ಸ್ಯಾಫ್‌ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಭಾರತ ಫೈನಲ್ ಪ್ರವೇಶಸೆಮಿಫೈನಲ್‌ನಲ್ಲಿ ಲೆಬನಾನ್‌ ವಿರುದ್ದ ಪೆನಾಲ್ಟಿ ಶೂಟೌಟ್‌ನಲ್ಲಿ ಜಯಕುವೈತ್ ವಿರುದ್ದ ಫೈನಲ್‌ಗೆ ಕ್ಷಣಗಣನೆ

- ನಾಸಿರ್‌ ಸಜಿಪ, ಕನ್ನಡಪ್ರಭ

ಬೆಂಗಳೂರು(ಜು.02): ಸ್ಯಾಫ್ ಕಪ್ ಫುಟ್ಬಾಲ್ ಚಾಂಪಿಯನ್‌ಶಿಪ್‌‌‌ನಲ್ಲಿ ಭಾರತ ದಾಖಲೆಯ 13ನೇ ಬಾರಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಶನಿವಾರ ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆದ 14ನೇ ಆವೃತ್ತಿಯ ಸೆಮಿಫೈನಲ್‌ನಲ್ಲಿ ಲೆಬನಾನ್ ವಿರುದ್ಧ 8 ಬಾರಿ ಚಾಂಪಿಯನ್ ಭಾರತ ಪೆನಾಲ್ಟಿ ಶೂಟೌಟ್‌ನಲ್ಲಿ 4-2 ಗೋಲುಗಳಿಂದ ಗೆದ್ದು ಪ್ರಶಸ್ತಿ ಸುತ್ತಿಗೇರಿತು. ಇದರೊಂದಿಗೆ ಚೊಚ್ಚಲ ಪ್ರಯತ್ನದಲ್ಲೇ ಫೈನ‌ಲ್ ತಲುಪುವ ಲೆಬನಾನ್ ಕನಸು ನನಸಾಗಲಿಲ್ಲ. ಇಂಟರ್‌ ಕಾಂಟಿನೆಂಟಲ್ ಕಪ್‌ನಲ್ಲಿ ಅನುಭವಿಸಿದ್ದ ಸೋಲಿಗೆ ಸೇಡಿ ತೀರಿಸಿಕೊಳ್ಳಲೂ ಲೆಬನಾನ್‌ಗೆ ಸಾಧ್ಯವಾಗಲಿಲ್ಲ.

ಪ್ರಬಲ ಹೋರಾಟ: ಪಂದ್ಯದ ಆರಂಭದಲ್ಲಿ ಲೆಬನಾನ್ ಉತ್ತಮ ಆಟ ಪ್ರದರ್ಶಿಸಿದರೂ ಬಳಿಕ ಭಾರತ ಚೆಂಡಿನ ಮೇಲೆ‌ ಹಿಡಿತ ಸಾಧಿಸಿತು. ಆದರೆ ಕೆಲ ಉತ್ತಮ ಅವಕಾಶಗಳ ಹೊರತಾಗಿಯೂ ಭಾರತಕ್ಕೆ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಲೆಬನಾನ್ ರಕ್ಷಣಾಪಡೆ ಭಾರತದ ಗೋಲಿನ ಖಾತೆ ತೆರೆಯಲು ಅವಕಾಶ ನೀಡಲಿಲ್ಲ.

Scroll to load tweet…

ದ್ವಿತೀಯಾರ್ಧದಲ್ಲಿ ಎರಡೂ ತಂಡಗಳ ಆಟಗಾರರು ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದರು. ಈ ಬಾರಿ ಲೆಬನಾನ್‌ಗೆ ಗೋಲು ಗಳಿಸುವ ಉತ್ತಮ ಅವಕಾಶಗಳಿದ್ದರೂ ಕೈ ಚೆಲ್ಲಿತು. ಕೊನೆಯಲ್ಲಿ ಭಾರತಕ್ಕೆ ಕೆಲ ಕಾರ್ನರ್ ಅವಕಾಶಗಳಿದ್ದರೂ ಗೋಲು ದಾಖಲಾಗಲಿಲ್ಲ. ನಿಗದಿತ 90 ನಿಮಿಷಗಳ ಅವಧಿ ಮುಕ್ತಾಯಕ್ಕೆ ಯಾವುದೇ ಗೋಲು ದಾಖಲಾಗದ ಕಾರಣ 30 ನಿಮಿಷ ಹೆಚ್ಚುವರಿ ನೀಡಲಾಯಿತು.

ಚಿನ್ನ ಗೆದ್ದ ಬೆನ್ನಲ್ಲೇ ಯೂರೋಪಿನಲ್ಲೇ ಉಳಿಯಲು ನಿರ್ಧರಿಸಿದ ನೀರಜ್ ಚೋಪ್ರಾ..!

ನಡೆಯದ ಚೆಟ್ರಿ ಆಟ: ಹೆಚ್ಚುವರಿ ಸಮಯದಲ್ಲಿ ಭಾರತ ಇನ್ನಷ್ಟು ಗೋಲು ಗಳಿಸುವ ಅವಕಾಶ ಪಡೆದರೂ ಚೆಂಡು ಗೋಲು ಪೆಟ್ಟಿಗೆಗೆ ಸೇರಲಿಲ್ಲ. ಕೆಲವೇ ನಿಮಿಷಗಳ ಅಂತರದಲ್ಲಿ 3 ಬಾರಿ ಗೋಲು ಬಾರಿಸುವ ಸುನಿಲ್‌ ಚೆಟ್ರಿಯ ಯತ್ನ ಕೈಗೂಡಲಿಲ್ಲ. 120 ನಿಮಿಷಗಳ ಅಂತ್ಯಕ್ಕೂ ಗೋಲು ದಾಖಲಾಗದ ಕಾರಣ ಫಲಿತಾಂಶಕ್ಕಾಗಿ ಶೂಟೌಟ್ ಮೊರೆ ಹೋಗಲಾಯಿತು.

ಹೇಗಿತ್ತು ಶೂಟೌಟ್‌?

ಶೂಟೌಟ್‌ನಲ್ಲಿ ಭಾರತದ ಪರ ಚೆಟ್ರಿ ಗೋಲಿನ ಖಾತೆ ತೆರೆದರು. ಆದರೆ ಲೆಬನಾನ್‌ ನಾಯಕ ಮಾಟೌಕ್‌ರ ಯತ್ನವನ್ನು ಗೋಲ್‌ಕೀಪರ್‌ ಗುರ್‌ಪ್ರೀತ್‌ ಸಂಧು ವಿಫಲಗೊಳಿಸಿದರು. ಆರಂಭದಲ್ಲೇ ಸಿಕ್ಕ ಮುನ್ನಡೆ ಭಾರತೀಯರ ಆತ್ಮವಿಶ್ವಾಸ ಹೆಚ್ಚಿಸಿತು. ಅನ್ವರ್‌ ಅಲಿ, ಮಹೇಶ್‌ ಸಿಂಗ್‌ ಹಾಗೂ ಉದಾಂತ ಸಿಂಗ್‌ ಗೋಲು ಬಾರಿಸುವಲ್ಲಿ ತಪ್ಪು ಮಾಡಲಿಲ್ಲ. 2 ಹಾಗೂ 3ನೇ ಯತ್ನಗಳಲ್ಲಿ ಗೋಲು ದಾಖಲಿಸಿದ ಲೆಬನಾನ್‌ 4ನೇ ಯತ್ನದಲ್ಲಿ ವೈಫಲ್ಯ ಕಂಡಿತು. ಇದರೊಂದಿಗೆ ಭಾರತ ಒಂದು ಯತ್ನ ಬಾಕಿ ಇದ್ದಂತೆಯೇ ಜಯದ ಸಂಭ್ರಮ ಆಚರಿಸಿತು.

ನಾಡಿದ್ದು ಫೈನಲ್ ಫೈಟ್

ಟೂರ್ನಿಯ ಫೈನಲ್ ಪಂದ್ಯ ಮಂಗಳವಾರ ನಡೆಯಲಿದ್ದು, ಭಾರತ-ಕುವೈತ್ ಮುಖಾಮುಖಿಯಾಗಲಿವೆ. ಭಾರತ 9ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದು, ಮೊದಲ ಬಾರಿಗೆ ಟೂರ್ನಿಯಲ್ಲಿ ಆಡುತ್ತಿರುವ ಕುವೈತ್ ಚೊಚ್ಚಲ ಪ್ರಯತ್ನದಲ್ಲೇ ಟ್ರೋಫಿ ಗೆಲ್ಲಲು ಹೋರಾಡಲಿದೆ. ಈ ಎರಡು ತಂಡಗಳು ಗುಂಪು ಹಂತದ ಪಂದ್ಯದಲ್ಲಿ ಮುಖಾಮುಖಿಯಾದಾಗ ಪಂದ್ಯ ಡ್ರಾಗೊಂಡಿತ್ತು.

19,000 ಪ್ರೇಕ್ಷಕರು!

ಸೆಮಿಫೈನಲ್‌ ಪಂದ್ಯಕ್ಕೂ ಕಂಠೀರವ ಕ್ರೀಡಾಂಗಣ ಬಹುತೇಕ ಭರ್ತಿಯಾಗಿತ್ತು. 19640 ಪ್ರೇಕ್ಷಕರು ಕ್ರೀಡಾಂಗಣದಲ್ಲಿ ನೆರೆದಿದ್ದರು ಎಂದು ಆಯೋಜಕರು ಅಧಿಕೃತ ಮಾಹಿತಿ ಒದಗಿಸಿದ್ದಾರೆ. ಭಾರತದ ತಾರಾ ಕ್ರಿಕೆಟಿಗ ಶ್ರೇಯಸ್‌ ಅಯ್ಯರ್‌ ಸಹ ಪಂದ್ಯ ವೀಕ್ಷಿಸಿ ಭಾರತ ತಂಡವನ್ನು ಹುರಿದುಂಬಿಸಿದರು.

ಬಾಂಗ್ಲಾಗೆ ಸೋಲುಣಿಸಿ ಫೈನಲ್‌ಗೇರಿದ ಕುವೈತ್‌

ಮೊದಲ ಸೆಮಿಫೈನಲ್‌ನಲ್ಲಿ ಮಾಜಿ ಚಾಂಪಿಯನ್‌ ಬಾಂಗ್ಲಾದೇಶವನ್ನು 1-0 ಗೋಲಿನಿಂದ ಸೋಲಿಸಿದ ಕುವೈತ್‌ ಫೈನಲ್‌ ಪ್ರವೇಶಿಸಿತು. ಪಂದ್ಯದುದ್ದಕ್ಕೂ ಉಭಯ ತಂಡಗಳಿಂದ ತೀವ್ರ ಪೈಪೋಟಿ ಎದುರಾದರೂ ನಿಗದಿತ ಅವಧಿ ಮುಕ್ತಾಯದ ವೇಳೆಗೆ ಯಾವುದೇ ಗೋಲು ದಾಖಲಾಗಲಿಲ್ಲ. ಆದರೆ 107ನೇ ನಿಮಿಷದಲ್ಲಿ ಅಬ್ದುಲ್ಲಾ ಅಲ್‌ ಬ್ಲೌಶಿ ಬಾರಿಸಿದ ಗೋಲು ಕುವೈತ್‌ ತಂಡವನ್ನು ಫೈನಲ್‌ಗೇರಿಸಿತು.