Santosh Trophy: ಕರ್ನಾಟಕ ಫುಟ್ಬಾಲ್ ತಂಡ ಸೆಮಿಫೈನಲ್ಗೆ ಲಗ್ಗೆ
ಸಂತೋಷ್ ಟ್ರೋಫಿ ರಾಷ್ಟ್ರೀಯ ಫುಟ್ಬಾಲ್ ಟೂರ್ನಿಯಲ್ಲಿ ಕರ್ನಾಟಕ ಸೆಮೀಸ್ ಪ್ರವೇಶ
4 ಬಾರಿ ಚಾಂಪಿಯನ್ ಕರ್ನಾಟಕ ಅಂತಿಮ ನಾಲ್ಕರ ಘಟ್ಟ ಪ್ರವೇಶ
‘ಎ’ ಗುಂಪಿನಲ್ಲಿ 9 ಅಂಕದೊಂದಿಗೆ 2ನೇ ಸ್ಥಾನ ಪಡೆದ ಕರ್ನಾಟಕ ಫುಟ್ಬಾಲ್ ತಂಡ
ಭುವನೇಶ್ವರ(ಫೆ.20): ಸಂತೋಷ್ ಟ್ರೋಫಿ ರಾಷ್ಟ್ರೀಯ ಫುಟ್ಬಾಲ್ ಟೂರ್ನಿಯಲ್ಲಿ 4 ಬಾರಿ ಚಾಂಪಿಯನ್ ಕರ್ನಾಟಕ ಸೆಮಿಫೈನಲ್ಗೆ ಲಗ್ಗೆ ಇಟ್ಟಿದೆ. ಟೂರ್ನಿಯ ಅಂತಿಮ ಸುತ್ತಿನ ಕೊನೆಯ ಪಂದ್ಯದಲ್ಲಿ ಭಾನುವಾರ ಒಡಿಶಾ ವಿರುದ್ಧ 2-2 ಗೋಲುಗಳಿಂದ ಡ್ರಾ ಸಾಧಿಸಿದ ರಾಜ್ಯ ತಂಡ ‘ಎ’ ಗುಂಪಿನಲ್ಲಿ 9 ಅಂಕದೊಂದಿಗೆ 2ನೇ ಸ್ಥಾನ ಪಡೆಯಿತು.
ನಿರ್ಣಾಯಕ ಪಂದ್ಯದಲ್ಲಿ ಪಂಜಾಬ್ ವಿರುದ್ಧ 1-1 ಡ್ರಾಗೆ ತೃಪ್ತಿಪಟ್ಟ ಹಾಲಿ ಚಾಂಪಿಯನ್ ಕೇರಳ(8 ಅಂಕ) ಟೂರ್ನಿಯಿಂದ ಹೊರಬಿತ್ತು. ಪಂಜಾಬ್(11 ಅಂಕ) ಅಗ್ರಸ್ಥಾನಿಯಾಗಿ ಸೆಮೀಸ್ಗೇರಿತು. ಭಾನುವಾರದ ಪಂದ್ಯದಲ್ಲಿ ಕರ್ನಾಟಕ ಪರ ಸುನಿಲ್ ಕುಮಾರ್(17ನೇ ನಿಮಿಷ) ಮೊದಲ ಗೋಲು ಬಾರಿಸಿದರು. ಬಳಿಕ ಒಡಿಶಾ 2 ಗೋಲು ದಾಖಲಿಸಿ ಮುನ್ನಡೆ ಸಾಧಿಸಿದರೂ 50ನೇ ನಿಮಿಷದಲ್ಲಿ ಶಾಜನ್ ಫ್ರಾಂಕ್ಲಿನ್ ಬಾರಿಸಿದ ಗೋಲು ರಾಜ್ಯಕ್ಕೆ ಸೋಲು ತಪ್ಪಿಸಿತು. ಸೆಮಿಫೈನಲ್, ಫೈನಲ್ ಮಾ.1ರಿಂದ 4ರ ವರೆಗೆ ಸೌದಿ ಅರೇಬಿಯಾದ ರಿಯಾದ್ನಲ್ಲಿ ನಡೆಯಲಿದೆ.
ಏಷ್ಯಾ ಬ್ಯಾಡ್ಮಿಂಟನ್: ಭಾರತಕ್ಕೆ ಕಂಚಿನ ಪದಕ
ದುಬೈ: ಏಷ್ಯಾ ಮಿಶ್ರ ತಂಡ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತ ಐತಿಹಾಸಿಕ ಕಂಚಿನ ಪದಕ ಗೆದ್ದಿದೆ. ಶನಿವಾರ ಚೀನಾ ವಿರುದ್ಧದ ಸೆಮಿಫೈನಲ್ನಲ್ಲಿ ಭಾರತ 2-3 ಅಂತರದಲ್ಲಿ ಸೋಲನುಭವಿಸಿ ಚೊಚ್ಚಲ ಬಾರಿ ಫೈನಲ್ ಪ್ರವೇಶಿಸುವ ಅವಕಾಶ ಕಳೆದುಕೊಂಡಿತು.
ಆರಂಭಿಕ 2 ಪಂದ್ಯಗಳಲ್ಲಿ ಸೋತು 0-2 ಹಿನ್ನಡೆ ಅನುಭವಿಸಿದರೂ ಬಳಿಕ ಪುಟಿದೆದ್ದ ಭಾರತ ಕೊನೆವರೆಗೂ ಹೋರಾಟ ಪ್ರದರ್ಶಿಸಿತು. ಪುರುಷರ ಸಿಂಗಲ್ಸ್ನಲ್ಲಿ ಎಚ್.ಎಸ್.ಪ್ರಣಯ್, ಮಹಿಳಾ ಸಿಂಗಲ್ಸ್ನಲ್ಲಿ ಪಿ.ವಿ.ಸಿಂಧು ಪರಾಭವಗೊಂಡರು. ಆದರೆ ಪುರುಷರ ಡಬಲ್ಸ್ನಲ್ಲಿ ಧ್ರುವ್ ಕಪಿಲಾ-ಚಿರಾಗ್ ಶೆಟ್ಟಿಗೆಲುವು ಸಾಧಿಸಿದರೆ, ಮಹಿಳಾ ಡಬಲ್ಸ್ನಲ್ಲಿ ತೀಸಾ ಜಾಲಿ-ಗಾಯತ್ರಿ ಗೋಪಿಚಂಗ್ ರೋಚಕವಾಗಿ ಗೆದ್ದರು. ಆದರೆ ಮಿಶ್ರ ಡಬಲ್ಸ್ನಲ್ಲಿ ಇಶಾನ್ ಭಾಟ್ನಗರ್-ತನಿಶಾ ಕ್ರಾಸ್ಟೊಸೋಲನುಭವಿಸಿದರು.
ಇಂದಿನಿಂದ ಬೆಂಗ್ಳೂರು ಓಪನ್ ಟೆನಿಸ್ ಟೂರ್ನಿ
ಬೆಂಗಳೂರು: 5ನೇ ಆವೃತ್ತಿಯ ಬೆಂಗಳೂರು ಓಪನ್ ಎಟಿಪಿ ಟೆನಿಸ್ ಟೂರ್ನಿ ಸೋಮವಾರ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ(ಕೆಎಸ್ಎಲ್ಟಿಎ)ಯಲ್ಲಿ ಆರಂಭವಾಗಲಿದ್ದು, ದಿಗ್ಗಜ ಆಟಗಾರ ಸ್ವಿಡನ್ನ ಬ್ಯೊರ್ನ್ ಬೊರ್ಗ್ ಅವರ ಪುತ್ರ ಲಿಯೊ ಬೊರ್ಗ್ ಸೇರಿದಂತೆ ಹಲವು ತಾರೆಯರು ಕಣಕ್ಕಿಳಿಯಲಿದ್ದಾರೆ.
ಟರ್ಕಿ ಭೂಕಂಪಕ್ಕೆ ಘಾನ ಫುಟ್ಬಾಲ್ ಪ್ಲೇಯರ್ ಅಟ್ಸು ಬಲಿ, ಖಚಿತಪಡಿಸಿದ ಮ್ಯಾನೇಜರ್!
ಭಾರತದ ತಾರಾ ಟೆನಿಸಿಗ ಸುಮಿತ್ ನಗಾಲ್ ಜೊತೆ ಕರ್ನಾಟಕದ ನಂ.1 ಆಟಗಾರ ಪ್ರಜ್ವಲ್ ದೇವ್ ಟೂರ್ನಿಗೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದಾರೆ. ರಾಮ್ಕುಮಾರ್ ರಾಮನಾಥನ್, ಅರ್ಜುನ್ ಖಾಡೆ, ಅನಿರುದ್ಧ್ ಚಂದ್ರಶೇಕರ್ ಸೇರಿದಂತೆ 6 ಮಂದಿ ಡಬಲ್ಸ್ಗೆ ನೇರ ಅರ್ಹತೆ ಪಡೆದುಕೊಂಡಿದ್ದಾರೆ. ಹಾಲಿ ವಿಂಬಲ್ಡನ್ ಡಬಲ್ಸ್ ಚಾಂಪಿಯನ್ ಆಸ್ಪ್ರೇಲಿಯಾದ ಮ್ಯಾಕ್ಸ್ ಪರ್ಸೆಲ್ ಕೂಡಾ ಆಡಲಿದ್ದಾರೆ. ಟೂರ್ನಿಯ ಫೈನಲ್ ಫೆಬ್ರವರಿ 26ಕ್ಕೆ ನಡೆಯಲಿದೆ.
ರಾಷ್ಟ್ರೀಯ ಮಹಿಳಾ ಹಾಕಿ: ಕ್ವಾರ್ಟರ್ಗೆ ರಾಜ್ಯ ತಂಡ
ಕಾಕೀನಾಡ(ಆಂಧ್ರ ಪ್ರದೇಶ): 13ನೇ ಆವೃತ್ತಿಯ ರಾಷ್ಟ್ರೀಯ ಮಹಿಳಾ ಹಾಕಿ ಚಾಂಪಿಯನ್ಶಿಪ್ನಲ್ಲಿ ಕರ್ನಾಟಕ ಸತತ 2 ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಶನಿವಾರ ಗೋವಾ ವಿರುದ್ಧ 10-0 ಭರ್ಜರಿ ಗೆಲುವು ಸಾಧಿಸಿದ್ದ ರಾಜ್ಯ ತಂಡ, ಭಾನುವಾರ ಚಂಡೀಗಢ ವಿರುದ್ಧ 2-1 ಗೋಲುಗಳಿಂದ ಜಯಗಳಿಸಿತು. ಇದರೊಂದಿಗೆ ‘ಬಿ’ ಗುಂಪಿನಲ್ಲಿ ಕರ್ನಾಟಕ ಅಗ್ರಸ್ಥಾನ ಪಡೆಯಿತು. ಫೆ.23ಕ್ಕೆ ಕ್ವಾರ್ಟರ್ ಫೈನಲ್ ನಡೆಯಲಿದೆ.