Apple MacBook Pro : ಆಪಲ್ ಗ್ಯಾಜೆಟ್ ಖರೀದಿಗೆ ಭಾರತ ಸೂಕ್ತವಲ್ಲ. ಇಲ್ಲಿ ಬೆಲೆ ದುಬಾರಿ. ಅದೇ ವಿಯೆಟ್ನಾಂನಲ್ಲಿ ಅಗ್ಗದ ಬೆಲೆಗೆ ಇವು ಸಿಗ್ತಿದೆ. ಅದಕ್ಕೆ ವ್ಯಕ್ತಿಯೊಬ್ಬನ ಮ್ಯಾಕ್ ಪ್ರೋ ಖರೀದಿಗೆ ವಿಮಾನ ಏರಿದ್ದ. ಕೊನೆಯಲ್ಲಿ ಉಳಿಸಿದ್ದು ಎಷ್ಟು ಗೊತ್ತಾ?
ಆಪಲ್ ಐಫೋನ್ (Apple iPhone) ಹಾಗೇ ಆಪಲ್ ಮ್ಯಾಕ್ ಬುಕ್ ಪ್ರೊ (Apple MacBook Pro) ಖರೀದಿ ಕನಸನ್ನು ಅನೇಕ ಭಾರತೀಯರು ಹೊಂದಿದ್ದಾರೆ. ಲಕ್ಷಾಂತರ ರೂಪಾಯಿ ಬೆಲೆಯ ಫೋನ್ ಹಾಗೂ ಲ್ಯಾಪ್ ಟಾಪ್ ಖರೀದಿಗಾಗಿ ಹಣ ಕೂಡಿಡುವ ಮಂದಿ ಸಾಕಷ್ಟು. ಭಾರತದಲ್ಲಿ ಈ ಗ್ಯಾಜೆಟ್ ಬಹಳ ದುಬಾರಿ. ಭಾರತಕ್ಕಿಂತ ಕೆಲ ದೇಶಗಳಲ್ಲಿ ಇವು ಅಗ್ಗದ ಬೆಲೆಗೆ ಸಿಗುತ್ವೆ. ವಿದೇಶಕ್ಕೆ ಹೋಗಿ ಆಪಲ್ ಮ್ಯಾಕ್ ಬುಕ್ ಪ್ರೋ ಖರೀದಿ ಮಾಡೋದು ಮೂರ್ಖತನ, ವಿಮಾನ, ಅಲ್ಲಿನ ಖರ್ಚು ಹೆಚ್ಚಾಗುತ್ತೆ ಎನ್ನುವವರು ನೀವಾಗಿದ್ದರೆ ರೆಡ್ಡಿಟ್ ನಲ್ಲಿ ವೈರಲ್ ಆಗಿರುವ ಪೋಸ್ಟ್ ಬಗ್ಗೆ ಗಮನ ಹರಿಸಿ. ಇಲ್ಲಿ ಬಳಕೆದಾರನೊಬ್ಬ ಆಪಲ್ ಮ್ಯಾಕ್ಬುಕ್ ಪ್ರೊ ಖರೀದಿಗೆ ವಿಯೆಟ್ನಾಂ (Vietnam)ಗೆ ತೆರಳಿದ್ದಾನೆ. ಅಲ್ಲಿ ಆಪಲ್ ಮ್ಯಾಕ್ಬುಕ್ ಪ್ರೊ ಖರೀದಿ ಮಾಡಿದ್ದಲ್ಲದೆ, ಉಳಿದ ಹಣದಲ್ಲಿ 11 ದಿನಗಳ ಪ್ರವಾಸ ಎಂಜಾಯ್ ಮಾಡಿ ಬಂದಿದ್ದಾನೆ. ಇದನ್ನು ಓದಿದ ಬಳಕೆದಾರರು ದಂಗಾಗಿದ್ದಾರೆ. ಸರಿಯಾದ ಲೆಕ್ಕ ನೀಡಿ ಅಂತಿದ್ದಾರೆ.
ಏನಿದು ಆಪಲ್ ಮ್ಯಾಕ್ಬುಕ್ ಪ್ರೊ ಖರೀದಿ ಕಥೆ? : ರೆಡ್ಡಿಟ್ ಪೋಸ್ಟ್ ಪ್ರಕಾರ, ವ್ಯಕ್ತಿಯೊಬ್ಬ ಆಪಲ್ ಮ್ಯಾಕ್ಬುಕ್ ಪ್ರೊ ಖರೀದಿಗೆ ಪ್ಲಾನ್ ಮಾಡಿದ್ದ. ಭಾರತದಲ್ಲಿ ಅದ್ರ ಬೆಲೆ ದುಬಾರಿ. ಆದ್ರೆ ವಿಯೆಟ್ನಾಂನಲ್ಲಿ ಬೆಲೆ ಕಡಿಮೆ ಎಂಬುದು ಆತನಿಗೆ ತಿಳಿದಿತ್ತು. ರಜೆ ನೆಪದಲ್ಲಿ ವಿಯೆಟ್ನಾಂಗೆ ಹೋಗಿ ಆಪಲ್ ಮ್ಯಾಕ್ಬುಕ್ ಪ್ರೊ ಖರೀದಿ ಮಾಡುವ ಪ್ಲಾನ್ ಮಾಡಿದ. ಪ್ಲಾನ್ ನಂತೆ ವಿಯೆಟ್ನಾಂಗೆ ತೆರಳಿದ್ದಾನೆ. ಅಲ್ಲಿ ಆಪಲ್ ಮ್ಯಾಕ್ಬುಕ್ ಪ್ರೊ ಖರೀದಿ ಮಾಡಿದ ನಂತ್ರವೂ ಹಣ ಉಳಿದಿದೆ. ಆರಾಮಾಗಿ 11 ದಿನ ಅಲ್ಲಿದ್ದು, ರಜಾ ಎಂಜಾಯ್ ಮಾಡಿದ್ದಾನೆ.
ಭಾರತದಲ್ಲಿ ಮ್ಯಾಕ್ಬುಕ್ಗಳು ಮತ್ತು ಐಫೋನ್ಗಳು ತುಂಬಾ ದುಬಾರಿಯಾಗಿದೆ. ಆಮದು ಸುಂಕ ಮತ್ತು ಜಿಎಸ್ಟಿಗೆ ಹೆಚ್ಚು ಹಣ ತೆರಬೇಕು. ಇದನ್ನು ತಿಳಿದು ನಾನು ಅಗ್ಗದ ರೌಂಡ್ ಟ್ರಿಪ್ ವಿಮಾನ ಬುಕ್ ಮಾಡಿ ಹನೋಯ್ ಗೆ ತೆರಳಿದ್ದೆ ಎಂದು ಬಳಕೆದಾರ ಬರೆದಿದ್ದಾನೆ. ವಿಯೆಟ್ನಾಂನಲ್ಲಿ, ಆಪಲ್ ಸಾಧನಗಳು ಕೈಗೆಟುಕುವ ಬೆಲೆಗೆ ಲಭ್ಯವಿದೆ. ಅಲ್ಲಿ ಪ್ರವಾಸಿಗರಿಗೆ ವ್ಯಾಟ್ ರಿಟನ್ ಪಾಲಿಸಿ ಇದೆ. ಇದು ದೊಡ್ಡ ಮೊತ್ತವನ್ನು ಉಳಿಸಲು ಸಹಾಯ ಆಯ್ತು. ಮ್ಯಾಕ್ಬುಕ್ ಬೆಲೆ ಭಾರತದಲ್ಲಿ 1.85 ಲಕ್ಷ ರೂಪಾಯಿಗಳಾಗಿತ್ತು. ಆದ್ರೆ ವಿಯೆಟ್ನಾಂನಲ್ಲಿ, ಸರಿಯಾದ ವ್ಯಾಟ್ ದಾಖಲೆ ನೀಡುವ ಮತ್ತು ವಿಮಾನ ನಿಲ್ದಾಣದಲ್ಲಿ ಮರುಪಾವತಿ ಪ್ರಕ್ರಿಯೆಯನ್ನು ನಿರ್ವಹಿಸುವ ಅಂಗಡಿಯನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಿದ ನಂತ್ರ ಇದೇ ಮ್ಯಾಕ್ಬುಕ್ 1.48 ಲಕ್ಷ ರೂಪಾಯಿಗೆ ಸಿಕ್ತು. ಇದ್ರಿಂದ 36,500 ರೂಪಾಯಿ ಉಳಿತು. ಲ್ಯಾಪ್ಟಾಪ್ನ ವೆಚ್ಚ ಸೇರಿ ಅವರಿಗೆ ಒಟ್ಟು ಪ್ರವಾಸದ ವೆಚ್ಚ 2.08 ಲಕ್ಷ ಬಂದಿದೆ. ತೆರಿಗೆ ಮರುಪಾವತಿ ನಂತ್ರ ಅದು 1.97 ಲಕ್ಷಕ್ಕೆ ಇಳಿದಿದೆ. ಮ್ಯಾಕ್ಬುಕ್ ಬೆಲೆ ಕಳೆದ್ರೆ, ಸಂಪೂರ್ಣ ವಿಯೆಟ್ನಾಂ ರಜೆ, ವಿಮಾನ ಟಿಕೆಟ್, ಆಹಾರ, ವಸತಿ ಮತ್ತು ಇನ್ನೂ ಹೆಚ್ಚಿನ ಖರ್ಚು ಸೇರಿ 48,000 ವೆಚ್ಚವಾಗಿದೆ.
ಭಾರತದಲ್ಲಿ ಖರ್ಚಾಗ್ತಿದ್ದ ಮ್ಯಾಕ್ ಬುಕ್ ಬೆಲೆಗೆ, ರಜೆ ಎಂಜಾಯ್ ಮಾಡಿದ್ದಲ್ಲದೆ ಮ್ಯಾಕ್ ಬುಕ್ ಖರೀದಿ ಮಾಡಿದೆ ಎಂದು ಬಳಕೆದಾರ ಬರೆದಿದ್ದಾನೆ. ಇದನ್ನು ನೋಡಿದ ಅನೇಕರು, ಆಪಲ್ ಗ್ಯಾಜೆಟ್ ಖರೀದಿಗೆ ವಿದೇಶ ಬೆಸ್ಟ್ ಎಂದಿದ್ದಾರೆ. ಮತ್ತೆ ಕೆಲವರುಗೆ ವಿಯೆಟ್ನಾಂ ಹೊಟೆಲ್ ಖರ್ಚು, ವಿಮಾನ ಟಿಕೆಟ್ಗೆ ಎಷ್ಟು ಖರ್ಚಾಯ್ತು ಎನ್ನುವ ಸಂಪೂರ್ಣ ಲೆಕ್ಕದ ಅಗತ್ಯವಿದೆ. ಅದನ್ನು ತಿಳಿಸುವಂತೆ ಬಳಕೆದಾರರಿಗೆ ಹೇಳಿದ್ದಾರೆ.
