ಥಿಯೇಟರ್, ಕ್ರಿಕೆಟ್ ಸ್ಟೇಡಿಯಂ ಎಲ್ಲಾ ಸೌಂಡ್ ಎಫೆಕ್ಟ್ ಮನೆಯಲ್ಲೇ, ಗೋಸರೌಂಡ್ 900 ಬಿಡುಗಡೆ!
ಕೈಗೆಟುಕುವ ದರದಲ್ಲಿ ಗೋವೋ ಬ್ರ್ಯಾಂಡ್ ಸೌಂಡ್‌ಬಾರ್ ಹಾಗೂ ವೂಫರ್ ಬಿಡುಗಡೆಯಾಗಿದೆ. ಮನೆಯಲ್ಲೇ ಥಿಯೇಟರ್ ಎಫೆಕ್ಟ್ ಸೌಂಡ್, ಕ್ರಿಕೆಟ್ ಸ್ಟೇಡಿಯಂ ಎಫೆಕ್ಟ್ ಸೇರಿದಂತೆ ಹಲವು ವಿಶೇಷತೆಗಳು ಈ ಗೌಸರೌಂಡ್ 900ನಲ್ಲಿದೆ.
ಬೆಂಗಳೂರು(ಮೇ.24): ಮನೆಗೊಂದು ಟೀವಿ ಇದ್ದರೆ ಸಾಕು ಅನ್ನುವ ಕಾಲವೊಂದಿತ್ತು. ಈಗ ನಮ್ಮ ಕಿವಿ ಮತ್ತೇನನ್ನೋ ಬಯಸುತ್ತವೆ. ಸಿನಿಮಾಗಳನ್ನೆಲ್ಲ ಟೀವಿಯಲ್ಲೇ ನೋಡಲಿಕ್ಕೆ ಓಟಿಟಿಗಳು ಅನುವು ಮಾಡಿಕೊಟ್ಟದ್ದೇ ತಡ, ಟೀವಿಯ ಗುಣಮಟ್ಟವನ್ನು ಎತ್ತರಿಸುವ ಪ್ರಯತ್ನಗಳು ಶುರುವಾಗಿದೆ. ರೆಸಲ್ಯೂಷನ್ ಹೆಚ್ಚಿಸುವುದು, ಟಚ್‌ಸ್ಕ್ರೀನ್, ನಾಲ್ಕೈದು ರಿಮೋಟ್‌ಗಳು, ಕ್ರಿಕೆಟ್‌ಗೊಂದು, ಸಿನಿಮಾಕ್ಕೊಂದು ಮೋಡ್- ಹೀಗೆ ಟೀವಿ ಕೇವಲ ಟೀವಿಯಷ್ಟೇ ಆಗಿ ಉಳಿದಿಲ್ಲ. ಇದರೊಂದಿಗೆ, ಮನೆಯೊಳಗೇ ಡಿಟಿಎಸ್ ಸೌಂಡ್ ಎಫೆಕ್ಟ್ ಕೇಳಬೇಕು ಅನ್ನುವುದು ಮತ್ತೆ ಹೊಸದಾಗಿ ಮೂಡುತ್ತಿರುವ ಹಳೆಯ ಟ್ರೆಂಡ್. ಕೈ ತುಂಬ ಕಾಸಿರುವವರಿಗೆ ಬೋಸ್, ಸೋನಿ, ಜೆಬಿಎಲ್, ಸ್ಯಾಮ್ಸಂಗ್- ಮುಂತಾದ ಕಂಪೆನಿಗಳ ಸೌಂಡ್‌ಬಾರ್‌ಗಳಿವೆ. ಅವುಗಳಷ್ಟೇ ಸಮರ್ಥವಾದ, ಆದರೆ ಕೈಗೆಟುಕವ ದರಲ್ಲಿ ಸೌಂಡ್‌ಬಾರ್ ಮತ್ತು ವೂಫರನ್ನು ಗೋವೋ ಹೊರತಂದಿದೆ.
ಇದರ ಹೆಸರು ಗೋಸರೌಂಡ್ 900. ಒಂದು ಸೆಟ್‌ನಲ್ಲಿ ಒಂದು ಸೌಂಡ್‌ಬಾರ್, ಒಂದು ವೂಫರ್ ಮತ್ತು ರಿಮೋಟ್ ಬರುತ್ತದೆ. ಬ್ಲೂಟೂಥ್ ಮೂಲಕ ನೀವಿದನ್ನು ನಿಮ್ಮ ಸ್ಮಾರ್ಟ್‌ಟೀವಿಗೆ ಲಿಂಕಿಸಬಹುದು. ಸ್ಮಾರ್ಟ್ ಟೀವಿ ಇಲ್ಲದವರಿಗೆ ಕೇಬಲ್ ಮೂಲಕ ಜೋಡಿಸುವುದಕ್ಕೂ ಅವಕಾಶವಿದೆ. ಮನೆಯಲ್ಲೇ ಮಿನಿಥೇಟರ್ ಮಾಡಿಬಿಡುವ ಶಕ್ತಿಯುಳ್ಳ ಈ ಸೌಂಡ್‌ಬಾರ್ 200 ವ್ಯಾಟ್ ಔಟ್‌ಪುಟ್ ನೀಡುತ್ತದೆ. 2.1 ಚಾನಲ್ ಶಕ್ತಿಶಾಲಿ ಸಬ್‌ವೂ-ರ್ ಮನೆಯೊಳಗೇ ಥೇಟರ್ ಅನುಭವ ನೀಡುತ್ತದೆ.
ಸೋನಿ LinkBuds S ವೈರ್‌ಲೆಸ್ ಇಯರ್‌ಬಡ್ ಏಕೆ ಖರೀದಿಸಬೇಕು? ಇಲ್ಲಿವೆ 5 ಕಾರಣಗಳು
3.5 ಬ್ಲೂಟೂಥ್‌ನ ರೇಂಜ್ 30 ಅಡಿ. ಬ್ಲೂಟೂಥ್ ಇಲ್ಲದವರು ಎಚ್‌ಡಿಎಂಐ, ಆಕ್ಸ್, ಯುಎಸ್‌ಬಿ ಕೇಬಲ್ ಮೂಲಕವೂ ಸಂಪರ್ಕ ನೀಡಬಹುದು. ಇದರ ಜತೆಗೇ ಬರುವ ರಿಮೋಟ್‌ನಲ್ಲೂ ಸಾಕಷ್ಟು ಆಯ್ಕೆಗಳಿವೆ. ಸಿನಿಮಾ, ನ್ಯೂಸ್, ಸಂಗೀತ, ಥ್ರೀಡಿ ಸಿನಿಮಾಗಳಿಗೆ ಬೇರೆ ಬೇರೆ ಮೋಡ್‌ಗಳಿವೆ. ಬಾಸ್ ಮತ್ತು ಟ್ರೆಬಲ್ ಕೂಡ ರಿಮೋಟ್ ಮೂಲಕವೇ ಕಂಟ್ರೋಲ್ ಮಾಡಬಹುದು.
ಸೌಂಡ್‌ಬಾರ್‌ಗೆ ಎಲ್‌ಇಡಿ ಡಿಸ್‌ಪ್ಲೇ ಇದೆ. ಹಸಿರು ಬಣ್ಣದ ಡಿಸ್‌ಪ್ಲೇ ಕಣ್ಣಿಗೆ ಕಿರಿಕಿರಿ ಮಾಡುವುದಿಲ್ಲ. ಈ ಸೌಂಡ್‌ಬಾರ್ ಅಷ್ಟೇನೂ ಭಾರವಿಲ್ಲ. ಹೀಗಾಗಿ ಸುಲಭವಾಗಿ ಟೀವಿಯ ಬುಡದಲ್ಲೇ ಗೋಡೆಗೆ ಅಳವಡಿಸಬಹುದು. ಅಲ್ಲೇ ಒಂದು ಮೊಳೆಗೆ ವೂಫರ್ ತಗಲಿಹಾಕಿದರೆ ಥೇಟರ್ ರೆಡಿ. ಕಪ್ಪು ಬಣ್ಣ, ಚಂದದ ಫಿನಿಷ್ ಇರುವ ಇದು ಅಲಂಕಾರಿಕವಾಗಿಯೂ ಇದೆ. ಸಂಗೀತ, ಸಿನಿಮಾ, ಸ್ಪೋರ್ಟ್ಸ್ ಮೋಡ್ ಕೂಡ ಇರುವುದರಿಂದ ಬೇಕಾದ್ದನ್ನು ಆಯ್ದುಕೊಳ್ಳಬಹುದು. ಪಿಸುಮಾತನ್ನು ಕೂಡ ಕಿವಿಗೆ ಸಮರ್ಪಕವಾಗಿ ದಾಟಿಸುವ ಗೋಸರೌಂಡ್ 900 ಬೆಲೆ ಅಮೆಝಾನ್‌ನಲ್ಲಿ ರೂ 8,599 ಮೂಲಬೆಲೆ ರೂ 17,999. ವಿಶೇಷ ಕೊಡುಗೆ ಇರುವ ದಿನಗಳಲ್ಲಿ ಇದು ಇನ್ನೂ ಕಡಿಮೆಗೆ ಸಿಗಬಹುದು. ಅದು ಅವರವರ ಅದೃಷ್ಟ ಮತ್ತು ಭಾಗ್ಯ.
ವಾಚ್ಒಎಸ್ 9.1 ಬಿಡುಗಡೆ ಮಾಡಿದ ಆಪಲ್, ಏನೆಲ್ಲ ವಿಶೇಷತೆಗಳು?
ಇದನ್ನು ಟೀವಿಗೆ ಬ್ಲೂಟೂಥ್ ಮೂಲಕ ಅಳವಡಿಸುವಾಗ ಕೊಂಚ ಎಚ್ಚರಿಕೆ ಅಗತ್ಯ. ಟೀವಿ ಹಳೆಯದಾಗಿದ್ದರೆ ಟೀವಿ ಎರರ್ ಸಂದೇಶ ಕೊಡುತ್ತದೆ. ಆಗ ಆಕ್ಸ್ ಕೇಬಲ್ ಮೂಲಕ ಅಳವಡಿಸಿದರೆ ಕೆಲಸ ಸರಾಗ. ಇದರ ಸದ್ದಂತೂ ಅಗಾಧ. ಸಾಕಷ್ಟು ಸಣ್ಣ ಜಾಗವಾಗಿದ್ದರೆ ಇದು ಸಿಕ್ಕಾಪಟ್ಟೆ ಗದ್ದಲ ಅನ್ನಿಸಬಹುದು. ಕೊಂಚ ವಿಶಾಲವಾದ ಮನೆಯಾದರೆ ಮಾತ್ರ ಆ ಅನುಭವವೇ ಬೇರೆ. ಹಾರರ್ ಮತ್ತು ಥ್ರಿಲ್ಲರ್ ಸಿನಿಮಾಗಳನ್ನು ನೋಡುವುದಕ್ಕೆ ಹೇಳಿ ಮಾಡಿಸಿದಂತಿದೆ ಈ ಸೌಂಡ್ ಬಾರ್.