ಐಎಸ್‌ಎಲ್ ಫುಟ್ಬಾಲ್: ಇಂದು ಬಿಎಫ್‌ಸಿ-ಎಟಿಕೆ ಸೆಮೀಸ್ ಕದನ
ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಬಿಎಫ್‌ಸಿ ಸೆಮೀಸ್ ಮೊದಲ ಚರಣದ ಹಣಾಹಣಿ ಎಟಿಕೆ ತಂಡವನ್ನು ಎದುರಿಸಲಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ
ಬೆಂಗಳೂರು(ಮಾ.01): ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) 6ನೇ ಆವೃತ್ತಿಯ ಪ್ಲೇ ಆಫ್ ಹಂತ ಆರಂಭವಾಗಿದ್ದು, ಭಾನುವಾರ ಹಾಲಿ ಚಾಂಪಿಯನ್ ಬೆಂಗಳೂರು ಎಫ್‌ಸಿ, ಅಟ್ಲಾಟಿಕೊ ಡಿ ಕೋಲ್ಕತಾ ಎದುರು ಸೆಣಸಲು ಸಜ್ಜಾಗಿದೆ.
ISL 2020: ಮೊದಲ ಸೆಮೀಸ್ ಪಂದ್ಯದಲ್ಲಿ ಚೆನ್ನೈ-ಗೋವಾ ಮುಖಾಮುಖಿ!
ಸೆಮೀಸ್ ಮೊದಲ ಚರಣದ ಹಣಾಹಣಿ ಇದಾಗಿದ್ದು, ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ತವರಿನಲ್ಲಿ ಬಿಎಫ್‌ಸಿಗೆ ಇದು ಕೊನೆಯ ಪಂದ್ಯ, ಹೀಗಾಗಿ ಬಿಎಫ್‌ಸಿ ಅತ್ಯುತ್ತಮ ಪ್ರದರ್ಶನ ತೋರುವ ಉತ್ಸಾಹದಲ್ಲಿ ಕಣಕ್ಕಿಳಿಯಲಿದೆ.
ಇತ್ತೀಚೆಗಷ್ಟೇ ಎಎಫ್‌ಸಿ ಕಪ್ ಅರ್ಹತಾ ಸುತ್ತಿನಲ್ಲಿ ಮಾಲ್ಡೀವ್ಸ್‌ನ ಮಝಿಯಾ ಎದುರು ಸೋಲುಂಡಿದ್ದ ಬಿಎಫ್‌ಸಿ, ಎಟಿಕೆ ಎದುರು ಗೆಲುವಿನ ಹಳಿಗೆ ಮರಳುವ ವಿಶ್ವಾಸದಲ್ಲಿದೆ. ಐಎಸ್‌ಎಲ್ ಟೂರ್ನಿಯಲ್ಲಿ ಬಿಎಫ್‌ಸಿ ತಂಡ, 18 ಪಂದ್ಯಗಳಿಂದ ಕೇವಲ 22 ಗೋಲುಗಳನ್ನು ಗಳಿಸಿದೆ. ಹೀಗಾಗಿ ಒತ್ತಡದೊಂದಿಗೆ ಸೆಮೀಸ್‌ಗೆ ಕಾಲಿಡುತ್ತಿದೆ. ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ತೋರಿರುವ ಎಟಿಕೆ 18 ಪಂದ್ಯಗಳಿಂದ 33 ಗೋಲುಗಳಿಸಿದೆ.
ಪಂದ್ಯ ಆರಂಭ: ಸಂಜೆ 7.30ಕ್ಕೆ
ಗೋವಾ ವಿರುದ್ಧ ಗೆದ್ದ ಚೆನ್ನೈ:
ಚೆನ್ನೈ: ಶನಿವಾರ ಇಲ್ಲಿ ನಡೆದ ಮೊದಲ ಸೆಮಿಫೈನಲ್‌ನ ಮೊದಲ ಚರಣದ ಪಂದ್ಯದಲ್ಲಿ ಚೆನ್ನೈಯಿನ್ ಎಫ್‌ಸಿ, ಗೋವಾ ಎಫ್‌ಸಿ ವಿರುದ್ಧ 4-1 ಗೋಲುಗಳಿಂದ ಗೆಲುವು ಸಾಧಿಸಿದೆ. ಈ ಜಯದೊಂದಿಗೆ ಚೆನ್ನೈ, ಫೈನಲ್ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಮಾ.7ರಂದು ಗೋವಾ, ಚೆನ್ನೈ ನಡುವೆ 2ನೇ ಚರಣದ ಪಂದ್ಯ ನಡೆಯಲಿದೆ.