ಬಿಎಫ್‌ಸಿ ಎದುರು ಮೈದಾನ ತೊರೆದಿದ್ದಕ್ಕೆ ಕೇರಳ ಬ್ಲಾಸ್ಟರ್ಸ್ ವಿಷಾದ..!
ಐಎಸ್ಎಲ್ ಟೂರ್ನಿಯಲ್ಲಿ ಬಿಎಫ್‌ಸಿ ಎದುರಿನ ಪಂದ್ಯದ ಮಧ್ಯದಲ್ಲೇ ಮೈದಾನ ತೊರೆದಿದ್ದ ಕೇರಳ ಬ್ಲಾಸ್ಟರ್ಸ್
ಐಎಸ್ಎಲ್ ಪ್ಲೇ-ಆಫ್ ಪಂದ್ಯದಲ್ಲಿ ನಡೆದಿದ್ದ ಘಟನೆಗೆ ಕೇರಳ ವಿಷಾದ
ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುತ್ತೇವೆ ಎಂದ ಕೋಚ್ ಇವಾನ್ ವುಕೊಮನೋವಿಚ್
ನವದೆಹಲಿ(ಏ.04): ಬೆಂಗಳೂರು ಎಫ್‌ಸಿ ವಿರುದ್ಧದ ಐಎಸ್ಎಲ್ ಪ್ಲೇ-ಆಫ್ ಪಂದ್ಯದಲ್ಲಿ ಅರ್ಧದಲ್ಲೇ ಮೈದಾನ ತೊರೆದಿದ್ದ ಘಟನೆಗೆ ಸಂಬಂಧಿಸಿದಂತೆ ಕೇರಳ ಬ್ಲಾಸ್ಟರ್ಸ್ ಹಾಗೂ ತಂಡದ ಇವಾನ್ ವುಕೊಮನೋವಿಚ್ ವಿಷಾದ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ ಕೇರಳ ಬ್ಲಾಸ್ಟರ್ಸ್, ‘ಬಿಎಫ್‌ಸಿ ವಿರುದ್ಧದ ಘಟನೆಗೆ ಪ್ರಾಮಾಣಿಕ ವಿಷಾದ ವ್ಯಕ್ತಪಡಿಸುತ್ತಿದ್ದೇವೆ. ಮೈದಾನ ತೊರೆಯುವ ನಮ್ಮ ನಿರ್ಧಾರ ದುರದೃಷ್ಟಕರ ಹಾಗೂ ಆ ಕ್ಷಣದ ಆವೇಶದಲ್ಲಿ ನಡೆದ ಘಟನೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುತ್ತೇವೆ’ ಎಂದಿದೆ.
ಇವಾನ್ ಕೂಡಾ ಟ್ವಿಟರ್ನಲ್ಲಿ ಹೇಳಿಕೆ ಬಿಡುಗಡೆ ಮಾಡಿ, ತಮ್ಮ ನಡೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಕ್ಷಮೆಯಾಚಿಸಬೇಕೆಂಬ ಭಾರತೀಯ ಫುಟ್ಬಾಲ್ ಫೆಡರೇಶನ್(ಎಐಎಫ್‌ಎಫ್) ಆದೇಶ ಪಾಲಿಸಿದ ಕೇರಳ ತಂಡ ಹೆಚ್ಚುವರಿ 2 ಕೋಟಿ ರುಪಾಯಿ ದಂಡ ಪಾವತಿಯಿಂದ ತಪ್ಪಿಸಿಕೊಂಡಿದೆ.
ವಿವಾದದ ಹಿನ್ನೆಲೆ: ಮಾರ್ಚ್ 3ಕ್ಕೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಿಎಫ್ಸಿಯ ಸುನಿಲ್ ಚೆಟ್ರಿ ಬಾರಿಸಿದ ಫ್ರೀ ಕಿಕ್ ಗೋಲನ್ನು ವಿರೋಧಿಸಿ ಕೇರಳ ಆಟಗಾರರು ಆಟ ನಿಲ್ಲಿಸಿ ಮೈದಾನ ತೊರೆದಿದ್ದರು. ಹೀಗಾಗಿ ಕೇರಳ ಬ್ಲಾಸ್ಟರ್ ತಂಡಕ್ಕೆ ಭಾರತೀಯ ಫುಟ್ಬಾಲ್ ಫೆಡರೇಶನ್(ಎಐಎಫ್‌ಎಫ್) ಶಿಸ್ತು ಸಮಿತಿ 4 ಕೋಟಿ ರುಪಾಯಿ ದಂಡ ವಿಧಿಸಿ, 10 ದಿನಗಳ ಒಳಗೆ ಬಹಿರಂಗ ಕ್ಷಮೆಯಾಚಿಸುವಂತೆ ಸೂಚಿಸಿತ್ತು. ಅಲ್ಲದೇ ಕೋಚ್ ಇವಾನ್‌ರನ್ನು 10 ಪಂದ್ಯಗಳಿಂದ ಅಮಾನತು ಮಾಡಿ, 5 ಲಕ್ಷ ರು. ದಂಡ ಪಾವತಿಸಲು ಸೂಚಿಸಿ ಬಹಿರಂಗ ಕ್ಷಮೆಯಾಚನೆಗೂ ಆದೇಶಿಸಿತ್ತು. ಆದೇಶ ಉಲ್ಲಂಘಿಸಿದರೆ 2 ಕೋಟಿ ರುಪಾಯಿ ಹೆಚ್ಚುವರಿ ದಂಡ ಹಾಕುವುದಾಗಿ ಎಐಎಫ್‌ಎಫ್ ಷರತ್ತು ಹಾಕಿತ್ತು.
ವನಿತಾ ಫುಟ್ಬಾಲ್: ರಾಜ್ಯಕ್ಕೆ ಇಂದು ಬಿಹಾರ ಸವಾಲು
ಬೆಂಗಳೂರು: 27ನೇ ರಾಷ್ಟ್ರೀಯ ಮಹಿಳಾ ಫುಟ್ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಮಂಗಳವಾರ ಕರ್ನಾಟಕ ತನ್ನ 3ನೇ ಪಂದ್ಯವನ್ನು ಬಿಹಾರ ವಿರುದ್ಧ ಆಡಲಿದ್ದು, ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದೆ. ಗುಂಪು-6ರಲ್ಲಿ ಸ್ಥಾನ ಪಡೆದಿರುವ ಕರ್ನಾಟಕ, ಮೊದಲ ಪಂದ್ಯದಲ್ಲಿ ಗುಜರಾತ್ ವಿರುದ್ಧ 9-1 ಗೋಲುಗಳಲ್ಲಿ ಗೆಲುವು ಸಾಧಿಸಿತ್ತು.
ಅಂತಿಮ ಘಟ್ಟದತ್ತ ಕೊಡವ ಕೌಟುಂಬಿಕ ಹಾಕಿ; ಇಂದಿನಿಂದ ಪ್ರಿ ಕ್ವಾರ್ಟರ್ ಫೈನಲ್
2ನೇ ಪಂದ್ಯದಲ್ಲಿ ಅಸ್ಸಾಂ ವಿರುದ್ಧ 3-1 ಗೋಲುಗಳ ಗೆಲುವು ಕಂಡಿದ್ದ ರಾಜ್ಯ ತಂಡ ಸದ್ಯ 6 ಅಂಕ ಗಳಿಸಿ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಂಡ ನೇರವಾಗಿ ಪ್ರಧಾನ ಸುತ್ತಿಗೇರಲಿದ್ದು, 2ನೇ ಸ್ಥಾನ ಪಡೆಯುವ ತಂಡ ಪ್ರಧಾನ ಸುತ್ತಿಗೇರಲು ಉಳಿದ ಫಲಿತಾಂಶಗಳ ಮೇಲೆ ಅವಲಂಬಿತಗೊಳ್ಳಬೇಕಿದೆ.
ಏಪ್ರಿಲ್ 25ರಿಂದ ಇಂಡಿಯನ್ ವುಮೆನ್ಸ್ ಲೀಗ್ ಫುಟ್ಬಾಲ್
ನವದೆಹಲಿ: 6ನೇ ಆವೃತ್ತಿಯ ಇಂಡಿಯನ್ ವುಮೆನ್ಸ್ ಲೀಗ್(ಐಡಬ್ಲ್ಯುಎಲ್) ಫುಟ್ಬಾಲ್ ಟೂರ್ನಿ ಏ.25ರಿಂದ ಆರಂಭವಾಗಲಿದೆ ಎಂದು ಭಾರತೀಯ ಫುಟ್ಬಾಲ್ ಫೆಡರೇಶನ್(ಎಐಎಫ್‌ಎಫ್) ಘೋಷಿಸಿದೆ. ಟೂರ್ನಿಯಲ್ಲಿ 16 ತಂಡಗಳು ಪಾಲ್ಗೊಳ್ಳಲಿದ್ದು, 8 ತಂಡಗಳು 2 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನಿಂದ ಅಗ್ರ 4 ತಂಡಗಳು ನಾಕೌಟ್ ಹಂತ ಪ್ರವೇಶಿಸಲಿದೆ ಎಂದು ಎಐಎಫ್‌ಎಫ್ ತಿಳಿಸಿದೆ. ಅಲ್ಲದೇ ಈ ಬಾರಿ ತಂಡದಲ್ಲಿ ಮೂವರು ವಿದೇಶಿ ಆಟಗಾರರಿಗೆ ಅವಕಾಶ ನೀಡಲಾಗಿದೆ. ಕಳೆದ ಆವೃತ್ತಿಯಲ್ಲಿ ಗೋಕುಲಂ ಕೇರಳ ಚಾಂಪಿಯನ್ ಆಗಿತ್ತು.