಯಾಗ್ ಹ್ಯೂಯರ್ ಮತ್ತು ಬಲ್ಗರಿಯನ್ನು ಒಳಗೊಂಡಿವೆ.
ಲೂಯಿಸ್ ವಿಟಾನ್ ಭಾರತದಲ್ಲಿ ಮತ್ತೊಂದು ಮಳಿಗೆಯನ್ನು ತೆರೆಯಲು ಸಿದ್ಧವಾಗಿದೆ ಮತ್ತು ಕಂಪನಿಯು ಮುಖೇಶ್ ಅಂಬಾನಿಯವರ ಐಷಾರಾಮಿ ಮಾಲ್ ಜಿಯೋ ವರ್ಲ್ಡ್ ಪ್ಲಾಜಾದಲ್ಲಿ ತನ್ನ ಹೊಸ ಮಳಿಗೆಗಾಗಿ ಒಟ್ಟು 7,365 ಚದರ ಅಡಿಗಳಷ್ಟು ನಾಲ್ಕು ಘಟಕಗಳನ್ನು ಗುತ್ತಿಗೆಗೆ ಪಡೆದಿದೆ.. ಹೊಸ ಮಳಿಗೆಯು ಭಾರತದಲ್ಲಿ LV ಯ ಅತಿ ದೊಡ್ಡದಾಗಿದೆ ಮತ್ತು ಕಂಪನಿಯು ಮುಖೇಶ್ ಅಂಬಾನಿಗೆ ಮಾಸಿಕ ಬಾಡಿಗೆಯಾಗಿ 40.50 ಲಕ್ಷ ರೂಪಾಯಿಗಳನ್ನು ಪಾವತಿಸುತ್ತದೆ.
ಈ ಮಧ್ಯೆ, ಲೂಯಿಸ್ ವಿಟಾನ್ ಮುಂಬೈನ ತಾಜ್ ಮಹಲ್ ಪ್ಯಾಲೇಸ್ ಮತ್ತು ಟವರ್, ಬೆಂಗಳೂರಿನ UB ಸಿಟಿ ಮತ್ತು ನವದೆಹಲಿಯ DLF ಎಂಪೋರಿಯೋ ಸೇರಿ ಪ್ರಸ್ತುತ ಭಾರತದಲ್ಲಿ ಮೂರು ಮಳಿಗೆಗಳನ್ನು ಹೊಂದಿದೆ.
ಕ್ರಿಶ್ಚಿಯನ್ ಡಿಯೋರ್ ಜಿಯೋ ವರ್ಲ್ಡ್ ಪ್ಲಾಜಾದಲ್ಲಿ 21.56 ಲಕ್ಷ ರೂಪಾಯಿಗಳ ಮಾಸಿಕ ಬಾಡಿಗೆಗೆ ಎರಡು ಮಳಿಗೆಗಳನ್ನು ಗುತ್ತಿಗೆ ಪಡೆದಿದೆ ಮತ್ತು ಈ ಮಳಿಗೆಗಳು ಮುಖೇಶ್ ಅಂಬಾನಿಯವರ ಬಹುಕೋಟಿ ಮಾಲ್‌ನ ನೆಲ ಮಹಡಿಯಲ್ಲಿವೆ ಎಂದೂ ತಿಳಿದುಬಂದಿದೆ.