- Home
- Karnataka Districts
- Bengaluru Urban
- ಬೆಂಗಳೂರಿನಲ್ಲಿ ಟೆಂಡರ್ ರದ್ದಾದ 9 ಫ್ಲೈಓವರ್‌ಗಳ ಪಟ್ಟಿ ಇಲ್ಲಿದೆ! ನಿಮ್ಮ ಏರಿಯಾದಲ್ಲಿ ಯಾವ ಮೇಲ್ಸೇತುವೆ ಬರ್ತಿದೆ?
ಬೆಂಗಳೂರಿನಲ್ಲಿ ಟೆಂಡರ್ ರದ್ದಾದ 9 ಫ್ಲೈಓವರ್‌ಗಳ ಪಟ್ಟಿ ಇಲ್ಲಿದೆ! ನಿಮ್ಮ ಏರಿಯಾದಲ್ಲಿ ಯಾವ ಮೇಲ್ಸೇತುವೆ ಬರ್ತಿದೆ?
ಬೆಂಗಳೂರಿನ 9 ಪ್ರಮುಖ ಮೇಲ್ಸೇತುವೆಗಳ ₹3,060 ಕೋಟಿ ಟೆಂಡರ್ ಅನ್ನು GBA ದಿಢೀರ್ ರದ್ದುಗೊಳಿಸಿದೆ. ಯಾವಾ ಏರಿಯಾದಲ್ಲಿ ಯಾವ ಫ್ಲೈಓವರ್ ರದ್ದಾಗಿದೆ, ರದ್ದಾದ ಫ್ಲೈಓವರ್‌ಗಳ ಪಟ್ಟಿ ಮತ್ತು ರದ್ದಾಗಲಿ ಅಸಲಿ ಕಾರಣ ತಿಳಿಯಲು ಈ ಲೇಖನ ಓದಿ.

9 ಪ್ರಮುಖ ಮೇಲ್ಸೇತುವೆ
ಬೆಂಗಳೂರಿನ ನರಕಸದೃಶ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ನೀಡಲು ಉದ್ದೇಶಿಸಿದ್ದ ಮಹತ್ವಾಕಾಂಕ್ಷಿ ಮೇಲ್ಸೇತುವೆ (Flyover) ಯೋಜನೆಗಳಿಗೆ ಆರಂಭದಲ್ಲೇ ಭಾರೀ ಹೊಡೆತ ಬಿದ್ದಿದೆ. ಬೆಂಗಳೂರು ಸ್ಮಾರ್ಟ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಬಿ-ಸ್ಮೈಲ್) ಆಹ್ವಾನಿಸಿದ್ದ ಸುಮಾರು ₹3,060.57 ಕೋಟಿ ಮೊತ್ತದ 9 ಪ್ರಮುಖ ಮೇಲ್ಸೇತುವೆಗಳ ಟೆಂಡರ್ ಪ್ರಕ್ರಿಯೆಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ನೇತೃತ್ವದ ಉನ್ನತ ಮಟ್ಟದ ಉಪ ಸಮಿತಿ ದಿಢೀರ್ ರದ್ದುಗೊಳಿಸಿದೆ. ರದ್ದಾದ ಫ್ಲೈಓವರ್‌ಗಳ ಪಟ್ಟಿ ಇಲ್ಲಿದೆ ನೋಡಿ.
ಟೆಂಡರ್ ರದ್ದಾದ 9 ಪ್ರಮುಖ ಮೇಲ್ಸೇತುವೆಗಳು ಯಾವುವು?
- ಸಿರ್ಸಿ ವೃತ್ತದಿಂದ ನಾಯಂಡಹಳ್ಳಿ: ಮೈಸೂರು ರಸ್ತೆ ಮೂಲಕ ಹಾದುಹೋಗುವ ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆಯ ಎಲಿವೇಟೆಡ್ ಲೂಪ್.
- ವೆಸ್ಟ್ ಆಫ್ ಕಾರ್ಡ್ ರಸ್ತೆ - ಮಹಾಲಕ್ಷ್ಮಿ ಲೇಔಟ್: ಪೈಪ್‌ಲೈನ್ ರಸ್ತೆ ಮೂಲಕ ಹೊರ ವರ್ತುಲ ರಸ್ತೆ ಸಂಪರ್ಕಿಸುವ ಕಾರಿಡಾರ್.
- ಕನಕಪುರ ರಸ್ತೆ: ಅಡ್ಯಾರ್ ಆನಂದ ಭವನ್ (A2B) ಸಮೀಪದಿಂದ ರಘುವನಹಳ್ಳಿ ಕ್ರಾಸ್ ವರೆಗಿನ ಮೇಲ್ಸೇತುವೆ.
- ಮಿನರ್ವ ವೃತ್ತದಿಂದ ಹಡ್ಸನ್ ವೃತ್ತ: ಮಧ್ಯಭಾಗದ ವಾಹನ ದಟ್ಟಣೆ ನಿಯಂತ್ರಿಸುವ ಎಲಿವೇಟೆಡ್ ಕಾರಿಡಾರ್.
- ಸಂಗೊಳ್ಳಿ ರಾಯಣ್ಣ ವೃತ್ತದಿಂದ ಕೆ.ಆರ್. ವೃತ್ತ: ಆನಂದರಾವ್ ಮೇಲ್ಸೇತುವೆಯಿಂದ ನೃಪತುಂಗ ರಸ್ತೆವರೆಗಿನ ಎಲಿವೇಟೆಡ್ ರಸ್ತೆ.
- ಹಳೆ ಮದ್ರಾಸ್ ರಸ್ತೆ - ಎಲೆಕ್ಟ್ರಾನಿಕ್ ಸಿಟಿ: ಹಳೆ ಮದ್ರಾಸ್ ರಸ್ತೆಯಿಂದ ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ ಸಂಪರ್ಕಿಸುವ ಕಾರಿಡಾರ್.
- ದೊಡ್ಡಬಳ್ಳಾಪುರ ರಸ್ತೆ: ಯಲಹಂಕ ಮೂಲಕ ಕೋಗಿಲು ವೃತ್ತದವರೆಗಿನ ಮೇಲ್ಸೇತುವೆ.
- ಹೊಸೂರು ರಸ್ತೆ: ಶೋಲೆ ವೃತ್ತದಿಂದ (ಶೂಲೇ ಸರ್ಕಲ್) ಸೇಂಟ್ ಜಾನ್ ಆಸ್ಪತ್ರೆ ರಸ್ತೆವರೆಗೆ.
- ಕನಕಪುರ ರಸ್ತೆ: ಕೋಣನಕುಂಟೆ ಕ್ರಾಸ್ ಮೇಲ್ಸೇತುವೆ.
ಯೋಜನೆಯ ಹಿನ್ನೆಲೆ ಏನು?
ನಗರದ ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಒಟ್ಟು 75.60 ಕಿಲೋಮೀಟರ್ ಉದ್ದದ 11 ಎಲಿವೇಟೆಡ್ ಕಾರಿಡಾರ್‌ಗಳನ್ನು ನಿರ್ಮಿಸಲು ₹13,262.70 ಕೋಟಿಗಳ ಯೋಜನೆಗೆ ಸಚಿವ ಸಂಪುಟವು ಅನುಮೋದನೆ ನೀಡಿತ್ತು. ಇದರ ಭಾಗವಾಗಿ ಬಿ-ಸ್ಟೈಲ್ ಸಂಸ್ಥೆಯು ₹3,060.57 ಕೋಟಿ ಅಂದಾಜು ವೆಚ್ಚದಲ್ಲಿ 9 ಮೇಲ್ಸೇತುವೆಗಳ ನಿರ್ಮಾಣಕ್ಕೆ ಟೆಂಡರ್ ಆಹ್ವಾನಿಸಿತ್ತು. ಆದರೆ, ಅಗತ್ಯ ತಾಂತ್ರಿಕ ಹಾಗೂ ಆರ್ಥಿಕ ಅರ್ಹತೆ ಇಲ್ಲದ ಬಿಡ್‌ದಾರರಿಗೆ ನಿಯಮಬಾಹಿರವಾಗಿ ಗುತ್ತಿಗೆ ವಹಿಸಲು ತೆರೆಮರೆಯಲ್ಲಿ ಸಿದ್ಧತೆ ನಡೆದಿತ್ತು ಎಂಬ ಗಂಭೀರ ಆಕ್ಷೇಪಗಳು ವ್ಯಕ್ತವಾಗಿದ್ದವು.
ಉನ್ನತ ಸಮಿತಿಯಿಂದ ತನಿಖೆ, ಮರು ಟೆಂಡರ್‌ಗೆ ಸೂಚನೆ:
ಟೆಂಡರ್ ಪ್ರಕ್ರಿಯೆಯಲ್ಲಾದ ಲೋಪಗಳ ಬಗ್ಗೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅಧ್ಯಕ್ಷತೆಯಲ್ಲಿ ತನಿಖೆ ನಡೆಸಲಾಯಿತು. ಸಭೆಯಲ್ಲಿ ಹಣಕಾಸು ಇಲಾಖೆ ಕಾರ್ಯದರ್ಶಿ ಅಭಿರಾಮ್ ಜಿ. ಶಂಕರ, ಜಿಬಿಎ ಆರ್ಥಿಕ ವಿಭಾಗದ ವಿಶೇಷ ಆಯುಕ್ತ ಕೆ. ನಿತೇಶ್ ಹಾಗೂ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಕೆ. ರಾಜೇಶ್ ಅವರನ್ನೊಳಗೊಂಡ ಉಪ ಸಮಿತಿಯು ಷರತ್ತು ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಿ, ಇಡೀ ಪ್ರಕ್ರಿಯೆಯನ್ನು ರದ್ದುಪಡಿಸಿದೆ. ಯಾವುದೇ ಲೋಪವಿಲ್ಲದೆ ಪಾರದರ್ಶಕವಾಗಿ ಹೊಸ ಟೆಂಡರ್ ಕರೆಯಲು ಸೂಚಿಸಲಾಗಿದ್ದು, ಈ ವಿಳಂಬದಿಂದಾಗಿ ನಗರದ ವಾಹನ ಸವಾರರು ಟ್ರಾಫಿಕ್ ಕಿರಿಕಿರಿಯಿಂದ ಮುಕ್ತಿ ಪಡೆಯಲು ಇನ್ನಷ್ಟು ತಿಂಗಳು ಕಾಯುವುದು ಅನಿವಾರ್ಯವಾಗಿದೆ.

