80C ಹೊರತಾಗಿಯೂ ಟ್ಯಾಕ್ಸ್ ಸೇವ್ ಮಾಡಬಹುದು; ಇಲ್ಲಿವೆ ನೋಡಿ ಉತ್ತಮವಾದ ರಹಸ್ಯ ಮಾರ್ಗಗಳು
How To Save Tax: ಹಣಕಾಸು ವರ್ಷದ ಕೊನೆಯಲ್ಲಿ ತೆರಿಗೆ ಉಳಿತಾಯ ಮಾಡಲು ಬಯಸುವವರಿಗೆ ಹಲವು ಆಯ್ಕೆಗಳಿವೆ. 80ಸಿ ಡಿಡಕ್ಷನ್ ಹೊರತಾಗಿಯೂ ಈ ವಿಧಾನಗಲ್ಲಿ ತೆರಿಗೆ ಪಾವತಿಸೋದನ್ನು ಉಳಿಸಬಹುದ.

ಹಣಕಾಸು ವರ್ಷ ಮುಗಿಯಲು ಇನ್ನು ಕೆಲವೇ ದಿನಗಳು ಬಾಕಿ ಇವೆ. ಕೊನೆಯ ಕ್ಷಣದಲ್ಲಿ ತೆರಿಗೆ ಉಳಿತಾಯ ಕ್ರಮಗಳನ್ನು ಅನುಸರಿಸುವವರು ತೆರಿಗೆ ಉಳಿತಾಯ ಮಾಡಲು ಪರಿಗಣಿಸಬಹುದಾದ ಕೆಲವು ಆಯ್ಕೆಗಳನ್ನು ಇಲ್ಲಿ ನೀಡಲಾಗಿದೆ.
ಸಾಮಾನ್ಯವಾಗಿ ಕೊನೆಯ ಕ್ಷಣದಲ್ಲಿ ಆದಾಯ ತೆರಿಗೆ ಉಳಿಸಲು ಬಯಸುವವರು 80ಸಿ ಡಿಡಕ್ಷನ್ ಆಯ್ಕೆಯನ್ನು ಬಳಸಿಕೊಳ್ಳುತ್ತಾರೆ. ಇದರ ಹೊರತಾಗಿಯೂ ಹಲವು ಆಯ್ಕೆಗಳಿವೆ. ಈ ಎಲ್ಲಾ ಯೋಜನೆಗಳಲ್ಲಿ ಹೂಡಿಕೆ ಮಾಡುವವರು ಮಾರ್ಚ್ 31ರ ಒಳಗೆ ಪಾವತಿ ಮಾಡಬೇಕಿರುವುದು ಅವಶ್ಯ ಎಂಬುದನ್ನು ನೆನಪಿಟ್ಟುಕೊಳ್ಳಿ.
ಇಎಲ್‌ಎಸ್‌ಎಸ್ ಫಂಡ್‌ಗಳಲ್ಲಿ ಹೂಡಿಕೆ
ಈಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್‌ಗಳಲ್ಲಿ ನೀವು ಮಾಡುವ ಹೂಡಿಕೆಯಿಂದ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ಉಳಿತಾಯ ಮಾಡಬಹುದಾಗಿದೆ. ಇಲ್ಲಿ ನೀವು ಮಾಡುವ 1.5 ಲಕ್ಷದವರೆಗಿನ ಹೂಡಿಕೆಗಳು ಡಿಡಕ್ಷನ್‌ಗೆ ಅರ್ಹವಾಗಿರುತ್ತವೆ.
ಸೆಕ್ಷನ್ 80ಸಿ ಪ್ರಯೋಜನಗಳು
ಆದಾಯ ತೆರಿಗೆಯ ಸೆಕ್ಷನ್ 80ಸಿಯಲ್ಲಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್, ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್, ತೆರಿಗೆ ಉಳಿತಾಯದ ಫಿಕ್ಸ್‌ಡ್ ಡಿಪಾಸಿಟ್‌ಗಳು, ಜೀವ ವಿಮಾ ಪ್ರೀಮಿಯಂಗಳು, ಸುಕನ್ಯಾ ಸಮೃದ್ಧಿ ಯೋಜನೆ ಮುಂತಾದ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡುವುದರಿಂದ ತೆರಿಗೆ ಉಳಿತಾಯ ಮಾಡಬಹುದು.
ಹೆಲ್ತ್ ಇನ್ಶೂರೆನ್ಸ್
ಆದಾಯ ತೆರಿಗೆಯ ಸೆಕ್ಷನ್ ಡಿ ಅಡಿಯಲ್ಲಿ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂಗಳ ಮೇಲೆ ತೆರಿಗೆ ಉಳಿತಾಯ ಮಾಡಬಹುದು. ಸ್ವಂತಕ್ಕೆ, ಸಂಗಾತಿ ಮತ್ತು ಮಕ್ಕಳ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಪಾವತಿಯಿಂದ ರೂ.25000ವರೆಗೆ, 60 ವರ್ಷದೊಳಗಿನ ಪೋಷಕರಿಗೆ ಹೆಚ್ಚುವರಿ ರೂ.25,000 ಮತ್ತು ಪೋಷಕರು ಹಿರಿಯ ನಾಗರಿಕರಾಗಿದ್ದರೆ ರೂ. 50,000 ವರೆಗಿನ ಡಿಡಕ್ಷನ್ ಪ್ರಯೋಜನಗಳನ್ನು ಪಡೆಯಬಹುದು. ಆದರೆ ಪ್ರೀಮಿಯಂಗಳನ್ನು ಮಾರ್ಚ್ 31ರ ಮೊದಲು ಪಾವತಿಸಿರಬೇಕು.
ಎನ್‌ಪಿಎಸ್‌ನಲ್ಲಿ ಹೂಡಿಕೆ
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ ಹೂಡಿಕೆ ಮಾಡುವುದರಿಂದಲೂ ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ಪ್ರಯೋಜನ ಪಡೆಯಬಹುದು. ಸೆಕ್ಷನ್ 80ಸಿಸಿಡಿ (1ಬಿ) ಅಡಿಯಲ್ಲಿ ರೂ.50,000ದಷ್ಟು ಹೆಚ್ಚುವರಿ ಕಡಿತ ಲಭ್ಯವಿದೆ. ಒಂದು ವೇಳೆ ಉದ್ಯೋಗದಾತರು ಎನ್‌ಪಿಎಸ್‌ಗೆ ಪಾವತಿ ಮಾಡುತ್ತಿದ್ದರೆ ಸೆಕ್ಷನ್ 80ಸಿಸಿಡಿ(2) ಅಡಿಯಲ್ಲಿಯೂ ತೆರಿಗೆ ಲಾಭ ಹೊಂದಬಹುದು.
ಹೋಮ್ ಲೋನ್ ಡಿಡಕ್ಷನ್
ನೀವು ಗೃಹ ಸಾಲ ಪಡೆದಿದ್ದರೆ ನಿಮ್ಮ ಅಸಲು ಮರುಪಾವತಿಯ ಮೇಲೆ ಸೆಕ್ಷನ್ 80ಸಿ ಅಡಿಯಲ್ಲಿ ರೂ. 1.5 ಲಕ್ಷದವರೆಗೆ ಡಿಡಕ್ಷನ್ ಪಡೆಯಬಹುದು. ಸೆಕ್ಷನ್ 24(ಬಿ) ಅಡಿಯಲ್ಲಿ ಬಡ್ಡಿ ಪಾವತಿಯ ಮೇಲೆ ಡಿಡಕ್ಷನ್ ಲಾಭ ಗಳಿಸಬಹುದು. ಮೊದಲ ಬಾರಿಯ ಖರೀದಿದಾರರು ಸೆಕ್ಷನ್ 80ಇಇ ಅಡಿಯಲ್ಲಿ ಹೆಚ್ಚುವರಿ ರೂ.50,000 ಡಿಡಕ್ಷನ್ ಹೊಂದಬಹುದು.
ಹೆಚ್‌ಆರ್‌ಎ ಅಥವಾ ಬಾಡಿಗೆ ಕಡಿತಗಳು
ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ಅದಕ್ಕಾಗಿ ಹೋಮ್ ರೆಂಟ್ ಅಲೋಯನ್ಸ್ (ಹೆಚ್‌ಆರ್‌ಎ) ಪಡೆಯುತ್ತಿದ್ದರೆ ಸೆಕ್ಷನ್ 10 (13ಎ) ಅಡಿಯಲ್ಲಿ ಡಿಡಕ್ಷನ್ ಲಾಭ ಪಡೆಯಬಹುದು. ಎಚ್‌ಆರ್‌ಎ ಪಡೆಯದಿದ್ದರೂ ಬಾಡಿಗೆ ಪಾವತಿಸುತ್ತಿದ್ದರೆ ಸೆಕ್ಷನ್ 80ಜಿಜಿ ಅಡಿಯಲ್ಲಿ ವರ್ಷಕ್ಕೆ ರೂ.60,000ವರೆಗಿನ ಡಿಡಕ್ಷನ್ ಪಡೆಯಬಹುದಾಗಿದೆ.
ಇವೆಲ್ಲದರ ಹೊರತಾಗಿ ನೀವು ನೀಡುವ ದಾನದ ಮೇಲೂ ತೆರಿಗೆ ರಿಯಾಯಿತಿ ಪಡೆಯಬಹುದು. ಆದರೆ ಆ ಪಾವತಿಗಳನ್ನು ಬ್ಯಾಂಕಿಂಗ್ ಮೂಲಕವೇ ಮಾಡಿರಬೇಕು ಮತ್ತು ರಸೀದಿ ಪಡೆದಿರಬೇಕು. ಈ ವಿಚಾರಗಳನ್ನು ಮಾಹಿತಿಗಾಗಿ ನೀಡಲಾಗಿದೆ. ಈ ಕುರಿತು ಆಸಕ್ತಿ ಹೊಂದಿರುವವರು ಸೂಕ್ತ ಮಾರ್ಗದರ್ಶನ ಪಡೆದು ಮುಂದುವರಿಯಬಹುದು.