ಸದ್ದಿಲ್ಲದೆ ನಡೆಯುತ್ತಿದೆ ಆಧಾರ್ ಕಾರ್ಡ್ ವಂಚನೆ, ನಿಮ್ಮ ಡೇಟಾ ಕದಿಯುವ ಮುನ್ನ ಲಾಕ್ ಮಾಡಿ!
ಇದೀಗ ಹೊಸ ವಂಚನೆಯೊಂದು ಬೆಳಕಿಗೆ ಬಂದಿದೆ. ಆಧಾರ್ ಕಾರ್ಡ್ ನಂಬರ್ ಬಳಸಿಕೊಂಡು ಅತೀ ದೊಡ್ಡ ವಂಚನೆ ನಡೆಯುತ್ತಿದೆ. ಆಧಾರ್ ಲಿಂಕ್ ಇರುವ ಬ್ಯಾಂಕ್ ಖಾತೆಯಿಂದ ಒಟಿಪಿಯೂ ಇಲ್ಲದೆ ಹಣ ಗುಳುಂ ಮಾಡುವ ವಂಚನೆ ಬೆಳಕಿಗೆ ಬಂದಿದೆ. ಹೀಗಾಗಿ ನಿಮ್ಮ ಆಧಾರ್ ನಂಬರ್ ಬಳಸಿ ವಂಚನೆ ಮಾಡುವ ಮೊದಲೇ ಆಧಾರ್ ಲಾಕ್ ಮಾಡಿಕೊಳ್ಳಿ.

ವಂಚನೆಗೆ ಫ್ರಾಡ್‌ಗಳು ದಿನಕ್ಕೊಂದು ದಾರಿ ಹುಡುಕುತ್ತಾರೆ. ಇದೀಗ ಆಧಾರ್ ಕಾರ್ಡ್ ನಂಬರ್ ಬಳಸಿ ವಂಚನೆ ಮಾಡುವ ಅತೀ ದೊಡ್ಡ ಹಗರಣ ಬೆಳಕಿಗೆ ಬಂದಿದೆ. ಹೀಗಾಗಿ ಆಧಾರ್ ಕಾರ್ಡ್ ಫೋಟೋಕಾಪಿ ಮಾಡುವಾಗ, ಯಾರಿಗಾದರೂ ಕಳುಹಿಸುವಾಗ ಎಚ್ಚರಿಕೆ ವಹಿಸುವುದು ಅತೀ ಅಗತ್ಯ.
ಬ್ಯಾಂಕ್ ಖಾತೆಯನ್ನು ಆಧಾರ್ ಹಾಗೂ ಪಾನ್ ಕಾರ್ಡ್‌ಗೆ ಲಿಂಕ್ ಮಾಡುವುದು ಸಹಜ ಪ್ರಕ್ರಿಯೆ. ಆಧಾರ್ ಸಕ್ರಿಯಗೊಳಿಸಿದ ಪೇಮೆಂಟ್ ವ್ಯವಸ್ಥೆಯಲ್ಲಿನ(AePS) ಸಣ್ಣ ಲೂಪೋಲ್ ಬಳಸಿಕೊಂಡು ವಂಚಕರು ಖಾತೆಯಿಂದ ಸದ್ದಿಲ್ಲದೆ ಎಲ್ಲಾ ಮೊತ್ತ ಖಾಲಿ ಮಾಡುತ್ತಾರೆ. ಈ ವಂಚನೆಯಲ್ಲಿ ಲಿಂಕ್ ಇರುವ ಮೊಬೈಲ್ ನಂಬರ್‌ಗೆ ಒಟಿಪಿ ಕೂಡ ಬರುವುದಿಲ್ಲ.
ವಂಚಕರಿಗೆ ಆಧಾರ್ ಕಾರ್ಡ್ ನಂಬರ್ ಸಿಕ್ಕರೆ ಸಾಕು, ಬಳಿಕ ನಿಮ್ಮ ಆಧಾರ್‌ಗೆ ನೀಡಿದ ಬಯೋಮೆಟ್ರಿಕ್, ಫಿಂಗರ್ ಪ್ರಿಂಟ್ ಡೇಟಾ ಸಂಗ್ರಹಿಸುತ್ತಾರೆ. ಪ್ರಮುಖವಾಗಿ UIDAI ವೆಬ್‌ಸೈಟ್ ಅಥವಾ mAadhar APPನಲ್ಲಿ ಆಧಾರ್ ನಂಬರ್ ಲಾಕ್ ಆಗದಿದ್ದರೆ ವಂಚಕರು ಸುಲಭವಾಗಿ ಖಾತೆಗೆ ಕನ್ನ ಹಾಕುತ್ತಾರೆ.
ಆಧಾರ್ ನಂಬರ್ ಲಾಕ್ ಮಾಡಿಕೊಂಡರೆ ವಂಚಕರಿಗೆ ನಿಮ್ಮ ಬಯೋಮೆಟ್ರಿಕ್ ಅಥವಾ ಫಿಂಗರ್‌ಪ್ರಿಂಟ್ ಡೇಟಾ ಲಭ್ಯವಾಗುವುದಿಲ್ಲ. ಈ ಬಯೋಮೆಟ್ರಿಕ್ ಡೇಟಾ ಬಳಸಿಕೊಂಡು AePS ಮೂಲಕ ಖಾತೆಯಿಂದ ಹಣ ಕದಿಯುತ್ತಾರೆ.
ಫೋಟೋಕಾಪಿ(xerox), ಸೈಬರ್ ಕೆಫೆ ಅಥವಾ ಇನ್ಯಾರಿಗೋ ಯಾವುದೋ ಕಾರಣಕ್ಕೆ ಆಧಾರ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ನಂಬರ್ ಕಳುಹಿಸುವಾಗ, ಅಪ್ಲೋಡ್ ಮಾಡುವಾಗ ಜಾಗರೂಕರಾಗಿರಿ. ಅಪರಿಚಿತರು ಅಥವಾ ಅನಗತ್ಯ ಕಾರಣಕ್ಕೆ ಆಧಾರ್ ಕಾರ್ಡ್ ನಂಬರ್ ಹಂಚಿಕೊಳ್ಳಬೇಡಿ.
ಆಧಾರ್ ಅಧೀಕೃತ ವೆಬ್‌ಸೈಟ್ UIDAI ಕ್ಲಿಕ್ ಮಾಡಿ ನಿಮ್ಮ ಆಧಾರ್ ಅಕೌಂಟ್ ರಿಜಿಸ್ಟರ್ಡ್ ಮಾಡಿಕೊಳ್ಳಿ. ಬಳಿಕ ಆಧಾರ್ ನಂಬರ್ ಲಾಕ್ ಮಾಡಿದರೆ ಯಾವುದೇ ಡೇಟಾ ಸೋರಿಕೆಯಾಗುವುದಿಲ್ಲ.
ಅಥವಾ ಮೊಬೈಲ್‌ನಲ್ಲಿ mAadhar APP ಡೌನ್ಲೋಡ್ ಮಾಡಿಕೊಂಡು ನಿಮ್ಮ ಆಧಾರ್ ನಂಬರ್ ಲಾಕ್ ಮಾಡಿಕೊಳ್ಳಬಹುದು. mAadhar APPನಲ್ಲಿ ಬಯೋಮೆಟ್ರಿಕ್ ಸೆಟ್ಟಿಂಗ್ ತೆರಳಿ ಬಯೋಮೆಟ್ರಿಕ್ ಲಾಕ್ ಆನ್ ಮಾಡಿಕೊಳ್ಳಿ.
ಬಯೋಮೆಟ್ರಿಕ್ ಆನ್ ಮಾಡಿದ ತಕ್ಷಣ ಆಧಾರ್ ಲಿಂಕ್ ಆಗಿರುವ ಮೊಬೈಲ್‌ಗೆ ಒಟಿಪಿ ಬರಲಿದೆ. ಈ ಒಟಿಪಿ ನಂಬರ್ ಹಾಕಿ ಒಕೆ ಕ್ಲಿಕ್ ಮಾಡಿದರೆ ನಿಮ್ಮ ಆಧಾರ್ ಕಾರ್ಡ್ ಬಯೋಮೆಟ್ರಿಕ್ ಲಾಕ್ ಆಗಲಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.