ಪ್ರತಿಯೊಬ್ಬರು ಪ್ರೀತಿ, ಸೌಹಾರ್ದತೆಯಿಂದ ಬದುಕಬೇಕು
- ಪ್ರತಿಯೊಬ್ಬರು ಪ್ರೀತಿ, ಸೌಹಾರ್ದತೆಯಿಂದ ಬದುಕಬೇಕು
- ಗದಗಿನ ಡಾ.ತೋಂಟದಾರ್ಯ ಸಿದ್ದರಾಮ ಸ್ವಾಮೀಜಿ ಅಭಿನುಡಿ
- ಅಭಿನಂದನ ಗ್ರಂಥ ಲೋಕಾರ್ಪಣೆಯಲ್ಲಿ ಶ್ರೀಗಳ ಮಾತು
ಇಂದಿನ ಕಾಲಘಟ್ಟದಲ್ಲಿ ಪ್ರತಿಯೊಬ್ಬರು ಪ್ರೀತಿ, ಸೌಹಾರ್ದತೆಯಿಂದ ಬದುಕಬೇಕಾಗಿದೆ. ಶುಭ್ರವಾದ ಬದುಕನ್ನು ನಮ್ಮದಾಗಿಸಿಕೊಳ್ಳಬೇಕು. ತಮ್ಮ ತಂದೆ-ತಾಯಿ,ಗುರು-ಹಿರಿಯರನ್ನು ಗೌರವದಿಂದ ನೋಡಿಕೊಂಡು ಅವರ ಆರೈಕೆ ಮಾಡಬೇಕು ಎಂದು ಗದಗಿನ ಜಗದ್ಗುರು ಡಾ.ತೋಂಟದ ಸಿದ್ದರಾಮ ಸ್ವಾಮೀಜಿ (Tontadarya Siddarama Swamiji) ನುಡಿದರು.
ಪಟ್ಟಣದ ನೂತನ ಬಸವ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶರಣ ಸಾಹಿತಿ ಲ.ರು.ಗೊಳಸಂಗಿ (Golasangi) ಅಭಿನಂದನ ಗ್ರಂಥ ರುದ್ರತನಯದ ಲೋಕಾರ್ಪಣೆ ಹಾಗೂ ಅವರ 60ನೇ ವಿವಾಹ ವಾರ್ಷಿಕೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅಭಿನಂದನ ಗ್ರಂಥ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಶರಣ ಸಾಹಿತಿ ಲ.ರು.ಗೊಳಸಂಗಿ ಅವರು ಬದುಕಿನಲ್ಲಿ ವೈಚಾರಿಕತೆ ಮೈಗೂಡಿಸಿಕೊಳ್ಳುವ ಜೊತೆಗೆ ಸಮಾಜಕ್ಕೆ ಮಾರ್ಗದರ್ಶಿಯಾಗುವ ಸಾಹಿತ್ಯವನ್ನು ನೀಡಿದ್ದಾರೆ. ಇವರದ್ದು ಗಟ್ಟಿ ಸಾಹಿತ್ಯವಾಗಿದೆ ಎಂದರು.
ಬಸವ ಸ್ಮರಣೆಯಿಂದ ಭವಹರದಿಂದ ಮುಕ್ತರಾಗುವ ಜೊತೆಗೆ ಜೀವನದಲ್ಲಿ ಶಾಶ್ವತ ಸುಖ ಸಿಗುತ್ತದೆ. ಈ ದಿಶೆಯತ್ತ ಸದಾ ಬಸವ ಸ್ಮರಣೆ ಮಾಡುವ ಜೊತೆಗೆ ಕನ್ನಡ ಸಾಹಿತ್ಯಕ್ಕೆ ಗೊಳಸಂಗಿ ಅವರು ಸಮೃದ್ಧ ಸಾಹಿತ್ಯವನ್ನು (Literature) ನೀಡಿದ್ದಾರೆ.ಉಳಿದ ಆಶ್ರಮಗಳಿಗೆ ಗೃಹಾಸ್ಥಶ್ರಮವು ಅನ್ನ-ಆಶ್ರಯವನ್ನು ನೀಡುವುದರಿಂದ ನಾಲ್ಕು ಆಶ್ರಮಗಳಲ್ಲಿ ಗೃಹಾಸ್ಥಶ್ರಮವೇ ಶ್ರೇಷ್ಠವಾಗಿದೆ. ಇಂತಹ ಗೃಹಾಸ್ಥಶ್ರಮದ ಜೀವನವನ್ನು 6 ದಶಕಗಳ ಕಾಲ ಸಾಹಿತಿಗಳು ತಮ್ಮ ಪತ್ನಿ ಅನ್ನದಾನೇಶ್ವರಿಯವರೊಂದಿಗೆ (Annadaneshwari) ಸಾರ್ಥಕವಾಗಿ ಕಳೆಯುವ ಮೂಲಕ ಆದರ್ಶ ದಂಪತಿಯಾಗಿ ಸಮಾಜಕ್ಕೆ ಮಾದರಿಯಾಗಿರುವುದು ಶ್ಲಾಘನೀಯ ಎಂದರು.
ಇಳಕಲ್ಲದ (Ilakal) ಗುರುಮಹಾಂತ ಸ್ವಾಮೀಜಿ ಮಾತನಾಡಿ, ವಿಶ್ವಗುರು ಬಸವೇಶ್ವರರ ಜನಿಸಿದ ಈ ಪಾವನ ನೆಲದಲ್ಲಿ ಪ್ರತಿಯೊಬ್ಬರೂ ಬಸವ ತತ್ವ ಅನುಸರಿಸುವ ಮೂಲಕ ಇಡೀ ಜಗತ್ತಿಗೆ ಮಾದರಿಯಾಗಬೇಕಿದೆ. ಈ ನಿಟ್ಟಿನಲ್ಲಿ ಬಸವ ತತ್ವ ಅಳವಡಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ವಿಶ್ವದ ಜನರು ಈ ಪಾವನ ನೆಲಕ್ಕೆ ಭೇಟಿ ನೀಡುವುದು ಸಂದೇಹವಿಲ್ಲ. ಬಸವಾದಿ ಶರಣರ ವಚನಗಳು ಇಡೀ ವಿಶ್ವಕ್ಕೆ ತಲುಪುತ್ತಿವೆ. ವಚನ ಪಠಣ ಮಾಡುವುದರಿಂದ, ಲಿಂಗಪೂಜೆ ಮಾಡಿಕೊಳ್ಳುವುದರಿಂದ ನಮ್ಮ ಅರಿವು ಜಾಗೃತವಾಗುತ್ತದೆ. ಇದರಿಂದ ನಮ್ಮ ಮನಸ್ಸು ಕರುಣಾಮಯಿವಾಗುತ್ತದೆ ಎಂದರು.
ಶಾಸಕ ಶಿವಾನಂದ ಪಾಟೀಲ (Shivananda Patil) ಉದ್ಘಾಟಿಸಿ ಮಾತನಾಡಿ, ಶರಣ ಸಾಹಿತಿ ಲ.ರು.ಗೊಳಸಂಗಿ ಅವರ ಸಾಹಿತ್ಯದಿಂದ ಸಾರಸ್ವತ ಲೋಕದಲ್ಲಿ ಹೆಸರು ಪಡೆಯುವ ಜೊತೆಗೆ ನಮ್ಮಂತಹವರಿಗೆ ಮಾರ್ಗದರ್ಶಕರಾಗಿದ್ದಾರೆ. ಸಾಹಿತಿ ದಂಪತಿಗಳು ನೂರು ಕಾಲ ನಮ್ಮೊಂದಿಗೆ ಇರುವಂತಾಗಲಿ. ನಮ್ಮ ಮುಂದಿನ ಚುನಾವಣೆಯಲ್ಲಿಯೂ ಗೊಳಸಂಗಿಯವರು ಮುಂದೆ ನಿಂತು ಮಾಡುವಂತಾಗಲಿ ಎಂದರು.
ಹಿರಿಯ ಸಾಹಿತಿ ಸಿದ್ದಣ್ಣ ಲಂಗೋಟಿ (Siddanna Langoti) ಮಾತನಾಡಿ, ಬಸವಾದಿ ಶರಣರ ವಚನದಲ್ಲಿ ತತ್ವಜ್ಞಾನ, ಸಾಹಿತ್ಯದ ದರ್ಶನವಿದೆ. ಬಸವಾದಿ ಶರಣರ ವಚನಗಳು ಈಗಾಗಲೇ ದೇಶದ 30 ಭಾಷೆಗಳಿಗೆ ಭಾಷಾಂತರಗೊಂಡಿವೆ. ಜಗತ್ತಿನ ಗ್ರೀಕ್, ಪರ್ಶಿಯನ್, ಜಪಾನಿ, ರಷಿಯನ್ ಸೇರಿದಂತೆ 50 ಭಾಷೆಗಳಿಗೆ ವಚನ ಸಾಹಿತ್ಯ ಭಾಷಾಂತರವಾಗುವ ಕಾರ್ಯ ನಡೆಯುತ್ತಿದೆ ಎಂದರು. ಮಕ್ಕಳ ಸಾಹಿತಿ ಪ.ಗು.ಸಿದ್ದಾಪುರ ಅಭಿನಂದನ ಗ್ರಂಥ ಪರಿಚಯಿಸಿದರು. ಇಂಗಳೇಶ್ವರದ ಚನ್ನಬಸವ ಸ್ವಾಮೀಜಿ, ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲೀಕಾರ, ಸಂಗನಗೌಡ ಚಿಕ್ಕೊಂಡ, ಶಂಕರಗೌಡ ಬಿರಾದಾರ,ಎಂ.ಡಿ.ಬಳಗಾನೂರ ಮಾತನಾಡಿದರು.
ಕಾರ್ಯಕ್ರಮ ಆರಂಭ ಮುನ್ನ ಮಕ್ಕಳ ಹಿರಿಯ ಸಾಹಿತಿ ಶರಣಪ್ಪ ಕಂಚ್ಯಾಣಿ ಅವರಿಗೆ ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಹಿರೇಮಠದ ಶಿವಪ್ರಕಾಶ ಶಿವಾಚಾರ್ಯರು, ಮಸಬಿನಾಳದ ಸಿದ್ದರಾಮ ಸ್ವಾಮೀಜಿ ಗೌರವ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಐ.ಸಿ.ಪಟ್ಟಣಶೆಟ್ಟಿ, ಎಸ್.ಎ.ಡಂಬಳ, ಸಂಗಪ್ಪ ಅಡಗಿಮನಿ, ಮುದಕಪ್ಪ ಬಾರಿಗಿಡದ, ಲೋಕನಾಥ ಅಗರವಾಲ, ಎಫ್.ಡಿ.ಮೇಟಿ, ಎಸ್.ಎಸ್.ಝಳಕಿ, ಬಸಣ್ಣ ದೇಸಾಯಿ, ಶಿವನಗೌಡ ಬಿರಾದಾರ, ಶಂಕ್ರೆಪ್ಪ ಹಾರಿವಾಳ, ನೀಲು ನಾಯಕ, ಬಸವರಾಜ ಹಾರಿವಾಳ, ಸುರೇಶಗೌಡ ಪಾಟೀಲ, ಶೇಖರಗೌಡ ಪಾಟೀಲ, ಸಂಗಮೇಶ ಓಲೇಕಾರ, ಬಸವರಾಜ ಗೊಳಸಂಗಿ, ಶೇಖರ ಗೊಳಸಂಗಿ, ಶಿವಲಿಂಗ ಗೊಳಸಂಗಿ, ಶಿವಶರಣಗೌಡ ಗೌಡರ ಇತರರು ಇದ್ದರು. ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಪ್ರಾಸ್ತವಿಕವಾಗಿ ಮಾತನಾಡಿದರು. ಶರಣು ಬಸ್ತಾಳ ಪ್ರಾರ್ಥಿಸಿದರು. ಜಗದೀಶ ಸಾಲಳ್ಳಿ ಸ್ವಾಗತಿಸಿದರು. ಎಚ್.ಬಿ.ಬಾರಿಕಾಯಿ, ಡಾ.ಯುವರಾಜ ಮಾದನಶೆಟ್ಟಿನಿರೂಪಿಸಿದರು. ಇದೇ ಸಂದರ್ಭದಲ್ಲಿ 60 ನೇ ವರ್ಷದ ವಿವಾಹ ವಾರ್ಷಿಕೋತ್ಸವದಂಗವಾಗಿ ಶ್ರೀಗಳು, ಶಾಸಕರು ಸೇರಿದಂತೆ ಅನೇಕರು ಸಾಹಿತಿ ದಂಪತಿಗಳನ್ನು ಸನ್ಮಾನಿಸಿದರು.