ತವರಿನಲ್ಲಿ ಬೆಂಗಳೂರು FC ಹೋರಾಟ; ಮೊದಲ ಗೆಲುವಿನ ನಿರೀಕ್ಷೆ!
ಹ್ಯಾಟ್ರಿಕ್ ಡ್ರಾ ಸಾಧಿಸಿ ನಿರಾಸೆ ಅನುಭವಿಸಿರುವ ಬೆಂಗಳೂರು FC ಮೊದಲ ಗೆಲುವಿಗಾಗಿ ಸಾಂಪ್ರದಾಯಿಕ ಎದುರಾಳಿ ಚೈನ್ನೈಯನ್ ಎಫ್‌ಸಿ ವಿರುದ್ದ ಹೋರಾಟಕ್ಕೆ ಸಜ್ಜಾಗಿದೆ. ಉಭಯ ತಂಡಗಳ ಬಲಾಬಲ ಹೇಗಿದೆ? ಇಲ್ಲಿದೆ ವಿವರ.
ಬೆಂಗಳೂರು(ನ.09): ಭಾನುವಾರ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಬೆಂಗಳೂರು ಎಫ್ ಸಿ ಹಾಗೂ ಚೆನ್ನೈಯಿನ್ ಎಫ್ ಸಿ ತಂಡಗಳು ಮುಖಾಮುಖಿಯಾಗುತ್ತಿವೆ. ಹಾಲಿ ಚಾಂಪಿಯನ್ ಬೆಂಗಳೂರು ಆಡಿದ 3 ಪಂದ್ಯಗಳೂ ಡ್ರಾನಲ್ಲಿ ಅಂತ್ಯಕಂಡಿವೆ. ಹೀಗಾಗಿ ತವರಿನಲ್ಲಿ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ.
ಇದನ್ನೂ ಓದಿ: ಗೆಲುವಿಲ್ಲ, ಸೋಲಿಲ್ಲ; ಸತತ 3ನೇ ಪಂದ್ಯ ಡ್ರಾ ಮಾಡಿಕೊಂಡ ಬೆಂಗಳೂರು FC !
ಎರಡು ಬಾರಿ ಚಾಂಪಿಯನ್ ಪಟ್ಟ ಗೆದ್ದಿರುವ ಚೆನ್ನೈಯಿನ್ ಎಫ್ ಸಿ ಈ ಬಾರಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಹಾಲಿ ಚಾಂಪಿಯನ್ ಬೆಂಗಳೂರು ಎಫ್ ಸಿ ಮೂರು ಪಂದ್ಯಗಳಲ್ಲಿ ಡ್ರಾ ಕಂಡು ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. 2017-18 ರ ಚಾಂಪಿಯನ್ ಚೆನ್ನೈಯಿನ್ ಎಫ್ ಸಿ ಮೂರು ಪಂದ್ಯಗಳಲ್ಲಿ ಕೇವಲ ಒಂದು ಡ್ರಾ ಕಂಡು ಕೊನೆಯ ಸ್ಥಾನದಲ್ಲಿದೆ.
ಇದನ್ನೂ ಓದಿ: ಬೆಂಗಳೂರು vs ಗೋವಾ ಪಂದ್ಯ 1-1 ಗೋಲುಗಳಲ್ಲಿ ಡ್ರಾ!
ಸಿಕ್ಕ ಅವಕಾಶದಲ್ಲಿ ಗೋಲು ಗಳಿಸುವಲ್ಲಿ ಬೆಂಗಳೂರು ಹಾಗೂ ಚೆನ್ನೈ ವಿಫಲವಾಗಿರುವುದು ತಂಡಗಳ ಆರಂಭಿಕ ಹಿನ್ನಡೆಗೆ ಕಾರಣವಾಗಿದೆ. ಬೆಂಗಳೂರು ತಂಡ ಕನಿಷ್ಠ ಒಂದು ಗೋಲನ್ನಾದರೂ ಗಳಿಸಲು ಶಕ್ತವಾಗಿದೆ. ಆದರೆ ಚೆನ್ನೈ ಇದುವರೆಗೂ ಗೋಲು ಗಳಿಸುವಲ್ಲಿ ವಿಫಲವಾದೆ.
ನಾರ್ತ್ ಈಸ್ಟ್ ಯುನೈಟೆಡ್ ವಿರುದ್ಧದ ಪಂದ್ಯದಲ್ಲಿ ಬೆಂಗಳೂರು ಉತ್ತಮವಾಗಿ ಆಡಿದರೂ ಗೋಲು ಗಳಿಸುವಲ್ಲಿ ವಿಫಲವಾಗಿತ್ತು. ಗೋವಾ ವಿರುದ್ಧದ ಪಂದ್ಯದಲ್ಲಿ ಅಂತಿಮ ಕ್ಷಣದಲ್ಲಿ ಎದುರಾಳಿ ತಂಡ ಗಳಿಸಿದ ಗೋಲಿನಿಂದ ಅಂಕ ಹಂಚಿಕೊಳ್ಳುವಂತಾಯಿತು. ಸುಬ್ರತಾ ಪಾಲ್ ಮಿಂಚಿದ ಪರಿಣಾಮ ಜೇಮ್ಶೆಡ್ಪುರ ಎಫ್ ಸಿ ವಿರುದ್ಧದ ಜಯ ಕೈ ಜಾರಿತು.