ಮೈಸೂರಿನಲ್ಲಿ ಮತ್ತೆ 240 ಉದ್ಯೋಗಿಗಳನ್ನು ವಜಾಗೊಳಿಸಿದ ಇನ್ಫೋಸಿಸ್
ಮೈಸೂರಿನಲ್ಲಿ ಇನ್ಫೋಸಿಸ್ 240 ಆರಂಭಿಕ ಹಂತದ ಉದ್ಯೋಗಿಗಳನ್ನು ವಜಾಗೊಳಿಸಿದೆ. ಆಂತರಿಕ ಮೌಲ್ಯಮಾಪನ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ ಕಾರಣ ನೀಡಿ ಈ ಕ್ರಮ ಕೈಗೊಳ್ಳಲಾಗಿದೆ. ಫೆಬ್ರವರಿಯಲ್ಲಿ 300 ಉದ್ಯೋಗಿಗಳನ್ನು ವಜಾಗೊಳಿಸಿದ ನಂತರ ಇದು ಎರಡನೇ ಬಾರಿ.

ನವದೆಹಲಿ: ಫೆಬ್ರವರಿಯಲ್ಲಿ ತನ್ನ 300 ಮೈಸೂರು ಕ್ಯಾಂಪಸ್ ಉದ್ಯೋಗಿಗಳನ್ನು ಏಕಾಏಕಿ ವಜಾಗೊಳಿಸಿದ್ದ ಹೆಸರಾಂತ ಐಟಿ ಕಂಪನಿಯಾದ ಇನ್ಫೋಸಿಸ್ ಇದೀಗ ಮತ್ತೆ ಮೈಸೂರಿನಲ್ಲಿನ 240 ಆರಂಭಿಕ ಹಂತದ ಉದ್ಯೋಗಿಗಳನ್ನು, ಆಂತರಿಕ ಮೌಲ್ಯಮಾಪನ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ ಕಾರಣ ನೀಡಿ ವಜಾಗೊಳಿಸಿದೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ.
ಈ ಬಗ್ಗೆ ಟ್ರೈನಿಗಳಿಗೆ ಕಳಿಸಲಾದ ಇ-ಮೇಲ್‌ನಲ್ಲಿ, ಒಂದು ತಿಂಗಳ ಸಂಬಳ ಪಾವತಿ, ಬೇರೆಲ್ಲಾದರೂ ಉದ್ಯೋಗಾವಕಾಶಗಳನ್ನು ಅರಸಲು ಸಹಾಯವಾಗುವಂತೆ ಎನ್‌ಐಐಟಿ ಮತ್ತು ಅಪ್‌ಗ್ರೇಡ್ ಜತೆಗೂಡಿ ತರಬೇತಿ ನೀಡಲಾಗುವುದು. 1 ತಿಂಗಳು ಮೈಸೂರಿನ ತರಬೇತಿ ಕೇಂದ್ರದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗುವುದು ಹಾಗೂ ಬೆಂಗಳೂರು ಅಥವಾ ಹುಟ್ಟೂರಿಗೆ ಮರಳಲು ಭತ್ಯೆಗಳಂತಹ ಸೌಲಭ್ಯಗಳನ್ನು ಕಂಪನಿಯ ವತಿಯಿಂದ ಒದಗಿಸಲಾಗುವುದು ಎಂದು ಭರವಸೆ ನೀಡಿಲಾಗಿದೆ.
ಫೆಬ್ರವರಿಯಲ್ಲಿ 300 ನೌಕರರ ವಜಾ
ಫೆಬ್ರವರಿಯಲ್ಲಿ ಮೈಸೂರು ಇನ್ಫೋಸಿಸ್ ಶಾಖೆಯಿಂದ 300 ನೌಕರರನ್ನು ವಜಾ ಮಾಡಲಾಗಿತ್ತು. ಏಕಾಏಕಿ ವಜಾ ಮಾಡಲಾಗಿದೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ್ದ ಕಂಪನಿ, ‘ಯಾರನ್ನೂ ಬಲವಂತದಿಂದ ಹೊರಹಾಕಿಲ್ಲ. ಬದಲಿಗೆ ಅವರನ್ನೆಲ್ಲಾ ನಿಯಮಾನುಸಾರವೇ ವಜಾಗೊಳಿಸಲಾಗಿದೆ’ ಎಂದು ಸ್ಪಷ್ಟನೆ ನೀಡಿತ್ತು. ಇದಲ್ಲದೆ, ಮುಂದಿನ ಆರ್ಥಿಕ ವರ್ಷದಲ್ಲಿ ಕಂಪನಿ 20 ಸಾವಿರ ನೇಮಕಾತಿ ಮಾಡಿಕೊಳ್ಳಲು ಯೋಚಿಸುತ್ತಿದೆ ಎಂದು ಹೇಳಿಕೆ ಬಿಡುಗಡೆ ಮಾಡಿತ್ತು.
ಕೇಂದ್ರ ಕಾರ್ಮಿಕ ಸಚಿವಾಲಯಕ್ಕೆ ಪತ್ರ
ಆಂತರಿಕ ಪರೀಕ್ಷೆಯಲ್ಲಿ ಸತತ 3 ಬಾರಿ ಅನುತ್ತೀರ್ಣರಾದ ಕಾರಣ ನೀಡಿ 300ಕ್ಕೂ ಹೆಚ್ಚು ಹೊಸ ಸಿಬ್ಬಂದಿಯನ್ನು ಇನ್ಫೋಸಿಸ್ ಇತ್ತೀಚೆಗೆ ತೆಗೆದು ಹಾಕಿದೆ. ಐಟಿ ಉದ್ಯೋಗಿಗಳ ಸಂಘಟನೆಗಳು, ಕೆಲಸದಿಂದ ತೆಗೆದುಹಾಕಿದವರ ಸಂಖ್ಯೆ 700ಕ್ಕಿಂತ ಹೆಚ್ಚಿದೆ ಎಂದು ವಾದಿಸಿತ್ತು. ಜೊತೆಗೆ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೇಂದ್ರ ಕಾರ್ಮಿಕ ಸಚಿವಾಲಯಕ್ಕೆ ಪತ್ರ ಬರೆದು ಮನವಿ ಮಾಡಿತ್ತು.
Infosys
ಈ ಬಗ್ಗೆ ಪಿಟಿಐ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಇನ್ಫೋಸಿಸ್‌ನ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಶಾಜಿ ಮ್ಯಾಥ್ಯೂ, ‘ಕಂಪನಿಯು ಅಭ್ಯರ್ಥಿಗಳ ಮೇಲೆ ಹೂಡಿಕೆ ಮಾಡಿ ಅವರಿಗೆ ತರಬೇತಿ ನೀಡುತ್ತದೆ. ಜೊತೆಗೆ ಸಂಬಳವನ್ನೂ ಕೊಡುತ್ತದೆ. ಅಂತಹವರನ್ನು ಕೆಲಸದಿಂದ ತೆಗೆಯುವುದರಿಂದ ನಮಗೂ ಲಾಭವಿಲ್ಲ’ ಎಂದು ಹೇಳಿದ್ದರು.