ಹೈದರಾಬಾದ್(07):   ಭಾನುವಾರ ನಡೆಯಲಿರುವ ಮಹತ್ವದ ಪಂದ್ಯದಲ್ಲಿ ತವರಿನ ಹೈದರಾಬಾದ್ FC ಹಾಗೂ ಗೋವಾ ತಂಡಗಳು ಮುಖಾಮುಖಿಯಾಗುತ್ತಿವೆ.  ಇಲ್ಲಿನ ಜಿಎಂಸಿ  ಬಾಲಯೋಗಿ ಕ್ರೀಡಾಂಗಣದಲ್ಲಿ  ನಡೆಯಲಿರುವ ಹೀರೋ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ   ಗೋವಾ ಗೆಲುವಿನ  ವಿಶ್ವಾಸಹೊಂದಿದೆ. ಈ ಹಿಂದಿನ ಎರಡು ಪಂದ್ಯಗಳಲ್ಲಿ  ಕೇವಲ ಒಂದು ಅಂಕ ಗಳಿಸಲು ಶಕ್ಯವಾಗಿರುವ  ಸರ್ಗಿಯೋ ಲೊಬೆರಾ ಪಡೆ,  ತಳ ಮಟ್ಟದಲ್ಲಿರುವ ಹೈದರಾಬಾದ್ ವಿರುದ್ಧ ಜಯ ಗಳಿಸಿದರೆ ಅಗ್ರ ನಾಲ್ಕು ಸ್ಥಾನಕ್ಕೆ ಪ್ರವೇಶಿಸಲಿದೆ. 

ಇದನ್ನೂ ಓದಿ: ISL ಫುಟ್ಬಾಲ್: ಅಗ್ರ​ಸ್ಥಾನಕ್ಕೆ ಏರಿದ ಬೆಂಗಳೂರು ಎಫ್‌ಸಿ.

ಆರು ಪಂದ್ಯಗಳನ್ನು ಆಡಿರುವ ಹೈದರಾಬಾದ್ ಕೇವಲ  ನಾಲ್ಕು ಅಂಕಗಳನ್ನು ಗಳಿಸಿದೆ. ಒಂಬತ್ತು ಅಂಕಗಳನ್ನು ಗಳಿಸಿ ಐದನೇ ಸ್ಥಾನದಲ್ಲಿರುವ ಗೋವಾ ತಂಡವನ್ನು ಮಣಿಸಿದರೆ ಅಂಕಪಟ್ಟಿಯಲ್ಲಿ ಕೆಲವು ತಂಡಗಳನ್ನು ಹಿಂದಿಕ್ಕಲಿದೆ. ಬೆಂಗಳೂರು ಎಫ್ ಸಿ ವಿರುದ್ಧದ ಪಂದ್ಯದಲ್ಲಿ ರಾಬಿನ್ ಸಿಂಗ್ ಗಳಿಸಿದ ಗೋಲಿನ ನೆರವಿನಿಂದ  ಬೆಂಗಳೂರು ಎಫ್ ಸಿ ವಿರುದ್ಧ  1-1 ಗೋಲಿನಿಂದ ಡ್ರಾ ಸಾಧಿಸಿತ್ತು. 

ಹೈದರಾಬಾದ್ ತಂಡದ ಮಿಡ್ ಫೀಲ್ಡ್ ವಿಭಾಗದ ಶಕ್ತಿ ಕ್ಷೀಣಗೊಂಡಿರುವುದೇ ತಂಡದ ಹಿನ್ನಡೆಗೆ ಕಾರಣವಾಗಿದೆ.  ಆತಿಥೇಯ ತಂಡವು ಇದುವರೆಗೂ  13 ಗೋಲುಗಳನ್ನು ನೀಡಿದ್ದು  ಕೋಚ್ ಫಿಲ್ ಬ್ರೌನ್ ಅವರಿಗೆ ಚಿಂತೆಯನ್ನುಂಟು ಮಾಡಿದೆ. ಒಂದು ಸಮಾಧಾನಕರ ಸಂಗತಿಯೆಂದರೆ ಬ್ರೌನ್ ಅವರಿಗೆ ತಮ್ಮ ತಂಡದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಒಂಬತ್ತು ದಿನಗಳ ಗಡುವು ಸಿಕ್ಕಿತ್ತು. 

ಇದನ್ನೂ ಓದಿ: ISL 2019: ಗೆಲುವಿನ ನಾಗಾಲೋಟ ಮುಂದುವರಿಸಿದ ಬೆಂಗಳೂರು FC!

ಸ್ಟ್ರೈಕರ್ ಗಿಲ್ಸ್ ಬಮ್ಸ್ ಅವರ ಫಿಟ್ನೆಸ್ ಉತ್ತಮಗೊಂಡಿದ್ದು,  ಮಾರ್ಸೆಲಿನೊ ಆದಿಲ್ ಖಾನ್ ಅವರೊಂದಿಗೆ ಅಂಗಣಕ್ಕಿಳಿಯುವ ಸಾಧ್ಯತೆ ಇದೆ. ಅಂತಾರಾಷ್ಟ್ರೀಯ ಪಂದ್ಯವನ್ನು ಆಡುತ್ತಿರುವಾಗ ಖಾನ್ ಗಾಯಗೊಂಡಿದ್ದರು.  ಡಿಫೆಂಡರ್ ಸಾಹಿಲ್ ಪನ್ವಾರ್ ಹಾಗೂ ಗುರ್ತೇಜ್ ಸಿಂಗ್ ಅಮಾನತುಗೊಂಡಿದ್ದರಿಂದ ನಾಳೆಯ ಪಂದ್ಯದಿಂದ ಹೊರಗುಳಿಯಲಿದ್ದಾರೆ.  ಈಗ ಬ್ರೌನ್ ಅವರಿಗೆ ನಿಖಿಲ್ ಪೂಜಾರಿ ಹಾಗೂ ಆಶೀಶ್ ರಾಯ್ ಅವರನ್ನು ಆಧರಿಸಬೇಕಾಗಿದೆ.

''ಜ್ಯಗತ್ತಿನ ಪ್ರತಿಯೊಂದು ಕೋಚ್ ಕೂಡ ಗಾಯ ಹಾಗೂ ಅಮಾನತಿನ ಸಮಸ್ಯೆಯನ್ನು ಎದುರಿಸುತ್ತಾರೆ. ನಮ್ಮ ತಾಣದಲ್ಲಿ ಅತ್ಯಂತ ತೃಪ್ತಿದಾಯಕ ಅಂಶ ಎಂದರೆ  ನಮ್ಮ ಚಿಕಿತ್ಸಾ ಕೊಠಡಿ ಈಗ ಯಾರೂ ಇಲ್ಲ. ಆದರೆ ಇಬ್ಬರು ಆಟಗಾರರು ಅಮಾನತು ಪಟ್ಟಿಯಲ್ಲಿದ್ದಾರೆ.  ಯಾರು ಯಾವ ಸ್ಥಾನದಲ್ಲಿ ಆಡಲಿದ್ದಾರೆ ಎಂಬುದನ್ನು ಹೊರತುಪಡಿಸಿದರೆ ನಮ್ಮ ತಂಡದ ಶಕ್ತಿಯಲ್ಲಿ ಈಗ ಪರಿಪೂರ್ಣತೆ ಇದೆ,'' ಎಂದು ಬ್ರೌನ್ ಹೇಳಿದ್ದಾರೆ. 

''ನಾವು ಐಎಸ್ ಎಲ್ ನಲ್ಲಿ ಒಂದು ತಂಡವಾಗಿ ಬಂದಿದ್ದೇವೆ.  ನಮ್ಮ ತಂಡವೆಂಬುದು ಒಂದು ಶಕ್ತಿ ಇದ್ದಂತೆ.  ಗುರುತೇಜ್ ಹಾಗೂ ಸಾಹಿಲ್ ಅಮಾನತುಗೊಂಡಿರುವುದು ಸಾಮಾನ್ಯ ಸಂಗತಿ. ಇದು ಫುಟ್ಬಾಲ್ ನಲ್ಲಿ ನಡೆಯುತ್ತಿರುತ್ತದೆ. ನಾನು ಭಾರತಕ್ಕೆ ಬಂದಾಗಿನಿಂದ ಸ್ಪರ್ಧೆ ಉತ್ತಮವಾಗಿದೆ,'' ಎಂದರು.

ಕೆಲವು ಪ್ರಮುಖ ಆಟಗಾರರು ತಂಡವನ್ನು ಸೇರಿಕೊಂಡಿದ್ದರಿಂದ ಸೆರ್ಗಿಯೊ ಲೊಬೆರಾ ಅವರ ಆತ್ಮವಿಶ್ವಾಸ ಹೆಚ್ಚಿದೆ.  ಈಗ ಅವರಿಗೆ ಹ್ಯೂಗೋ ಬೌಮಾಸ್ ಹಾಗೂ ಸೈಮನ್ಲೆನ್ ಡಾಂಗಲ್ ಅವರ ನಡುವೆ ಆಯ್ಕೆ ಮಾಡುವ  ಅವಕಾಶ ಸಿಕ್ಕಿದೆ.  ಸ್ಟಾರ್ ಸ್ಟ್ರೈಕರ್ ಫರಾನ್ ಕೊರೊಮಿನಾಸ್ ಕಳೆದ ಎರಡು ಪಂದ್ಯಗಳಿಗೆ ಅನುಪಸ್ಥಿತಿಯಾಗಿದ್ದು, ಸಂಪೂರ್ಣ ಚೇತರಿಸಿಕೊಂಡರೆ ಅವರು ಭಾನುವಾರದ ಪಂದ್ಯಕ್ಕೆ ಲಭ್ಯವಾಗಲಿದ್ದಾರೆ.  ಗಮನಿಸಬೇಕಾದ ಅಂಶ ಎಂದರೆ  ಕೊರೊನಿನಾಸ್ ಅವರ ಅನುಪಸ್ಥಿತಿಯಲ್ಲಿ ಗೋವಾ ಗಳಿಸಿರುವುದು ಕೇವಲ ಒಂದು ಅಂಕ ಮಾತ್ರ. 

''ಕಳೆದ ಮೂರು ಋತುಗಳಿಗೆ ಹೋಲಿಸಿದರೆ ಈ ಬಾರಿ ಅತ್ಯಂತ ಕಠಿಣ ಋತುವಾಗಿದೆ, ಇತರ ತಂಡಗಳು ಉತ್ತಮ ಆಟಗಾರನ್ನು ಸಹಿ ಮಾಡಿಕೊಂಡಿವೆ, ಎಲ್ಲ ತಂಡಗಳೂ ಉತ್ತಮ ರೀತಿಯಲ್ಲಿ ಸ್ಪರ್ಧೆ ನೀಡುತ್ತಿವೆ,  ನಾವು ಉತ್ತಮವಾಗಿದ್ದೇವೆ, ಆದರೆ ಸ್ಪರ್ಧೆಯೂ ಉತ್ತಮವಾಗಿದೆ,'' ಎಂದು ಲೊಬೆರೊ ಹೇಳಿದ್ದಾರೆ.