SAFF Cup 2023: ನೇಪಾಳವನ್ನು ಮಣಿಸಿ ಸೆಮೀಸ್‌ಗೇರಿದ ಭಾರತ
ಸ್ಯಾಫ್ ಕಪ್ ಫುಟ್ಬಾಲ್: ಭಾರತಕ್ಕೆ 2-0 ಜಯ
ಸುನಿಲ್ ಚೆಟ್ರಿ ಮತ್ತೆ ಕಾಲ್ಚಳಕ
ಸತತ 2ನೇ ಜಯದೊಂದಿಗೆ ಸೆಮೀಸ್‌ಗೆ ಭಾರತ
ನಾಸಿರ್ ಸಜಿಪ, ಕನ್ನಡಪ್ರಭ
ಬೆಂಗಳೂರು(ಜೂ.25): ಪಾಕಿಸ್ತಾನದಂತೆ ಸುಲಭ ತುತ್ತಾಗದಿದ್ದರೂ ಸ್ಯಾಫ್ ಕಪ್ ಫುಟ್ಬಾಲ್‌ನಲ್ಲಿ ಭಾರತದ ಸತತ 2ನೇ ಗೆಲುವಿನ ಓಟಕ್ಕೆ ತಡೆವೊಡ್ಡಲು ನೇಪಾಳಕ್ಕೆ ಸಾಧ್ಯವಾಗಲಿಲ್ಲ. ಶನಿವಾರ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ‘ಎ’ ಗುಂಪಿನ 2ನೇ ಪಂದ್ಯದಲ್ಲಿ ನೇಪಾಳ ಕೆಚ್ಚೆದೆಯ ಹೋರಾಟ ಪ್ರದರ್ಶಿಸಿದರೂ ಭಾರತ 2-0 ಗೋಲುಗಳಿಂದ ಗೆದ್ದು, ಸೆಮಿಫೈನಲ್ ಪ್ರವೇಶಿಸಿತು. ಮೊದಲ ಪಂದ್ಯದಲ್ಲಿ ಕುವೈತ್‌ಗೆ ಶರಣಾಗಿದ್ದ ನೇಪಾಳ ಸತತ 2 ಸೋಲುಂಡು ಸೆಮೀಸ್ ಆಸೆ ಕೈಚೆಲ್ಲಿತು.
ಮತ್ತೊಮ್ಮೆ ತಮ್ಮ ಕಾಲ್ಚಳಕದ ಮೂಲಕ ಬೆಂಗಳೂರಿನ ಫುಟ್ಬಾಲ್ ಅಭಿಮಾನಿಗಳನ್ನು ರಂಜಿಸಲು ಸುನಿಲ್ ಚೆಟ್ರಿ ಯಶಸ್ವಿಯಾದರು. ಪಂದ್ಯದ ಆರಂಭದಲ್ಲಿ ನೇಪಾಳ ಪ್ರದರ್ಶಿಸಿದ ಅನಿರೀಕ್ಷಿತ ಹೋರಾಟ ಭಾರತದ ಆಟಕ್ಕೆ ಕಡಿವಾಣ ಹಾಕಿತು. ಆದರೆ ಗೋಲು ಗಳಿಸುವ ಕೆಲ ಅವಕಾಶಗಳನ್ನು ನೇಪಾಳ ಬಳಸಿಕೊಳ್ಳಲಿಲ್ಲ. ಹೀಗಾಗಿ ಮೊದಲಾರ್ಧ ಗೋಲು ರಹಿತ ಕೊನೆಗೊಂಡಿತು.
ದ್ವಿತೀಯಾರ್ಧದಲ್ಲಿ ಭಾರತ ಆಕ್ರಮಣಕಾರಿ ಆಟಕ್ಕೆ ಒತ್ತುಕೊಟ್ಟಿತು. 61ನೇ ನಿಮಿಷದಲ್ಲಿ ಚೆಟ್ರಿ ಗೋಲು ಬಾರಿಸಿ ಪಂದ್ಯವನ್ನು ಭಾರತದತ್ತ ತಿರುಗಿಸಿದರು. 70ನೇ ನಿಮಿಷದಲ್ಲಿ ಕೌಂಟರ್ ಅಟ್ಯಾಕ್ ಮೂಲಕ ಸಹಲ್ ಸಮದ್ ತಂದ ಚೆಂಡನ್ನು ಮಹೇಶ್ ಸಿಂಗ್ ಗೋಲು ಪೆಟ್ಟಿಗೆಗೆ ಸೇರಿಸುವುದರೊಂದಿಗೆ ಭಾರತದ ಗೆಲುವು ಖಚಿತವಾಯಿತು.
SAFF Cup 2023: ಬೆಂಗಳೂರಿನಲ್ಲಿಂದು ಭಾರತ vs ನೇಪಾಳ ಫೈಟ್
ಪ್ರತಿ ಬಾರಿಯೂ ಭಾರತ ಸೆಮೀಸ್‌ಗೆ
ಸ್ಯಾಫ್ ಕಪ್‌ನ ಎಲ್ಲಾ 14 ಆವೃತ್ತಿಗಳಲ್ಲೂ ಭಾರತ ಸೆಮೀಸ್ ಪ್ರವೇಶಿಸಿದ ಸಾಧನೆ ಮಾಡಿತು. ಈ ಮೊದಲು 13 ಆವೃತ್ತಿಗಳಲ್ಲಿ 12 ಬಾರಿ ಫೈನಲ್ ತಲುಪಿದ್ದರೆ, 2003ರಲ್ಲಿ ಮಾತ್ರ ಸೆಮಿಫೈನಲ್‌ನಲ್ಲಿ ಸೋತಿತ್ತು.
ಪಾಕ್‌ಗೆ ಸೋಲುಣಿಸಿ ಸೆಮೀಸ್‌ಗೆ ಕುವೈತ್
ಆರಂಭಿಕ ಪಂದ್ಯದಲ್ಲಿ ಭಾರತ ವಿರುದ್ಧ 0-4 ಅಂತರದಲ್ಲಿ ಪರಾಭವಗೊಂಡಿದ್ದ ಪಾಕಿಸ್ತಾನ ಶನಿವಾರ ಕುವೈತ್ ವಿರುದ್ಧ 0-4 ಅಂತರದಲ್ಲಿ ಸೋಲನುಭವಿಸಿತು. ಸತತ 2ನೇ ಸೋಲಿನೊಂದಿಗೆ ಪಾಕ್ ಸೆಮೀಸ್ ರೇಸ್‌ನಿಂದ ಹೊರಗುಳಿದರೆ ಕುವೈತ್, ಭಾರತದ ಜೊತೆ ಸೆಮೀಸ್ ಪ್ರವೇಶಿಸಿತು. ಮಂಗಳವಾರ ಭಾರತ-ಕುವೈತ್ ಗುಂಪಿನಲ್ಲಿ ಅಗ್ರಸ್ಥಾನಕ್ಕಾಗಿ ಸೆಣಸಲಿವೆ.
ಸ್ಯಾಫ್ ಕಪ್ ಅಂಕಪಟ್ಟಿ
ಗುಂಪು ‘ಎ’
ತಂಡ ಪಂದ್ಯ ಜಯ ಸೋಲು ಡ್ರಾ ಅಂಕ
ಕುವೈತ್ 02 02 00 00 06
ಭಾರತ 02 02 00 00 06
ನೇಪಾಳ 02 00 02 00 00
ಪಾಕಿಸ್ತಾನ 02 00 02 00 00
ಗುಂಪು ‘ಬಿ’
ತಂಡ ಪಂದ್ಯ ಜಯ ಸೋಲು ಡ್ರಾ ಅಂಕ
ಲೆಬನಾನ್ 01 01 00 00 03
ಮಾಲ್ಡೀವ್್ಸ 01 01 00 00 03
ಭೂತಾನ್ 01 00 01 00 00
ಬಾಂಗ್ಲಾದೇಶ 01 00 01 00 00