ಲೋಗೋ, ವಿನ್ಯಾಸ ಬದಲಾವಣೆ ನಂತರ ಏರ್ ಇಂಡಿಯಾ ಫ್ಲೈಟ್ ಫಸ್ಟ್ ಲುಕ್ ರಿಲೀಸ್: ಹೊಸ ವಿಮಾನ ಸೂಪರ್ ಎಂದ ನೆಟ್ಟಿಗರು!
ಹೊಸದಾಗಿ ಬಣ್ಣ ಬಳಿದಿರುವ ವಿಮಾನಗಳು ಈ ಚಳಿಗಾಲದಲ್ಲಿ ಭಾರತಕ್ಕೆ ಆಗಮಿಸಲಿವೆ ಎಂದು ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ತಿಳಿಸಿದೆ.
ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ತನ್ನ ಹೊಸ ಎ350 ವಿಮಾನಗಳ ಮೊದಲ ನೋಟವನ್ನು ಹಂಚಿಕೊಂಡಿದೆ. ಹೊಸ ವಿಮಾನಗಳಿಗೆ ಪೇಂಟ್ ಕೆಲಸವೂ ಮುಗಿದಿದ್ದು, ಹೊಸದಾಗಿ ಬಣ್ಣ ಬಳಿದಿರುವ ವಿಮಾನಗಳು ಈ ಚಳಿಗಾಲದಲ್ಲಿ ಭಾರತಕ್ಕೆ ಆಗಮಿಸಲಿವೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಏರ್‌ಲೈನ್ಸ್ ಈ ವರ್ಷದ ಆರಂಭದಲ್ಲಿ ಹೊಸ ಕೆಂಪು - ಔಬರ್‌ಗೀನ್ - ಚಿನ್ನದ ನೋಟ ಮತ್ತು ಹೊಸ ಲೋಗೋ 'ದಿ ವಿಸ್ಟಾ' ನೊಂದಿಗೆ ಮರುಬ್ರ್ಯಾಂಡ್ ಮಾಡಿಕೊಂಡಿತ್ತು. ಇತ್ತೀಚಿನ A350 ಚಿತ್ರಗಳನ್ನು ಫ್ರಾನ್ಸ್‌ನ ಟೌಲೌಸ್‌ನಲ್ಲಿನ ಕಾರ್ಯಾಗಾರದಲ್ಲಿ ಕ್ಲಿಕ್ ಮಾಡಲಾಗಿದೆ.
"ಟೌಲೌಸ್‌ನಲ್ಲಿರುವ ಪೇಂಟ್ ಶಾಪ್‌ನಲ್ಲಿ ನಮ್ಮ ಹೊಸ ಲೈವರಿಯಲ್ಲಿ A350ಯ ಮೊದಲ ನೋಟ ಇಲ್ಲಿದೆ. ನಮ್ಮ A350 ಗಳು ಈ ಚಳಿಗಾಲದಲ್ಲಿ ಮನೆಗೆ ಬರಲು ಪ್ರಾರಂಭಿಸುತ್ತವೆ" ಎಂದು ಏರ್ ಇಂಡಿಯಾ X ನಲ್ಲಿ (ಈ ಹಿಂದಿನ ಟ್ವಿಟ್ಟರ್) ಪೋಸ್ಟ್ ಮಾಡಿದೆ.
ತನ್ನ ಎಲ್ಲ ವಿಮಾನಗಳಿಗೆ ಹೊಸ ಲುಕ್ ನೀಡಲು ಏರ್ ಇಂಡಿಯಾ 400 ಮಿಲಿಯನ್ ಡಾಲರ್ ಖರ್ಚು ಮಾಡುತ್ತಿದೆ. ತನ್ನ ಹೊಸ ಲೋಗೋ, ದಿ ವಿಸ್ಟಾ, ಗೋಲ್ಡನ್ ವಿಂಡೋ ಫ್ರೇಮ್ ಶಿಖರದಿಂದ ಪ್ರೇರಿತವಾಗಿದೆ ಎಂದು ಈ ಹಿಂದೆ ಹೇಳಿತ್ತು.
ವಿಮಾನಯಾನ ಸಂಸ್ಥೆಯು ಪರಂಪರೆಯ ಸ್ಪರ್ಶದಿಂದ ತನ್ನನ್ನು ತಾನು ಸಂಪೂರ್ಣವಾಗಿ ಪರಿವರ್ತಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದೂ ಏರ್ ಇಂಡಿಯಾ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ. ಹೊಸ ಲೈವರಿ ಮತ್ತು ವಿನ್ಯಾಸವು ಗಾಢ ಕೆಂಪು, ಔಬರ್‌ಗೀನ್ ಮತ್ತು ಗೋಲ್ಟ್ ಹೈಲೈಟ್‌ನ ಪ್ಯಾಲೆಟ್ ಮತ್ತು ಚಕ್ರ-ಪ್ರೇರಿತ ಪ್ಯಾಟರ್ನ್ ಒಳಗೊಂಡಿದೆ.
"ನಮ್ಮ ಪರಿವರ್ತಕ ಹೊಸ ಬ್ರ್ಯಾಂಡ್ ಏರ್ ಇಂಡಿಯಾವನ್ನು ಜಗತ್ತಿನಾದ್ಯಂತ ಅತಿಥಿಗಳಿಗೆ ಸೇವೆ ಸಲ್ಲಿಸುವ ವಿಶ್ವ ದರ್ಜೆಯ ವಿಮಾನಯಾನ ಮಾಡುವ ಮಹತ್ವಾಕಾಂಕ್ಷೆಯನ್ನು ಪ್ರತಿಬಿಂಬಿಸುತ್ತದೆ ಮತ್ತು ಇದು ಜಾಗತಿಕ ವೇದಿಕೆಯಲ್ಲಿ ಹೆಮ್ಮೆಯಿಂದ ಹೊಸ ಭಾರತವನ್ನು ಪ್ರತಿನಿಧಿಸುತ್ತದೆ" ಎಂದು ಏರ್ ಇಂಡಿಯಾ ಸಿಇಒ ಕ್ಯಾಂಪ್‌ಬೆಲ್ ವಿಲ್ಸನ್ ಈ ಹಿಂದೆ ಹೇಳಿದ್ದರು.
2025 ರ ವೇಳೆಗೆ ಎಲ್ಲಾ ಏರ್ ಇಂಡಿಯಾ ವಿಮಾನಗಳು ಹೊಸ ಲೋಗೋವನ್ನು ಹೊಂದಿರುತ್ತವೆ ಎಂದು ಅವರು ಹೇಳಿದರು. ಏರ್ ಇಂಡಿಯಾ ಏರ್‌ಬಸ್ ಮತ್ತು ಬೋಯಿಂಗ್‌ನೊಂದಿಗೆ ಹಲವು ಬಿಲಿಯನ್ ಡಾಲರ್ ವಿಮಾನ ಒಪ್ಪಂದಗಳಿಗೆ ಸಹಿ ಹಾಕಿದ ತಿಂಗಳುಗಳ ನಂತರ ಆಗಸ್ಟ್‌ನಲ್ಲಿ ಹೊಸ ಲೋಗೋ ಘೋಷಿಸಲಾಯಿತು.