ಫೇಸ್ಬುಕ್, ಇನ್‌ಸ್ಟಾ ಖಾತೆಗೆ ಪ್ರತಿ ತಿಂಗಳು 1,164 ರೂ ಶುಲ್ಕ, 27 ರಾಷ್ಟ್ರದಲ್ಲಿ ಜಾರಿ!
ಮೆಟಾ ಒಡೆತನದ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಖಾತೆ ಅತೀ ದೊಡ್ಡ ಸಾಮಾಜಿಕ ಮಾಧ್ಯಮವಾಗಿ ಹೊರಹೊಮ್ಮಿದೆ. ಇದೀಗ ಮೆಟಾ ಕಂಪನಿ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಪ್ರತಿ ತಿಂಗಳು 1,164 ರೂಪಾಯಿ ಶುಲ್ಕ ವಿಧಿಸಲು ಮುಂದಾಗಿದೆ. ಮೊದಲ ಹಂತದಲ್ಲಿ 27 ದೇಶದಲ್ಲಿ ಈ ನಿಯಮ ಜಾರಿಯಾಗುತ್ತಿದೆ.
ಸ್ಮಾರ್ಟ್‌ಫೋನ್ ಬಳಸುತ್ತಿರುವ ಬಹುತೇಕರು ಮೆಟಾ ಮಾಲೀಕತ್ವದ ಫೇಸ್‌ಬುಕ್ ಹಾಗೂ ಇನ್ಸ್ಟಾಗ್ರಾಂ ಖಾತೆ ಹೊಂದಿದ್ದಾರೆ. ಭಾರತದಲ್ಲಿ ಈ ಎರಡು ಸಾಮಾಜಿಕ ಮಾಧ್ಯಮ ಅತ್ಯಂತ ಜನಪ್ರಿಯವಾಗಿದೆ. ಇದೀಗ ಮೆಟಾ ಹೊಸ ನಿಯಮ ಜಾರಿಗೆ ತಂದಿದೆ.
ಫೇಸ್‌ಬುಕ್ ಹಾಗೂ ಇನ್ಸ್ಟಾಗ್ರಾಂ ಖಾತೆ ಬಳಕೆದಾರರಿಗೆ ಇದೀಗ ಶುಲ್ಕ ವಿಧಿಸಲು ಮೆಟಾ ಮುಂದಾಗಿದೆ. ಡೆಸ್ಕ್‌ಟಾಪ್‌ನಲ್ಲಿನ ಬಳಕೆದಾರರಿಗೆ ಪ್ರತಿ ತಿಂಗಳು $14 ಡಾಲರ್(1,164 ರೂಪಾಯಿ) ಶುಲ್ಕ ವಿಧಿಸಲಾಗುತ್ತಿದೆ. ಆದರೆ ಎಲ್ಲಾ ಬಳಕೆದಾರರಿಗೆ ಈ ಶುಲ್ಕ ಇಲ್ಲ.
ಇನ್ನು ಮೊಬೈಲ್‌ನಲ್ಲಿ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಬಳಕೆದಾರರಿಗೆ ಪ್ರತಿ ತಿಂಗಳು 13 ಯೂರೋ ಅಂದರೆ 1,132 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ಆದರೆ ಈ ಶುಲ್ಕ ಎಲ್ಲರಿಗೂ ಇಲ್ಲ. ಕೇವಲ ಜಾಹೀರಾತು ಮುಕ್ತ ಬಳಕೆಗೆ ಮಾತ್ರ.
ಹೌದು, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಬಳಕೆದಾರರಿಗೆ ಜಾಹೀರಾತು ಕಿರಿಕಿಯಿಂದ ಮುಕ್ತಿ ನೀಡಲು ಮೆಟಾ ಹೊಸ ಪ್ಲಾನ್ ಜಾರಿ ಮಾಡಿದೆ. ಈ ಪ್ಲಾನ್ ಆಯ್ಕೆ ಮಾಡಿಕೊಂಡರೆ ನಿಮಗೆ ಜಾಹೀರಾತು ಮುಕ್ತ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಬಳಕೆ ಮಾಡಲು ಸಾಧ್ಯವಿದೆ.
ಈ ಹೊಸ ನಿಯಮ ಮೊದಲ ಹಂತದಲ್ಲಿ ಯೂರೋಪಿಯನ್ ಯೂನಿಯನ್ ದೇಶಗಳಲ್ಲಿ ಜಾರಿಯಾಗುತ್ತಿದೆ. ಒಟ್ಟು 27 ರಾಷ್ಟ್ರಗಳಲ್ಲಿ ಜಾಹೀರಾತು ಮುಕ್ತ ಸಾಮಾಜಿಕ ಮಾಧ್ಯಮ ಬಳಕೆಗೆ ಅವಕಾಶ ನೀಡುತ್ತಿದೆ.
ಜರ್ಮನಿ, ಗ್ರೀಸ್, ಫ್ರಾನ್ಸ್, ಸ್ಪೇನ್, ಸ್ಪೀಡನ್, ಪೋಲೆಂಡ್, ನೆದರ್ಲೆಂಡ್, ಆಸ್ಟ್ರೀಯಾ, ಬೆಲ್ಜಿಯಂ, ಬಲ್ಗೇರಿಯಾ, ಕ್ರೋವೇಶಿಯಾ, ಪೋರ್ಚುಗಲ್, ಐರ್ಲೆಂಡ್, ಇಟಲಿ, ಗ್ರೀಸ್, ಹಂಗೇರಿ ಸೇರಿದಂತೆ 27 ಯೂರೊಪಿಯನ್ ಒಕ್ಕೂಟ ರಾಷ್ಟ್ರದಲ್ಲಿ ಹೊಸ ನಿಯಮ ಜಾರಿಯಾಗುತ್ತಿದೆ.
ಈ ವರ್ಷದ ಆರಂಭದಲ್ಲಿ ಬಳಕೆದಾರರಿಗೆ ಜಾಹೀರಾತು ಕಿರಿಕಿರಿ ಪೋಲೆಂಡ್‌ನಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ಜಾಹೀರಾತು ವಿಚಾರದಲ್ಲಿ ಪೊಲೆಂಡ್‌ನ ಡೇಟಾ ಪ್ರವೈಸಿ ನಿಯಮ ಮೀರಿದ ಮೆಟಾ ಸಂಸ್ಥೆಗೆ 390 ಮಿಲಿಯನ್ ಯೂರೋ ದಂಡ ವಿಧಿಸಿತ್ತು.
ಈ ವಿಚಾರಣೆ ವೇಳೆ ಮೆಟಾ ಶೀಘ್ರದಲ್ಲೇ ಜಾಹೀರಾತು ಮುಕ್ತ ಸೇವೆ ನೀಡುವುದಾಗಿ ಘೋಷಿಸಿತ್ತು. ಇದೀಗ ಮೆಟಾ ಜಾಹೀರಾತು ಮುಕ್ತ ಸೇವೆ ಆರಂಭಿಸಿದೆ. ಹಂತ ಹಂತವಾಗಿ ಭಾರತ ಸೇರಿದಂತೆ ಇತರ ರಾಷ್ಟ್ರಗಳಿಗೆ ಈ ಸೇವೆ ವಿಸ್ತರಣೆ ಗೊಳ್ಳಲಿದೆ.