- Home
- Karnataka Districts
- Bengaluru Urban
- ನದಿ, ಕುಳಗಳನ್ನು ಸ್ವಚ್ಛಗೊಳಿಸಿ ವೈರಲ್ ಆದ 'ಬಿಟ್ಟು ತಬಾಹಿ'ಗೆ ಆರ್ಥಿಕ ನೆರವು ಚಾಚಿದ ಬೆಂಗಳೂರು ಉದ್ಯಮಿ!
ನದಿ, ಕುಳಗಳನ್ನು ಸ್ವಚ್ಛಗೊಳಿಸಿ ವೈರಲ್ ಆದ 'ಬಿಟ್ಟು ತಬಾಹಿ'ಗೆ ಆರ್ಥಿಕ ನೆರವು ಚಾಚಿದ ಬೆಂಗಳೂರು ಉದ್ಯಮಿ!
ಕಲುಷಿತ ಕೆರೆಗಳನ್ನು ಕ್ಲೀನ್ ಮಾಡುತ್ತಿರುವ ಬಿಟ್ಟು ತಬಾಹಿಗೆ ಬೆಂಗಳೂರಿನ ಉದ್ಯಮಿ ಸಿದ್ಧಾರ್ಥ್ ದಿಯಾಲಾನಿ ಆರ್ಥಿಕ ನೆರವು ನೀಡಲು ಮುಂದಾಗಿದ್ದಾರೆ. ಅಜ್ನಾರ್ ನದಿ ಸ್ವಚ್ಛಗೊಳಿಸಿದ ಬಿಟ್ಟು ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು, ಈ ಅಭಿಯಾನ ಬೇರೆ ನಗರಗಳಿಗೂ ವಿಸ್ತರಿಸುವ ಚರ್ಚೆ ಶುರುವಾಗಿದೆ.

ದೇಶದಲ್ಲಿ ಮಾಲಿನ್ಯಗೊಂಡ ಜಲಮೂಲಗಳನ್ನು ಏಕಾಂಗಿಯಾಗಿ ಕ್ಲೀನ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಬಿಟ್ಟು ತಬಾಹಿ (ಸುರೇಂದ್ರ ಸಿಂಗ್ ಚೌಧರಿ) ಬೆಂಬಲಕ್ಕೆ ಬೆಂಗಳೂರಿನ ಉದ್ಯಮಿ ಸಿದ್ಧಾರ್ಥ್ ದಿಯಾಲಾನಿ ನಿಂತಿದ್ದಾರೆ. ಬಿಟ್ಟು ಕೆಲಸ ನೋಡಿ ತಮಗೆ ಸ್ಫೂರ್ತಿ ಸಿಕ್ಕಿದೆ, ಅವರ ಈ ಸ್ವಚ್ಛತಾ ಕಾರ್ಯಕ್ಕೆ ಆರ್ಥಿಕ ನೆರವು ನೀಡಲು ಸಿದ್ಧ ಎಂದು ದಿಯಾಲಾನಿ 'ಎಕ್ಸ್' (X) ನಲ್ಲಿ ಬರೆದುಕೊಂಡಿದ್ದಾರೆ. ಬಿಟ್ಟು ಅವರನ್ನು ಸಂಪರ್ಕಿಸಲು ಸಹಾಯ ಮಾಡುವಂತೆ ಅವರು ನೆಟ್ಟಿಗರಲ್ಲಿ ಮನವಿ ಮಾಡಿದ್ದಾರೆ.
ಕೆರೆಗಳನ್ನು ಕ್ಲೀನ್ ಮಾಡ್ತಿರೋ ಬಿಟ್ಟು
'ಭಾರತದಲ್ಲಿ ಸ್ವಚ್ಛತೆಗಾಗಿ ಇನ್ನಷ್ಟು ಕೆಲಸ ಮಾಡಲು ಬಿಟ್ಟು ಅವರ ಕಾರ್ಯ ನನಗೆ ಪ್ರೇರಣೆ ನೀಡಿದೆ' ಎಂದು ದಿಯಾಲಾನಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಬಿಟ್ಟು ಮಾಡುತ್ತಿರುವ ಕೆಲಸದ ವ್ಯಾಪ್ತಿ ನೋಡಿ, ಸಮಾನ ಮನಸ್ಕರಿಂದ ಹಣ ಸಂಗ್ರಹಿಸಿ ಅವರಿಗೆ ಸಹಾಯ ಮಾಡಲು ತಾನು ಸಿದ್ಧ ಎಂದು ಅವರು ಹೇಳಿದ್ದಾರೆ.
I'm personally inspired by Bittu Tabahi. Looking at his work motivates me to do more for cleanliness in India.
Can someone connect me to him?
I would like to contribute in a small way by providing funds for some of his activities.
For the scale at which he is working, I can…— Siddharth Dialani (@siddharth_iitm) September 24, 2026
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಹಲವರು ಬಿಟ್ಟು ಬೆಂಬಲಕ್ಕೆ ನಿಂತಿದ್ದಾರೆ. ಮಧ್ಯಪ್ರದೇಶ ಮೂಲದ ಸುರೇಂದ್ರ ಸಿಂಗ್ ಚೌಧರಿ ಸೋಶಿಯಲ್ ಮೀಡಿಯಾದಲ್ಲಿ 'ಬಿಟ್ಟು ತಬಾಹಿ' ಎಂದೇ ಫೇಮಸ್. ಕಲುಷಿತಗೊಂಡ ಕೆರೆ ಮತ್ತು ನದಿಗಳನ್ನು ಕ್ಲೀನ್ ಮಾಡುವ ವಿಡಿಯೋಗಳ ಮೂಲಕ ಇವರು ಗಮನ ಸೆಳೆದಿದ್ದಾರೆ. ಅಜ್ನಾರ್ ನದಿಯನ್ನು ಸ್ವಚ್ಛಗೊಳಿಸಲು ಇವರು ತಿಂಗಳುಗಟ್ಟಲೆ ಶ್ರಮಿಸಿದ್ದರು. ಇವರ ಈ ಕೆಲಸಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಕೆಲಸಕ್ಕಾಗಿ ಅವರು ತಮ್ಮ ಸ್ವಂತ ಜೇಬಿನಿಂದ ಸುಮಾರು 30,000 ರೂಪಾಯಿ ಖರ್ಚು ಮಾಡಿದ್ದರು.
ದಿಯಾಲಾನಿ ಸಹಾಯದ ಭರವಸೆ ನೀಡಿದ ಮೇಲೆ, ಬಿಟ್ಟು ಅವರ ಈ ಅಭಿಯಾನವನ್ನು ಇನ್ನಷ್ಟು ದೊಡ್ಡ ಮಟ್ಟಕ್ಕೆ ಹೇಗೆ ಕೊಂಡೊಯ್ಯಬಹುದು ಎಂಬ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಕೇವಲ ಒಬ್ಬರನ್ನೇ ನೆಚ್ಚಿಕೊಳ್ಳದೆ, ಪ್ರತಿಯೊಂದು ಭಾಗದ ಜನರೂ ತಮ್ಮ ಊರಿನ ಜಲಮೂಲಗಳ ರಕ್ಷಣೆಗೆ ಕೈಜೋಡಿಸಬೇಕು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಸ್ಥಳೀಯರ ಗುಂಪುಗಳನ್ನು ಕಟ್ಟಿಕೊಂಡು ಬಿಟ್ಟು ಅವರ ಈ ಮಾದರಿಯನ್ನು ಬೇರೆ ನಗರಗಳಿಗೂ ವಿಸ್ತರಿಸಬೇಕು ಎಂಬ ಸಲಹೆಗಳು ಕೇಳಿಬಂದಿವೆ. ಈ ಹಿಂದೆ ಖ್ಯಾತ ಉದ್ಯಮಿ ಆನಂದ್ ಮಹೀಂದ್ರ ಕೂಡ ಬಿಟ್ಟು ಕೆಲಸವನ್ನು ಶ್ಲಾಘಿಸಿದ್ದರು. ಇದೆಲ್ಲದರ ನಡುವೆ, 20,000 ಕೋಟಿ ರೂಪಾಯಿ ವೆಚ್ಚದ ಕೇಂದ್ರ ಸರ್ಕಾರದ 'ನಮಾಮಿ ಗಂಗೆ' ಯೋಜನೆಯ ಕಥೆ ಏನಾಯ್ತು ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ.

