SAFF Cup Championship 2023: ಭಾರತಕ್ಕೆ ಸೆಮೀಸ್‌ನಲ್ಲಿ ಲೆಬನಾನ್ ಸವಾಲು
ಸ್ಯಾಫ್ ಕಪ್ ಟೂರ್ನಿಯ ಸೆಮೀಸ್‌ನಲ್ಲಿ ಭಾರತ- ಲೆಬನಾನ್ ಮುಖಾಮುಖಿ
8 ಬಾರಿ ಚಾಂಪಿಯನ್ ಆಗಿರುವ ಭಾರತ ಫುಟ್ಬಾಲ್ ತಂಡ
ಮತ್ತೊಂದು ಸೆಮೀಸ್‌ನಲ್ಲಿ ಕುವೈತ್-ಬಾಂಗ್ಲಾದೇಶ ಮುಖಾಮುಖಿ
ಬೆಂಗಳೂರು(ಜೂ.29): 14ನೇ ಆವೃತ್ತಿಯ ಸ್ಯಾಫ್ ಕಪ್ ಫುಟ್ಬಾಲ್ ಚಾಂಪಿಯನ್‌ಶಿಪ್‌ನ ನಾಕೌಟ್ ಹಂತಕ್ಕೆ ತಂಡಗಳು ಅಂತಿಮಗೊಂಡಿದ್ದು, 8 ಬಾರಿ ಚಾಂಪಿಯನ್ ಭಾರತ ಸೆಮಿಫೈನಲ್‌ನಲ್ಲಿ ಲೆಬನಾನ್ ವಿರುದ್ಧ ಸೆಣಸಾಡಲಿದೆ. ಮತ್ತೊಂದು ಸೆಮೀಸ್‌ನಲ್ಲಿ ಕುವೈತ್-ಬಾಂಗ್ಲಾದೇಶ ಮುಖಾಮುಖಿಯಾಗಲಿವೆ. ಎರಡೂ ಪಂದ್ಯಗಳು ಶನಿವಾರ (ಜು.1) ನಡೆಯಲಿವೆ.
‘ಎ’ ಗುಂಪಿನಲ್ಲಿದ್ದ ಆತಿಥೇಯ ಭಾರತ ಅಜೇಯವಾಗಿಯೇ ಸೆಮೀಸ್ ಪ್ರವೇಶಿಸಿದೆ. ಪಾಕಿಸ್ತಾನವನ್ನು ಸೋಲಿಸಿ ಶುಭಾರಂಭ ಮಾಡಿದ್ದ ಭಾರತ ಬಳಿಕ ನೇಪಾಳ ವಿರುದ್ದ ಗೆದ್ದಿತ್ತು. ಆದರೆ ಕುವೈತ್ ವಿರುದ್ಧ ಡ್ರಾಗೆ ತೃಪ್ತಿಪಟ್ಟಿದ್ದರಿಂದ ಗುಂಪಿನಲ್ಲಿ 2ನೇ ಸ್ಥಾನಿಯಾಗಿತ್ತು. ಅತ್ತ ಲೆಬನಾನ್ ‘ಬಿ’ ಗುಂಪಿನಿಂದ 3 ಪಂದ್ಯಗಳಲ್ಲೂ ಗೆದ್ದು ಸೆಮೀಸ್ ತಲುಪಿದೆ. ಬುಧವಾರ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಮಾಲ್ಡೀವ್ಸ್ ವಿರುದ್ಧ ಲೆಬನಾನ್ 1-0 ಗೋಲಿನ ಜಯ ಪಡೆಯಿತು. ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಭೂತನ್ ತಂಡವನ್ನು ಬಾಂಗ್ಲಾದೇಶ 3-1ರಲ್ಲಿ ಬಗ್ಗುಬಡಿಯಿತು.
ಭಾರತ ಹಾಗೂ ಲೆಬನಾನ್ ತಂಡಗಳು ಇತ್ತೀಚೆಗಷ್ಟೇ ಇಂಟರ್ ಕಾಂಟಿನೆಂಟಲ್ ಕಪ್ ಟೂರ್ನಿಯಲ್ಲಿ 2 ಬಾರಿ ಮುಖಾಮುಖಿಯಾಗಿದ್ದವು. ಫೈನಲ್‌ನಲ್ಲಿ ಲೆಬನಾನ್ ವಿರುದ್ಧ ಭಾರತ ಜಯಿಸಿತ್ತು.
ಮತ್ತೊಂದು ಸೆಮೀಸ್‌ನಲ್ಲಿ ಆಡಲಿರುವ ಕುವೈತ್ 2 ಗೆಲುವು, 1 ಡ್ರಾದೊಂದಿಗೆ ‘ಎ’ ಗುಂಪಿನಲ್ಲಿ ಅಗ್ರಸ್ಥಾನಿಯಾಗಿದ್ದರೆ, ಬಾಂಗ್ಲಾದೇಶ 2 ಗೆಲುವು, 1 ಸೋಲಿನೊಂದಿಗೆ ‘ಬಿ’ ಗುಂಪಿನಲ್ಲಿ ದ್ವಿತೀಯ ಸ್ಥಾನ ಪಡೆದಿದೆ.
ವಿಂಬಲ್ಡನ್: ಆಲ್ಕರಜ್, ಇಗಾಗೆ ಅಗ್ರ ಶ್ರೇಯಾಂಕ
ಲಂಡನ್: ಜು.3ರಿಂದ ಆರಂಭಗೊಳ್ಳಲಿರುವ ವಿಂಬಲ್ಡನ್ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿಯ ಶ್ರೇಯಾಂಕ ಪಟ್ಟಿ ಬಿಡುಗಡೆಗೊಂಡಿದ್ದು, ವಿಶ್ವ ನಂ.1 ಟೆನಿಸಿಗರಾದ ಕಾರ್ಲೊಸ್ ಆಲ್ಕರಜ್ ಹಾಗೂ ಇಗಾ ಸ್ವಿಯಾಟೆಕ್ ಕ್ರಮವಾಗಿ ಪುರುಷ, ಮಹಿಳಾ ಸಿಂಗಲ್ಸ್‌ನಲ್ಲಿ ಅಗ್ರ ಶ್ರೇಯಾಂಕ ಪಡೆದಿದ್ದಾರೆ. ಸರ್ಬಿಯಾದ ನೋವಾಕ್ ಜೋಕೋವಿಚ್ ಇತ್ತೀಚೆಗಷ್ಟೇ ಫ್ರೆಂಚ್ ಓಪನ್ ಗೆದ್ದಿದ್ದರೂ ಶ್ರೇಯಾಂಕ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದ್ದು, ಡ್ಯಾನಿಲ್ ಮೆಡ್ವೆಡೆವ್, ಕ್ಯಾಸ್ಪೆರ್ ರುಡ್, ಸಿಟ್ಸಿಪಾಸ್ ನಂತರದ ಸ್ಥಾನಗಳಲ್ಲಿದ್ದಾರೆ. ಮಹಿಳಾ ಸಿಂಗಲ್ಸ್‌ನಲ್ಲಿ ಅರೈನಾ ಸಬಲೆಂಕಾ 2ನೇ ಸ್ಥಾನದಲ್ಲಿದ್ದು, ಎಲೆನಾ ರಬೈಕೆನಾ, ಜೆಸ್ಸಿಕಾ ಪೆಗುಲಾ, ಕ್ಯಾರೊಲಿನಾ ಗಾರ್ಸಿಯಾ ಕ್ರಮವಾಗಿ ನಂತರದ ಸ್ಥಾನಗಳಲ್ಲಿದ್ದಾರೆ.
ಏಷ್ಯನ್ ಕಬಡ್ಡಿ ಕೂಟ: ಭಾರತಕ್ಕೆ ಹ್ಯಾಟ್ರಿಕ್ ಜಯ
ಬುಸಾನ್(ದ.ಕೊರಿಯಾ): 11ನೇ ಆವೃತ್ತಿಯ ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿನಲ್ಲಿ ಭಾರತ ಹ್ಯಾಟ್ರಿಕ್ ಗೆಲುವು ಸಾಧಿಸಿದೆ. ಮೊದಲ ದಿನ ದ.ಕೊರಿಯಾ ಹಾಗೂ ಚೈನೀಸ್ ತೈಪೆ ವಿರುದ್ಧ ಜಯಗಳಿಸಿದ್ದ ಭಾರತ, ಬುಧವಾರ 3ನೇ ಪಂದ್ಯದಲ್ಲಿ ಜಪಾನ್ ತಂಡವನ್ನು 62-17 ಅಂಕಗಳಿಂದ ಮಣಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿತು. ಭಾರತ 4ನೇ ಪಂದ್ಯದಲ್ಲಿ ಗುರುವಾರ ಬಲಿಷ್ಠ ಇರಾನ್ ವಿರುದ್ಧ ಸೆಣಸಲಿದೆ. ಇರಾನ್ ಕೂಡಾ 3 ಜಯ ಸಾಧಿಸಿ 2ನೇ ಸ್ಥಾನದಲ್ಲಿದೆ. ಭಾರತ ಕೊನೆ ಪಂದ್ಯದಲ್ಲಿ ಹಾಂಕಾಂಗ್ ವಿರುದ್ಧ ಆಡಲಿದೆ. ಕೂಟದಲ್ಲಿ ಒಟ್ಟು 6 ತಂಡಗಳು ಪಾಲ್ಗೊಂಡಿದ್ದು, ರೌಂಡ್ ರಾಬಿನ್ ಹಂತದ ಅಂತ್ಯಕ್ಕೆ ಅಗ್ರ 2 ಸ್ಥಾನ ಪಡೆವ ತಂಡಗಳು ಜೂ.30ರಂದು ಫೈನಲಲ್ಲಿ ಆಡಲಿವೆ.