ಶಿವಕುಮಾರ ಕುಷ್ಟಗಿ

ಗದಗ ಜಿಲ್ಲೆಯ ಹಮ್ಮಗಿ ಪುಟ್ಟ ಗ್ರಾಮವಾಗಿದ್ದು, ಕೃಷಿಯೇ ಇಲ್ಲಿನ ಪ್ರಮುಖ ಆದಾಯದ ಮೂಲ. ತುಂಗಭದ್ರಾ ನದಿ ದಂಡೆಯಲ್ಲಿಯೇ ಇರುವ ಈ ಗ್ರಾಮದಲ್ಲಿನ ರೈತರಿಗೆ ಅಲ್ಪ ಜಮೀನಿದ್ದರೂ ವರ್ಷದ 12 ತಿಂಗಳೂ ನೀರಾವರಿ ಸೌಲಭ್ಯ ಹೊಂದಿರುವ ಗ್ರಾಮವಾಗಿದೆ. ಮೊದಲು ಇಲ್ಲಿ ಭತ್ತವೇ ಪ್ರಮುಖ ಬೆಳೆ, ಭತ್ತ ಬೆಳೆಯಲು ಅತೀ ಹೆಚ್ಚು ರಾಸಾಯನಿಕಗಳನ್ನು ಬಳಕೆ ಮಾಡುತ್ತಿದ್ದರು. ಕ್ರಮೇಣ ರೈತರೇ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕದಿಂದ ದೂರವಾಗಿ, ಭತ್ತವನ್ನೇ ಬೆಳೆಯುವುದನ್ನು ಬಿಟ್ಟು ಬಾಳೆ ಬೆಳೆಯಲು ಪ್ರಾರಂಭಿಸಿದ ನಂತರ ಹಮ್ಮಗಿ ಗ್ರಾಮ ಬನಾನಾ ವಿಲೇಜ್ ಆಗಿದೆ.

ಬದುಕು ಬಂಗಾರವಾಗಿಸಿ ಭರಪೂರ ಆದಾಯ : ಪದವೀಧರ ಯುವಕನ ಕೃಷಿ ಯಶೋಗಾಥೆ .

540ಎಕರೆ ಪ್ರದೇಶಲ್ಲಿ ಬಾಳೆ

ಈ ಪುಟ್ಟ ಗ್ರಾಮದಲ್ಲಿ 350 ಕೃಷಿ ಕುಟುಂಬಗಳಿದ್ದು ಅವರಲ್ಲಿ 400 ಕ್ಕೂ ಅಧಿಕ ರೈತರು ಬಾಳೆಯನ್ನು ಬೆಳೆಯುತ್ತಿದ್ದು, ಸದ್ಯ ಈ ಗ್ರಾಮ ಒಂದರಲ್ಲಿಯೇ 540 ಎಕರೆ ಪ್ರದೇಶದಲ್ಲಿ ಬಾಳೆಯನ್ನು ಬೆಳೆಯಲಾಗುತ್ತಿದೆ. ಪ್ರತಿಯೊಬ್ಬ ರೈತರು ವರ್ಷದಿಂದ ವರ್ಷಕ್ಕೆ ಹೆಚ್ಚಿನ ಲಾಭವನ್ನು ಪಡೆಯುತ್ತಿದ್ದು, ಗ್ರಾಮದಲ್ಲಿ ಬಾಳೆ ಬೆಳೆಯಲು ಹೆಚ್ಚೆಚ್ಚು ಉತ್ತೇಜನ ದೊರೆಯುತ್ತಿದೆ. ಇದೇ ಪ್ರೇರಣೆಯಿಂದಲೇ ಇಲ್ಲಿ ಬಾಳೆ ಕ್ಷೇತ್ರವೂ ಹೆಚ್ಚಾಗುತ್ತಲೇ ಹೋಗಿದೆ.

ಶೇ 75 ರಷ್ಟು ಸಾವಯವ

ಈ ಗ್ರಾಮದಲ್ಲಿ ಬೆಳೆಲಾಗುತ್ತಿರುವ ಬಾಳೆಯು ಶೇ 75 ರಷ್ಟು ಸಾವಯವ ಬಾಳೆಯಾಗಿದ್ದು, ಹಲವಾರು ವರ್ಷಗಳ ಕಾಲ ಭತ್ತ ಬೆಳೆಯುವ ವೇಳೆಯಲ್ಲಿ ಭೂಮಿಗೆ ರಾಸಾಯನಿಕ ಗೊಬ್ಬರ ಹಾಕಿ ಸಾಕಾಗಿದ್ದ ಇಲ್ಲಿನ ರೈತರೀಗ ಸಾವಯವ ರೈತರಾಗಿ ಬದಲಾಗಿದ್ದು ಇದರಿಂದಾಗಿ ಭೂಮಿಯ ಗುಣಮಟ್ಟವೂ ಸುಧಾರಣೆಯಾಗಿದೆ. ಬೆಳೆಯುತ್ತಿರುವ ಬಾಳೆಗೂ ಹೆಚ್ಚು ರುಚಿಕಟ್ಟು ಮತ್ತು ರಾಸಾಯನಿಕ ಮುಕ್ತವಾಗಿರುವ ಹಿನ್ನೆಲೆಯಲ್ಲಿ ಹಮ್ಮಗಿ ಬಾಳೆಗೆ ಭಾರೀ ಬೇಡಿಕೆ ಇದೆ.

ಕೇರಳ, ಮಹಾರಾಷ್ಟ್ರಕ್ಕೆ ರಫ್ತು: ಹಮ್ಮಗಿ ಗ್ರಾಮದಲ್ಲಿ 540 ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಬೆಳೆಯುತ್ತಿರುವ ಬಾಳೆಯಲ್ಲಿ ಪ್ರಮುಖವಾದದ್ದು ಯಾಲಕ್ಕಿ ಬಾಳೆ, ಪಚ್ಚ ಬಾಳೆ. ಉತ್ತಮವಾದ ಸಾವಯವ ಗೊಬ್ಬರ ನೀಡಿ ಬಾಳೆಯನ್ನು ಬೆಳೆದಿರುವುದು, ಹೀಗೆ ಅಚ್ಚುಕಟ್ಟಾಗಿ ಬೆಳೆಯುವ ಬಾಳೆಯನ್ನು ಪಕ್ಕದ ಕೇರಳ ಮತ್ತು ಮಹಾರಾಷ್ಟ್ರದ ಖರೀದಿದಾರರು ಹೊಲಕ್ಕೆ ಬಂದು ಖರೀದಿಸಿಕೊಂಡು ಹೋಗುತ್ತಿದ್ದಾರೆ.

ನೀರಿಲ್ಲದ ಜಾಗದಲ್ಲಿ 15 ಎಕರೆ ಕಾಡು ಬೆಳೆಸಿದ ಹೀರೋ!

4 ಅಡಿ ಉದ್ದದ ಬಾಳೆ ಗಿಡದಲ್ಲಿ 40 ರಿಂದ 45 ಕೆಜಿ ತೂಕದ ಗೊನೆಗಳನ್ನು ನೋಡಿದಾಗ ರೈತರ ಸಾಧನೆ ಗಮನ ಸೆಳೆಯುತ್ತದೆ.

ಸರ್ಕಾರದ ಸೌಲಭ್ಯ: ಇಲ್ಲಿನ ರೈತರು ತೋಟಗಾರಿಕೆ ಇಲಾಖೆಯಿಂದ ಒಂದು ಎಕರೆಗೆ 40 ಸಾವಿರ ರೂಪಾಯಿಯಂತೆ ಸಬ್ಸಿಡಿ ಪಡೆದು, ಎಕರೆಗೆ 40 ರಿಂದ 70 ಸಾವಿರ ಖರ್ಚು ಮಾಡಿದ್ದು, ತೋಟಗಾರಿಕೆ ಇಲಾಖೆ ಮತ್ತು ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಲಾಭವನ್ನು ಪಡೆದುಕೊಂಡಿದ್ದಾರೆ. ಬಾಳೆ ಮಾರಾಟದಿಂದ ಪ್ರತಿ ಎಕರೆಗೆ 1.20 ಲಕ್ಷದಷ್ಟು ಆದಾಯ ಲಭ್ಯವಾಗುತ್ತಿರುವ ಹಿನ್ನೆಲೆಯಲ್ಲಿ ರೈತರು ಸಹಜವಾಗಿ ಹೆಚ್ಚಿನ ಲಾಭವನ್ನು ತಂದು ಕೊಡುತ್ತಿರುವ ಬಾಳೆ ಬೆಳೆಯತ್ತ ಮುಖ ಮಾಡಿದ್ದಾರೆ.

350 ಕೃಷಿ ಕುಟುಂಬಗಳು

6 ಸಾವಿರದಷ್ಟು ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ 350 ಕ್ಕೂ ಅಧಿಕ ಕೃಷಿ ಕುಟುಂಬಗಳಿದ್ದು, ಒಟ್ಟು 3000 ಎಕರೆಯಷ್ಟು ಕೃಷಿ ಭೂಮಿ ಇದೆ. ಇದರಲ್ಲಿ 450 ಎಕರೆಗೂ ಅಧಿಕ ಪ್ರದೇಶದಲ್ಲಿ ಪ್ರದೇಶದಲ್ಲಿ ಬಾಳೆ ನಾಟಿ ಮಾಡಿದ್ದಾರೆ. ಒಮ್ಮೆ ನಾಟಿ ಮಾಡಿದರೆ 2 ವರ್ಷ ಫಸಲು ಕೊಡುವ ಬಾಳೆ ಬೆಳೆಯಿಂದಾಗಿ ಹೆಚ್ಚಿನ ಖರ್ಚಿಲ್ಲದೇ ಉತ್ತಮ ಆದಾಯ ಪಡೆಯುವಂತಾಗಿದ್ದು ಇದು ಇತರ ಗ್ರಾಮಗಳಿಗೆ ಮಾದರಿಯಾಗಿದೆ.

ಚೆಂಡು ಹೂವು ಬೆಳೆದು ಲಕ್ಷ ಲಕ್ಷ ಎಣಿಸುತ್ತಿರುವ ಚುಂಚನೂರಿನ ಮೇಷ್ಟ್ರು!

ದೀಪಾವಳಿಗೆ ಟೋಮ್ಯಾಟೋ ನಾಟಿ

4 ಅಡಿಗೆ ಒಂದರಂತೆ 8*8 ಅಳತೆ ಅಂತರದಲ್ಲಿ ಬಾಳೆಯನ್ನು ನಾಟಿ ಮಾಡಿರುತ್ತಾರೆ, ಬಾಳೆ ಕಟಾವು ಮಾಡಿದ ನಂತರ ಹೊಸ ಬಾಳೆ ಚಿಗುರುವವರೆಗೆ ರೈತರು ಟೋಮ್ಯಾಟೋ ನಾಟಿ ಮಾಡುತ್ತಾರೆ. ಇದು ಜನವರಿ ತಿಂಗಳ ವೇಳೆಗೆ ಮಾರುಕಟ್ಟೆಗೆ ಬರುತ್ತದೆ. ಈ ಸಂದರ್ಭದಲ್ಲಿ ಟೋಮ್ಯಾಟೋಗೆ ಉತ್ತಮ ದರ ಸಿಗುವ ಹಿನ್ನೆಲೆಯಲ್ಲಿ ಹಮ್ಮಗಿ ಗ್ರಾಮದ ರೈತರು
ತಮಗಿರುವ ಅಲ್ಪ ಜಮೀನಿನಲ್ಲಿಯೇ ತರಕಾರಿ ಬೆಳೆ ಬೆಳೆದು ಹೆಚ್ಚು ಲಾಭ ಪಡೆದುಕೊಳ್ಳುತ್ತಿದ್ದಾರೆ.

ನಮ್ಮ ಗ್ರಾಮದಲ್ಲಿ ಈಗ ಎಲ್ಲರೂ ಬಾಳೆಯನ್ನು ಬೆಳೆದು ಲಾಭ ಪಡೆಯುತ್ತಿದ್ದೇವೆ, ಮೊದಲ ಭತ್ತ ಬೆಳೆಯುತ್ತಿದ್ದಾಗ, ಅದಕ್ಕೆ ಹೆಚ್ಚಿನ ಕೀಟನಾಶಕ ಹಾಕಬೇಕಾಗಿತ್ತು. ಆದರೆ ನಾವೀಗ ಸಂಪೂರ್ಣ ಸಾವಯವ ಕೃಷಿ ಮಾಡುತ್ತಿದ್ದು ಬೀಜ ಗೊಬ್ಬರದ ಖರ್ಚು ಕಡಿಮೆಯಾಗಿದೆ. ತೋಟಗಾರಿಕಾ ಇಲಾಖೆ ಅಧಿಕಾರಿಗಳ ಸೂಕ್ತ ಮಾರ್ಗದರ್ಶನದಿಂದಾಗಿ ಇದೆಲ್ಲಾ ಸಾಧ್ಯವಾಗಿದೆ. ಈಗ ನಮ್ಮ ಗ್ರಾಮ ಬಾಳೆ ಹಣ್ಣಿನ ಗ್ರಾಮವಾಗಿದೆ. - ಜಗದೀಶ, ಹಮ್ಮಗಿ ಗ್ರಾಮದ ರೈತ
(9964215283)