ಐಎಸ್‌ಎಲ್ ಭವಿಷ್ಯ ಅತಂತ್ರವಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಎಫ್‌ಸಿ ತನ್ನ ಆಟಗಾರರ ವೇತನವನ್ನು ಅನಿರ್ದಿಷ್ಟಾವಧಿಗೆ ತಡೆಹಿಡಿದಿದೆ. ಸುನಿಲ್ ಚೆಟ್ರಿ ಸೇರಿದಂತೆ ಬಿಎಫ್‌ಸಿಯ ಆಟಗಾರರಿಗೆ ಈ ಋತುವಿನಲ್ಲಿ ವೇತನ ಸಿಗುವುದಿಲ್ಲ.
ನವದೆಹಲಿ: ರಿಲಯನ್ಸ್ ಒಡೆತನದ ಫುಟ್ಬಾಲ್ ಸ್ಪೋರ್ಟ್ಸ್ ಡೆವಲಪ್‌ಮೆಂಟ್(ಎಫ್‌ಎಸ್‌ಡಿಎಲ್) ಮತ್ತು ಅಖಿಲ ಭಾರತೀಯ ಫುಟ್ಬಾಲ್ ಫೆಡರೇಶನ್(ಎಐಎಫ್‌ಎಫ್) ಬಿಕ್ಕಟ್ಟಿನಿಂದಾಗಿ ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್) ಭವಿಷ್ಯ ಅತಂತ್ರವಾಗಿದೆ. ಈ ನಡುವೆ ಬೆಂಗಳೂರು ಎಫ್‌ಸಿ ತನ್ನ ಆಟಗಾರರ ವೇತನವನ್ನು ಅನಿರ್ದಿಷ್ಟಾವಧಿಗೆ ತಡೆಹಿಡಿದಿದೆ. ಹೀಗಾಗಿ ಸುನಿಲ್ ಚೆಟ್ರಿ ಸೇರಿದಂತೆ ಬಿಎಫ್‌ಸಿಯ ಆಟಗಾರರಿಗೆ ಈ ಋತುವಿನಲ್ಲಿ ವೇತನ ಸಿಗುವುದಿಲ್ಲ.
ಈ ಬಗ್ಗೆ ಬಿಎಫ್‌ಸಿ ಸೋಮವಾರ ಅಧಿಕೃತ ಘೋಷಣೆ ಮಾಡಿತು. ‘ಐಎಸ್‌ಎಲ್ ಭವಿಷ್ಯದ ಅತಂತ್ರವಾಗಿರುವುದರಿಂದ ನಾವು ಕಠಿಣ ನಿರ್ಧಾರ ಕೈಗೊಳ್ಳಬೇಕಾಗಿದೆ. ಮುಖ್ಯ ತಂಡದ ಆಟಗಾರರ ಸಂಬಳವನ್ನು ಅನಿರ್ದಿಷ್ಟಾವಧಿಗೆ ಅಮಾನತುಗೊಳಿಸಲಾಗಿದೆ. ನಮಗೆ ಇದರ ಹೊರತಾಗಿ ಬೇರೆ ಆಯ್ಕೆ ಇಲ್ಲ. ಆಟಗಾರರು, ಸಿಬ್ಬಂದಿ, ಅವರ ಕುಟುಂಬಸ್ಥರು ನಮ್ಮ ಆಧ್ಯತೆಯಾಗಿದ್ದು, ಫ್ರಾಂಚೈಸಿಯು ಅವರ ಜೊತೆ ಸಂಪರ್ಕದಲ್ಲಿದೆ’ ಎಂದಿದೆ. ಆದರೆ ವೇತನ ತಡೆ ನಿರ್ಧಾರ ಪುರುಷ, ಮಹಿಳಾ ಯೂತ್ ತಂಡಗಳು, ಬಿಎಫ್‌ಸಿ ಶಾಲಾ ತಂಡಗಳಿಗೆ ಅನ್ವಯಿಸುವುದಿಲ್ಲ’ ಎಂದು ಬಿಎಫ್‌ಸಿ ತಿಳಿಸಿದೆ.
ಫುಟ್ಬಾಲ್ ದಿಗ್ಗಜ ಲಿಯೋನಲ್ ಮೆಸ್ಸಿಯ ಕೇರಳ ಭೇಟಿ ರದ್ದು!
ತಿರುವನಂತಪುರ: ಖ್ಯಾತ ಫುಟ್ಬಾಲ್ ಆಟಗಾರ, ಅರ್ಜೆಂಟೀನಾದ ಲಿಯೋನಲ್ ಮೆಸ್ಸಿ ಅವರ ಕೇರಳ ಭೇಟಿ ರದ್ದುಗೊಂಡಿದೆ. ಇದನ್ನು ಕೇರಳ ಕ್ರೀಡಾ ಸಚಿವ ಅಬ್ದುರಹಿಮಾನ್ ಖಚಿತಪಡಿಸಿಕೊಂಡಿದ್ದಾರೆ.
ಮೆಸ್ಸಿ ನೇತೃತ್ವದ ಹಾಲಿ ವಿಶ್ವ ಚಾಂಪಿಯನ್ ಅರ್ಜೆಂಟೀನಾ ತಂಡ ಅಕ್ಟೋಬರ್‌ನಲ್ಲಿ ಕೇರಳಕ್ಕೆ ಆಗಮಿಸಿ, ಫುಟ್ಬಾಲ್ ಪಂದ್ಯವನ್ನಾಡಲಿದೆ ಎಂದು ಕೆಲ ತಿಂಗಳ ಹಿಂದೆ ಸಚಿವರು ಮಾಹಿತಿ ನೀಡಿದ್ದರು. ಆದರೆ ಅರ್ಜೆಂಟೀನಾ ತಂಡದ ವೇಳಾಪಟ್ಟಿ ಪ್ರಕಾರ ಅಕ್ಟೋಬರ್‌ನಲ್ಲಿ ಕೇರಳ ಭೇಟಿ ಅಸಾಧ್ಯ. ಮತ್ತೊಂದೆಡೆ ಮೆಸ್ಸಿ ಅಕ್ಟೋಬರ್‌ನಲ್ಲಿ ಭೇಟಿಯಾದರೆ ಮಾತ್ರ ಪಂದ್ಯ ಸಾಧ್ಯ ಎಂದು ಪ್ರಾಯೋಜಕರು ಸರ್ಕಾರಕ್ಕೆ ತಿಳಿಸಿದ್ದರು. ಹೀಗಾಗಿ ಭೇಟಿಯನ್ನು ರದ್ದುಗೊಳಿಸಲಾಗಿದೆ.
ಆರ್ಚರಿಗೂ ಫ್ರಾಂಚೈಸಿ ಆಧಾರಿತ ಲೀಗ್ ಆರಂಭ
ನವದೆಹಲಿ: ಆರ್ಚರಿ(ಬಿಲ್ಲುಗಾರಿಕೆ) ಸ್ಪರ್ಧೆಗೂ ಇನ್ನು ಮುಂದೆ ಫ್ರಾಂಚೈಸಿ ಆಧಾರಿತ ಲೀಗ್ ಆರಂಭಗೊಳ್ಳಲಿದೆ. ಭಾರತೀಯ ಆರ್ಚರಿ ಸಂಸ್ಥೆ ಲೀಗ್ ಘೋಷಿಸಿದ್ದು, ಅಕ್ಟೋಬರ್‌ನಲ್ಲಿ ನವದೆಹಲಿಯಲ್ಲಿ ಸ್ಪರ್ಧೆಗಳು ನಡೆಯಲಿವೆ. ಲೀಗ್‌ನಲ್ಲಿ 6 ಫ್ರಾಂಚೈಸಿಗಳು ಪಾಲ್ಗೊಳ್ಳಲಿದ್ದು, ಭಾರತ ಹಾಗೂ ವಿಶ್ವದೆಲ್ಲೆಡೆಯ ಸ್ಪರ್ಧಿಗಳು ಭಾಗವಹಿಸಲಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.
ಅಂ-22 ಏಷ್ಯಾ ಬಾಕ್ಸಿಂಗ್: ಭಾರತಕ್ಕೆ 6 ಪದಕ ಖಚಿತ
ಬ್ಯಾಂಕಾಕ್: ಭಾರತದ ಬಾಕ್ಸರ್‌ಗಳು ಅಂಡರ್-22 ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ 6 ಪದಕ ಖಚಿತಪಡಿಸಿಕೊಂಡಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಪ್ರಿಯಾ(60 ಕೆ.ಜಿ.), ಪರಂಜಲ್ ಯಾದವ್(70 ಕೆ.ಜಿ.), ಪುರುಷರ ವಿಭಾಗದಲ್ಲಿ ಹರ್ಷ್(60 ಕೆ.ಜಿ.), ರಾಕಿ ಚೌಧರಿ(85 ಕೆ.ಜಿ.), ನೀರಜ್(75 ಕೆ.ಜಿ.), ಹಾಗೂ ಇಶಾನ್ ಕಟಾರಿಯಾ(90+ ಕೆ.ಜಿ.) ಸೆಮಿಫೈನಲ್ ಪ್ರವೇಶಿಸಿದ್ದಾರೆ. ಬಾಕ್ಸಿಂಗ್‌ನಲ್ಲಿ ಸೆಮೀಸ್ ತಲುಪಿದವರಿಗೂ ಪದಕ ಲಭಿಸುತ್ತದೆ.
