ಐಎಸ್ಎಲ್: ಪ್ಲೇಆಫ್ನಲ್ಲಿ ಬಿಎಫ್‌ಸಿ-ಕೇರಳ ಕಾದಾಟಕ್ಕೆ ವೇದಿಕೆ ಸಜ್ಜು
ಇಂಡಿಯನ್ ಸೂಪರ್ ಲೀಗ್‌ನಲ್ಲಿ ಬೆಂಗಳೂರು ಎಫ್‌ಸಿ ಪ್ಲೇ ಆಫ್‌ಗೆ ಲಗ್ಗೆ
ಪ್ಲೇ ಆಫ್ ಪಂದ್ಯದಲ್ಲಿ ಬಿಎಫ್‌ಸಿ ತಂಡಕ್ಕೆ ಕೇರಳ ಎಫ್‌ಸಿ ಸವಾಲು
ಮುಂಬೈ, ಹೈದರಾಬಾದ್ ನೇರವಾಗಿ ಸೆಮಿಫೈನಲ್ಗೇರಿವೆ
ಬೆಂಗಳೂರು(ಫೆ.27): ಇಂಡಿಯನ್ ಸೂಪರ್ ಲೀಗ್(ಐಎಸ್ಎಲ್) ಫುಟ್ಬಾಲ್ ಟೂರ್ನಿಯ ಪ್ಲೇ-ಆಫ್ನಲ್ಲಿ ಬೆಂಗಳೂರು ಎಫ್‌ಸಿ ತಂಡ ಮಾರ್ಚ್ 3ರಂದು ನಗರದ ಕಂಠೀರವ ಕ್ರೀಡಾಂಗಣದಲ್ಲಿ ಕೇರಳ ಬ್ಲಾಸ್ಟರ್ಸ್ ವಿರುದ್ಧ ಸೆಣಸಲಿದೆ. ಲೀಗ್‌ನ 20 ಪಂದ್ಯಗಳಲ್ಲಿ ಬಿಎಫ್‌ಸಿ 11 ಗೆಲುವಿನೊಂದಿಗೆ 34 ಅಂಕಗಳಿಸಿ 4ನೇ, ಕೇರಳ 10 ಗೆಲುವಿನೊಂದಿಗೆ 31 ಅಂಕ ಸಂಪಾದಿಸಿ 5ನೇ ಸ್ಥಾನಿಯಾಯಿತು.
ಇತ್ತೀಚೆಗೆ ಕಂಠೀರವದಲ್ಲೇ ಬಿಎಫ್‌ಸಿ-ಕೇರಳ ಲೀಗ್ ಪಂದ್ಯದ ವೇಳೆ ಉಭಯ ತಂಡಗಳ ಅಭಿಮಾನಿಗಳ ನಡುವೆ ಘರ್ಷಣೆ ಉಂಟಾಗಿತ್ತು. ಹೀಗಾಗಿ ಮತ್ತೊಂದು ಸುತ್ತಿನ ಪಂದ್ಯ ಭಾರೀ ಕುತೂಹಲ ಮೂಡಿಸಿದೆ. ಟೂರ್ನಿಯ ಮತ್ತೊಂದು ಪ್ಲೇ-ಆಫ್ನಲ್ಲಿ ಒಡಿಶಾ-ಎಟಿಕೆ ಸೆಣಸಲಿವೆ. ಮುಂಬೈ, ಹೈದರಾಬಾದ್ ನೇರವಾಗಿ ಸೆಮಿಫೈನಲ್ಗೇರಿವೆ.
ಸ್ಟಾಫರ್ಡ್ ಕಪ್ ಫುಟ್ಬಾಲ್: ಬಿಎಫ್ಸಿಗೆ 1-2 ಸೋಲು
ಬೆಂಗಳೂರು: ಸ್ಟಾಫರ್ಡ್ ಚಾಲೆಂಜ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಐಎಸ್ಎಲ್ ಮಾಜಿ ಚಾಂಪಿಯನ್ ಬೆಂಗಳೂರು ಎಫ್‌ಸಿ ಭಾನುವಾರ ಡೆಲ್ಲಿ ಎಫ್‌ಸಿ ವಿರುದ್ಧ 1-2 ಗೋಲುಗಳಿಂದ ಸೋಲನುಭವಿಸಿದೆ. ಆರಂಭಿಕ ಪಂದ್ಯದಲ್ಲಿ ಶ್ರೀನಿಧಿ ಡೆಕ್ಕನ್ ವಿರುದ್ಧ ಡ್ರಾಗೆ ತೃಪ್ತಿಪಟ್ಟುಕೊಂಡಿದ್ದ ಬಿಎಫ್‌ಸಿ 2ನೇ ಪಂದ್ಯದಲ್ಲೂ ನಿರೀಕ್ಷಿತ ಪ್ರದರ್ಶನ ತೋರಲಿಲ್ಲ.
ದಿನದ ಇತರೆ ಪಂದ್ಯಗಳಲ್ಲಿ ಶ್ರೀನಿಧಿ ಡೆಕ್ಕನ್ ತಂಡ ಕೆಂಕ್ರೆ ಎಫ್‌ಸಿ ವಿರುದ್ಧ 2-0 ಗೆಲುವು ಸಾಧಿಸಿತು. ಚೆನ್ನೈಯಿನ್ ಎಫ್‌ಸಿ ಹಾಗೂ ಕಿಕ್ಸ್ಟಾರ್ಚ್ ಎಫ್‌ಸಿ ನಡುವಿನ ಪಂದ್ಯ 2-2 ಗೋಲುಗಳಿಂದ ಡ್ರಾಗೊಂಡಿತು. ಕೇರಳ ಯುನೈಟೆಡ್ ವಿರುದ್ಧ ಎಆರ್ಎ ಎಫ್‌ಸಿ 5-0 ಗೆಲುವು ಸಾಧಿಸಿತು.
ಮೇಲ್ವಿಚಾರಣೆ ಸಮಿತಿ ಬಗ್ಗೆ ವಿನೇಶ್ ಫೋಗಟ್ ಬೇಸರ!
ನವದೆಹಲಿ: ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್ಐ) ಅಧ್ಯಕ್ಷ ಬ್ರಿಜ್ ಭೂಷಣ್ ಮೇಲಿನ ಗಂಭೀರ ಆರೋಪಗಳ ತನಿಖೆಯ ಮೇಲ್ವಿಚಾರಣೆಗೆ ನೇಮಿಸಿರುವ ಸಮಿತಿ ಬಗ್ಗೆಯೂ ತಾರಾ ಕುಸ್ತಿಪಟು ವಿನೇಶ್ ಫೋಗಾಟ್ ಅಸಮಾಧಾನ ಹೊರಹಾಕಿದ್ದಾರೆ.
PSL 2023: ಲಕ್ಷಾಂತರ ಮೌಲ್ಯದ 8 ಭದ್ರತಾ ಕ್ಯಾಮರಾಗಳನ್ನೇ ಕದ್ದೊಯ್ದ ಖದೀಮರು..! ಇದು ಪಾಕ್ ಹಣೆಬರಹ
‘ಪ್ರಕರಣದ ಸೂಕ್ಷ್ಮ ಮಾಹಿತಿಗಳನ್ನು ಮೇಲ್ವಿಚಾರಣಾ ಸಮಿತಿ ಹಾಗೂ ತನಿಖಾ ಸಮಿತಿ ಎರಡರಲ್ಲೂ ಇರುವ ಸದಸ್ಯರೊಬ್ಬರು ಮಾಧ್ಯಮಗಳಿಗೆ ಬಹಿರಂಗಪಡಿಸುತ್ತಿದ್ದಾರೆ. ಹೀಗಾಗಿ ಈ ಸಮಿತಿಯ ಮೇಲೆ ವಿಶ್ವಾಸ ಕಳೆದುಕೊಂಡಿದ್ದೇನೆ. ಕೂಡಲೇ ಅವರನ್ನು ಸಮಿತಿಯಿಂದ ವಜಾಗೊಳಿಸಬೇಕು’ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ಗೆ ಮನವಿ ಮಾಡಿದ್ದಾರೆ. ದಿಗ್ಗಜ ಬಾಕ್ಸರ್ ಮೇರಿ ಕೋಮ್, ಮಾಜಿ ಕುಸ್ತಿಪಟು ಯೋಗೇಶ್ವರ ದತ್ ಈ ಎರಡೂ ಸಮಿತಿಗಳಲ್ಲಿದ್ದಾರೆ.
ಬ್ಯಾಡ್ಮಿಂಟನ್ ಟೂರ್ನಿ: ಕರ್ನಾಟಕಕ್ಕೆ ನಿರಾಸೆ
ಪುಣೆ: 84ನೇ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಶಟ್ಲರ್ಗಳು ಭಾನುವಾರ ಭಾರೀ ನಿರಾಸೆ ಅನುಭವಿಸಿದ್ದಾರೆ. ಪುರುಷರ ಡಬಲ್ಸ್‌ನಲ್ಲಿ ಶಶಾಂಕ್ ಹಾಗೂ ಪೃಥ್ವಿ ಜೋಡಿ ಕ್ವಾರ್ಟರ್ ಫೈನಲ್ನಲ್ಲಿ ಹರಿಹರಣ್-ರುಬಾನ್ ಕುಮಾರ್ ವಿರುದ್ಧ 24-26, 23-25 ನೇರ ಗೇಮ್ಗಳಲ್ಲಿ ಸೋತು ಅಭಿಯಾನ ಕೊನೆಗೊಳಿಸಿತು.
ಮಹಿಳಾ ಡಬಲ್ಸ್‌ನ ಪ್ರಿ ಕ್ವಾರ್ಟರ್ನಲ್ಲಿ ಶಿಖಾ ಗೌತಮ್-ಅಶ್ವಿನಿ ಭಟ್ ಜೋಡಿ ತ್ರೀಸಾ ಜಾಲಿ-ಗಾಯತ್ರಿ ಜೋಡಿಗೆ ಶರಣಾಯಿತು. ಪುರುಷರ ಸಿಂಗಲ್ಸ್‌ನಲ್ಲಿ ಭಾರ್ಗವ್, ಪುರುಷರ ಡಬಲ್ಸ್‌ನಲ್ಲಿ ನಿತಿನ್-ವೈಭವ್ ಕೂಡಾ ಪ್ರಿ ಕ್ವಾರ್ಟರ್ನಲ್ಲೇ ಸೋತು ಹೊರಬಿದ್ದರು. ಮಿಶ್ರ ಡಬಲ್ಸ್‌ನಲ್ಲಿ ನಿತಿನ್ ಹಾಗೂ ಜನನಿ ಜೋಡಿಯೂ ಅಭಿಯಾನ ಕೊನೆಗೊಳಿಸಿತು.
ಲಾಹೋರ್ ಕ್ರಿಕೆಟ್ ಸ್ಟೇಡಿಯಂನಲ್ಲಿ 8 ಸಿಸಿಟೀವಿ ಕಳವು!
ಲಾಹೋರ್: ಪಾಕಿಸ್ತಾನ ಸೂಪರ್ ಲೀಗ್(ಪಿಎಸ್‌ಎಲ್) ಪಂದ್ಯಗಳ ವೇಳೆ ಭದ್ರತೆಗೆಂದು ಇಲ್ಲಿನ ಗಡಾಫಿ ಕ್ರೀಡಾಂಗಣದಲ್ಲಿ ಅಳವಡಿಸಲಾಗಿದ್ದು 8 ಸಿಸಿಟೀವಿ ಕ್ಯಾಮೆರಾಗಳು ಕಳವಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಜೊತೆಗೆ ಫೈಬರ್ ಕೇಬಲ್‌ಗಳು, ಜೆನರೇಟರ್‌ನ ಬ್ಯಾಟರಿಗಳನ್ನೂ ಸಹ ಕದಿಯಲಾಗಿದೆ ಎನ್ನಲಾಗಿದೆ. ಈ ಸಂಬಂಧ ಕ್ರೀಡಾಂಗಣ ಸಿಬ್ಬಂದಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.