ISL: ಬೆಂಗಳೂರಿನಲ್ಲಿ BFC-ಗೋವಾ ಹೋರಾಟ!
ಪ್ರಸಕ್ತ ಆವೃತ್ತಿಯಲ್ಲಿ ಕೆಲ ಹಿನ್ನಡೆ ಅನುಭವಿಸಿರುವ ಬೆಂಗಳೂರು ಎಫ್‌ಸಿ ಇದೀಗ ಹೊಸ ವರ್ಷದಲ್ಲಿ ಚರಿತ್ರೆ ಸೃಷ್ಟಿಸಲು ತುದಿಗಾಲಲ್ಲಿ ನಿಂತಿದೆ. ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಮಹತ್ವ ಪಂದ್ಯದಲ್ಲಿ BFC, ಬಲಿಷ್ಠ ಗೋವಾ ವಿರುದ್ಧ ಹೋರಾಟ ನಡೆಸಲಿದೆ.
ಬೆಂಗಳೂರು(ಜ.03) : ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ 6ನೇ ಆವೃತ್ತಿಯ ಬಹುನಿರೀಕ್ಷಿತ ಪಂದ್ಯ ಶುಕ್ರವಾರ ನಡೆಯಲಿದೆ. ಹಾಲಿ ಚಾಂಪಿಯನ್ ಬೆಂಗಳೂರು ಎಫ್‌ಸಿ, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಗೋವಾ ಎಫ್‌ಸಿ ವಿರುದ್ಧ ತನ್ನ ಭದ್ರಕೋಟೆ ಕಂಠೀರವ ಕ್ರೀಡಾಂಗಣದಲ್ಲಿ ಸೆಣಸಲಿದೆ.
ಇದನ್ನೂ ಓದಿ: ಕೋಲ್ಕೊತಾದಲ್ಲಿ ಬೆಂಗಳೂರಿಗೆ ಆಘಾತ; ಇತಿಹಾಸ ನಿರ್ಮಿಸಿದ ATK
ಗೋವಾ ತಂಡ ಆಡಿರುವ 10 ಪಂದ್ಯಗಳಿಂದ 21 ಅಂಕಗಳನ್ನು ಸಂಪಾದಿಸಿ ಅಗ್ರಸ್ಥಾನದಲ್ಲಿದ್ದರೆ, ಬೆಂಗಳೂರು ತಂಡ ಸಹ ಅಷ್ಟೇ ಪಂದ್ಯಗಳನ್ನು ಆಡಿದ್ದು 16 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. ಗೋವಾ ತಂಡ ಮುನ್ನಡೆ ಕಾಯ್ದುಕೊಳ್ಳುವ ವಿಶ್ವಾಸದಲ್ಲಿದ್ದರೆ, ಬೆಂಗಳೂರು ತಂಡ ಗೋವಾ ಜತೆಗಿನ ಅಂಕಗಳ ಅಂತರವನ್ನು ಎರಡಕ್ಕೆ ಇಳಿಸಿಕೊಳ್ಳಲು ಹೋರಾಟ ನಡೆಸಲಿದೆ. ಗೋವಾ ವಿರುದ್ಧ ಬೆಂಗಳೂರು ಎಫ್‌ಸಿ ಕಳೆದ 5 ಪಂದ್ಯಗಳಲ್ಲಿ ಮೇಲುಗೈ ಸಾಧಿಸಿ ಅಜೇಯವಾಗಿ ಉಳಿದಿದೆ.
ಇದನ್ನೂ ಓದಿ: ಗೆಲುವಿಲ್ಲ, ಸೋಲಿಲ್ಲ; ಸತತ 3ನೇ ಪಂದ್ಯ ಡ್ರಾ ಮಾಡಿಕೊಂಡ ಬೆಂಗಳೂರು FC !.
ಬಿಎಫ್‌ಸಿ ತಂಡ ತನ್ನ ನಾಯಕ ಸುನಿಲ್ ಚೆಟ್ರಿ ಮೇಲೆ ಹೆಚ್ಚಾಗಿ ಅವಲಂಬಿತಗೊಂಡಿದೆ. ಈ ಆವೃತ್ತಿಯಲ್ಲಿ ಚೆಟ್ರಿ 5 ಗೋಲುಗಳನ್ನು ಬಾರಿಸಿದ್ದಾರೆ. ಚೆಟ್ರಿ ಹೊರತು ಪಡಿಸಿ ಉಳಿದ್ಯಾವ ಆಟಗಾರ ಸಹ ಒಂದಕ್ಕಿಂತ ಹೆಚ್ಚು ಗೋಲು ಗಳಿಸಿಲ್ಲ. ಹೀಗಾಗಿ ತಂಡದ ಮೇಲೆ ಸಹಜವಾಗಿಯೇ ಒತ್ತಡವಿದೆ. ಗೋಲ್ ಕೀಪರ್ ಗುರ್‌ಪ್ರೀತ್ ಸಂಧು 6 ಪಂದ್ಯಗಳಲ್ಲಿ ಗೋಲು ಬಿಟ್ಟುಕೊಟ್ಟಿಲ್ಲ. ಅವರ ಪ್ರದರ್ಶನ ಫಲಿತಾಂಶದ ಮೇಲೆ ದೊಡ್ಡ ಪರಿಣಾಮ ಬೀರಲಿದೆ.
ಮತ್ತೊಂದೆಡೆ ಗೋವಾ ಎಫ್‌ಸಿ ತನ್ನ ತಾರಾ ಸ್ಟೆ್ರೖಕರ್ ಸ್ಪೇನ್‌ನ ಫೆರ್ರಾನ್ ಕೊರೊಮಿನಾಸ್ ಮೇಲೆ ನಂಬಿಕೆ ಇರಿಸಿದೆ. ಕೊರೊಮಿನಾಸ್ ಈ ಆವೃತ್ತಿಯಲ್ಲಿ 6 ಗೋಲು ಬಾರಿಸಿದ್ದಾರೆ. ಫ್ರಾನ್ಸ್‌ನ ಹುಗೊ ಬೌಮೊಸ್ 3 ಗೋಲು ಗಳಿಸಿ ತಂಡಕ್ಕೆ ನೆರವಾಗಿದ್ದಾರೆ. ತಂಡದಲ್ಲಿರುವ ಭಾರತೀಯ ಆಟಗಾರರಿಂದಲೂ ಅತ್ಯುತ್ತಮ ಪ್ರದರ್ಶನ ಮೂಡಿಬಂದಿದೆ. ಹೀಗಾಗಿ, ಗೋವಾ ವಿರುದ್ಧ ಗೆಲುವು ಸಾಧಿಸುವುದು ಬಿಎಫ್‌ಸಿಗೆ ಸವಾಲಾಗಿ ಪರಿಣಮಿಸಲಿದೆ.