ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಪರಿಹಾರವಾಗಿ ಜಿಬಿಎ ಕೈಗೆತ್ತಿಕೊಂಡಿದ್ದ ₹3,000 ಕೋಟಿ ವೆಚ್ಚದ 9 ಮೇಲ್ಸೇತುವೆಗಳ ಟೆಂಡರ್ ಪ್ರಕ್ರಿಯೆ ರದ್ದಾಗಿದೆ. ಟೆಂಡರ್ ನಿಯಮ ಉಲ್ಲಂಘನೆ ಹಾಗೂ ಲೋಪಗಳು ಕಂಡುಬಂದ ಹಿನ್ನೆಲೆಯಲ್ಲಿ ಉನ್ನತ ಮಟ್ಟದ ಉಪ ಸಮಿತಿಯು ಈ ನಿರ್ಧಾರ ಕೈಗೊಂಡಿದೆ.

ಬೆಂಗಳೂರು (ಅ.07: ಸಿಲಿಕಾನ್ ಸಿಟಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಕೈಗೆತ್ತಿಕೊಂಡಿದ್ದ ಮಹತ್ವಾಕಾಂಕ್ಷಿ ಮೇಲ್ಸೇತುವೆ (Flyovers) ಯೋಜನೆಗಳಿಗೆ ಆರಂಭದಲ್ಲೇ ಭಾರೀ ಹಿನ್ನಡೆಯಾಗಿದೆ. ಸುಮಾರು ₹3,000 ಕೋಟಿಗೂ ಅಧಿಕ ವೆಚ್ಚದ 9 ಮೇಲ್ಸೇತುವೆಗಳ ನಿರ್ಮಾಣ ಟೆಂಡರ್ ಪ್ರಕ್ರಿಯೆಯಲ್ಲಿ ಗಂಭೀರ ನಿಯಮ ಉಲ್ಲಂಘನೆ ಹಾಗೂ ಲೋಪಗಳು ಕಂಡುಬಂದ ಹಿನ್ನೆಲೆಯಲ್ಲಿ ಉನ್ನತ ಮಟ್ಟದ ಉಪ ಸಮಿತಿಯು ಇಡೀ ಟೆಂಡರ್ ಪ್ರಕ್ರಿಯೆಯನ್ನೇ ರದ್ದುಗೊಳಿಸಿದೆ.

ನಗರದ ಸಂಚಾರ ದಟ್ಟಣೆ ನಿಯಂತ್ರಿಸಲು ಬೆಂಗಳೂರು ಸ್ಮಾರ್ಟ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಬಿ-ಸ್ಮೈಲ್ / B-SMILE) ವತಿಯಿಂದ ಒಟ್ಟು 75.60 ಕಿ.ಮೀ. ಉದ್ದದ 11 ಎಲಿವೇಟೆಡ್ ಕಾರಿಡಾರ್‌ಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು. ₹13,262.70 ಕೋಟಿ ಮೊತ್ತದ ಈ ಬೃಹತ್ ಆಡಳಿತಾತ್ಮಕ ಯೋಜನೆಗೆ ಸಂಪುಟ ಸಭೆಯು ಅನುಮೋದನೆ ನೀಡಿತ್ತು. ಇದರ ಮೊದಲ ಭಾಗವಾಗಿ, ₹3,060.57 ಕೋಟಿ ವೆಚ್ಚದಲ್ಲಿ 9 ಮೇಲ್ಸೇತುವೆಗಳನ್ನು ನಿರ್ಮಿಸಲು ಕಳೆದ ಜೂನ್‌ನಲ್ಲಿ ಟೆಂಡರ್ ಕರೆಯಲಾಗಿತ್ತು.

ಟೆಂಡರ್ ನಿಯಮ ಉಲ್ಲಂಘನೆ

ಆದರೆ, ಟೆಂಡರ್‌ನ ಕಡ್ಡಾಯ ಷರತ್ತುಗಳನ್ನು ಗಾಳಿಗೆ ತೂರಿ, ಅಗತ್ಯ ತಾಂತ್ರಿಕ ಹಾಗೂ ಆರ್ಥಿಕ ಅರ್ಹತೆ ಇಲ್ಲದ ಬಿಡ್‌ದಾರರಿಗೆ ಗುತ್ತಿಗೆ ವಹಿಸಲು ತೆರೆಮರೆಯ ಕಸರತ್ತು ನಡೆದಿತ್ತು. ಈ ಅವ್ಯವಹಾರವು ಅಂತಿಮ ಹಂತದಲ್ಲಿದ್ದಾಗ ಪರಿಶೀಲನೆ ನಡೆಸಿದ ಸಮಿತಿಯು ಲೋಪಗಳನ್ನು ಬಯಲಿಗೆಳೆದಿದೆ. ಜಿಬಿಎ ಮುಖ್ಯ ಆಯುಕ್ತ ಮಹೇಶ್ವ‌ರ್ ರಾವ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಣಕಾಸು ಇಲಾಖೆ ಕಾರ್ಯದರ್ಶಿ ಅಭಿರಾಮ್ ಜಿ. ಶಂಕರ, ಜಿಬಿಎ ಆರ್ಥಿಕ ವಿಭಾಗದ ವಿಶೇಷ ಆಯುಕ್ತ ಕೆ. ನಿತೇಶ್ ಹಾಗೂ ಲೋಕೋಪಯೋಗಿ ಕಾರ್ಯದರ್ಶಿ ಕೆ. ರಾಜೇಶ್ ಅವರನ್ನೊಳಗೊಂಡ ಸಮಿತಿಯು ಪ್ರಕ್ರಿಯೆಯನ್ನು ರದ್ದುಪಡಿಸಿ, ಪಾರದರ್ಶಕವಾಗಿ ‘ಮರು ಟೆಂಡರ್’ ಕರೆಯುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಟೆಂಡರ್ ರದ್ದತಿಯಿಂದಾಗಿ ಕಾಮಗಾರಿ ಆರಂಭವಾಗುವುದು ಮತ್ತಷ್ಟು ವಿಳಂಬವಾಗಲಿದ್ದು, ಸಿಲಿಕಾನ್ ಸಿಟಿಯ ವಾಹನ ಸವಾರರು ಟ್ರಾಫಿಕ್ ಮುಕ್ತಿಯ ನಿರೀಕ್ಷೆಯಲ್ಲಿ ಇನ್ನಷ್ಟು ಕಾಲ ಕಾಯುವುದು ಅನಿವಾರ್ಯವಾಗಿದೆ.