ಎಲ್ಲಾ BSNLಗಾಗಿ, ಇದೇ ಮೊದಲ ಬಾರಿಗೆ ದೂರಸಂಪರ್ಕ ಇಲಾಖೆಯಿಂದ ಇಂತಹ ಸೂಚನೆ! ಜಿಯೋಗೆ ಬಿಗ್ ಶಾಕ್
ದೂರಸಂಪರ್ಕ ಇಲಾಖೆ ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರಗಳಿಗೆ ಸೂಚನೆಯೊಂದನ್ನು ನೀಡಿದೆ. ಈ ಸೂಚನೆ ವಿಷಯ ತಿಳಿದ ಖಾಸಗಿ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ, ಏರ್‌ಟೆಲ್, ವಿಐಗೆ ಶಾಕ್ ಆಗಿದೆ.

ಡೇಟಾ ಸುರಕ್ಷತೆಗಾಗಿ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್‌ಎನ್‌ಎಲ್) ಸೇವೆಗಳನ್ನು ಬಳಸುವಂತೆ ದೂರಸಂಪರ್ಕ ಇಲಾಖೆ (DoT) ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. ಬಿಎಸ್‌ಎನ್‌ಎಲ್ ಜೊತೆಗೆ ಮಹಾನಗರ ಟೆಲಿಫೋನ್ ನಿಗಮ್ ಲಿಮಿಟೆಡ್ (ಎಂಟಿಎನ್‌ಎಲ್) ಸೇವೆಗಳನ್ನು ಬಳಸಲು ರಾಜ್ಯಗಳಿಗೆ ಪತ್ರ ಬರೆದು ಸೂಚಿಸಲಾಗಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.
ಸರ್ಕಾರಿ ದೂರಸಂಪರ್ಕ ಕಂಪನಿಗಳ ಸೇವೆಗಳನ್ನು ಯೋಜನಾ ಆಧಾರದ ಮೇಲೆ ಬಳಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ ಎಂದು ದೂರಸಂಪರ್ಕ ವಲಯದ ಮೂಲಗಳು ತಿಳಿಸಿವೆ. ದೇಶದಲ್ಲಿ ಇಂತಹ ಸೂಚನೆ ನೀಡುತ್ತಿರುವುದು ಇದೇ ಮೊದಲು ಎಂದು ವರದಿಗಳು ಹೇಳಿವೆ. ಈ ಮೂಲಕ ಬಿಎಸ್‌ಎನ್‌ಎಲ್, ಎಂಟಿಎನ್ಎಲ್ ಬಳಕೆಗೆ ಒತ್ತಾಯಿಸಲಾಗುತ್ತಿದೆಯಾ ಎಂಬ ಅನುಮಾನಗಳು ಮೂಡಿವೆ.
ಏಪ್ರಿಲ್‌ನಲ್ಲಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ DoT ಕಾರ್ಯದರ್ಶಿ ನೀರಜ್ ಮಿತ್ತಲ್ ಬರೆದ ಪತ್ರದಲ್ಲಿ ಈ ವಿಷಯ ಉಲ್ಲೇಖಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಬಿಎಸ್‌ಎನ್‌ಎಲ್, ಎಂಟಿಎನ್ಎಲ್ ಮಾತ್ರ ಪರಿಗಣಿಸಿ
ಕೇಂದ್ರ ಸಚಿವ ಸಂಪುಟದ ಹಿಂದಿನ ನಿರ್ಧಾರದ ಹಿನ್ನೆಲೆಯಲ್ಲಿ, ಎಲ್ಲಾ ರಾಜ್ಯ ಸರ್ಕಾರಿ ಇಲಾಖೆಗಳು, ಏಜೆನ್ಸಿಗಳು ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳು ಲ್ಯಾಂಡ್‌ಲೈನ್, ಬ್ರಾಡ್‌ಬ್ಯಾಂಡ್ ಮತ್ತು ಲೀಸ್ಡ್ ಲೈನ್ ಅಗತ್ಯಗಳಿಗಾಗಿ ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್ ಸೇವೆಗಳನ್ನು ಬಳಸುವುದನ್ನು ಪರಿಗಣಿಸಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ ಎಂದು ವರದಿಗಳು ಹೇಳಿವೆ.
ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್‌ಟೆಲ್‌ನಂತಹ ಖಾಸಗಿ ದೂರಸಂಪರ್ಕ ಕಂಪನಿಗಳಿಗಿಂತ ಭಿನ್ನವಾಗಿ, ಬಿಎಸ್‌ಎನ್‌ಎಲ್‌ನ 4ಜಿ ನೆಟ್‌ವರ್ಕ್ ದೇಶಾದ್ಯಂತ ಲಭ್ಯವಿಲ್ಲ ಎಂಬುದು ಗಮನಾರ್ಹ. ಖಾಸಗಿ ಕಂಪನಿಗಳು ದೇಶದ ಹಲವು ಭಾಗಗಳಲ್ಲಿ 5ಜಿ ನೆಟ್‌ವರ್ಕ್ ಹೊಂದಿವೆ.
ಬಿಎಸ್‌ಎನ್ಎಲ್ ಲಾಭ ಹೆಚ್ಚಳ
ಕಳೆದ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಬಿಎಸ್‌ಎನ್‌ಎಲ್ ಸುಮಾರು ₹280 ಕೋಟಿ ನಿವ್ವಳ ಲಾಭ ಗಳಿಸಿದೆ. 18 ವರ್ಷಗಳ ನಂತರ ಸತತ ಎರಡು ತ್ರೈಮಾಸಿಕಗಳಲ್ಲಿ ಬಿಎಸ್‌ಎನ್‌ಎಲ್ ಲಾಭ ಗಳಿಸಿದೆ. 4ಜಿ ಸೇವೆಯು ಕಂಪನಿಯ ಆದಾಯ ಹೆಚ್ಚಿಸಲು ಸಹಾಯ ಮಾಡಿದೆ.
ಕಳೆದ ಹಣಕಾಸು ವರ್ಷದಲ್ಲಿ ಬಿಎಸ್‌ಎನ್‌ಎಲ್ ಸುಮಾರು ₹2,247 ಕೋಟಿ ನಷ್ಟ ಅನುಭವಿಸಿತ್ತು. ಹಿಂದಿನ ಹಣಕಾಸು ವರ್ಷದ (FY24) ₹5,370 ಕೋಟಿ ನಷ್ಟಕ್ಕೆ ಹೋಲಿಸಿದರೆ ಇದು ಶೇ.58ರಷ್ಟು ಕಡಿಮೆ. ಕಳೆದ ಹಣಕಾಸು ವರ್ಷದಲ್ಲಿ ಬಿಎಸ್‌ಎನ್‌ಎಲ್‌ನ ಕಾರ್ಯಾಚರಣೆಯ ಆದಾಯವು ಶೇ.7.8ರಷ್ಟು ಹೆಚ್ಚಾಗಿ ಸುಮಾರು ₹20,841 ಕೋಟಿಗೆ ತಲುಪಿದೆ.