ನರಗುಂದ(ಅ.26): ಮಲಪ್ರಭಾ ಜಲಾಶಯದ ಮೇಲ್ಭಾಗದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಜಲಾಶಯದಿಂದ ಮತ್ತೆ 15 ಸಾವಿರ ಕ್ಯುಸೆಕ್‌ ನೀರು ಬಿಡುಗಡೆ ಮಾಡಲಾಗಿದೆ. ನರಗುಂದ ತಾಲೂಕಿನ ಅತೀ ಚಿಕ್ಕ ಗ್ರಾಮ, ಬೆಳಗಾವಿ ಜಿಲ್ಲೆ ಗಡಿಗೆ ಹೊಂದಿಕೊಂಡಿರುವ ಲಖಮಾಪುರ ನದಿ ಪಕ್ಕದಲ್ಲಿರುವುದರಿಂದ ಗ್ರಾಮಸ್ಥರು ಮತ್ತೆ ಆತಂಕಕ್ಕೆ ಸಿಲುಕಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಜಲಾಶಯದಿಂದ 40 ಸಾವಿರ ಕ್ಯುಸೆಕ್‌ ನೀರು ಬಿಟ್ಟಿದ್ದರಿಂದ ನದಿಗೆ ಪ್ರವಾಹದಿಂದ ಗ್ರಾಮಸ್ಥರು 4 ದಿವಸ ತಮ್ಮ ಉರಿಗೆ ಹೋಗುವ ರಸ್ತೆಯಲ್ಲಿ ಜೋಪಡಿ ಹಾಕಿಕೊಂಡು ಜೀವನ ಸಾಗಿಸಿದ್ದರು. ಬುಧವಾರ ನದಿಗೆ ಪ್ರವಾಹ ಕಡಿಮೆಯಾಗಿದ್ದರಿಂದ ಮರಳಿ ತಮ್ಮ ಗ್ರಾಮಕ್ಕೆ ಹೋಗಿ ಜಲಾವೃತಗೊಂಡ ಮನೆಗಳನ್ನು ಸ್ವಚ್ಛ ಮಾಡಿಕೊಂಡು ಜೀವನ ಮಾಡಬೇಕೆನ್ನುವುದರಲ್ಲಿ ಮತ್ತೆ ಶುಕ್ರವಾರ ನದಿಗೆ 15 ಸಾವಿರ ಕ್ಯುಸೆಕ್‌ ನೀರು ಬಿಡುಗಡೆ ಮಾಡಿರುವುದು ಆತಂಕ ಸೃಷ್ಟಿಸಿದೆ.

ಅಧಿಕಾರಿಗಳ ನಿರ್ಲಕ್ಷ್ಯ

ಈ ಹಿಂದೆ ಆಗಸ್ಟ್‌ ತಿಂಗಳಲ್ಲಿ ನದಿಗೆ 1,25,000 ಸಾವಿರ ಕ್ಯುಸೆಕ್‌ ನೀರು ಬಿಟ್ಟ ಸಂದರ್ಭದಲ್ಲಿ ಈ ಗ್ರಾಮವು ಸಂಪೂರ್ಣ ನೀರಲ್ಲಿ ಮುಳುಗಿತ್ತು. ಈ ಸಂದರ್ಭದಲ್ಲಿ ಜಿಲ್ಲಾ ಹಾಗೂ ತಾಲೂಕು ಆಡಳಿತ ಅಧಿಕಾರಿಗಳು ಈ ಗ್ರಾಮಸ್ಥರನ್ನು ಕೊಣ್ಣೂರ ಕೆ.ಇ.ಎಸ್‌. ಪ್ರೌಢಶಾಲೆ ಹಾಗೂ ಭೈರನಹಟ್ಟಿಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪುನರ್ವಸತಿ ಕೇಂದ್ರ ತೆರೆದು ಸಂತ್ರಸ್ತರನ್ನು ರಕ್ಷಣೆ ಮಾಡಿದ್ದರು. ಆ ಸಮಯದಲ್ಲಿ ಗ್ರಾಮಸ್ಥರು ನಮಗೆ ರಾಮದುರ್ಗ ರಸ್ತೆ ಹತ್ತಿರ ಜಮೀನು ಖರೀದಿ ಮಾಡಿ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಾಣ ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ ತಿಳಿಸಿದರೂ ಕೂಡ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಪದೇ ಪದೇ ಪ್ರವಾಹ ಬಂದಾಗ ತಮ್ಮ ಗ್ರಾಮದ ರಸ್ತೆಯಲ್ಲಿ ಜೋಪಡಿ ಹಾಕಿಕೊಂಡು ಕಷ್ಟದಲ್ಲಿ ಜೀವನ ಮಾಡುತ್ತಿದ್ದರೂ ಕೂಡ ಈ ಸಂತ್ರಸ್ತರಿಗೆ ಜಮೀನು ಖರೀದಿ ಮಾಡಿ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಾಣ ಮಾಡಿಕೊಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಸಂತ್ರಸ್ತರ ಆರೋಪವಾಗಿದೆ.

ಸಂತ್ರಸ್ತರು ಕಷ್ಟದಲ್ಲಿ

ಈಗಾಗಲೇ ಎರಡು ಮೂರು ಬಾರಿ ನದಿಗೆ ಪ್ರವಾಹ ಬಂದು ಈ ಗ್ರಾಮಸ್ಥರು ಮನೆ ಮತ್ತು ಜಮೀನುಗಳಲ್ಲಿ ಬಿತ್ತನೆ ಮಾಡಿದ ಬೆಳೆ ಕಳೆದುಕೊಂಡು ತೀವ್ರ ಕಷ್ಟದಲ್ಲಿದ್ದಾರೆ. ಈಗ ಪದೇ ಪದೇ ನದಿಗೆ ಪ್ರವಾಹ ಬರುತ್ತಿರುವುದರಿಂದ ಈ ಗ್ರಾಮಸ್ಥರಿಗೆ ಏನೂ ತಿಳಿಯದಾಗಿದೆ. ಮತ್ತೊಂದು ಕಡೆ ಈ ಗ್ರಾಮ ಸ್ಥಳಾಂತರಕ್ಕೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳದ್ದರಿಂದ ಗ್ರಾಮದ 203 ಕುಟುಂಬದ ಸಂತ್ರಸ್ತರು ಕಷ್ಟದಲ್ಲಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಪದೇ ಪದೇ ಮಲಪ್ರಭಾ ನದಿಗೆ ಪ್ರವಾಹ ಬರುತ್ತಿರುವುದರಿಂದ ಸದ್ಯ ನಮ್ಮ ಗ್ರಾಮಸ್ಥರು ಪ್ರವಾಹ ಕಷ್ಟಕ್ಕೆ ಸಿಲುಕುತ್ತಿದ್ದೇವೆ, ಆದ್ದರಿಂದ ಸರ್ಕಾರ ನಮಗೆ ಜಮೀನು ಖರೀದಿ ಮಾಡಿ ಬೇಗ ತಾತ್ಕಾಲಿಕ ಶೆಡ್‌ಗಳ ನಿರ್ಮಾಣ ಮಾಡದಿದ್ದರೆ ಗ್ರಾಮದ ಎಲ್ಲ ಸಂತ್ರಸ್ತರು ನರಗುಂದ ಪಟ್ಟಣದ ತಹಸೀಲ್ದಾರ್‌ ಕಾರ್ಯಾಲಯದ ಆವರಣದಲ್ಲಿ ಜೋಪಡಿ ಹಾಕಿಕೊಂಡು ವಾಸ ಮಾಡುತ್ತವೆ ಎಂದು ಸಂತ್ರಸ್ತ ವೆಂಕನಗೌಡ ನಡವಿನಮನಿ ಅವರು ಹೇಳಿದ್ದಾರೆ. 

ಶುಕ್ರವಾರ ನದಿಗೆ 15 ಸಾವಿರ ಕ್ಯುಸೆಕ್‌ ನೀರು ಬಿಟ್ಟಿದ್ದರೆಂದು ನಮಗೆ ಮಾಹಿತಿ ಲಭ್ಯವಾಗಿದೆ, ಜಲಾಶಯದಿಂದ 18 ಸಾವಿರ ಕ್ಯುಸೆಕ್‌ ನೀರು ಬಿಡುತ್ತೇವೆಂದು ಮಾಹಿತಿ ಬಂದರೆ ನಾವು ತಕ್ಷಣವೇ ಈ ಗ್ರಾಮದ ಸಂತ್ರಸ್ತರನ್ನು ಸ್ಥಳಾಂತರ ಮಾಡಲು ಮುಂದಾಗುತ್ತೇವೆ. ಅದೇ ರೀತಿ ಗ್ರಾಮ ಸ್ಥಳಾಂತರ ಮಾಡಲು ಜಮೀನು ಖರೀದಿ ಮಾಡಲು ಚಿಂತನೆ ನಡೆಸಿದ್ದೇವೆ ಎಂದು ನರಗುಂದ ತಹಸೀಲ್ದಾರ್‌ ಯಲ್ಲಪ್ಪ ಗೊಣ್ಣೇಣವರ ಅವರು ತಿಳಿಸಿದ್ದಾರೆ.