ಕೋಲ್ಕತಾ ಡರ್ಬಿ: ಈಸ್ಟ್ ಬೆಂಗಾಲ್‌ಗೆ ಸೋಲುಣಿಸಿದ ಮೋಹನ್ ಬಾಗನ್!
ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಅತೀ ದೊಡ್ಡ ಡರ್ಬಿ ಹೋರಾಟಕ್ಕೆ ಉತ್ತರ ಸಿಕ್ಕಿದೆ. ಈಸ್ಟ್ ಬೆಂಗಾಲ್ ಹಾಗೂ ಮೋಹನ್ ಬಾಗನ್ ತಂಡದ ರೋಚಕ ಹೋರಾಟದ ವಿವರ ಇಲ್ಲಿದೆ.
ಗೋವಾ(ನ.27): ರಾಯ್ ಕೃಷ್ಣ (49ನೇ ನಿಮಿಷ) ಹಾಗೂ ಮನ್ವೀರ್ ಸಿಂಗ್ (84ನೇ ನಿಮಿಷ) ಅವರು ಗಳಿಸಿದ ಗೋಲಿನ ನೆರವಿನಿಂದ ಎಟಿಕೆ ಮೋಹನ್ ಬಾಗನ್ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಎಸ್ ಸಿ ಈಸ್ಟ್ ಬೆಂಗಾಲ್ ವಿರುದ್ಧ 2-0 ಗೋಲುಗಳ ಅಂತರದಲ್ಲಿ ಜಯ ಗಳಿಸಿದೆ. ಐಎಸ್ಎಲ್ ನಲ್ಲಿ ಕೋಲ್ಕೊತಾ ಡರ್ಬಿ ಎಂದೇ ಬಿಂಬಿಸಲ್ಪಟ್ಟ ಈ ಪಂದ್ಯದಲ್ಲಿ ಈಸ್ಟ್ ಬೆಂಗಾಲ್ ಪ್ರಥಮಾರ್ಧದಲ್ಲಿ ತೋರಿದ ಚುರುಕಿನ ಆಟವನ್ನು ದ್ವಿತಿಯಾರ್ಧದಲ್ಲಿ ತೋರಲಿಲ್ಲ. ತಪ್ಪಿನ ಪಾಸ್ ಗಳಿಗೆ ತಕ್ಕ ಬೆಲೆ ತೆತ್ತು ಮೊದಲ ಪಂದ್ಯದಲ್ಲೇ ಸೋಲನುಭವಿಸಿತು.
ಗೋಲಿಲ್ಲದ ಪ್ರಥಮಾರ್ಧ: ಪಂದ್ಯ ಕುತೂಹಲಕ್ಕೆ ಮುನ್ನ ಸಾಕಷ್ಟು ಕುತೂಹಲ ಮನೆ ಮಾಡಿತ್ತು. ಆದರೆ ಅಷ್ಟೇ ಕುತೂಹಲ ಪಂದ್ಯದಲ್ಲಿ ಇದ್ದಂತೆ ಕಾಣಲಿಲ್ಲ. ಈಸ್ಟ್ ಬೆಂಗಾಲ್ ತಂಡದ ಗೋಲ್ ಕೀಪರ್ ಅರಿಂದಂ ಭಟ್ಟಾಚಾರ್ಯ ತಂಡವನ್ನು ಅಪಾಯದಿಂದ ಪಾರು ಮಾಡಿದರು ಎಂದರೆ ತಪ್ಪಾಗಲಾರದು, ಮೂರು ಬಾರಿ ಎಟಿಕೆ ಮೋಹನ್ ಬಾಗನ್ ನ ಗೋಲಾಗುವ ಅವಕಾಶಕ್ಕೆ ಅಡ್ಡಿ ಮಾಡಿದರು.
ಈಸ್ಟ್ ಬೆಂಗಾಲ್ ಮೊದಲ ಬಾರಿಗೆ ಐಎಸ್ ಎಲ್ ನಲ್ಲಿ ಆಡುತ್ತಿದ್ದರೂ ಚೆಂಡಿನ ಮೇಲೆ ಉತ್ತಮ ರೀತಿಯಲ್ಲಿ ನಿಯಂತ್ರಣ ಸಾಧಿಸಿತ್ತು. ಉತ್ತಮ ಅವಕಾಶಗಳು ಸಿಕ್ಕರೂ ಗೋಲಾಗಿ ಪರಿವರ್ತಿಸುವಲ್ಲಿ ತಂಡದ ಆಟಗಾರರು ವಿಫಲರಾದರು. ಈಸ್ಟ್ ಬೆಂಗಾಲ್ ಆಟಗಾರರು ಚೆಂಡನ್ನು ಪಾಸ್ ಮಾಡಲು ಬಳಸುವ ತಂತ್ರ ಫುಟ್ಬಾಲ್ ಆಭಿಮಾನಿಗಳನ್ನು ಖುಷಿಕೊಟ್ಟಿತು.