ಚಿನ್ನದ ದರ ಮೇಲೆ ಕದನ ವಿರಾಮದ ಪರಿಣಾಮ, ಭಾರಿ ಇಳಿಕೆಯಾದ ಬಂಗಾರ ಬೆಲೆ
ಇರಾನ್ ಹಾಗೂ ಇಸ್ರೇಲ್ ನಡುವಿನ ಯುದ್ಧ ಅಂತ್ಯಗೊಂಡು ಕದನ ವಿರಾಮ ಘೋಷಣೆಯಾಗಿದೆ. ಇದು ತೈಲ, ಚಿನ್ನ ಸೇರಿದಂತೆ ಹಲವು ಮಾರುಕಟ್ಟೆಗೆ ಸಹಕಾರಿಯಾಗಿದೆ. ಕಳೆದ 24 ಗಂಟೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆದ ಮಹತ್ವದ ಬೆಳವಣಿಗೆಯಿಂದ ಚಿನ್ನದ ಬೆಲೆಯಲ್ಲಿ ಭಾರಿ ಬದಲಾವಣೆಯಾಗಿದೆ.

ಕಳೆದ ಕೆಲ ದಿನಗಳಿಂದ ಚಿನ್ನದ ದರ ಏರಿಕೆ ಹಾಗೂ ಇಳಿಕೆಯಾಗಿದೆ. ಪ್ರಮುಖವಾಗಿ ಇರಾನ್ ಹಾಗೂ ಇಸ್ರೇಲ್ ನಡುವಿನ ಯುದ್ಧ ತೀವ್ರಗೊಳ್ಳುತ್ತಿದ್ದಂತೆ ಚಿನ್ನದ ಮಾರುಕಟ್ಟೆ ಆತಂಕದ ಪರಿಸ್ಥಿತಿ ಎದುರಿಸಿತ್ತು. 1 ಲಕ್ಷ ರೂಪಾಯಿ ಗಡಿ ದಾಟಿದ್ದ ಚಿನ್ನದ ಬೆಲೆ ಮೇಲೆ ದಿಢೀರ್ ಘೋಷಣೆಯಾದ ಇರಾನ್ ಇಸ್ರೇಲ್ ಕದನ ವಿರಾಮ ಪರಿಣಾಮ ಬೀರಿದೆ. ಕಳೆದ 24 ಗಂಟೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆದ ಮಹತ್ವದ ಬದಲಾವಣೆಯಿಂದ ಸದ್ಯ ಭಾರತದಲ್ಲಿ ಚಿನ್ನದ ದರ ಎಷ್ಟಾಗಿದೆ?
ಇರಾನ್ ಹಾಗೂ ಇಸ್ರೇಲ್ ನಡುವೆ ಕದನ ವಿರಾಮ ಒಪ್ಪಂದ ಆಗಿದೆ ಎಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಇತ್ತ ಉಭಯ ರಾಷ್ಟ್ರಗಳು ದಾಳಿ ಪ್ರತಿ ದಾಳಿ ನಿಲ್ಲಿಸಿದೆ. ಇದರ ಬೆನ್ನಲ್ಲೇ ಬೆಂಗಳೂರು, ಮುಂಬೈ ಸೇರಿದಂತೆ ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ಬೆಂಗಳೂರಲ್ಲಿ 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 9,987 ರೂಪಾಯಿಗೆ ಇಳಿಕೆಯಾಗಿದೆ. ಈ ಮೂಲಕ ಗ್ರಾಂಗೆ 82 ರೂಪಾಯಿ ಇಳಿಕೆಯಾಗಿದೆ. ಇನ್ನು 22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆಯಲ್ಲಿ 75 ರೂಪಾಯಿ ಇಳಿಕೆ ಕಂಡು 9,155 ರೂಪಾಯಿ ಆಗಿದೆ. ಇನ್ನು 18 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 7,491 ರೂಪಾಯಿ ಆಗಿದೆ. ಈ ಮೂಲಕ 61 ರೂಪಾಯಿ ಇಳಿಕೆಯಾಗಿದೆ.
ಮುಂಬೈನಲ್ಲಿ ಬೆಲೆ ಇಳಿಕೆಯಾಗಿದೆ. ಮುಂಬೈನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 99,870 ರೂಪಾಯಿ ಆಗಿದೆ. ಇನ್ನು 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 91,550 ರೂಪಾಯಿ ಆಗಿದೆ. ಇರಾನ್ ಹಾಗೂ ಇಸ್ರೇಲ್ ಕದನ ವಿರಾಮ ಘೋಷಣೆಯಿಂದ ಇದೀಗ ಚಿನ್ನ, ತೈಲ ಸೇರಿದಂತೆ ಹಲವು ಮಾರುಕಟ್ಟೆ ಬೆಲೆಗಳ ಇಳಿಕೆಯಾಗುವ ಸಾಧ್ಯತೆ ಇದೆ.
ಚಿನ್ನ MCX ಮಾರುಕಟ್ಟೆಯಲ್ಲಿ ಕದನ ವಿರಾಮ ಕೆಲ ಬದಲಾವಣೆಗಳನ್ನು ಮಾಡಿದೆ. ಕದನ ವಿರಾಮದ ಬಳಿಕ ಶೇಕಜಾ 1.23ರಷ್ಟು ಇಳಿಕೆಯಲ್ಲಿ ಟ್ರೇಡ್ ಆರಂಭಿಸಿದೆ. ಈ ತಿಂಗಳ ಆರಂಭದಲ್ಲಿ 1,00,000 ಗಡಿ ಗಾಟಿದ್ದ ಚಿನ್ನ ಇದೀಗ 10 ಗ್ರಾಂಗೆ 98,168 ರೂಪಾಯಿಗೆ ಟ್ರೇಡ್ ಆಗಿದೆ.
ಭಾರತದಲ್ಲಿ ಜೂನ್ ಆರಂಭದಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಸರಾಸರಿ ಬೆಲೆ 1,00,690 ರೂಪಾಯಿ ಆಗಿತ್ತು. ಇನ್ನು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 92,300 ರೂಪಾಯಿ ಆಗಿದ್ದರೆ, 18 ಕ್ಯಾರೆಟ್ ಚಿನ್ನದ ಬೆಲೆ 75,510 ರೂಪಾಯಿ ಆಗಿತ್ತು. ಚಿನ್ನದ ಬೆಲೆಯಲ್ಲಿ ವ್ಯತ್ಯಸಗಳಾಗಿದ್ದರೆ ಬೆಳ್ಳಿ ಬೆಲೆಯಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ. 1ಕೆಜಿ ಬೆಳ್ಳಿ ಬೆಳೆ 1,10,000 ರೂಪಾಯಿ ಆಗಿದೆ.
ಜೂನ್ 13ರಂದು ಇಸ್ರೇಲ್ ನೇರವಾಗಿ ಇರಾನ್ ಮೇಲೆ ದಾಳಿ ಮಾಡಿತ್ತು. ಆದರೆ ಈ ಯುದ್ಧ ಚಿನ್ನದ ಮಾರುಕಟ್ಟೆ ಮೇಲೆ ನೇರ ಪರಿಣಾಮ ಬೀರಲಿಲ್ಲ. ಪ್ರಮುಖವಾಗಿ ಅಮೆರಿಕ ಹಾಗಾ ಚೀನಾ ಮಾರುಕಟ್ಟೆ ಮೇಲೆ ಚಿನ್ನದ ಬೆಲೆ ಹೆಚ್ಚು ಅವಲಂಬಿತವಾಗಿದ್ದ ಕಾರಣ ಬೆಲೆ ಬದಲಾವಣೆ ಗಣನೀಯವಾಗಿರಲಿಲ್ಲ. ಆದರೆ ತೈಲ ಸೇರಿದಂತೆ ಹಲವು ವಸ್ತುಗಳ ಬೆಲೆ ಏರಿಕೆ ಆತಂಕದ ಬೆನ್ನಲ್ಲೇ ಚಿನ್ನದ ಮಾರುಕಟ್ಟೆಯಲ್ಲೂ ಏರಿಕೆ ಶುರುವಾಗಿತ್ತು.