- Home
- Karnataka Districts
- Bengaluru Urban
- ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಒತ್ತುವರಿ: ಗೆರೆ ದಾಟಿ ನೀವು ಬರಂಗಿಲ್ಲ, ಬಂದ್ರೆ ನಾವು ಬಿಡಂಗಿಲ್ಲ-ಆಯುಕ್ತರ ಎಚ್ಚರಿಕೆ
ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಒತ್ತುವರಿ: ಗೆರೆ ದಾಟಿ ನೀವು ಬರಂಗಿಲ್ಲ, ಬಂದ್ರೆ ನಾವು ಬಿಡಂಗಿಲ್ಲ-ಆಯುಕ್ತರ ಎಚ್ಚರಿಕೆ
ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ನಲ್ಲಿ ಸಾರ್ವಜನಿಕರ ಓಡಾಟಕ್ಕೆ ಅಡ್ಡಿಯಾಗುತ್ತಿದ್ದ ಅನಧಿಕೃತ ಒತ್ತುವರಿಯನ್ನು ಬೆಂಗಳೂರು ದಕ್ಷಿಣ ನಗರ ಪಾಲಿಕೆ ತೆರವುಗೊಳಿಸಿದೆ. ಹಳದಿ ಗೆರೆ ದಾಟಿ ವ್ಯಾಪಾರ ಮಾಡುವವರಿಗೆ ದಂಡ ಹಾಗೂ ಸಾಮಗ್ರಿ ಮುಟ್ಟುಗೋಲು ಹಾಕುವುದಾಗಿ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

ನಿಗದಿಪಡಿಸಿದ ಗೆರೆ ದಾಟಿ ನೀವು ಬರುವಂತಿಲ್ಲ
ಬೆಂಗಳೂರು (ನ.23): ಸಾರ್ವಜನಿಕರ ಸುಗಮ ಓಡಾಟಕ್ಕೆ ಅಡ್ಡಿಯಾಗುತ್ತಿದ್ದ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಅನಧಿಕೃತ ಒತ್ತುವರಿ ವಿರುದ್ಧ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಭರ್ಜರಿ ಕಾರ್ಯಾಚರಣೆ ನಡೆಸಿದೆ. ನವೆಂಬರ್ 23ರಂದು ಖುದ್ದು ಸ್ಥಳಕ್ಕೆ ಭೇಟಿ ನೀಡಿದ ಪಾಲಿಕೆ ಆಯುಕ್ತರಾದ ಕೆ.ಎನ್. ರಮೇಶ್ ಅವರು, ನಿಗದಿತ ಸ್ಥಳ ಬಿಟ್ಟು (ಗೆರೆಯನ್ನು ದಾಟಿ) ಮುಂದೆ ಬಂದು ವ್ಯಾಪಾರ ಮಾಡುತ್ತಿದ್ದ ಅಂಗಡಿಗಳನ್ನು ತೆರವುಗೊಳಿಸಿ ವ್ಯಾಪಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
'ಹಳದಿ ಗೆರೆ' (Yellow Line) ದಾಟಿದರೆ ಕಠಿಣ ಕ್ರಮ:
ಶಾಪಿಂಗ್ ಕಾಂಪ್ಲೆಕ್ಸ್ನ ಅಂಗಡಿಗಳ ಮುಂಭಾಗದಲ್ಲಿ ಪಾಲಿಕೆಯಿಂದ ಈಗಾಗಲೇ 'ಹಳದಿ ಗೆರೆ'ಯನ್ನು (Yellow Line) ಗುರುತಿಸಲಾಗಿದೆ. ವ್ಯಾಪಾರಿಗಳು ಯಾವುದೇ ಕಾರಣಕ್ಕೂ ಈ ಹಳದಿ ಗೆರೆಯನ್ನು ದಾಟಿ ಸಾಮಗ್ರಿಗಳನ್ನು ಇರಿಸಬಾರದು ಮತ್ತು ಎಲ್ಲಾ ಕಡೆ ಈ ಗೆರೆ ಸ್ಪಷ್ಟವಾಗಿ ಕಾಣಿಸುವಂತಿರಬೇಕು ಎಂದು ಆಯುಕ್ತರು ಸೂಚಿಸಿದರು. ಅಲ್ಲದೆ, ಪ್ರವೇಶ ದ್ವಾರ (ಗೇಟ್) ಹಾಗೂ ಸಾಮಾನ್ಯ ಕಾರಿಡಾರ್ಗಳಲ್ಲಿ ಗ್ರಾಹಕರ ಓಡಾಟಕ್ಕೆ ತೊಂದರೆಯಾಗದಂತೆ ಅಕ್ರಮವಾಗಿ ಇರಿಸಲಾಗಿದ್ದ ವಸ್ತುಗಳನ್ನು ತಕ್ಷಣವೇ ತೆರವುಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಾಳೆಯಿಂದಲೇ ಕಾಂಪ್ಲೆಕ್ಸ್ನಲ್ಲಿ ಮಾರ್ಷಲ್ಗಳ ಕಾವಲು:
ಒತ್ತುವರಿ ತೆರವುಗೊಳಿಸುವಂತೆ ಕಳೆದ 10 ರಿಂದ 15 ದಿನಗಳಿಂದ ನಿರಂತರವಾಗಿ ಆಟೋ ಪ್ರಚಾರ ಹಾಗೂ ಮೈಕ್ ಘೋಷಣೆಗಳ ಮೂಲಕ ವ್ಯಾಪಾರಿಗಳಲ್ಲಿ ಜಾಗೃತಿ ಮೂಡಿಸಿ ಸಾಕಷ್ಟು ಕಾಲಾವಕಾಶ ನೀಡಲಾಗಿತ್ತು. ಆದರೂ ನಿಯಮ ಉಲ್ಲಂಘನೆ ಮುಂದುವರಿದಿರುವುದನ್ನು ಗಮನಿಸಿದ ಆಯುಕ್ತರು, ನಾಳೆಯಿಂದಲೇ ಕಾಂಪ್ಲೆಕ್ಸ್ ಆವರಣದಲ್ಲಿ ನಿರಂತರ ಕಾವಲಿಗಾಗಿ ಮಾರ್ಷಲ್ಗಳನ್ನು ನಿಯೋಜಿಸುವಂತೆ ಆದೇಶಿಸಿದ್ದಾರೆ.
ರಸ್ತೆಗೆ ಬಂದು ವ್ಯಾಪಾರ ಮಾಡಿದರೆ ದಂಡ ಮತ್ತು ಸಾಮಗ್ರಿ ಮುಟ್ಟುಗೋಲು:
ಪಾಲಿಕೆಯಿಂದ ಅಧಿಕೃತವಾಗಿ ನಿಗದಿಪಡಿಸಿರುವ ಜಾಗವನ್ನು ಬಿಟ್ಟು ಬೇರೆಡೆ ವ್ಯಾಪಾರ ಮಾಡುವವರಿಗೆ ಹಾಗೂ ಕಾಂಪ್ಲೆಕ್ಸ್ ಕಾಂಪೌಂಡ್ನಿಂದ ಆಚೆ ರಸ್ತೆಗೆ ಬಂದು ವ್ಯಾಪಾರ ಮಾಡುವ ಬೀದಿಬದಿ ವ್ಯಾಪಾರಿಗಳಿಗೆ ನಿರ್ದಾಕ್ಷಿಣ್ಯವಾಗಿ ದಂಡ ವಿಧಿಸಬೇಕು ಮತ್ತು ಅವರ ಸಾಮಗ್ರಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಆಯುಕ್ತರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಅನಧಿಕೃತ ಬೋರ್ಡ್ ಹಾಗೂ ಗೋದಾಮುಗಳ ವಿರುದ್ಧವೂ ಕ್ರಮ:
ಕಾಂಪ್ಲೆಕ್ಸ್ ಆವರಣದಲ್ಲಿ ಅಧಿಕೃತವಾಗಿ ಮಳಿಗೆಗಳನ್ನು ಪಡೆಯದೆಯೇ ಅನಧಿಕೃತವಾಗಿ ನಾಮಫಲಕಗಳನ್ನು (ಬೋರ್ಡ್) ಹಾಕಿಕೊಂಡು ವ್ಯಾಪಾರ ನಡೆಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಲಾಯಿತು. ಇದರೊಂದಿಗೆ, ವ್ಯಾಪಾರಕ್ಕಾಗಿ ಪಡೆದ ಮಳಿಗೆಗಳನ್ನು ಕೇವಲ ಗೋದಾಮುಗಳನ್ನಾಗಿ (Godown) ಪರಿವರ್ತಿಸಿಕೊಂಡಿರುವುದನ್ನು ಪರಿಶೀಲಿಸಿ, ಅಂತಹ ಸ್ಥಳಗಳನ್ನು ತಕ್ಷಣವೇ ತೆರವುಗೊಳಿಸಲು ಆಯುಕ್ತರು ನಿರ್ದೇಶನ ನೀಡಿದರು.
ಈ ಕಾರ್ಯಾಚರಣೆಯ ಸಂದರ್ಭದಲ್ಲಿ ಕಾರ್ಯಪಾಲಕ ಅಭಿಯಂತರ (EE) ಹರಿಪ್ರಸಾದ್, ಎಜಿಎಂ (AGM) ಶ್ರೀಮತಿ ಶ್ವೇತಾ, ಮಾರುಕಟ್ಟೆ ವಿಭಾಗದ ಸಹಾಯಕ ಕಂದಾಯ ಅಧಿಕಾರಿ (ARO) ಶ್ರೀಮತಿ ರಾಧಾ ಹಾಗೂ ಮಾರ್ಷಲ್ಗಳು ಉಪಸ್ಥಿತರಿದ್ದರು.















