ಭಾರತೀಯ ಫುಟ್ಬಾಲ್‌ನ ದುಸ್ಥಿತಿಯ ಬಗ್ಗೆ ಸುನಿಲ್ ಚೆಟ್ರಿ ಆತಂಕ ವ್ಯಕ್ತಪಡಿಸಿದ್ದಾರೆ. ಐಎಸ್‌ಎಲ್‌ನ ಅನಿರ್ದಿಷ್ಟಾವಧಿ ಸ್ಥಗಿತದಿಂದ ಫುಟ್ಬಾಲ್ ವ್ಯವಸ್ಥೆಯಲ್ಲಿ ನೋವು, ಭಯ ಮತ್ತು ಆತಂಕದ ವಾತಾವರಣ  ಮನೆ ಮಾಡಿದೆ ಎಂದು ಅವರು ಹೇಳಿದ್ದಾರೆ. 2025-26ರ ಐಎಸ್‌ಎಲ್ ಟೂರ್ನಿಗೆ ತಾತ್ಕಾಲಿಕ ತಡೆ ಬಿದ್ದಿದೆ.

ನವದೆಹಲಿ: ಭಾರತೀಯ ಫುಟ್ಬಾಲ್‌ನ ದುಸ್ಥಿತಿಗೆ ಮಾಜಿ ನಾಯಕ, ದಿಗ್ಗಜ ಫುಟ್ಬಾಲಿಗ ಸುನಿಲ್‌ ಚೆಟ್ರಿ ಮರುಗಿದ್ದಾರೆ. ದೇಶದ ಫುಟ್ಬಾಲ್‌ ವ್ಯವಸ್ಥೆ ಆತಂಕ, ನೋವು ಹಾಗೂ ಭಯ ಹುಟ್ಟಿಸುವಂತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ದೇಸಿ ಫುಟ್ಬಾಲ್‌ನ ಅಡಿಪಾಯ ಎನಿಸಿಕೊಂಡಿದ್ದ ಇಂಡಿಯನ್‌ ಸೂಪರ್‌ ಲೀಗ್‌(ಐಎಸ್‌ಎಸ್) ಅನಿರ್ದಿಷ್ಟಾವಧಿಗೆ ಸ್ಥಗಿತಗೊಂಡಿರುವ ಬಗ್ಗೆ ಚೆಟ್ರಿ ಸಾಮಾಜಿಕ ತಾಣಗಳಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ‘ಭಾರತದ ಫುಟ್ಬಾಲ್ ವ್ಯವಸ್ಥೆಯಲ್ಲಿರುವ ಎಲ್ಲರೂ ನೋವು, ಭಯ, ಆತಂಕದಲ್ಲಿದ್ದಾರೆ. ದೇಶದ ಈಗಿನ ಫುಟ್ಬಾಲ್‌ ಸ್ಥಿತಿಗತಿ ಕಳವಳಕಾರಿ. ಐಎಸ್‌ಎಲ್‌ ಸ್ಥಗಿತಗೊಂಡಿರುವ ಬಗ್ಗೆ ಆಟಗಾರರು, ಕೋಚ್‌ಗಳು, ಸಿಬ್ಬಂದಿ, ಫಿಸಿಯೋ ಎಲ್ಲರೂ ನನ್ನಲ್ಲಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಈ ಬಿರುಗಾಳಿಯನ್ನು ನಾವು ಒಟ್ಟಿಗೆ ಎದುರಿಸುತ್ತೇವೆ. ಒಟ್ಟಿಗೆ ಇರಿ ಮತ್ತು ತರಬೇತಿ ಮುಂದುವರಿಸಿ. ಫುಟ್ಬಾಲ್ ಶೀಘ್ರದಲ್ಲೇ ಪುನರಾರಂಭಗೊಳ್ಳಲಿದೆ’ ಎಂದು ತಿಳಿಸಿದ್ದಾರೆ.

2013ರಲ್ಲಿ ಐಎಸ್‌ಎಲ್‌ ಆರಂಭಗೊಂಡಿತ್ತು. ಆದರೆ ಆಯೋಜಕರು ಹಾಗೂ ಎಐಎಫ್‌ಎಫ್‌ ನಡುವೆ ಒಪ್ಪಂದ ಕೊನೆಗೊಂಡಿರುವ ಹಿನ್ನೆಲೆಯಲ್ಲಿ 2025-26ರ ಆವೃತ್ತಿ ನಡೆಯುವುದು ಅನುಮಾನವೆನಿಸಿದೆ.

ಜೂ. ರಾಷ್ಟ್ರೀಯ ಫುಟ್ಬಾಲ್: ರಾಜ್ಯಕ್ಕೆ ನಿತಿನ್‌ ನಾಯಕ

ಬೆಂಗಳೂರು: ಪಂಜಾಬ್‌ನ ಅಮೃತಸರದಲ್ಲಿ ಜು.20ರಿಂದ ಆರಂಭಗೊಳ್ಳಲಿರುವ ಬಿ.ಸಿ.ರಾಯ್ ಟ್ರೋಫಿ ರಾಷ್ಟ್ರೀಯ ಕಿರಿಯ ಬಾಲಕರ ಫುಟ್ಬಾಲ್‌ ಚಾಂಪಿಯನ್‌ಶಿಪ್‌ಗೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ. ನಿತಿನ್‌ ಬದ್ರಿ ನಾಯಕನಾಗಿ ನೇಮಕಗೊಂಡಿದ್ದಾರೆ. ರಾಜ್ಯ ತಂಡ ಜು.20ಕ್ಕೆ ಒಡಿಶಾ ವಿರುದ್ಧ ಮೊದಲ ಪಂದ್ಯ ಆಡಲಿದ್ದು, ಜು.22ಕ್ಕೆ ಜಾರ್ಖಂಡ್‌, ಜು.24ಕ್ಕೆ ಮಣಿಪುರ ವಿರುದ್ಧ ಸೆಣಸಾಡಲಿದೆ.

ತಂಡ: ನಿತಿನ(ನಾಯಕ), ಶಾನ್‌ ಚೌಧರಿ, ಪವೀಶ್‌ ಕುಮಾರ್‌, ಯುವನ್‌, ಹಿಮಾಗ್ನ ಸಾನ್ಯಲ್, ಸಂದೀಪ್‌ ಸಿಂಗ್‌, ಅಗ್ರಿಮ್‌ ಗಂಗ್ವಾರ್‌, ಥಿಯಾಮ್‌ ಸಾಂಬೆ, ನೋಹ್‌ ಅರುಣ್‌, ಕಾರ್ತಿಕ್‌, ಹೃಷಿಕೇಶ್‌ ಚರಣ್‌, ಉಮರ್‌ ಸೋಫ್‌, ಬಿರ್ಜಿತ್ ಸಿಂಗ್, ಅರ್ವಿನ್‌ ಚಿರಕ್ಕರ, ರಿದಿತ್‌ ಮಹೇಶ್ವರಿ, ಆದಿನಾಥ, ತರುಣ್‌ ದೇವ್‌, ಶ್ರೇಯಸ್‌ ಪಾಟೀಲ್‌, ಸ್ವರೂಪ್‌, ರಿಶಾನ್‌ ಚೌಧರಿ.

2025-26ರ ಐಎಸ್‌ಎಲ್‌ ಫುಟ್ಬಾಲ್‌ಗೆ ತಾತ್ಕಾಲಿಕ ತಡೆ

ನವದೆಹಲಿ: ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್ಬಾಲ್‌ ಟೂರ್ನಿ ಆಯೋಜಕ ಸಂಸ್ಥೆ ಹಾಗೂ ಅಖಿಲ ಭಾರತ ಫುಟ್ಬಾಲ್‌ ಫೆಡರೇಶನ್ (ಎಐಎಫ್‌ಎಫ್‌) ನಡುವಿನ ಗುತ್ತಿಗೆ ಒಪ್ಪಂದ ನವೀಕರಣಗೊಳ್ಳದ ಕಾರಣ, 2025-26ರ ಐಎಸ್‌ಎಲ್‌ ಟೂರ್ನಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ.

ಟೂರ್ನಿ ಆಯೋಜಕರಾದ ರಿಲಯನ್ಸ್‌ ಸಂಸ್ಥೆಯ ಭಾಗವಾಗಿರುವ ಫುಟ್ಬಾಲ್‌ ಸ್ಪೋರ್ಟ್ಸ್‌ ಡೆವಲಪ್‌ಮೆಂಟ್‌ ಲಿ. (ಎಫ್‌ಎಸ್‌ಡಿಎಲ್‌) ಹಾಗೂ ಎಐಎಫ್‌ಎಫ್‌ ನಡುವಿನ ಒಪ್ಪಂದ ಡಿ.8, 2025ರಂದು ಕೊನೆಗೊಳ್ಳಲಿದೆ. ಸಾಮಾನ್ಯವಾಗಿ ಐಎಸ್‌ಎಲ್‌ ಟೂರ್ನಿಯು ಸೆಪ್ಟೆಂಬರ್‌ನಿಂದ ಏಪ್ರಿಲ್‌ ವರೆಗೂ ನಡೆಯಲಿರುವ ಕಾರಣ, ಗುತ್ತಿಗೆ ನವೀಕರಣಗೊಳ್ಳದೆ ಟೂರ್ನಿ ಆಯೋಜಿಸುವ ಸ್ಥಿತಿಯಲ್ಲಿ ತಾನಿಲ್ಲ ಎಂದು ಎಫ್‌ಎಸ್‌ಡಿಎಲ್‌ ಎಲ್ಲಾ ಫ್ರಾಂಚೈಸಿಗಳಿಗೂ ಮಾಹಿತಿ ನೀಡಿದೆ.

ಜಪಾನ್‌ ಬ್ಯಾಡ್ಮಿಂಟನ್‌: ಸಿಂಧುಗೆ ಶಾಕ್‌, ಸಾತ್ವಿಕ್‌-ಚಿರಾಗ್‌ಗೆ ಜಯ

ಟೋಕಿಯೋ: ಜಪಾನ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ತಾರಾ ಶಟ್ಲರ್‌ ಪಿ.ವಿ.ಸಿಂಧು ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದಾರೆ. 2 ಬಾರಿ ಒಲಿಂಪಿಕ್ಸ್‌ ಪದಕ ವಿಜೇತ ಸಿಂಧು ಅವರು ದ.ಕೊರಿಯಾದ ಸಿಮ್‌ ಯು ಜಿನ್‌ ವಿರುದ್ಧ 15-21, 14-21ರಲ್ಲಿ ಸೋತರು.

ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌-ಚಿರಾಗ್‌ ಶೆಟ್ಟಿ ಜೋಡಿ ಕೊರಿಯಾದ ಕಾಂಗ್‌ ಮಿನ್‌ ಹ್ಯುಕ್‌-ಕಿಮ್‌ ಡೊಂಗ್‌ ವಿರುದ್ಧ 21-18, 21-10ರಲ್ಲಿ ಜಯಗಳಿದರೆ, ಸಿಂಗಲ್ಸ್‌ನಲ್ಲಿ ಲಕ್ಷ್ಯ ಸೇನ್‌ ಚೀನಾದ ವಾಂಗ್‌ ಝೆಂಗ್‌ರನ್ನು 21-11, 21-18ರಲ್ಲಿ ಗೆದ್ದರು. ಮಹಿಳಾ ಸಿಂಗಲ್ಸ್‌ನಲ್ಲಿ ಅನುಪಮಾ ಉಪಾಧ್ಯಾಯ 2ನೇ ಸುತ್ತಿಗೇರಿದರು.

ಸ್ಪರ್ಧಿಗಳ ಸಂಖ್ಯೆ ಹೆಚ್ಚಳ: 1 ದಿನದ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ಸ್ 2 ದಿನಕ್ಕೆ ವಿಸ್ತರಣೆ

ನವದೆಹಲಿ: ಪಂಜಾಬ್‌ನ ಸಂಗ್ರೂರ್‌ನಲ್ಲಿ ಇದೇ ತಿಂಗಳ 27ರಂದು ನಿಗದಿಯಾಗಿದ್ದ ಭಾರತೀಯ ಓಪನ್ ಅಥ್ಲೆಟಿಕ್ಸ್‌ ಕೂಟವನ್ನು 1 ದಿನದ ಬದಲು 2 ದಿನಕ್ಕೆ ವಿಸ್ತರಿಸಲಾಗಿದೆ. ಅಧಿಕ ಸಂಖ್ಯೆಯಲ್ಲಿ ಸ್ಪರ್ಧಿಗಳ ಭಾಗವಹಿಸುವಿಕೆ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಬಗ್ಗೆ ಅಥ್ಲೆಟಿಕ್ಸ್ ಫೆಡರೇಶನ್ ಮಾಹಿತಿ ನೀಡಿದ್ದು, ‘900 ಅಥ್ಲೀಟ್‌ಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ಹೀಗಾಗಿ 2 ದಿನಗಳ ಕೂಟ ಆಯೋಜನೆ ಅನಿವಾರ್ಯ. ಜು.27ರಿಂದ 28ರ ತನಕ ಸ್ಪರ್ಧೆಗಳು ನಡೆಯಲಿವೆ’ ಎಂದಿದೆ.