ಕ್ಯಾನ್ಸರ್ ರೋಗಿಗಳಿಗೆ ಕೂದಲು ದಾನದೊಂದಿಗೆ ಜನ್ಮ ದಿನಾಚರಣೆ ಮಾಡಿದ ಅಕ್ಷತಾ
ಹುಟ್ಟು ಹಬ್ಬಕ್ಕೆ ಪಾರ್ಟಿ ಮಾಡಬೇಕು. ಫ್ರೆಂಡ್ಸ್ ಜೊತೆ ಮೋಜು ಮಸ್ತಿ ಮಾಡಬೇಕು ಎಂದು ಪ್ಲಾನ್ ಮಾಡೋರೇ ಜಾಸ್ತಿ. ಆದರೆ ಗದಗ ನಗರದ ಅಕ್ಷತಾ ಬೆಳವಡಿ ಅವರು ತಮ್ಮ 20ನೇ ವರ್ಷದ ಹುಟ್ಟು ಹಬ್ಬಕ್ಕೆ ಕೇಶದಾನ ಮಾಡುವ ಮೂಲಕ ಅರ್ಥ ಪೂರ್ಣ ಜನ್ಮ ದಿನಾಚರಣೆ ಆಚರಿಸಿಕೊಂಡಿದ್ದಾಳೆ.
ಗದಗ (ನ.20): ಹುಟ್ಟು ಹಬ್ಬಕ್ಕೆ ಪಾರ್ಟಿ ಮಾಡಬೇಕು. ಫ್ರೆಂಡ್ಸ್ ಜೊತೆ ಮೋಜು ಮಸ್ತಿ ಮಾಡಬೇಕು ಎಂದು ಪ್ಲಾನ್ ಮಾಡೋರೇ ಜಾಸ್ತಿ. ಆದರೆ ಗದಗ ನಗರದ ಯುವತಿಯೊಬ್ಬಳು ತನ್ನ ಹುಟ್ಟು ಹಬ್ಬದ ದಿನ ಕ್ಯಾನ್ಸರ್ ರೋಗಿಗಳಿಗೆ ಕೇಶದಾನ ಮಾಡುವ ಮೂಲಕ ಅರ್ಥ ಪೂರ್ಣ ಜನ್ಮ ದಿನಾಚರಣೆ ಆಚರಿಸಿಕೊಂಡಿದ್ದಾಳೆ.
ನಗರದ ಅಕ್ಷತಾ (Akshata) ನಾಗರಾಜ್ ಬೆಳವಡಿ ಅವರು ತಮ್ಮ 20 ವರ್ಷದ ಹುಟ್ಟು ಹಬ್ಬಕ್ಕೆ ಕೇಶದಾನ ಮಾಡಿದ್ದಾರೆ. ಹುಲಕೋಟಿ ಬಿಎಸ್‌ಸಿ ನರ್ಸಿಂಗ್ ಕಾಲೇಜಿನಲ್ಲಿ ಓದುತ್ತಿರುವ ಅಕ್ಷತಾ ಹುಟ್ಟು ಹಬ್ಬವನ್ನ (Birth day) ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಆಲೋಚನೆ ಮಾಡಿದ್ದರು. ಕೇಶದಾನದ ಬಗ್ಗೆ ಇಂಟರ್ ನೆಟ್ ನಲ್ಲಿ ಮಾಹಿತಿಯನ್ನೂ ಪಡೆದಿದ್ದರು. ನ.17ರಂದು ತನ್ನ ಹುಟ್ಟು ಹಬ್ಬದ ದಿನವೇ ಕೇಶ ದಾನ (Hair donation) ಮಾಡುವ ಆಸೆಯನ್ನ ತಂದೆ ನಾಗರಾಜ್ ಅವರ ಬಳಿ ಹೇಳಿಕೊಂಡಿದ್ದರು. ಮಗಳ ಆಸೆಯನ್ನ ನಾಗರಾಜ್ ಅವರು ರೆಡ್ ಕ್ರಾಸ್ (Red cross) ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಸಮುದ್ರಿ ಅವರಿಗೆ ತಿಳಿಸಿದ್ದರು. ಡಾ. ಸಮುದ್ರಿ (Dr.Samudri) ಹಾಗೂ ತಂಡ ಅಕ್ಷತಾ ಅವರ ಕೂದಲನ್ನ ಪಡೆದು ಸಂಸ್ಥೆಯಲ್ಲಿಇರಿಸಿದ್ದಾರೆ. ಆಸ್ಪತ್ರೆ ಅಥವಾ ರೋಗಿಗಳ ಕುಟುಂಬದಿಂದ ಬೇಡಿಕೆ ಬಂದಲ್ಲಿ ಕೂದಲನ್ನ ನೀಡುತ್ತೇವೆ ಎಂದು ಡಾ. ಸಮುದ್ರಿ ಮಾಹಿತಿ ನೀಡಿದ್ದಾರೆ.
ಕ್ಯಾನ್ಸರ್ ರೋಗಿಗಳಿಗೆ ಕೂದಲು ದಾನ ಮಾಡಿದ ಅತ್ಯಂತ ಕಿರಿಯ ಬಾಲಕಿ
ಸ್ಥಳೀಯವಾಗಿಯೂ ಕೂದಲು ದಾನಕ್ಕೆ ಅವಕಾಶ: ಸಾಮಾನ್ಯವಾಗಿ ಕೆಲ ಸಂಘ ಸಂಸ್ಥೆಗಳು (Associations) ಕೂದಲನ್ನು ಪಡೆದು ರೋಗಿಗಳಿಗೆ ತಲುಪಿಸುವ ಕೆಲಸ ಮಾಡ್ತಾರೆ. ಬೆಂಗಳೂರು (Bengaluru), ಪುಣೆ (Pune)ಯಂಥ ನಗರದಲ್ಲಿ ಇಂಥ ಸಂಸ್ಥೆಗಳು ಕೆಲಸ ನಿರ್ವಹಿಸುತ್ತವೆ. ಅನೇಕ ಯುವಕರು ಈ ಸಂಸ್ಥೆಗಳ ಸಂಪರ್ಕ ಪಡೆದು ಕೂದಲು ದಾನ ಮಾಡುತ್ತಾರೆ. ಆದರೆ, ಈಗ ಸ್ಥಳೀಯವಾಗಿಯೇ ರೆಡ್ ಕ್ರಾಸ್ ಸಂಸ್ಥೆಗಳಿಗೆ ಕೂದಲು ದಾನ ಮಾಡಬಹುದಾಗಿದೆ. ದೇಶದಲ್ಲಿ ವಿಶ್ವಾಸಾರ್ಹ ಸಂಸ್ಥೆಯಲ್ಲಿ ದಾನ (Donation) ಮಾಡಿದರೆ ಅವಶ್ಯಕತೆ ಇರುವವರಿಗೆ ಮುಟ್ಟುತ್ತೆ ಎನ್ನುವುದು ಅಕ್ಷತಾ ತಂದೆ ನಾಗರಾಜ್ ಬೆಳದಡಿ ಅವರ ಅಭಿಪ್ರಾಯವಾಗಿದೆ.
ಕೇಶ ದಾನದ ಅರಿವು: ಅಕ್ಷತಾ ಅವರ ಸಾಮಾಜಿಕ ಕಾಳಜಿ (Social concern) ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಕಾಲೇಜು ದಿನಗಳಲ್ಲೇ ಕ್ಯಾನ್ಸರ್ ರೋಗಿಗಳ (Cancer patients) ಕಷ್ಟದ ಬಗ್ಗೆ ಯೋಚಿಸಿ, ತನ್ನದೇ ರೀತಿಯಲ್ಲಿ ಸಹಾಯ ಮಾಡಿದ ಅಕ್ಷತಾವರ ಕಾರ್ಯ ಇತರರಿಗೂ ಮಾದರಿ (Model) ಆಗಿದೆ. ಇನ್ನು ಮುಂದಿನ ದಿನಗಳಲ್ಲಿ ತನ್ನ ಸ್ನೇಹಿತರಿಗೂ ಈ ಬಗ್ಗೆ ಅರಿವು ಮೂಡಿಸಿ ಕೇಶಗಳನ್ನು ದಾನ ಮಾಡುವ ಬಗ್ಗೆ ಪ್ರೋತ್ಸಾಹ ನೀಡುತ್ತೇನೆ ಎಂದು ಅಕ್ಷತಾ ಹೇಳಿಕೊಂಡಿದ್ದಾರೆ.
6 ವರ್ಷ ಕಷ್ಟ ಪಟ್ಟು ಬೆಳೆಸಿದ ಕೂದಲನ್ನು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡಿದ ಸುಶ್ಮಿತಾ ಗೌಡ!
ಕ್ಯಾನ್ಸರ್ ರೋಗಿಗಳಿಗೆ ಕೂದಲನ್ನು ಏಕೆ ದಾನ ಮಾಡಬೇಕು? : ಹಲವಾರು ಪರಿಸ್ಥಿತಿಗಳು, ಅನಾರೋಗ್ಯಗಳು ಮತ್ತು ವೈದ್ಯಕೀಯ ಚಿಕಿತ್ಸೆಗಳು (Medical treatment) ಜನರು ತಮ್ಮ ಕೂದಲನ್ನು ಕಳೆದುಕೊಳ್ಳಲು (Hair loss) ಅಥವಾ ತಮ್ಮ ಸ್ವಂತ ಕೂದಲನ್ನು ಬೆಳವಣಿಗೆ (Hair Growth) ಸಾಧ್ಯವಾಗುವುದಿಲ್ಲ. ಅದರಲ್ಲಿ ಕ್ಯಾನ್ಸರ್ (Cancer) ಕೂಡ ಒಂದು. ಕ್ಯಾನ್ಸರ್ ರೋಗಿಗಳಲ್ಲಿ ಕೂದಲು ಉದುರುವುದು ಸಾಮಾನ್ಯವಾಗಿ ಕೀಮೋಥೆರಪಿಯ (Chemotherapy) ನೇರ ಅಡ್ಡ ಪರಿಣಾಮವಾಗಿದೆ. ಜನರು ಕ್ಯಾನ್ಸರ್‌ಗಾಗಿ ಕೂದಲನ್ನು ದಾನ ಮಾಡಿದಾಗ, ಕೂದಲು ದಾನವನ್ನು ವಿಗ್ (Wig) ಆಗಿ ಪರಿವರ್ತಿಸಬಹುದು. ಇದು ಭಯಾನಕ ಕಾಯಿಲೆಯ ವಿರುದ್ಧ ಹೋರಾಡುವ ಜನರಿಗೆ ಆತ್ಮವಿಶ್ವಾಸ, ಶಕ್ತಿ ಮತ್ತು ಯೋಗಕ್ಷೇಮದ ಅರ್ಥವನ್ನು ನೀಡುತ್ತದೆ.
ಕೂದಲು ದಾನಕ್ಕೆ ಕೆಲ ಮಾನದಂಡ ಪೂರೈಸಿ:
-ಕೂದಲನ್ನು ದಾನ ಮಾಡಬಹುದಾದ ಕನಿಷ್ಠ ಉದ್ದ ಸಾಮಾನ್ಯವಾಗಿ 8 ಇಂಚುಗಳಿಂದ 14 ಇಂಚು ಇರಬೇಕು.
- ವಯಸ್ಕರು ಮತ್ತು ಮಕ್ಕಳು ಕೂದಲನ್ನು ದಾನ ಮಾಡಬಹುದು.
- ಹಲವಾರು ಸಂಸ್ಥೆಗಳು ದಾನ ಮಾಡಿದ ಕೂದಲನ್ನು ಸಂಗ್ರಹಿಸುತ್ತವೆ.
- ಕ್ಯಾನ್ಸರ್ ಚಿಕಿತ್ಸೆ ಅಥವಾ ಇತರ ಕಾಯಿಲೆಗಳಿಂದ ಕೂದಲು ಕಳೆದುಕೊಳ್ಳುವ ಮಕ್ಕಳು ಅಥವಾ ವಯಸ್ಕರಿಗೆ ವಿಗ್‌ಗಳನ್ನು ಮಾಡಲು ದಾನದ ಕೂದಲು ಬಳಕೆ.
- ಕೂದಲನ್ನು ನೀವು ದೇಣಿಗೆಗಾಗಿ ಅದನ್ನು ಕತ್ತರಿಸಲು ನಿರ್ಧರಿಸುವ ಮೊದಲು ಯಾವ ಮಾನದಂಡಗಳನ್ನು ಪೂರೈಸಬೇಕು ಎಂಬುದನ್ನು ತಿಳಿದುಕೊಳ್ಳುವುದು ಒಳ್ಳೆಯದು.