ಒಂದಲ್ಲ, ಎರಡಲ್ಲ ಬರೋಬ್ಬರಿ 6 ಪಂದ್ಯಗಳನ್ನಾಡಿದರೂ ಕೇರಳ ಬ್ಲಾಸ್ಟರ್ಸ್ ಗೆಲುವು ಸಿಕ್ಕಿರಲಿಲ್ಲ. ಆದರೆ ಸತತ ಪ್ರಯತ್ನ ಹೋರಾಟದ ಫಲವಾಗಿ ಕೇರಳ 7ನೇ ಪಂದ್ಯದಲ್ಲಿ ಮೊದಲ ಗಲುವು ದಾಖಲಿಸಿದೆ.
ಹೈದರಾಬಾದ್(ಡಿ. 27): ಡಿಫೆಂಡರ್ ಅಬ್ದುಲ್ ಹಕ್ಕೂ ನೆಡಿಯೋದತ್ (29ನೇ ನಿಮಿಷ) ಮತ್ತು ಸ್ಟ್ರೈಕರ್ ಜಾರ್ಡನ್ ಮರ್ರೇ (88ನೇ ನಿಮಿಷ) ಬಾರಿಸಿದ ಗೋಲ್‌ಗಳಿಂದ ಮಿಂಚಿದ ಕೇರಳಾ ಬ್ಲಾಸ್ಟರ್ಸ್ ಎಫ್‌ಸಿ ತಂಡ, ಇಂಡಿಯನ್ ಸೂಪರ್ ಲೀಗ್ ಲೀಗ್ ಟೂರ್ನಿಯ 40ನೇ ಲೀಗ್ ಪಂದ್ಯದಲ್ಲಿ ಆತಿಥೇಯ ಹೈದರಾಬಾದ್ ಎಫ್‌ಸಿ ವಿರುದ್ಧ ಭರ್ಜರಿ ಜಯ ದಾಖಲಿಸಿತು.
ಇಲ್ಲಿನ ಗಚಿಬೌಲಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಅನುಭವದ ಆಟವಾಡಿದ ಎರಡು ಬಾರಿಯ ರನ್ನರ್ಸ್‌ಅಪ್ ಕೇರಳಾ ಬ್ಲಾಸ್ಟರ್ಸ್ ಎಫ್‌ಸಿ 2-0 ಗೋಲ್‌ಗಳಿಂದ ಹೈದರಾಬಾದ್ ಎಫ್‌ಸಿ ತಂಡಕ್ಕೆ ಸೋಲುಣಿಸುವಲ್ಲಿ ಯಶಸ್ವಿಯಾಯಿತು.
ಈ ಮೂಲಕ ಟೂರ್ನಿಯಲ್ಲಿ ಕೇರಳಾ ಬ್ಲಾಸ್ಟರ್ಸ್ ತಂಡ ತನ್ನ ಮೊತ್ತ ಮೊದಲ ಗೆಲುವು ದಾಖಲಿಸಿದೆ. ಇದಕ್ಕೂ ಮುನ್ನ ಆಡಿದ 6 ಲೀಗ್ ಪಂದ್ಯಗಳಲ್ಲಿ 3 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದ ಬ್ಲಾಸ್ಟರ್ಸ್ ಇನ್ನುಳಿದ ಮೂರು ಪಂದ್ಯಗಳಲ್ಲಿ ಸೋತು ಸುಣ್ಣವಾಗಿತ್ತು. ಮತ್ತೊಂದೆಡೆ ಹೈದರಾಬಾದ್ ತಂಡ ಟೂರ್ನಿಯಲ್ಲಿ ತನ್ನ ಎರಡನೇ ಸೋಲಿನ ಆಘಾತಕ್ಕೊಳಗಾಗಿದೆ.
ತನ್ನ ಮೊದಲ ಜಯ ದಾಖಲಿಸಿದರೂ ಕೂಡ ಕೇರಳ ಬ್ಲಾಸ್ಟರ್ಸ್ ಎಫ್‌ಸಿ ತಂಡ ಒಟ್ಟು 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲೇ ಉಳಿದುಕೊಂಡಿದೆ. ಹೈದರಾಬಾದ್ ತಂಡ ಎರಡನೇ ಸೋಲನುಭವಿಸಿದರೂ 9 ಅಂಕಗಳೊಂದಿಗೆ ತನ್ನ 8ನೇ ಸ್ಥಾನವನ್ನು ಕಾಯ್ದುಕೊಂಡಿದೆ.
ಮೊದಲ ಅವಧಿಯಲ್ಲಿ ಮಿಂಚಿದ ಕೇರಳ ಬಾಯ್ಸ್
ಟೂರ್ನಿಯಲ್ಲಿ ಮೊದಲ ಗೆಲುವಿನ ಹುಡುಕಾಟದಲ್ಲಿದ್ದ ಕೇರಳಾ ಬ್ಲಾಸ್ಟರ್ಸ್ ತಂಡ ಹೈದರಾಬಾದ್ ಎದುರು ಗೆಲ್ಲಲೇ ಬೇಕೆಂಬ ಹಠದಲ್ಲಿ ಕಣಕ್ಕಿಳಿದಂತ್ತಿತ್ತು. ಅಂತೆಯೇ ಪಂದ್ಯದ ಮೊದಲ ಅವಧಿಯಲ್ಲೇ ಆಕ್ರಮಣಕಾರಿ ಆಟಕ್ಕೆ ಮುಂದಾಗಿ ಗೋಲ್ ಗಳಿಕೆಯ ಹಲವು ಅವಕಾಶಗಳನ್ನು ಸೃಷ್ಟಿಸಿತು. ಚೆಂಡಿನ ಮೇಲಿನ ನಿಯಂತ್ರಣವನ್ನು ಅತಿ ಹೆಚ್ಚ ಸಮಯ ತನ್ನಲ್ಲೇ ಕಾಯ್ದುಕೊಂಡಿದ್ದ ಕೇರಳಾ ಬ್ಲಾಸ್ಟರ್ಸ್ ತಂಡ ಒಂದರ ಹಿಂದೆ ಒಂದರಂತೆ ಸತತ ಪ್ರಯತ್ನ ನಡೆಸುತ್ತಲೇ ಇತ್ತಾದರೂ ಹೈದರಾಬಾದ್‌ನ ಗೋಲ್‌ಕೀಪರ್ ಅನುಭವಿ ಸುಬ್ರತಾ ಪಾಲ್ ತಡೆಗೋಡೆಯಂತೆ ನಿಂತಿದ್ದರು.
ಆದರೆ, ಪಂದ್ಯದ 29ನೇ ನಿಮಿಷದಲ್ಲಿ ಬ್ಲಾಸ್ಟರ್ಸ್ ತಂಡದ ಸ್ಟ್ರೈಕರ್‌ಗಳ ಕೈಲಿ ಆಗದೇ ಇದ್ದ ಕೆಲಸವನ್ನು ಡಿಫೆಂಡರ್ ಅಬ್ದುಲ್ ಹಕ್ಕೂ ನೆಡಿಯೋದತ್ ಮಾಡಿ ತೋರಿಸಿದರು. ಸಹ ಆಟಗಾರ ಕಾರ್ನರ್‌ನಿಂದ ನೀಡಿದ ಪಾಸ್ ಅನ್ನು ಅದ್ಭತವಾಗಿ ಸ್ವೀಕರಿಸಿದ ಅಬ್ದುಲ್ ಮನಮೋಹಕ ಹೆಡರ್ ಮೂಲಕ ಚೆಂಡನ್ನು ಗೋಲ್ ಪೆಟ್ಟಿಗೆಯೊಳಗೆ ಸೇರಿಸಿಬಿಟ್ಟರು. ಅಲ್ಲಿವರೆಗೂ ತಡೆಗೋಡೆಯಂತೆ ನಿಂತಿದ್ದ ಸುಬ್ರತಾ ಪಾಲ್ ಈ ಬಾರಿ ವಿಫಲರಾಗಿದ್ದರು.
ತಿರುಗೇಟು ನೀಡುವ ಭರದಲ್ಲಿ ಎಡವಿದ ಹೈದರಾಬಾದ್
ಪಂದ್ಯದ ಎರಡನೇ ಅವಧಿಯಲ್ಲಿ ಸೋಲು ತಪ್ಪಿಸಿಕೊಳ್ಳಲು ಜಿದ್ದಾಜಿದ್ದಿನ ಹೋರಾಟ ನಡೆಸಿದ ಹೈದರಾಬಾದ್ ಎಫ್‌ಸಿ ತಂಡ ಗೋಲ್‌ಗಳಿಕೆಗೆ ಸತತ ಪ್ರಯತ್ನ ಮಾಡಿತು. ಹಲವು ಬಾರಿ ಕೇವಲ ಕೂದಲೆಳೆಯ ಅಂತರದಲ್ಲಿ ಚೆಂಡು ಗುರಿ ತಪ್ಪಿದರೆ, ಮತ್ತೆರಡು ಬಾರಿ ಬ್ಲಾಸ್ಟರ್ಸ್‌ನ ಗೋಲ್ ಕೀಪರ್ ಅಲ್ಬೀನೊ ಗೋಮ್ಸ್ ಚಾಕಚಕ್ಯತೆ ಮೆರೆದು ಎದುರಾಳಿಯ ಪ್ರಯತ್ನಗಳನ್ನು ವಿಫಲವನ್ನಾಗಿಸಿದರು.
ಗೋಲ್ ಗಳಿಕೆಯ ಸಲುವಾಗಿ ಟ್ಯಾಕಿಂಗ್ ಮೂಡ್‌ನಲ್ಲಿದ್ದ ಹೈದರಾಬಾದ್ ತಂಡ ತನ್ನ ಡಿಫೆನ್ಸ್ ಕಡೆಗೆ ಕೊಂಚ ಮೈಮರೆತಂತ್ತಿತ್ತು. ಇದರ ಸಂಪೂರ್ಣ ಲಾಭ ತೆಗೆದುಕೊಂಡ ಬದಲಿ ಆಟಗಾರನಾಗಿ ಕಣಕ್ಕಿಳಿದಿದ್ದ ಸ್ಟ್ರೈಕರ್ ಜಾರ್ಡನ್ ಮರ್ರೆ 88ನೇ ನಿಮಿಷದಲ್ಲಿ ಏಕಾಂಗಿಯಾಗಿ ಗೋಲ್ ಬಾರಿಸುವ ಮೂಲಕ ಕೇರಳ ತಂಡ ಗೆಲುವಿನ ಅಂತರವನ್ನು 2-0ಗೆ ಹಿಗ್ಗಿಸಿದರು. ಅಲ್ಲಗೆ ಕೇರಳ ತಂಡದ ಪ್ರತಿಹೋರಾಟದ ಹುಮ್ಮಸ್ಸು ಅಡಗಿ ಹೋಗಿತ್ತು. 6 ನಿಮಿಷಗಳ ಹೆಚ್ಚುವರಿ ಅವಧಿಯಲ್ಲೂ ಹೈದರಾಬಾದ್‌ಗೆ ಯಾವುದೇ ಯಶಸ್ಸು ಸಿಗಲಿಲ್ಲ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 27, 2020, 10:00 PM IST