ಸ್ಟಾಫರ್ಡ್ ಕಪ್ ಫುಟ್ಬಾಲ್: ಬೆಂಗಳೂರು ಯುನೈಡೆಟ್ಗೆ ರೋಚಕ ಗೆಲುವು
ಸ್ಟಾಫರ್ಡ್ ಚಾಲೆಂಜ್ ಕಪ್ ಫುಟ್ಬಾಲ್ ಟೂರ್ನಿ ಬೆಂಗಳೂರು ಯುನೈಟೆಡ್ ಶುಭಾರಂಭ
ಡೆಂಪೊ ಎಸ್‌ಸಿ ವಿರುದ್ಧದ ಬೆಂಗಳೂರು ಯುನೈಟೆಡ್ ತಂಡ 4-0 ಭರ್ಜರಿ ಗೆಲುವು
ಇಂದು ಬೆಂಗಳೂರು ಎಫ್‌ಸಿ ತಂಡ ಡೆಲ್ಲಿ ವಿರುದ್ಧ ಸೆಣಸಾಟ
ಬೆಂಗಳೂರು(ಫೆ.26): ಸ್ಟಾಫರ್ಡ್ ಚಾಲೆಂಜ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಬೆಂಗಳೂರು ಯುನೈಟೆಡ್ ಎಫ್‌ಸಿ ತಂಡ ಶುಭಾರಂಭ ಮಾಡಿದೆ. ಶನಿವಾರ ಡೆಂಪೊ ಎಸ್‌ಸಿ ವಿರುದ್ಧದ ಪಂದ್ಯದಲ್ಲಿ ಯುನೈಟೆಡ್ ತಂಡ 4-0 ಭರ್ಜರಿ ಗೆಲುವು ಸಾಧಿಸಿತು. ಸೆಲ್ವಿನ್ ಫ್ರಾಜೆರ್, ಇರ್ಫಾನ್, ಶುಭಾ ಘೋಷ್, ಜುರ್ವಾ ಯುನೈಟೆಡ್ ಪರ ಗೋಲು ಬಾರಿಸಿದರು. ದಿನದ ಮತ್ತೊಂದು ಪಂದ್ಯದಲ್ಲಿ ಎಎಸ್ಸಿ ತಂಡ ಗೋಕುಲಂ ಕೇರಳ ಎಫ್‌ಸಿ ವಿರುದ್ಧ 3-2 ಗೋಲುಗಳಿಂದ ಗೆಲುವು ಸಾಧಿಸಿತು. ಭಾನುವಾರ ಬೆಂಗಳೂರು ಎಫ್‌ಸಿ ತಂಡ ಡೆಲ್ಲಿ ವಿರುದ್ಧ ಸೆಣಸಾಡಲಿದೆ.
ಸ್ಟಾಫರ್ಡ್ ಕಪ್ ಫುಟ್ಬಾಲ್: ಬೆಂಗಳೂರು ಎಫ್‌ಸಿ ಪಂದ್ಯ ಡ್ರಾ:
ಸ್ಟಾಫರ್ಡ್ ಚಾಲೆಂಜ್ ಕಪ್ ಫುಟ್ಬಾಲ್ ಟೂರ್ನಿಯ ತನ್ನ ಆರಂಭಿಕ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ತಂಡ ಡ್ರಾಗೆ ತೃಪ್ತಿಪಟ್ಟುಕೊಂಡಿತು. ಶುಕ್ರವಾರ ಬಿಎಫ್ಸಿ ಹಾಗೂ ಹೈದರಾಬಾದ್ನ ಶ್ರೀನಿಧಿ ಡೆಕ್ಕನ್ ಎಫ್‌ಸಿ ನಡುವಿನ ಪಂದ್ಯ 1-1 ಗೋಲುಗಳಿಂದ ಡ್ರಾಗೊಂಡಿತ್ತು.
ಇನ್ನುಳಿದಂತೆ ದಿನದ ಇನ್ನುಳಿದ 3 ಪಂದ್ಯಗಳಲ್ಲಿ ಚೆನ್ನೈಯಿನ್ ಎಫ್‌ಸಿ ಅಹಮದಾಬಾದ್‌ನ ಎಆರ್‌ಎ ಎಫ್‌ಸಿ ವಿರುದ್ಧ 1-0, ಕಿಕ್ಸ್ಟಾರ್ಚ್ ಎಫ್‌ಸಿ ತಂಡ ಕೇರಳ ಯುನೈಟೆಡ್ ವಿರುದ್ಧ 3-2, ಡೆಲ್ಲಿ ಎಫ್‌ಸಿ ತಂಡ ಕೆಂಕ್ರೆ ಎಫ್‌ಸಿ ವಿರುದ್ಧ 1-0 ಗೋಲುಗಳಿಂದ ಜಯಗಳಿಸಿತು.
ರಾಷ್ಟ್ರೀಯ ಬ್ಯಾಡ್ಮಿಂಟನ್: ರುಜುಲಾ, ತಾನ್ಯಾಗೆ ಸೋಲು
ಪುಣೆ: 84ನೇ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನ 2ನೇ ದಿನ ಕರ್ನಾಟಕದ ಶಟ್ಲರ್ಗಳು ಮಿಶ್ರಫಲ ಅನುಭವಿಸಿದ್ದಾರೆ. ಪುರುಷರ ಸಿಂಗಲ್ಸ್ನಲ್ಲಿ ರಘು ಗೆಲುವು ಸಾಧಿಸಿದರೆ, ಮಹಿಳಾ ಡಬಲ್ಸ್ನಲ್ಲಿ ಶಿಖಾ ಗೌತಮ್-ಅಶ್ವಿನಿ ಭಟ್, ಅಪೇಕ್ಷಾ ನಾಯಕ್-ರಮ್ಯಾ ವೆಂಕಟೇಶ್ ಜಯಭೇರಿ ಬಾರಿಸಿದರು.
Bengaluru Open 2023: ಭಾರತದ ಚಂದ್ರಶೇಖರ್, ಪ್ರಶಾಂತ್ ರನ್ನರ್ ಅಪ್..!
ಮಿಶ್ರ ಡಬಲ್ಸ್ನಲ್ಲಿ ನಿತಿನ್-ಜನನಿ ಅನಂತ್ಕುಮಾರ್ ಜಯಗಳಿಸಿದರು. ಆದರೆ ಮಹಿಳಾ ಸಿಂಗಲ್ಸ್ನಲ್ಲಿ ತಾರಾ ಆಟಗಾರ್ತಿ ತಾನ್ಯಾ ಹೇಮಂತ್ ಅವರು ಆಕರ್ಷಿ ಕಶ್ಯಪ್ ವಿರುದ್ಧ ಆಘಾತಕಾರಿ ಸೋಲುಂಡರು. ರುಜುಲಾ ರಾಮು ಪರಾಭವಗೊಂಡರು. ಮಿಶ್ರ ಡಬಲ್ಸ್ನಲ್ಲಿ ಕಿರಣ್ ಕುಮಾರ್-ಅಪೇಕ್ಷಾ ನಾಯಕ್ ಜೋಡಿಯ ಅಭಿಯಾನವೂ ಕೊನೆಗೊಂಡಿತು.
ನಾಳೆಯಿಂದ ಗೋವಾದಲ್ಲಿ ಟೇಬಲ್ ಟೆನಿಸ್ ಟೂರ್ನಿ
ಪಣಜಿ: ಸೋಮವಾರದಿಂದ ಆರಂಭವಾಗಲಿರುವ ವಿಶ್ವ ಟೇಬಲ್ ಟೆನಿಸ್(ಡಬ್ಲ್ಯುಟಿಟಿ) ಸ್ಟಾರ್ ಕಂಟೆಂಡರ್ನಲ್ಲಿ ಭಾರತವನ್ನು ತಾರಾ ಟಿಟಿ ಪಟುಗಳಾದ ಶರತ್ ಕಮಾಲ್, ಜಿ.ಸತ್ಯನ್ ಹಾಗೂ ಮನಿಕಾ ಬಾತ್ರಾ ಮುನ್ನಡೆಸಲಿದ್ದಾರೆ. ಟೂರ್ನಿಗೆ ಮೊದಲ ಬಾರಿ ಗೋವಾ ಆತಿಥ್ಯ ವಹಿಸಲಿದ್ದು, ಸೋಮವಾರ, ಮಂಗಳವಾರ ಅರ್ಹತಾ ಪಂದ್ಯಗಳು ನಡೆಯಲಿದೆ. ಪ್ರಧಾನ ಸುತ್ತು ಮಾ.1ರಿಂದ 5ರ ವರೆಗೆ ನಡೆಯಲಿದೆ. ಪುರುಷರ ಸಿಂಗಲ್ಸ್ನಲ್ಲಿ ಶರತ್, ಸತ್ಯನ್ ಜೊತೆ ವೆಸ್ಲಿ ರೊಸಾರಿಯೋ ಆಡಲಿದ್ದು, ಮಹಿಳಾ ಸಿಂಗಲ್ಸ್ನಲ್ಲಿ ಮನಿಕಾ ಜೊತೆ ಶ್ರೀಜಾ ಅಕುಲಾ, ಸುಹಾನಾ ಸೈನಿ ಸ್ಪರ್ಧಿಸಲಿದ್ದಾರೆ.
ಇಂದಿನಿಂದ ಕಿರಿಯರ ವಿಶ್ವ ಕಬಡ್ಡಿ ಚಾಂಪಿಯನ್ಶಿಪ್
ಉರ್ಮಿಯಾ(ಇರಾನ್): 2ನೇ ಆವೃತ್ತಿಯ ವಿಶ್ವ ಕಿರಿಯರ ಕಬಡ್ಡಿ ಚಾಂಪಿಯನ್ಶಿಪ್ ಭಾನುವಾರ ಇರಾನ್ನ ಉರ್ಮಿಯಾದಲ್ಲಿ ಆರಂಭಗೊಳ್ಳಲಿದೆ. ಹಾಲಿ ಚಾಂಪಿಯನ್ ಇರಾನ್, ಜರ್ಮನಿ, ಪಾಕಿಸ್ತಾನ, ಬಾಂಗ್ಲಾದೇಶ ಸೇರಿದಂತೆ ಒಟ್ಟು 16 ತಂಡಗಳು ಈ ಬಾರಿ ಪಾಲ್ಗೊಳ್ಳಲಿದ್ದು, ಭಾರತ ಮೊದಲ ಬಾರಿ ಕೂಟದಲ್ಲಿ ಆಡುತ್ತಿದೆ. ನರೇಂದರ್ ಖಂಡೋಲ, ಅಂಕುಶ್ ರಾಥೀ ಸೇರಿದಂತೆ ಪ್ರೊ ಕಬಡ್ಡಿ ಲೀಗ್ನಲ್ಲಿ ಮಿಂಚಿರುವ ಹಲವು ಆಟಗಾರರು ಭಾರತ ತಂಡದಲ್ಲಿದ್ದು, ಪ್ರಶಸ್ತಿ ಗೆಲ್ಲುವ ಫೇವರಿಟ್ ಎನಿಸಿಕೊಂಡಿದೆ. ಕಳೆದ ಆವೃತ್ತಿಯಲ್ಲಿ 14 ತಂಡಗಳು ಟೂರ್ನಿಯಲ್ಲಿ ಪಾಲ್ಗೊಂಡಿತ್ತು.