ಬೆಂಗಳೂರು(ಜ.21):  ಹಿಂದಿನ ಪಂದ್ಯದಲ್ಲಿ ಮುಂಬೈ ಸಿಟಿ ಎಫ್ ಸಿ ವಿರುದ್ಧ  2-0 ಗೋಲಿನಿಂದ ಆಘಾತಗೊಂಡು ಗಾಯಗೊಂಡ ಹುಲಿಯಂತಿರುವ ಬೆಂಗಳೂರು ಎಫ್ ಸಿ ತಂಡ ಬುಧವಾರ ಕಂಠೀರವ ಕ್ರೀಡಾಂಗಣದಲ್ಲಿ ಸತತ ನಾಲ್ಕು ಜಯ ಕಂಡು ಹೀರೋ ಇಂಡಿಯನ್ ಸೂಪರ ಲೀಗ್ ನ ಟಾಪ್ ನಾಲ್ಕರಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ತವಕದಲ್ಲಿರುವ ಒಡಿಶಾ ಎಫ್ ಸಿ ವಿರುದ್ಧ ಹೋರಾಟ ನಡೆಸಲಿದೆ.

ಇದನ್ನೂ ಓದಿ: ಐಎಸ್‌ಎಲ್‌: ಮುಂಬೈ ಎಫ್‌ಸಿ ವಿರುದ್ಧ ಒಡಿಶಾಗೆ ಜಯ

ಇಲ್ಲಿ ಗೆಲ್ಲುವ ಒಂದು ತಂಡವು ಅಂಕಪಟ್ಟಿಯಲ್ಲಿ ಟಾಪ್ ಸ್ಥಾನ ತಲುಪಲಿದೆ. 22 ಅಂಕ ಗಳಿಸಿರುವ ಬೆಂಗಳೂರು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು, ಜಯ ಗಳಿಸಿದರೆ 24 ಅಂಕ ಗಳಿಸಿರುವ ಎಟಿಕೆ ಮತ್ತು ಗೋವಾ ಎಫ್ ಸಿ ಯನ್ನು ಹಿಂದಿಕ್ಕಿ ಅಗ್ರ ಸ್ಥಾನ ತಲುಪಲಿದೆ. 21 ಅಂಕ ಗಳಿಸಿರುವ ಒಡಿಶಾ ಗೆದ್ದರೆ ಗೋವಾ ಮತ್ತು ಎಟಿಕೆಯೊಂದಿಗೆ ಸಮಬಲ ಸಾಧಿಸಲಿದೆ.

ಇದನ್ನೂ ಓದಿ: ಐಎಸ್‌ಎಲ್‌: ಬಿಎಫ್‌ಸಿಗೆ 2-0 ಜಯ

‘’ಕಳೆದ ನಾಲ್ಕು ಪಂದ್ಯಗಳಲ್ಲಿ ನಾವು ನಾಲ್ಕೂ ಪಂದ್ಯಗಳಲ್ಲೂ ಜಯ ಗಳಿಸಿರುವುದು ಸಂತಸದ ವಿಷಯ. ಬೆಂಗಳೂರು ಶ್ರೇಷ್ಠ ತಂಡವಾದ ಕಾರಣ ನಾಳೆಯ ಪಂದ್ಯ ನಮಗೆ ಕಠಿಣ ಎನಿಸಲಿದೆ. ಬೆಂಗಳೂರು ಐಎಸ್ಎಲ್ ನಲ್ಲಿರುವ ಉತ್ತಮ ತಂಡಗಳಲ್ಲಿ ಒಂದು. ನಾವು ಜಯ ಗಳಿಸುತ್ತೇವೆಂಬ ಆತ್ಮವಿಶ್ವಾಸದೊಂದಿಗೆ ನಾವು ಇಲ್ಲಿಗೆ ಬಂದಿದ್ದೇವೆ. ನಮಗೆ ನಾಳಿ ಉತ್ತಮ ಫಲಿತಾಂಶ ಸಿಕ್ಕರೆ ನಾವು ಬಿಎಫ್ ಸಿಗಿಂತ ಮೇಲಕ್ಕೇರುವೆವು, ಆದ್ದರಿಂದ ನಾವು ಜಯ ಗಳಿಸಲು ಯತ್ನಿಸುವೆವು,’’ ಎಂದು ಒಡಿಶಾ ಕೋಚ್ ಜೋಸೆಫ್ ಗೋಬಾವ್ ಹೇಳಿದ್ದಾರೆ.

ಕಾರ್ಲಸ್ ಕ್ಬಾಡ್ರಟ್ ತಂಡದ ಡಿಫೆನ್ಸ್ ವಿಭಾಗ ಈ ಋತುವಿನಲ್ಲಿ  13 ಪಂದ್ಯಗಳನ್ನಾಡಿ ಎದುರಾಳಿ ತಂಡಕ್ಕೆ ನೀಡಿರುವುದು ಕೇವಲ 9 ಗೋಲುಗಳು. ಆದರೆ ಹಿಂದಿನ ಪಂದ್ಯದಲ್ಲಿ ಡಿಫೆನ್ಸ್ ವಿಭಾಗ ಮಾಡಿರುವ ಪ್ರಮಾದದಿಂದಾಗಿ ಮುಂಬೈ ಸಿಟಿ ತಂಡ ಗೆದ್ದಿರುವುದಕ್ಕೆ ಕ್ಬಾಡ್ರಾಟ್ ಬೇಸರ ವ್ಯಕ್ತಪಡಿಸಿದ್ದಾರೆ. ಮನೆಯಂಗಣದಲ್ಲಿ ಬೆಂಗಳೂರು ತನ್ನ ತಪ್ಪುಗಳನ್ನು ತಿದ್ದಿಕೊಂಡು ಜಯ ಗಳಿಸಲಿದೆ ಎಂಬ ವಿಶ್ವಾಸವನ್ನು ಸ್ಪೇನ್ ಮೂಲದ ಕೋಚ್ ಹೊಂದಿದ್ದಾರೆ, ಏಕೆಂದರೆ ಬೆಂಗಳೂರಿನಲ್ಲಿ ತಂಡ ಎದುರಾಳಿಗೆ ಬಿಟ್ಟುಕೊಟ್ಟಿದ್ದು ಕೇವಲ ನಾಲ್ಕು ಗೋಲುಗಳು.

‘’ಕಳೆದ ಪಂದ್ಯ ನಮ್ಮನ್ನು ಬಹಳ ಕುಸಿಯುವಂತೆ ಮಾಡಿದೆ, ಏಕೆಂದರೆ ಅಲ್ಲಿ ಸಂಭವಿಸಿದ ಹಲವಾರು ಅಂಶಗಳು ತಂಡದ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರಲಿದೆ ಈಗ ಪರಿಸ್ಥಿತಿಯನ್ನು ಬದಲಾಯಿಸುವುದು ನಮ್ಮ ಮುಂದಿದೆ, ತಂಡದಲ್ಲಿ ಒಬ್ಬ ಆಟಗಾರ ಪ್ರಮಾದ ಎಸಗಿದರೆ, ಅದು ಆ ಆಟಗಾರ ಮತ್ತು ಇಡೀ ತಂಡಕ್ಕೆ ಆಘಾತವನ್ನುಂಟು ಮಾಡುತ್ತದೆ,’’ ಎಂದು ಕ್ವಾಡ್ರಾಟ್ ಹೇಳಿದರು.

ಬೆಂಗಳೂರು ತಂಡದ ಇನ್ನೊಂದು ಚಿಂತೆಯೆಂದರೆ ಅಟ್ಯಾಕ್ ವಿಭಾಗದ್ದು. ನಾಯಕ ಸುನಿಲ್ ಛೆಟ್ರಿ ಎಂಟು ಗೋಲುಗಳನ್ನು ಗಳಿಸಿದ್ದನ್ನು ಹೊರತುಪಡಿಸಿದರೆ ಫಾರ್ವರ್ಡ್ ನ ಇತರ ಆಟಗಾರರು ಸಮರ್ಪಕ ರೀತಿಯಲ್ಲಿ ಪ್ರೋತ್ಸಾಹ ನೀಡಲಿಲ್ಲ. ಆಶಿಕ್ ಕುರುನಿಯಾನ್ ಮತ್ತು ಉದಾಂತ್ ಸಿಂಗ್ ನಿರಂತರವಾಗಿ ವೈಫಲ್ಯ ಕಾಣುತ್ತಿದ್ದಾರೆ. ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಉದಾಂತ್ ಸಿಂಗ್ ಈ ಬಾರಿ ಕಳಪೆ ಪ್ರದರ್ಶನ ತೋರಿದ್ದು, ಕೇವಲ ಒಂದು ಗೋಲು ಗಳಿಸಿದ್ದಾರೆ, ಇತ್ತೀಚಿನ ಪಂದ್ಯಗಳಲ್ಲಿ ಉದಾಂತ್ ಆಡುವ ಹನ್ನೊಂದು ಮಂದಿಯಲ್ಲೂ ಸ್ಥಾನ ಪಡೆದಿರಲಿಲ್ಲ. ನಾಳೆಯ ಪಂದ್ಯದಲ್ಲಿ ಮ್ಯಾನ್ವೆಲ್ ಒನೌ ಹಾಗೂ ದೆಶ್ರೊಣ್ ಬ್ರೌನ್ ಅವರು ಛೆಟ್ರಿಗೆ ನೆರವು ನೀಡಬಹುದು ಎಂಬುದು ಬೆಂಗಳೂರು ತಂಡದ ನಿರೀಕ್ಷೆ,

‘’ನಾಳೆಯ ಪಂದ್ಯ ನಮಗೆ ಅತ್ಯಂತ ಪ್ರಮುಖವಾದುದು, ನಮಗೆ ಈಗ ಅವಕಾಶ ಇರುವುದು 15 ಅಂಕಗಳನ್ನು ಗಳಿಸುವಷ್ಟು ಮಾತ್ರ ಅಂದರೆ ಐದು ಪಂದ್ಯಗಳು. ಒಡಿಶಾ ಅತ್ಯಂತ ಆತ್ಮವಿಶ್ವಾಸದೊಂದಿಗೆ ಇಲ್ಲಿಗೆ ಆಗಮಿಸಿದೆ. ನಾವು ಕೋಡ ಮನೆಯಂಗಣದಲ್ಲಿ ಇದುವರೆಗೂ ಉತ್ತಮ ಪ್ರದರ್ಶನ ತೋರಿದ್ದೇವೆ. ,ಮುಂಬೈ ವಿರುದ್ಧದ ಸೋಲನ್ನು ಮರೆತು ನಾವು ಮತ್ತೆ ಮೂರು ಅಂಕಗಳಿಗಾಗಿ ಹೋರಾಟ ನಡೆಸಲಿದ್ದೇವೆ,’’ ಎಂದು ಕ್ವಾಡ್ರಟ್ ಹೇಳೀದ್ದಾರೆ.