ಬೆಂಗಳೂರು(ಜ.05): ಬೆಂಗಳೂರಿನ ಅಶೋಕನಗರದಲ್ಲಿರುವ ಫುಟ್ಬಾಲ್‌ ಸ್ಟೇಡಿಯಂನಲ್ಲಿ ಹೊಸ ಟರ್ಫ್‌ ಅಳವಡಿಸಲಾಗಿದೆ. ಟರ್ಫ್‌ ಅಳವಡಿಕೆ ಬಳಿಕ ಕ್ರೀಡಾಂಗಣವನ್ನು ರಾಜ್ಯ ಫುಟ್ಬಾಲ್‌ ಸಂಸ್ಥೆ ಅಧ್ಯಕ್ಷ, ಶಾಸಕ ಎನ್‌.ಎ. ಹ್ಯಾರೀಸ್‌ ಭಾನುವಾರ ಆಟಕ್ಕೆ ಮುಕ್ತಗೊಳಿಸಿದರು. 

ಕಳೆದ ಆಗಸ್ಟ್‌ನಲ್ಲಿ ಇಟಲಿಯಿಂದ ಆಮದು ಮಾಡಿಕೊಂಡಿದ್ದ ಲಿಮೋಂಟಾ ಕಂಪೆನಿಯ ಟರ್ಫ್‌ 1 ಕೋಟಿ 7.5 ಲಕ್ಷ ವೆಚ್ಚದ್ದಾಗಿದ್ದು, ಆಗಸ್ಟ್‌ನಲ್ಲಿಯೇ ಟರ್ಫ್‌ ಅಳವಡಿಕೆ ಕಾರ‍್ಯ ಆರಂಭಿಸಲಾಗಿತ್ತು. ಆದರೆ ಕೋವಿಡ್‌ ನಿಯಮಾವಳಿಗಳಿಂದಾಗಿ ಕಾರ‍್ಯ ವಿಳಂಬಗೊಂಡು, ಡಿಸೆಂಬರ್‌ನಲ್ಲಿ ಅಂತ್ಯವಾಗಿದೆ ಎಂದು ರಾಜ್ಯ ಫುಟ್ಬಾಲ್‌ ಸಂಸ್ಥೆ ಪ್ರಧಾನ ಕಾರ‍್ಯದರ್ಶಿ ಸತ್ಯನಾರಾಯಣ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಐಎಸ್‌ಎಲ್ 7‌: ಒಡಿಶಾ ಎದುರು ಬೆಂಗಾಲ್‌ಗೆ ಮೊದಲ ಗೆಲುವು

ನೂತನ ಟರ್ಫ್‌ ಉದ್ಘಾಟನೆ ವೇಳೆ ಕಿಕ್‌ ಸ್ಟಾರ್ಟ್‌ ಎಫ್‌ಸಿ ಹಾಗೂ ಬೆಂಗ್ಳೂರು ಎಫ್‌ಸಿ ‘ಬಿ’ ತಂಡಗಳ ನಡುವೆ ಪ್ರದರ್ಶನ ಪಂದ್ಯ ನಡೆಸಲಾಯಿತು. ಸದ್ಯ ಮಹಿಳಾ ಲೀಗ್‌ ಪಂದ್ಯಗಳು ನಡೆಯುತ್ತಿದ್ದು, ಸೋಮವಾರದಿಂದ ಇದೇ ಟರ್ಫ್‌ನಲ್ಲಿ ಪುರುಷರ ಸೂಪರ್‌ ಡಿವಿಜನ್‌ ಪಂದ್ಯಗಳು ನಡೆಯಲಿವೆ. ಸಾಮಾನ್ಯವಾಗಿ ಟರ್ಫ್‌ನ ಗುಣಮಟ್ಟದ ಆಧಾರದಲ್ಲಿ ಸುಮಾರು 6 ವರ್ಷ ಬಾಳಿಕೆ ಬರಲಿದೆ. ಇದೇ ತಿಂಗಳಲ್ಲಿ ಫಿಫಾ ಅಧಿಕಾರಿಗಳು ಟರ್ಫ್‌ ವೀಕ್ಷಣೆಗೆ ಆಗಮಿಸಲಿದ್ದು, ಪ್ರಮಾಣ ಪತ್ರ ನೀಡಲಿದ್ದಾರೆ ಎಂದು ಸತ್ಯನಾರಾಯಣ ಹೇಳಿದರು.