ಇದು ವಿಶ್ವದ ಅತ್ಯಂತ ದುಬಾರಿ ಉಪ್ಪು: ಇದರ ಬೆಲೆಗೆ ನೀವು 4 ಗ್ರಾಂ ಚಿನ್ನ ಕೊಳ್ಬಹುದು..!
ಕೊರಿಯನ್ ಬಿದಿರಿನ ಉಪ್ಪು ಎಂದು ಕರೆಯಲ್ಪಡುವ ಈ ಉಪ್ಪನ್ನು ವಿಶಿಷ್ಟ ವಿಧಾನದಿಂದ ತಯಾರಿಸಲಾಗುತ್ತದೆ. ಈ ಉಪ್ಪಿನ ಬೆಲೆ ಮತ್ತು ತಯಾರಿಕೆಯ ಪ್ರಕ್ರಿಯೆ ನಿಮ್ಮನ್ನು ಅಚ್ಚರಿಗೊಳಿಸುತ್ತದೆ.

ಉಪ್ಪು ನಮ್ಮ ಅಡುಗೆಮನೆಯಲ್ಲಿರಬೇಕಾದ ಅವಿಭಾಜ್ಯ ವಸ್ತು. ಬಹುತೇಕ ಪ್ರತಿ ಅಡುಗೆಗೂ ನಾವು ಉಪ್ಪು ಬಳಸುತ್ತೇವೆ. ಅದಿಲ್ಲದೇ ಹೋದರೆ ಯಾವ ಆಹಾರವೂ ಕೂಡ ರುಚಿಸುವುದಿಲ್ಲ. ಆದರೆ ನಾವು ಹೀಗೆ ಪ್ರತಿ ಅಡುಗೆಗೆ ಬಹಳ ಅಗತ್ಯವಾಗಿ ಬಳಸುವ ಈ ಉಪ್ಪು ಅಡುಗೆ ಮನೆಯಲ್ಲಿ ಬಳಸುವ ಇತರ ಮಸಾಲೆ ಪದಾರ್ಥಗಳಿಗೆ ಹೋಲಿಸಿದರೆ ಬಹಳ ಕಡಿಮೆ ದರವನ್ನು ಹೊಂದಿದೆ. ಉಪ್ಪಿನಲ್ಲೂ ಬಿಳಿ ಉಪ್ಪು, ಕಪ್ಪು ಉಪ್ಪು, ಗುಲಾಬಿ ಉಪ್ಪು, ಕೋಷರ್ ಉಪ್ಪು, ಹೊಗೆಯಾಡಿಸಿದ ಉಪ್ಪು, ಉಪ್ಪಿನಕಾಯಿ ಉಪ್ಪು ಮತ್ತು ಕಲ್ಲು ಉಪ್ಪು ಹೀಗೆ ಈಗ ಹಲವು ವಿಧಗಳಿವೆ. ಬಹುತೇಕ ಮನೆಗಳಲ್ಲಿ ಸಾಮಾನ್ಯವಾಗಿ ಬಿಳಿ ಬಣ್ಣದ ಕಲ್ಲುಪ್ಪನ್ನು ಬಳಸುತ್ತಾರೆ. ಆದರೆ ಇದರ ದರ ಹೆಚ್ಚೆಂದರೆ ಕೇಜಿಗೆ 10 ರಿಂದ20 ರೂಪಾಯಿ ಇರುತ್ತದೆಯಷ್ಟೇ.

ಆದರೆ ಇಂತಹ ಉಪ್ಪನ್ನು ಹೊರತುಪಡಿಸಿದ ಪ್ರಪಂಚದಲ್ಲಿ ಸಾವಿರಾರು ರೂಪಾಯಿ ಬೆಲೆ ಬಾಳುವ ಉಪ್ಪು ಇದೆ ಮತ್ತು ಅದರ ಉತ್ಪಾದನೆಗೆ ಸುಮಾರು ದಿನಗಳನ್ನು ತೆಗೆದುಕೊಳ್ಳುತ್ತದೆ ಹಾಗೂ ಇದು ಪ್ರಪಂಚದಲ್ಲೇ ಅತೀ ದುಬಾರಿಯಾಗಿರುವ ಉಪ್ಪು ಎನಿಸಿದ್ದು, ಈ ವಿಶೇಷ ಅಮೂಲ್ಯ ಉಪ್ಪಿನ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ. ಈಗ ನಾವು ಇಲ್ಲಿ ಆ ದುಬಾರಿ ಉಪ್ಪಿನ ಬಗ್ಗೆ ತಿಳಿದುಕೊಳ್ಳೋಣ.

ಇಲ್ಲಿ ನಾವು ನಿಮಗೆ ವಿಶ್ವದ ಅತ್ಯಂತ ದುಬಾರಿ ಉಪ್ಪನ್ನು ಪರಿಚಯಿಸುತ್ತೇವೆ. ಅದರ ಬೆಲೆ ಮತ್ತು ಅದನ್ನು ತಯಾರಿಸುವ ಸಂಕೀರ್ಣ ಪ್ರಕ್ರಿಯೆಯ ಬಗ್ಗೆ ತಿಳಿದುಕೊಂಡರೆ ಹೀಗೂ ಇರುತ್ತ ಅಂತ ನೀವು ಅಚ್ಚರಿ ಪಡುವಿರಿ. ಅಂದಹಾಗೆ ವಿಶ್ವದ ಈ ಅತ್ಯಂತ ದುಬಾರಿ ಉಪ್ಪನ್ನು ಕೊರಿಯನ್ ಬಿದಿರಿನ ಉಪ್ಪು ಎಂದು ಕರೆಯಲಾಗುತ್ತದೆ. ಇದನ್ನು ಬಹು ಹಂತಗಳನ್ನು ಒಳಗೊಂಡಿರುವ ವಿಶಿಷ್ಟ ವಿಧಾನವನ್ನು ಬಳಸಿ ತಯಾರಿಸಲಾಗುತ್ತದೆ.

ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲಿ ಉಪ್ಪು ತುಂಬಾ ದುಬಾರಿಯಾಗಿತ್ತು, ಆದರೆ ಇಂದು, ಭಾರತದಲ್ಲಿ ಉಪ್ಪು ತುಂಬಾ ಕಡಿಮೆ ಬೆಲೆಗೆ ಲಭ್ಯವಿದೆ. ಆದರೆ ಅನೇಕ ವಿದೇಶಗಳಲ್ಲಿ ಉಪ್ಪು ಇನ್ನೂ ದುಬಾರಿಯಾಗಿದೆ. ಆದರೆ ಈಗ, ಈ ಜಗತ್ತಿನಲ್ಲಿ ಅತ್ಯಂತ ದುಬಾರಿ ಉಪ್ಪಾದ ಕೊರಿಯನ್ ಬಿದಿರಿನ ಉಪ್ಪಿನ ಬೆಲೆ ಭಾರತದಲ್ಲಿ ಪ್ರತಿ ಕಿಲೋಗ್ರಾಂಗೆ ಸುಮಾರು ₹30,000,

ಆದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಇದರ ಬೆಲೆ ಪ್ರತಿ ಕಿಲೋಗ್ರಾಂಗೆ ಸುಮಾರು $347.37. ಇದರ ಉತ್ಪಾದನೆಗೆ ಸಾಕಷ್ಟು ಶ್ರಮ ಬೇಕಾಗುತ್ತದೆ. ವರದಿಗಳ ಪ್ರಕಾರ, ಇದನ್ನು ಉತ್ಪಾದಿಸಲು ಸುಮಾರು 45 ರಿಂದ 50 ದಿನಗಳು ಬೇಕಾಗುತ್ತದೆ. ಈ ಕೊರಿಯನ್ ಬಿದಿರಿನ ಉಪ್ಪನ್ನು ಜುಗ್ಯೋಮ್ ಎಂದೂ ಕೂಡ ಕರೆಯುತ್ತಾರೆ. ಹಲವು ವರ್ಷಗಳಿಂದ, ಕೊರಿಯನ್ನರು ಅಡುಗೆ ಮತ್ತು ಔಷಧೀಯ ಉದ್ದೇಶಗಳಿಗಾಗಿ ಈ ಬಿದಿರನ್ನು ಬಳಸುತ್ತಿದ್ದರು. ಈ ವಿಶೇಷ ಉಪ್ಪನ್ನು ಬಿದಿರನ್ನು ಬಳಸಿ ತಯಾರಿಸಲಾಗುತ್ತದೆ. ಟೊಳ್ಳಾದ ಬಿದಿರಿನ ಕೊಳವೆಗಳಲ್ಲಿ ಸಮುದ್ರದ ಉಪ್ಪನ್ನು ತುಂಬಿಸಿ ಹೆಚ್ಚಿನ ಉರಿಯಲ್ಲಿ ರೋಸ್ಟ್ ಮಾಡುತ್ತಾರೆ. ಇದು ಬಿದಿರಿನಲ್ಲಿರುವ ಖನಿಜಾಂಶಗಳನ್ನು ಉಪ್ಪಿನೊಳಗೆ ತುಂಬಲು ಸಹಾಯ ಮಾಡಿ ಕೊಡುತ್ತದೆ.

800 ರಿಂದ 1,500 ಡಿಗ್ರಿ ಸೆಲ್ಸಿಯಸ್ ವರೆಗಿನ ತಾಪಮಾನದಲ್ಲಿ ಇದನ್ನು ಹುರಿಯಲಾಗುತ್ತದೆ. ಹೆಚ್ಚಿನ ಶಾಖದಿಂದಾಗಿ, ಉಪ್ಪು ಕರಗಿ ದ್ರವ ರೂಪಕ್ಕೆ ತಿರುಗಿ ನಂತರ ಮತ್ತೆ ಗಟ್ಟಿಯಾಗುತ್ತದೆ.. ಈ ಸಂಪೂರ್ಣ ಪ್ರಕ್ರಿಯೆಯನ್ನು ಒಟ್ಟು ಒಂಬತ್ತು ಬಾರಿ ಪುನರಾವರ್ತಿಸಲಾಗುತ್ತದೆ. ಅದಕ್ಕಾಗಿಯೇ ಇದನ್ನು ಉತ್ಪಾದಿಸಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಕೊರಿಯನ್ ಬಿದಿರಿನ ಉಪ್ಪು ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್‌ನಂತಹ ಅಗತ್ಯ ಖನಿಜಗಳನ್ನು ಹೊಂದಿರುತ್ತದೆ ಆದರೆ ಸಾಮಾನ್ಯ ಸಮುದ್ರ ಉಪ್ಪು ಹೊಂದಿರುವ ಇತರ ವಸ್ತುಗಳನ್ನು ಇದು ಹೊಂದಿರುವುದಿಲ್ಲ; ಆದ್ದರಿಂದ, ಇದು ಆರೋಗ್ಯಕರವಾಗಿದೆ. ಆರೋಗ್ಯದ ದೃಷ್ಟಿಕೋನದಿಂದ, ಈ ಉಪ್ಪನ್ನು ಅದರ ಖನಿಜ ಅಂಶ ಮತ್ತು ಅದರ ತಯಾರಿಕೆಯ ವಿಶಿಷ್ಟ ಪ್ರಕ್ರಿಯೆಯಿಂದಾಗಿ ಶ್ರೇಷ್ಠವೆಂದು ಪರಿಗಣಿಸಲಾಗಿದೆ.