USA National Debt: ಭಾರತದ ಸಾಲವಲ್ಲ, ಸಾಲದ ಕೂಪದಲ್ಲಿದೆ ದೊಡ್ಡಣ್ಣ ಅಮೆರಿಕ!
ಮಾಧ್ಯಮ ವರದಿಗಳ ಪ್ರಕಾರ ಭಾರತದ ರಾಷ್ಟ್ರೀಯ ಸಾಲ 2023ರ ಮಾರ್ಚ್ ವೇಳೆಗೆ 155.6 ಲಕ್ಷ ಕೋಟಿ ಎಂದು ಹೇಳಲಾಗುತ್ತಿದೆ. ಆದರೆ, ವಿಶ್ವದ ದೊಡ್ಡಣ್ಣ ಎನಿಸಿಕೊಂಡ ಅಮೆರಿಕದ ಸಾಲಕ್ಕೆ ಹೋಲಿಸಿದರೆ, ವಿಶ್ವದ ಐದನೇ ಆರ್ಥಿಕತೆಯಾಗಿರುವ ಭಾರತದ ಸಾಲ ಏನೇನೂ ಅಲ್ಲ.

ಇಡೀ ಜಗತ್ತಿನಲ್ಲಿ ಗರಿಷ್ಠ ಸಾಲ ಹೊಂದಿರುವ ದೇಶವಿದ್ದರೆ ಅದು ಜಪಾನ್ ಮಾತ್ರ. ತನ್ನ ವಾರ್ಷಿಕ ಜಿಡಿಪಿಯ ಶೇ. 259.43ರಷ್ಟು ಅದು ಸಾಲ ಹೊಂದಿದೆ. ಇನ್ನು ದಶಕಗಳ ಕಾಲ ಅಮೆರಿಕ ಹೊಂದಿರುವ ಸಾಲದ ಲೆಕ್ಕಾಚಾರ ನೋಡುವುದಾದಲ್ಲಿ 1930ರಲ್ಲಿ ಅಮರಿಕದ ಸಾಲ 16 ಬಿಲಿಯನ್ ಡಾಲರ್ ಆಗಿತ್ತು. ಅಂದರೆ, 1.32 ಲಕ್ಷ ಕೋಟಿ ರೂಪಾಯಿ.
ವಿಶ್ವದ ಸೂಪರ್‌ಪವರ್ ಎನಿಸಿಕೊಂಡಿರುವ ಅಮೆರಿಕದ ಸಾಲ 1940ರ ವೇಳೆಗೆ 43 ಬಿಲಿಯನ್ ಯುಎಸ್ ಡಾಲರ್‌ಗೆ ಏರಿತ್ತು. ಅಂದರೆ, ಭಾರತೀಯ ರೂಪಾಯಿಯಲ್ಲಿ 3.55 ಲಕ್ಷ ಕೋಟಿ ರೂಪಾಯಿ.
ವಿಶ್ವಯುದ್ಧಗಳಿಂದ ಜರ್ಜರಿತವಾಗಿದ್ದ 1950ರ ದಶಕದ ವೇಳೆ ಅಮೆರಿಕದ ರಾಷ್ಟ್ರೀಯ ಸಾಲ ಮತ್ತಷ್ಟು ದಿಗ್ಗನೆ ಏರಿತ್ತು. ಈ ಅವಧಿಯಲ್ಲಿ ಅಮೆರಿಕ 257 ಬಿಲಿಯನ್ ಯುಎಸ್ ಡಾಲರ್ ಸಾಲ ಹೊಂದಿತ್ತು. ಭಾರತೀಯ ರೂಪಾಯಿಯಲ್ಲಿ 21.26 ಲಕ್ಷ ಕೋಟಿ ರೂಪಾಯಿ.
1960ರಲ್ಲಿ ಅಮೆರಿಕದ ರಾಷ್ಟ್ರೀಯ ಸಾಲ ಇನ್ನಷ್ಟು ಏರಿಕೆಯಾಗಿತು. 286 ಬಿಲಿಯನ್ ಯುಎಸ್ ಡಾಲರ್ ಸಾಲವನ್ನು ಅಮೆರಿಕ ಹೊಂದಿತ್ತು. ಭಾರತೀಯ ರೂಪಾಯಿಯಲ್ಲಿ ಈ ಮೊತ್ತ 23.66 ಲಕ್ಷ ಕೋಟಿ ರೂಪಾಯಿ.
ಜಾಗತಿಕ ಆರ್ಥಿಕ ಹಿಂಜರಿತ ಅಮೆರಿಕವನ್ನು ಅಪ್ಪಳಿಸುವ ಆರಂಭದ ದಶಕ. 1970ರ ವೇಳೆಗೆ ಅಮೆರಿಕ 371 ಬಿಲಿಯನ್ ಯುಎಸ್ ಡಾಲರ್ ಸಾಲ ಹೊಂದಿತ್ತು. ಅಂದರೆ, 30.67 ಲಕ್ಷ ಕೋಟಿ ರೂಪಾಯಿ.
ಅಮೆರಿಕ ಪಾಲಿಗೆ ಅತ್ಯಂತ ಕೆಟ್ಟ ದಶಕ ಇದಾಗಿತ್ತು. ಆರ್ಥಿಕ ಹಿಂಜರಿತದಿಂದ ತತ್ತರಿಸಿ ಹೋದ ಕಾರಣಕ್ಕೆ ಅಮೆರಿಕದ ಕಾಲ 1980ರ ದಶಕದ ವೇಳೆಗೆ 908 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿತ್ತು. ಭಾರತೀಯ ರೂಪಾಯಿಯಲ್ಲಿ ಈ ಮೊತ್ತ 75.07 ಕೋಟಿ ರೂಪಾಯಿ.
ಈ ದಶಕದಲ್ಲೂ ಅಮೆರಿಕದ ಆರ್ಥಿಕ ಹಿಂಜರಿತದ ಸ್ಥಿತಿ ಸುಧಾರಿಸುವಂತೆ ಕಾಣಲಿಲ್ಲ. ಬಿಲಿಯನ್ ಹಂತದಲ್ಲಿದ್ದ ಅಮೆರಿಕದ ಸಾಲ ಟ್ರಿಲಿಯನ್‌ಗೆ ಏರಿಕೆಯಾಗಿತ್ತು. 1990ರ ವೇಳೆಗೆ ಅಮೆರಿಕದ ಸಾಲ 3.2 ಟ್ರಿಲಿಯನ್ ಯುಎಸ್ ಡಾಲರ್. ಅಂದರೆ, 264 ಲಕ್ಷ ಕೋಟಿ ರೂಪಾಯಿ.
2000ದ ದಶಕದ ವೇಳೆ ಅಮೆರಿಕದ ಸಾಲ ಇನ್ನಷ್ಟು ಏರಿಕೆ ಕಂಡಿತು. 5.6 ಟ್ರಿಲಿಯನ್ ಸಾಲದ ಶೂಲದಲ್ಲಿ ಅಮೆರಿಕ ಸಿಲುಕಿತ್ತು. ಅಂದರೆ, 462 ಲಕ್ಷ ಕೋಟಿಯ ಸಾಲ ಅಮೆರಿಕದ ಮೇಲಿತ್ತು.
2010ರ ಪ್ರಕಾರ ಅಮೆರಿಕದ ಸಾಲ 13.5 ಟ್ರಿಲಿಯನ್ ಯುಎಸ್ ಡಾಲರ್. ಭಾರತೀಯ ರೂಪಾಯಿಯಲ್ಲಿ ಇದನ್ನು ಲೆಕ್ಕಾಚಾರ ಮಾಡಿ ನೋಡುವುದಾದರೆ, 1,115 ಲಕ್ಷ ಕೋಟಿ ರೂಪಾಯಿಗಳು.
2020ರ ವೇಳೆಗೆ ಅಮೆರಿಕದ ಸಾಲ ನಿರೀಕ್ಷೆಗೂ ಮೀರಿ ಏರಿಕೆಯಾಗಿದೆ. ಟ್ರೆಶರಿ ಡಿಪಾರ್ಟ್‌ಮೆಂಟ್ ಉಲ್ಲೇಖಿಸಿ ವರ್ಲ್ಟ್ ಆಫ್ ಸ್ಟ್ಯಾಟಸ್ಟಿಕ್ಸ್ ಟ್ವೀಟ್ ಮಾಡಿರುವ ಪ್ರಕಾರ ಅಮೆರಿಕದ ಸಾಲ 27.7 ಟ್ರಿಲಿಯನ್ ಯುಎಸ್ ಡಾಲರ್. ಅಂದರೆ, 2,289 ಲಕ್ಷ ಕೋಟಿ ರೂಪಾಯಿ.
2023ರ ವೇಳೆಗೆ ಅಮೆರಿಕದ ಸಾಲ 32.8 ಟ್ರಿಲಿಯನ್ ಯುಎಸ್ ಡಾಲರ್ ಗಡಿ ಮುಟ್ಟಿದೆ. ಭಾರತೀಯ ರೂಪಾಯಿಯಲ್ಲಿ ಈ ಮೊತ್ತ2,711 ಲಕ್ಷ ಕೋಟಿ ರೂಪಾಯಿ, ಈ ದಶಕ ಮುಗಿಯುವುದರ ಒಳಗಾಗಿ ಅಮರಿಕದ ಸಾಲ 40 ಟ್ರಿಲಿಯನ್ ಯುಎಸ್ ಡಾಲರ್‌ಗೆ ದಾಟಿದರೂ ಅಚ್ಚರಿ ಪಡುವಂತಿಲ್ಲ.